
ಸಚಿವ ಮಂಕಾಳವೈದ್ಯ
ಶರಾವತಿ ನೀರು ಬೆಂಗಳೂರಿಗೆ ಒಯ್ಯುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸಚಿವ ಮಂಕಾಳ ವೈದ್ಯ
ರಾಜ್ಯ ಸರ್ಕಾರದ ಮುಂದೆ ಶರವಾತಿಗೆ ಸಂಬಂಧಪಟ್ಟ ಯಾವುದೇ ಪ್ರಸ್ತಾಪಗಳಿಲ್ಲದಿದ್ದರೂ ಸಹ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಶರಾವತಿ ಭೂಗತ ವಿದ್ಯತ್ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಇದರಿಂದ ಜನರಿಗೆ ಹಾಗೂ ಪರಿಸರಕ್ಕೆ ಯಾವ ತೊಂದರೆಯಾಗುವುದಿಲ್ಲ.
ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಅರಣ್ಯ ಮತ್ತು ಪರಿಸರ ಸಚಿವ ಮಂಕಾಳ ವೈದ್ಯ ಸ್ಪಷ್ಟಪಡಿಸಿದ್ದಾರೆ. ಶರಾವತಿ ಆರತಿ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟವನ್ನು ಟೀಕಿಸಿದ ಅವರು, ಕೆಲವರು ಪ್ರಚಾರಕ್ಕಾಗಿ ಇಂತಹ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯ ಸರ್ಕಾರದ ಮುಂದೆ ಶರಾವತಿ ನದಿಗೆ ಸಂಬಂಧಿಸಿದ ಯಾವುದೇ ಯೋಜನೆಗಳಿಲ್ಲದಿದ್ದರೂ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ಶರಾವತಿ ಭೂಗತ ವಿದ್ಯುತ್ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಇದರಿಂದ ಜನರಿಗೂ ಮತ್ತು ಪರಿಸರಕ್ಕೂ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಶರಾವತಿ ಯೋಜನೆ ಎಂದರೇನು?
ಮಲೆನಾಡಿನ ಜೀವನಾಡಿಯಾದ ಶರಾವತಿ ನದಿ ಮಳೆಗಾಲದಲ್ಲಿ ತುಂಬಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಈಗಾಗಲೇ ಈ ನದಿಗೆ ಲಿಂಗನಮಕ್ಕಿ ಜಲಾಶಯ ಮತ್ತು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲಾಗಿದೆ. ಕೆಲವು ವರ್ಷಗಳ ಹಿಂದೆ, ಸಮುದ್ರಕ್ಕೆ ವ್ಯರ್ಥವಾಗಿ ಹರಿಯುವ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಪ್ರಸ್ತಾಪವಿತ್ತು. ಆದರೆ, ಪರಿಸರವಾದಿಗಳು, ರೈತರು ಮತ್ತು ಮಲೆನಾಡು ಹಾಗೂ ಕರಾವಳಿ ಭಾಗದ ರಾಜಕೀಯ ನಾಯಕರು ಈ ಯೋಜನೆಯನ್ನು ವಿರೋಧಿಸಿದ್ದರು.
ಜೀವ ವೈವಿಧ್ಯತೆಯ ನಾಶದ ಆತಂಕ
ನದಿಗಳ ಹರಿವು ಕಡಿಮೆಯಾದರೆ ಅಳಿವೆ ಪ್ರದೇಶವನ್ನು ಸಮುದ್ರದ ನೀರು ಆವರಿಸಿಕೊಂಡು ಜಲಚರಗಳ ಸಂತಾನೋತ್ಪತ್ತಿಗೆ ತೊಂದರೆಯಾಗುತ್ತದೆ ಮತ್ತು ಜೀವ ವೈವಿಧ್ಯ ನಾಶವಾಗುತ್ತದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ನದಿಗಳ ಮೇಲಿನ ಅತಿಯಾದ ಹಸ್ತಕ್ಷೇಪದಿಂದಾಗಿ ಜಲಮೂಲಗಳು ಜೀವಸತ್ವ ಕಳೆದುಕೊಂಡಿವೆ. ಉತ್ತರ ಕನ್ನಡದ ಅಘನಾಶಿನಿ, ಗಂಗಾವಳಿ, ಕಾಳಿ ಮತ್ತು ಶರಾವತಿ ನದಿಗಳಲ್ಲಿ ಮೀನುಗಳ ಜಾತಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೇರಳವಾಗಿ ಬೆಳೆಯುತ್ತಿದ್ದ ಚಿಪ್ಪುಕಲ್ಲುಗಳ ಬೆಳವಣಿಗೆ ಕುಂಠಿತಗೊಂಡು ಯುವಕರಿಗೆ ಉದ್ಯೋಗದ ಸಮಸ್ಯೆ ಎದುರಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.