Sharavathi Pumped Storage Project | ಶರಾವತಿ ಸಿಂಗಳೀಕ ಅಭಯಾರಣ್ಯಕ್ಕೆ ಸರ್ಕಾರದ ಕೊಳ್ಳಿ!

ಅಭಯಾರಣ್ಯದ ಮಧ್ಯಭಾಗದಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸಿದ ನೀರನ್ನು ಮತ್ತೆ ಪಂಪ್ ಮೂಲಕ ಹಿಂದಕ್ಕೆ ಕೊಂಡೊಯ್ದು ಎಂಟು ಜಲ ವಿದ್ಯುತ್ ಉತ್ಪಾದನಾ ಘಟಕಗಳಿಂದ ಒಟ್ಟು 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆ ಇದಾಗಿದೆ.;

Update: 2025-09-11 12:30 GMT
Click the Play button to listen to article

ಪಶ್ಚಿಮ ಘಟ್ಟದ 930 ಚ.ಕಿ.ಮೀ ವ್ಯಾಪ್ತಿಯಲ್ಲಿ ಹರಡಿರುವ ʼಶರಾವತಿ ಸಿಂಗಳೀಕ ಅಭಯಾರಣ್ಯʼದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಮಲೆನಾಡಿಗರಲ್ಲಿ ಮತ್ತೊಂದು ಹೋರಾಟದ ಕಿಚ್ಚು ಹೊತ್ತಿಸಿದೆ.

ಅಭಯಾರಣ್ಯದ ಮಧ್ಯಭಾಗದಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸಿದ ನೀರನ್ನು ಮತ್ತೆ ಪಂಪ್ ಮೂಲಕ ಹಿಂದಕ್ಕೆ ಕೊಂಡೊಯ್ದು ಎಂಟು ಜಲ ವಿದ್ಯುತ್ ಉತ್ಪಾದನಾ ಘಟಕಗಳಿಂದ ಒಟ್ಟು 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆ ಇದಾಗಿದೆ. ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನೆಗೆ ಅಗತ್ಯ ಅನುಮತಿ ಪಡೆಯದೇ, ಪರಿಣಾಮಗಳನ್ನು ವಿಶ್ಲೇಷಿಸದೇ ತರಾತುರಿಯಲ್ಲಿ ಅನುಷ್ಟಾನಕ್ಕೆ ರಾಜ್ಯ ಸರ್ಕಾರ ಆತುರ ತೋರುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

2024 ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಡಿಪಿಆರ್ ತಯಾರಿಸಲು ಒಪ್ಪಿಗೆ ನೀಡಿತ್ತು. ಕಳೆದ ಜುಲೈ ತಿಂಗಳಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ತಾತ್ವಿಕ ಅನುಮೋದನೆ ನೀಡಿತ್ತು. ಈಗ ಖಾಸಗಿ ಕಂಪೆನಿಯು ಡಿಪಿಆರ್ ಸಿದ್ಧಪಡಿಸಿದೆ. ಆದರೆ, ಸಮಗ್ರ ಯೋಜನಾ ವಿವರವನ್ನು ಬಹಿರಂಗಪಡಿಸದೇ ಇರುವುದು ಆತಂಕಕ್ಕೆ ಕಾರಣವಾಗಿದೆ.

ಸಿಂಗಳೀಕಗಳ ಆವಾಸ ಸ್ಥಾನಕ್ಕೆ ಧಕ್ಕೆ ಆತಂಕ

ಪ್ರಪಂಚದಲ್ಲಿ ಕೇವಲ 2500 ಸಿಂಹ ಬಾಲದ ಸಿಂಗಳೀಕಗಳಿವೆ. ಅವುಗಳಲ್ಲಿ ಸುಮಾರು 730 ಸಿಂಗಳೀಕಗಳು ಶರಾವತಿ ಅಭಯಾರಣ್ಯದಲ್ಲೇ ಇವೆ. ಹಾಗಾಗಿ ಸಿಂಗಳೀಕಗಳ ಸಂತತಿಯಲ್ಲಿ ಸಿಂಹಪಾಲು ಶರಾವತಿ ಅಭ್ಯಯಾರಣ್ಯದ್ದಾಗಿದೆ. ಪ್ರಸ್ತುತ, ಅಭಯಾರಣ್ಯದಲ್ಲೇ ಯೋಜನೆ ಕೇಂದ್ರೀಕೃತವಾಗಿರುವ ಹಿನ್ನೆಲೆಯಲ್ಲಿ ಅವುಗಳ ಆವಾಸ ಸ್ಥಾನಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂಬುದು ಪರಿಸರವಾದಿಗಳು ಹಾಗೂ ಪ್ರಾಣಿಪ್ರಿಯರ ಆತಂಕವಾಗಿದೆ.

ಸಾಮಾನ್ಯವಾಗಿ ಸಿಂಗಳೀಕಗಳು ನೆಲಕ್ಕಿಳಿಯುವುದಿಲ್ಲ. ಕೆನೋಪಿ ವಲಯದಲ್ಲಿ(ಮೇಲ್ಭಾಗದ ನಡಿಗೆ) ಇರುತ್ತವೆ. ಇಂತಹ ಪ್ರದೇಶದಲ್ಲಿ ಯೋಜನೆಗಾಗಿ ರಸ್ತೆ, ಸುರಂಗ ನಿರ್ಮಿಸುವುದರಿಂದ ಸಾವಿರಾರು ಮರಗಳ ಹನನವಾಗಲಿದೆ. ಸುರಂಗ ನಿರ್ಮಾಣಕ್ಕೆ ಸ್ಫೋಟಕ ಬಳಸುವುದರಿಂದ ಗುಡ್ಡ ಕುಸಿತದ ಭೀತಿ ಆವರಿಸಲಿದೆ. ಪ್ರತಿಕೂಲ ಪರಿಣಾಮವಾಗಿ ಸಿಂಗಳೀಕಗಳು ವಲಸೆ ಹೋಗುವ ಭೀತಿಯಿದೆ.

ಇದೇ ಪ್ರದೇಶದಲ್ಲಿ ಪಾಂಗೋಲಿನ್‌, ಹಾರ್ನ್‌ಬಿಲ್, ನಾಗರಹಾವು, ಕಾಳಿಂದ ಸರ್ಪಗಳಿವೆ. ಇಂತಹ ಜೀವವೈವಿದ್ಯ ಹೊಂದಿರುವ ಪ್ರದೇಶದಲ್ಲಿ ವಿದ್ಯುತ್‌ ಉತ್ಪಾದನೆಯ ಯೋಜನೆ ಜಾರಿಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. ಪರಿಣಾಮ ಮತ್ತು ಮೌಲ್ಯಮಾಪವನ ವರದಿ(ಇಐಎ) ತಿರಸ್ಕರಿಸುವಂತೆ ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟವು ಆನ್‌ಲೈನ್‌ ಸಹಿ ಆಂದೋಲನ ಕೂಡ ಮ್ಮಿಕೊಂಡಿದ್ದು, ಯೋಜನೆ ಅನಾನುಕೂಲಗಳ ಕುರಿತು ಜಾಗೃತಿ ಮೂಡಿಸುತ್ತಿದೆ.

ಆನ್‌ಲೈನ್‌ ಸಹಿ ಸಂಗ್ರಹಕ್ಕೆ ಈ ಕೆಳಗಿನ ಲಿಂಕ್‌ ಬಳಸಬಹುದು 

https://chng.it/9c2qvj4dN8

ಪರಿಸರ ಸೂಕ್ಷ್ಮ ವಲಯದಲ್ಲಿ ವಿದ್ಯುತ್ ಯೋಜನೆ ಜಾರಿಗೊಳಿಸಬೇಕಾದರೆ ರಾಷ್ಟ್ರೀಯ ವನ್ಯಜೀವಿ ಮಂಡಳಿ, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಹಾಗೂ ಕೇಂದ್ರ ವಿದ್ಯುತ್ ಪ್ರಾಧಿಕಾರದ ನಿರಾಕ್ಷೇಪಣಾ ಅನುಮತಿ ಅಗತ್ಯವಾಗಿದೆ. ಆದರೆ, ರಾಜ್ಯ ಸರ್ಕಾರ ಯೋಜನೆಗೆ ಯಾವುದೇ ಅನುಮತಿ ಪಡೆದಿಲ್ಲ. ಯಾವುದೇ ಪ್ರಾಧಿಕಾರದಿಂದ ಅನುಮತಿ ಪಡೆದರೆ ಸಾರ್ವಜನಿಕರು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂಬ ಆತಂಕದಿಂದ ಅನುಮತಿ ಪಡೆಯದೇ ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಿದೆ ಎಂಬುದು ಹೋರಾಟಗಾರರ ಆರೋಪವಾಗಿದೆ.

2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ 2500 ಮೆಗಾವ್ಯಾಟ್ ಖರ್ಚು

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ 2000 ಮೆಗಾವ್ಯಾಟ್ ಉತ್ಪಾದನೆಯ ಗುರಿ ಹೊಂದಲಾಗಿದೆ. ವಿದ್ಯುತ್ ಉತ್ಪಾದನೆಗೆ ಬಳಸಿದ ನೀರನ್ನು ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಹಿಂದಕ್ಕೆ ಕೊಂಡೊಯ್ದು ವಿದ್ಯುತ್ ಉತ್ಪಾದಿಸಲು ಸುಮಾರು 2500 ಮೆಗಾ ವ್ಯಾಟ್ ವಿದ್ಯುತ್ ವ್ಯಯವಾಗಲಿದೆ. ಹಾಗಾಗಿ ಯೋಜನೆ ನಿಜವಾದ ಉದ್ದೇಶವೇ ಈಡೇರುವುದಿಲ್ಲ. ಯೋಜನೆಯನ್ನು ಕೇವಲ ಹಣ ಮಾಡುವ ಉದ್ದೇಶದಿಂದ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟ ಸಂಚಾಲಕ ಅಖಿಲೇಶ್ ಚಿಪ್ಲಿ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.

ಪ್ರಸ್ತುತ, ಯೋಜನೆಯನ್ನು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್(ಕೆಪಿಸಿಎಲ್) ಅನುಷ್ಠಾನಗೊಳಿಸುತ್ತಿದೆ. ವಿದ್ಯುತ್ ಸ್ಥಾವರಿಂದ ಹೈಟೆನ್ಷನ್ ಮಾರ್ಗ ಅಳವಡಿಸುವ ಕಾರ್ಯವನ್ನು ಕೆಪಿಟಿಸಿಎಲ್ಗೆ ವಹಿಸಲಾಗಿದೆ.

ಸುಪ್ರೀಂಕೋರ್ಟ್ ತೀರ್ಪು ಹೇಳುವುದೇನು ?

ಅರಣ್ಯ ವ್ಯಾಪ್ತಿಯಲ್ಲಿ ಯಾವುದೇ ಯೋಜನೆ ಅನುಷ್ಠಾನ ಮಾಡುವಾಗ ಅರಣ್ಯ ಇಲಾಖೆ ಅನುಮೋದನೆಗೂ ಮುನ್ನ ಅರಣ್ಯೇತರ ಅನುಮತಿ ತೆಗೆದುಕೊಳ್ಳಬೇಕು ಎಂದು 2011 ರಲ್ಲಿ ಸುಪ್ರೀಂಕೋರ್ಟ್ ಆಂಧ್ರಪ್ರದೇಶ ವರ್ಸಸ್ ಭಾರತ ಒಕ್ಕೂಟ ಪ್ರಕರಣದಲ್ಲಿ ಸ್ಪಷ್ಟವಾಗಿ ಹೇಳಿದೆ.

ಆದರೆ, ಪಶ್ವಿಮ ಘಟ್ಟದಲ್ಲಿ ಕೈಗೊಂಡಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅರಣ್ಯ ಇಲಾಖೆಯ ಅನುಮತಿಯನ್ನೇ  ಪಡೆದಿಲ್ಲ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೂ ಈವರೆಗೆ ಡಿಪಿಆರ್ ಮಾಹಿತಿ ಒದಗಿಸಿಲ್ಲ. ಆರ್​​ಟಿಐ ಕಾಯ್ದೆಯಡಿ ಮಾಹಿತಿ ಕೇಳಿದರೆ, ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರ ಎಂದು ಹೇಳಿ ಮಾಹಿತಿ ನಿರಾಕರಿಸಲಾಗಿದೆ. ಹಾಗಾಗಿ ಯೋಜನೆಯು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಅಖಿಲೇಶ್ ಚಿಪ್ಲಿ ತಿಳಿಸಿದರು.

ಸುರಂಗ ನಿರ್ಮಾಣಕ್ಕೆ 18 ಸಾವಿರ ಟನ್ ಸ್ಫೋಟಕ ಬಳಕೆ

ಶರಾವತಿ ಕಣಿವೆಯಲ್ಲಿ 30 ಅಡಿ ವ್ಯಾಸದ ಸುಮಾರು 14 ಕಿ.ಮೀ ಸುರಂಗ ನಿರ್ಮಿಸುವ ಯೋಜನೆ ಇದೆ. ಸುರಂಗ ಕೊರೆಯಲು ಸುಮಾರು 18ಸಾವಿರ ಟನ್ ಕೈಗಾರಿಕಾ ಸ್ಫೋಟಕ ಬಳಸುವ ಮಾಹಿತಿ ತಿಳಿದು ಬಂದಿದೆ. ಈಗಾಗಲೇ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಾನವ ಚಟುವಟಿಕೆಗಳಿಂದ ಗುಡ್ಡ ಕುಸಿತ ಪ್ರಕರಣಗಳು ಸಂಭವಿಸಿವೆ. ಈ ಯೋಜನೆಗೂ ಸ್ಫೋಟಕ ಬಳಸುವುದರಿಂದ ಪರಿಸರ ಸೂಕ್ಷ್ಮ ವಲಯ ಮತ್ತೆ ಅಪಾಯ ಎದುರಿಸಲಿದೆ. ಟ್ರಾನ್ಸ್ಮಿಷನ್ ಮಾರ್ಗಕ್ಕಾಗಿಯೇ ಸುಮಾರು 145 ಎಕರೆಯಲ್ಲಿ 12 ಸಾವಿರ ಮರಗಳನ್ನು ಕಡಿಯಬೇಕಾಗಿದೆ. ಇದರಿಂದ ವಿಪತ್ತಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.

ಏರುತ್ತಿರುವ ಯೋಜನೆಯ ವೆಚ್ಚ

2017 ರಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಘೋಷಿಸಿದಾಗ 4,005 ಕೋಟಿ ರೂ. ಮೀಸಲಿಡಲಾಗಿತ್ತು. 2024 ರಲ್ಲಿ ಯೋಜನೆಯ ವೆಚ್ಚ 8005 ಕೋಟಿಗೆ ಏರಿತು.

2025 ನೇ ಸಾಲಿನ ಬಜೆಟ್ನಲ್ಲಿ ಇದೇ ಯೋಜನೆಗಾಗಿ 10,240 ಕೋಟಿ ರೂ. ಮೀಸಲಿಡಲಾಗಿದೆ. ಯೋಜನೆ ಮುಗಿಯುವ ಹೊತ್ತಿಗೆ ಇದರ ವೆಚ್ಚ ಮತ್ತಷ್ಟು ಹೆಚ್ಚಬಹುದು. ಅಲ್ಲದೇ, ಪರಿಸರಕ್ಕೂ ಮಾರಕವಾಗಬಹುದು. ಹಾಗಾಗಿ ಯೋಜನೆ ಕೈ ಬಿಟ್ಟು, ವಿದ್ಯುತ್ ಉತ್ಪಾದನೆಗೆ ಪರ್ಯಾಯ ಮಾರ್ಗಗಳನ್ನು ಅನ್ವೇಷಿಸಬೇಕು ಎಂದು ಅಖಿಲೇಶ್ ಚಿಪ್ಲಿ ಹೇಳಿದರು.

ಸೆ.16, 18 ರಂದು ಸಾರ್ವಜನಿಕರ ಅಹವಾಲು ಸಭೆ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಸೆ.16 ರಂದು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೆ.18 ರಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕೆಪಿಸಿಎಲ್ ವತಿಯಿಂದ ಸಾರ್ವಜನಿಕರ ಅಹವಾಲು ಸಭೆ ಕರೆಯಲಾಗಿದೆ.

ಹಿರೇಭಾಸ್ಕರ, ಲಿಂಗನಮಕ್ಕಿ ಜಲವಿದ್ಯುತ್ ಯೋಜನೆಯಲ್ಲಿ ಮುಳುಗಡೆ ಸಂತ್ರಸ್ಥರಿಗೆ ಇಂದಿಗೂ ಪರಿಹಾರ, ಭೂ ಹಕ್ಕುಪತ್ರ ನೀಡಿಲ್ಲ. ಅಂದು 2812 ಮಂದಿ ಇದ್ದ ಸಂತ್ರಸ್ಥರ ಸಂಖ್ಯೆ ಈಗ 40 ಸಾವಿರ ದಾಟಿದೆ. ಆದರೆ, ಕೆಪಿಸಿಎಲ್ ಮಾತ್ರ ಅಂದಿನಿಂದ ಈವರೆಗೆ ಲಕ್ಷಾಂತರ ಕೋಟಿ ರೂ. ಲಾಭ ಮಾಡಿದೆ ಎಂದು ಹೋರಾಟಗಾರರು ಆರೋಪಿಸುತ್ತಾರೆ.

ಪಂಪ್ಡ್ ಸ್ಟೋರೇಜ್: 53 ಕುಟುಂಬಗಳ ಸ್ಥಳಾಂತರ

ಯೋಜನೆಯು, 53 ಕುಟುಂಬಗಳನ್ನು ಸ್ಥಳಾಂತರದ ಭೀತಿಗೆ ತಳ್ಳಿದೆ. ಉತ್ತರ ಕನ್ನಡ ಜಿಲ್ಲೆಯ ಬೇಗೋಡಿಯಲ್ಲಿ 45 ಕುಟುಂಬಗಳು ಮತ್ತು ಶಿವಮೊಗ್ಗ ಜಿಲ್ಲೆಯ ಮರಾಠಿ ಕ್ಯಾಂಪ್‌ನಲ್ಲಿ 8 ಕುಟುಂಬಗಳು ಈ ಯೋಜನೆಯಿಂದಾಗಿ ತಮ್ಮ ಮನೆ ಮತ್ತು ಜಮೀನುಗಳನ್ನು ಕಳೆದುಕೊಳ್ಳುವ ಆತಂಕದಲ್ಲಿವೆ. ಈ ಯೋಜನೆಯಿಂದಾಗಿ, ಮರಾಠಿ ಕ್ಯಾಂಪ್‌ನ ಜನರು ಮತ್ತೊಮ್ಮೆ ಸಂತ್ರಸ್ತರಾಗುವ ಅಪಾಯದಲ್ಲಿದ್ದಾರೆ. ಈ ಹಿಂದೆ ಶರಾವತಿ ಯೋಜನೆಗೆ ಭೂಮಿ ನೀಡಿ, ನಿರಾಶ್ರಿತರಾಗಿದ್ದ ಈ ಕುಟುಂಬಗಳು, ಈಗ ಮತ್ತೆ ಅದೇ ಸಂಕಷ್ಟವನ್ನು ಎದುರಿಸುತ್ತಿವೆ. ಇಲ್ಲಿನ ನಿವಾಸಿಗಳು ಯೋಜನೆಗೆ ತಮ್ಮ ಭೂಮಿಯನ್ನು ನೀಡಲು ಸಿದ್ಧರಿಲ್ಲದಿದ್ದರೂ, ಸರ್ಕಾರವು ಬಲವಂತವಾಗಿ ಭೂಸ್ವಾಧೀನಕ್ಕೆ ಮುಂದಾಗಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

"ಸರ್ಕಾರವು ಎಕರೆಗೆ ಕೇವಲ 10 ಲಕ್ಷ ರೂ. ಪರಿಹಾರವನ್ನು ನೀಡುವುದಾಗಿ ಹೇಳುತ್ತಿದೆ. ಈ ಅಲ್ಪ ಮೊತ್ತದಲ್ಲಿ, ಈ ಕುಟುಂಬಗಳು ತಮ್ಮ ಜೀವನವನ್ನು ಹೇಗೆ ಪುನಃ ಕಟ್ಟಿಕೊಳ್ಳಲು ಸಾಧ್ಯ?" ಎಂದು ಪರಿಸರ ಹೋರಾಟಗಾರ ಅಖಿಲೇಶ್ ಅವರು ಪ್ರಶ್ನಿಸಿದ್ದಾರೆ. 

ಕೆಪಿಸಿಎಲ್ ಸ್ಪಷ್ಟನೆ ಏನು?

ಪರಿಸರ ಹೋರಾಟಗಾರರ ಆಕ್ಷೇಪಗಳಿಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್), ಉದ್ದೇಶಿತ ಯೋಜನೆಯು ಪರಿಸರದ ಮೇಲೆ ಕನಿಷ್ಠ ಪರಿಣಾಮ ಬೀರಲಿದೆ ಮತ್ತು ಹೆಚ್ಚಿನ ಪ್ರದೇಶ ಮುಳುಗಡೆಯಾಗುವ ಸಮಸ್ಯೆ ಎದುರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಯೋಜನೆಗೆ ಈಗಾಗಲೇ ರಾಜ್ಯ ಮತ್ತು ಕೇಂದ್ರ ವನ್ಯಜೀವಿ ಮಂಡಳಿಗಳಿಂದ ತಾತ್ವಿಕ ಒಪ್ಪಿಗೆ ದೊರೆತಿದೆ ಎಂದು ಕೆಪಿಸಿಎಲ್ ತಿಳಿಸಿದೆ. ಯೋಜನೆಯ ಬಹುಪಾಲು ರಚನೆಗಳು ಸುರಂಗದ ಒಳಗೆ ನಿರ್ಮಾಣವಾಗುವುದರಿಂದ, ಭೂಮಿಯ ಮೇಲ್ಮೈಯಲ್ಲಿ ಆಗುವ ಪರಿಣಾಮವು ಅತ್ಯಂತ ಕನಿಷ್ಠವಾಗಿರುತ್ತದೆ. ಅಲ್ಲದೆ, ಸುರಂಗದೊಳಗೆ ವೈಜ್ಞಾನಿಕವಾಗಿ ತಡೆಗೋಡೆಗಳನ್ನು ನಿರ್ಮಿಸುವುದರಿಂದ ಭೂಕುಸಿತದಂತಹ ಯಾವುದೇ ಅನಾಹುತಗಳು ಸಂಭವಿಸುವುದಿಲ್ಲ ಎಂದು ಸರ್ಕಾರವು ಸ್ಪಷ್ಟನೆ ನೀಡಿದೆ.

ಈ ಯೋಜನೆಯು 'ಪಂಪ್ಡ್ ಸ್ಟೋರೇಜ್' ತಂತ್ರಜ್ಞಾನವನ್ನು ಆಧರಿಸಿದೆ, ಇದನ್ನು ಜಗತ್ತಿನ ಅತಿದೊಡ್ಡ ಬ್ಯಾಟರಿ ತಂತ್ರಜ್ಞಾನವೆಂದು ಪರಿಗಣಿಸಲಾಗಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಎರಡು ಜಲಾಶಯಗಳಾದ ಗೇರುಸೊಪ್ಪ (ಕೆಳಗಿನ ಜಲಾಶಯ) ಮತ್ತು ತಳಕಳಲೆ (ಮೇಲಿನ ಜಲಾಶಯ) ನಡುವೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ವ್ಯವಸ್ಥೆಯಲ್ಲಿ ಹೆಚ್ಚುವರಿ ವಿದ್ಯುತ್ ಲಭ್ಯವಿದ್ದಾಗ, ನೀರನ್ನು ಗೇರುಸೊಪ್ಪ ಜಲಾಶಯದಿಂದ ತಳಕಳಲೆ ಜಲಾಶಯಕ್ಕೆ ಪಂಪ್ ಮಾಡಿ ಶೇಖರಿಸಿಡಲಾಗುತ್ತದೆ. ವಿದ್ಯುತ್‌ನ ಬೇಡಿಕೆ ಹೆಚ್ಚಾದಾಗ, ಈ ನೀರನ್ನು ಕೆಳಗೆ ಹರಿಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಈ ತಂತ್ರಜ್ಞಾನದಿಂದಾಗಿ, ಹೊಸದಾಗಿ ಹೆಚ್ಚಿನ ಪ್ರದೇಶವನ್ನು ಮುಳುಗಡೆ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದು ಕೆಪಿಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. 

ಹೋರಾಟಗಾರರ ಆರೋಪಗಳೇನು?

ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಕೈಗೊಳ್ಳಲಾಗುತ್ತಿರುವ ಯೋಜನೆಗಳ 'ಪರಿಸರ ಪರಿಣಾಮದ ಮೌಲ್ಯಮಾಪನ' (EIA) ವರದಿಗಳಲ್ಲಿ ಗಂಭೀರ ಲೋಪದೋಷಗಳಿವೆ ಎಂದು ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಯೋಜನೆಗಳಿಂದಾಗುವ ಒಟ್ಟು ಪರಿಣಾಮ ಮತ್ತು ಪರಿಸರದ ಹೊರುವ ಸಾಮರ್ಥ್ಯದ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಅರಣ್ಯ ಸಲಹಾ ಸಮಿತಿಯು 2025ರ ಜುಲೈ 30ರಂದು ನಿರ್ದೇಶನ ನೀಡಿದ್ದರೂ, ಅದನ್ನು ಪಾಲಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಸ್ಫೋಟಕಗಳ ಮಾಹಿತಿ ಮರೆಮಾಚುವಿಕೆ: ಯೋಜನೆಗಳಲ್ಲಿ ಬಳಸಲಾಗುವ ಅಪಾಯಕಾರಿ ಕೈಗಾರಿಕಾ ಸ್ಫೋಟಕಗಳ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಫಾರ್ಮ್-1ರಲ್ಲಿ 18,000 ಟನ್ ಸ್ಫೋಟಕಗಳ ಬಳಕೆಯ ಬಗ್ಗೆ ದಾಖಲಾಗಿದ್ದರೂ, EIA ವರದಿಯಲ್ಲಿ ಇದರ ಉಲ್ಲೇಖವೇ ಇಲ್ಲ.

ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ: ಅಕ್ರಮ ಮತ್ತು ಅವೈಜ್ಞಾನಿಕವಾಗಿ ಮಣ್ಣಿನ ತ್ಯಾಜ್ಯವನ್ನು ಪರಿಸರ-ಸೂಕ್ಷ್ಮ ವಲಯದಲ್ಲಿ (ESZ) ವಿಲೇವಾರಿ ಮಾಡಲಾಗುತ್ತಿದೆ. ಇದು 2023ರ ನವೆಂಬರ್ 16ರ ಅಧಿಸೂಚನೆ ಮತ್ತು 2016ರ ನಿರ್ಮಾಣ ಹಾಗೂ ಧ್ವಂಸ ತ್ಯಾಜ್ಯ ನಿರ್ವಹಣಾ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಗಣಿಗಾರಿಕೆಯ ಪರಿಣಾಮಗಳ ಮೌಲ್ಯಮಾಪನ ಕೊರತೆ: ಪರಿಸರ ಸೂಕ್ಷ್ಮ ವಲಯದಲ್ಲಿ ಕ್ವಾರಿಗಳನ್ನು ಗುರುತಿಸಲಾಗಿದೆಯಾದರೂ, ನಿಷೇಧಿತ ಮರಳು ಗಣಿಗಾರಿಕೆಯ ಪ್ರಮಾಣ ಮತ್ತು ಅದರ ಪರಿಣಾಮಗಳ ಬಗ್ಗೆ ಯಾವುದೇ ಅಂದಾಜು ಮಾಡಿಲ್ಲ.

ಜೀವವೈವಿಧ್ಯದ ಮೇಲೆ ಪರಿಣಾಮ: ಸ್ಫೋಟಕಗಳ ಬಳಕೆಯಿಂದ ಇಳಿಜಾರುಗಳ ಸ್ಥಿರತೆ, ಭೂಗರ್ಭಜಲದ ಹರಿವು, ಮತ್ತು ಬೇಗೋಡಿ ಹಳ್ಳ, ಕಳ್ಕಟ್ಟೆ ಹೊಳೆಯಂತಹ ಜಲಮೂಲಗಳ ಮೇಲೆ ಆಗುವ ಪರಿಣಾಮಗಳನ್ನು ಅಂದಾಜಿಸಿಲ್ಲ. ಅಲ್ಲದೆ, ಅಪರೂಪದ ಸಿಂಹ ಬಾಲದ ಸಿಂಗಳೀಕ, ಪ್ಯಾಂಗೋಲಿನ್, ಹಾರ್ನ್‌ಬಿಲ್, ಮತ್ತು ನಾಗರಹಾವುಗಳಂತಹ ಜೀವಿಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆಯೂ ಮೌಲ್ಯಮಾಪನ ನಡೆದಿಲ್ಲ.

ಭೂಕುಸಿತದ ಅಪಾಯ ನಿರ್ಲಕ್ಷ್ಯ: ಯೋಜನೆಯ ಸ್ಥಳವು ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ (KSNDMC) ಗುರುತಿಸಿರುವ ಅಧಿಕ ಭೂಕುಸಿತದ ವಲಯದಲ್ಲಿದೆ. ಆದರೂ, ಈ ಬಗ್ಗೆ ಯಾವುದೇ ವಿಶ್ವಾಸಾರ್ಹ ನಕ್ಷೆ ಅಥವಾ ಮೌಲ್ಯಮಾಪನವನ್ನು ಮಾಡಿಲ್ಲ.

ನಕ್ಷೆಗಳಲ್ಲಿ ಮಾಹಿತಿ ಮರೆಮಾಚುವಿಕೆ: ಯೋಜನಾ ವರದಿಯಲ್ಲಿ ಸೂಕ್ಷ್ಮ ಪರಿಸರ ವಲಯಗಳ ಗಡಿ, ಜಲಮೂಲಗಳು, ಪ್ರವಾಹ ವಲಯಗಳು, ವಾಸಸ್ಥಾನಗಳು ಮತ್ತು ದೇವಾಲಯಗಳನ್ನು ಗುರುತಿಸುವ ನಕ್ಷೆಗಳನ್ನು ಪ್ರಕಟಿಸಿಲ್ಲ. ಇದು ಯೋಜನೆಯಿಂದಾಗುವ ನೈಜ ಪರಿಣಾಮಗಳನ್ನು ಮರೆಮಾಚುವ ಪ್ರಯತ್ನವಾಗಿದೆ.

ಐತಿಹಾಸಿಕ ಸ್ಮಾರಕಗಳ ಬಗ್ಗೆ ತಪ್ಪು ಮಾಹಿತಿ: 'ಪರಿಸರ ಪರಿಣಾಮದ ಮೌಲ್ಯಮಾಪನ' ವರದಿಯಲ್ಲಿ ಯಾವುದೇ ಸ್ಮಾರಕಗಳಿಲ್ಲ ಎಂದು ತಪ್ಪಾಗಿ ದಾಖಲಿಸಲಾಗಿದೆ. ಆದರೆ, ನಾಗರಬಸ್ತಿಕೆರೆಯಲ್ಲಿರುವ ನಾಲ್ಕು ಐತಿಹಾಸಿಕ ಸ್ಮಾರಕಗಳು ಮತ್ತು ಚತುರ್ಮುಖ ಬಸ್ತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. 


Tags:    

Similar News