ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲವಿದ್ಯುತ್‌ ಯೋಜನೆಗೆ ವಿರೋಧ; ಪಶ್ಚಿಮ ಘಟ್ಟದಲ್ಲಿ ಮತ್ತೆ ಹೋರಾಟಕ್ಕೆ ಚಾಲನೆ?
x

ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲವಿದ್ಯುತ್‌ ಯೋಜನೆಗೆ ವಿರೋಧ; ಪಶ್ಚಿಮ ಘಟ್ಟದಲ್ಲಿ ಮತ್ತೆ ಹೋರಾಟಕ್ಕೆ ಚಾಲನೆ?

ವಿವಿಧ ಜಲ ವಿದ್ಯುತ್‌ ಯೋಜನೆಗಳಿಗಾಗಿ ಅಣೆಕಟ್ಟುಗಳೆಂಬ ಜಲಬಾಂಬ್‌ಗಳನ್ನು ಸೆರಗಲ್ಲಿಟ್ಟುಕೊಂಡಿರುವ ಪಶ್ಚಿಮ ಘಟ್ಟದ ಪರಿಸರಕ್ಕೆ ಉದ್ದೇಶಿತ ಯೋಜನೆ ಮತ್ತೊಂದು ಕಂಟಕವಾಗಲಿದೆ ಎಂದು ಚರ್ಚೆ ಮಲೆನಾಡಿನಲ್ಲಿ ಕೇಳಿಬರುತ್ತಿದೆ.


ಹಲವು ಯೋಜನೆಗಳಿಂದ ಮತ್ತೆ ಮತ್ತೆ ಘಾಸಿಗೊಂಡಿರುವ ಪಶ್ಚಿಮ ಘಟ್ಟದ ಶರಾವತಿ ಕಣಿವೆಯಲ್ಲಿ ಸರಕಾರ ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲವಿದ್ಯುತ್‌ ಯೋಜನೆ ಜಾರಿಗೆ ಮುಂದಾಗಿದೆ.

ಭೂಮಿಯ ಒಡಲಾಳದಲ್ಲಿ ಸುರಂಗ ಮಾಡುವ ಈ ಯೋಜನೆ ಬೇಡವೇ ಬೇಡ ಎಂದು ಪರಿಸರ ಪ್ರಿಯರು ಕೂಗೆಬ್ಬಿಸಿದ್ದಾರೆ. ಭೂಕುಸಿತಗಳು ಹೆಚ್ಚಾಗಿರುವ ಈ ಹೊತ್ತಿನಲ್ಲಿ ಪರಿಸರಘಾತುಕ ಯೋಜನೆಯ ವಿರುದ್ಧ ಮಲೆನಾಡಿನಲ್ಲಿ ಮತ್ತೊಂದು ಪರಿಸರ ಹೋರಾಟ ಆರಂಭವಾಗುವ ಲಕ್ಷಣಗಳಿವೆ. ಇಡೀ ಮಲೆನಾಡಿನ ಜನರೇ ಬೀದಿಗಿಳಿದು ಹೋರಾಟ ಮಾಡಿದ್ದರಿಂದ ಕುದುರೆಮುಖದಲ್ಲಿ ಗಣಿಗಾರಿಕೆ ನಿಂತಿದೆ. ಈಗ ಮತ್ತೊಂದು ಆ ಪರಿಯ ಹೋರಾಟದ ಹೊಸ್ತಿಲಲ್ಲಿ ಮಲೆನಾಡಿನ ಜನ ನಿಂತಿದ್ದಾರೆ.

ಶಕ್ತಿ ನದಿ ಶರಾವತಿ ಕೊಳ್ಳದಲ್ಲಿ ರಾಜ್ಯ ಸರಕಾರ ಅನುಷ್ಠಾನಗೊಳಿಸಲು ಮುಂದಾಗಿರುವ ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲವಿದ್ಯುತ್‌ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕಾರ್ಯಸಾಧುವಲ್ಲದ ಯೋಜನೆ ಇದಾಗಿದ್ದು, ಆರಂಭಿಕ ಹಂತದಲ್ಲಿ ೮೫೦೦ ಕೋಟಿ ರೂ. ಮೊತ್ತದ ಯೋಜನಾ ವರದಿ ಸಿದ್ದವಾಗಿದೆ. ಯೋಜನೆ ಕಾಮಗಾರಿ ಆರಂಭವಾದ ಬಳಿಕ ಇದು ಮತ್ತೊಂದು ಎತ್ತಿನ ಹೊಳೆ ಯೋಜನೆಯಾಗಲಿದ್ದು, ಯೋಜನಾ ಗಾತ್ರ ಹೆಚ್ಚಾಗುವ ಸಂಭವವಿದೆ. ಮೇಲಾಗಿ ಮೂಗಿಗಿಂತ ಮೂಗುತಿ ಭಾರ ಎಂಬಂತೆ ಉದ್ದೇಶಿತ ಯೋಜನೆಯಲ್ಲಿ ಉತ್ಪಾದನಾ ವೆಚ್ಚ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.

ವಿವಿಧ ಜಲ ವಿದ್ಯುತ್‌ ಯೋಜನೆಗಳಿಗಾಗಿ ಅಣೆಕಟ್ಟುಗಳೆಂಬ ಜಲಬಾಂಬ್‌ಗಳನ್ನು ಸೆರಗಲ್ಲಿಟ್ಟುಕೊಂಡಿರುವ ಪಶ್ಚಿಮ ಘಟ್ಟದ ಪರಿಸರಕ್ಕೆ ಉದ್ದೇಶಿತ ಯೋಜನೆ ಮತ್ತೊಂದು ಕಂಟಕವಾಗಲಿದೆ ಎಂದು ಚರ್ಚೆ ಮಲೆನಾಡಿನಲ್ಲಿ ಕೇಳಿಬರುತ್ತಿದೆ. ಪರಿಸರವಾದಿಗಳು ಈ ಯೋಜನೆಯನ್ನು ಪ್ರಬಲವಾಗಿ ವಿರೋಧ ಮಾಡುತ್ತಿದ್ದು, ಜನಾಂದೋಲನ ರೂಪಿಸಿ ಯೋಜನೆಯಿಂದಾಗುವ ಹಾನಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಅನೇಕ ಪರಿಸರಾಸಕ್ತ ಸಂಘಟನೆಗಳ ಒಕ್ಕೂಟ ಕೈ ಹಾಕಿದೆ.


ಏನಿದು ಯೋಜನೆ?

ಶರಾವತಿ ನದಿಗೆ ಜಲವಿದ್ಯುತ್‌ ಉತ್ಪಾದನೆಗಾಗಿ ನಿರ್ಮಿಸಿರುವ ತಲಕಳಲೆ ಮತ್ತು ಗೇರುಸೊಪ್ಪ ಅಣೆಕಟ್ಟುಗಳ ನಡುವೆ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ನಿರ್ಮಾಣ ಮಾಡಲಾಗುತ್ತದೆ. 8500 ಕೋಟಿ ಭಾರೀ ಮೊತ್ತದ ಈ ಯೋಜನೆಯಲ್ಲಿ ಐದು ಬೃಹತ್‌ ಸುರಂಗಗಳು ಮತ್ತು ಎಂಟು ಪಂಪಿಂಗ್‌ ಸ್ಟೇಷನ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಇರುವ ಎರಡು ಅಣೆಕಟ್ಟುಗಳ ನಡುವೆ ಮತ್ತೊಂದು ಅಣೆಕಟ್ಟು ನಿರ್ಮಾಣ ಮಾಡಲಾಗುತ್ತದೆ. ವಿದ್ಯುತ್‌ ಉತ್ಪಾದನೆಗೆ ಬಳಕೆಯಾಗಿ ನದಿಗೆ ಹರಿಯುವ ನೀರನ್ನು ಮತ್ತೆ ಮೇಲಕ್ಕೆತ್ತಿ ಅದನ್ನು ಸುರಂಗದ ಮೂಲಕ ಕೆಳಕ್ಕೆ ಬಿಟ್ಟು ಅಲ್ಲಿ ವಿದ್ಯುತ್‌ ಉತ್ಪಾದನೆಗೆ ಮರುಬಳಕೆ ಮಾಡಿಕೊಳ್ಳುವ ಉದ್ದೇಶ ಯೋಜನೆಯಲ್ಲಿದೆ.

ಯೋಜನೆಗೆ 133.81 ಎಕರೆ ಅರಣ್ಯ ಬಳಕೆಯಾಗುತ್ತದೆ. ಅಂದಾಜು 16 ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಯೋಜನಾ ವರದಿಯಲ್ಲಿ ತಿಳಿಸಲಾಗಿದೆ. ಯೋಜನೆಯಿಂದ ಒಟ್ಟು 2000 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ಉಳಿದ ವಿದ್ಯುತ್‌ ಯೋಜನೆಗಳಿಗೆ ಹೋಲಿಸಿಕೊಂಡರೆ ಜಲವಿದ್ಯುತ್‌ ಉತ್ಪಾದನಾ ವೆಚ್ಚ ಅತ್ಯಂತ ಕಡಿಮೆಯದ್ದಾಗಿದೆ. ಈ ಕಾರಣದಿಂದಲೇ ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲ ವಿದ್ಯುತ್‌ ಯೋಜನೆಗೆ ಸರಕಾರ ಮುಂಗಾಗಿದೆ.

ವಿರೋಧ ಯಾಕೆ?

ಅತ್ಯಂತ ಸೂಕ್ಷ್ಮ ಪ್ರದೇಶವಾದ ಪಶ್ಚಿಮಘಟ್ಟದ ಮೇಲೆ ನಿರಂತರವಾಗಿ ಮಾನವ ಹಸ್ತಕ್ಷೇಪವಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಭೂ ಕುಸಿತ, ಮೇಘ ಸ್ಫೋಟಗಳಂತಹ ಪ್ರಾಕೃತಿಕ ವಿಕೋಪದಿಂದಾಗಿ ಭಾರೀ ಅನಾಹುತಗಳು ಸಂಭವಿಸುತ್ತಿವೆ. ಪಶ್ಚಿಮ ಘಟ್ಟ ಪ್ರದೇಶವೂ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಜಲ ವಿದ್ಯುತ್‌ ಯೋಜನೆಗಾಗಿಯೇ ಶರಾವತಿ ಕೊಳ್ಳದಲ್ಲಿ ಏಳಕ್ಕೂ ಹೆಚ್ಚು ಅಣೆಕಟ್ಟುಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಈ ಬೃಹತ್‌ ಯೋಜನೆಯಿಂದ ಲಕ್ಷಾಂತರ ಹೆಕ್ಟೇರ್‌ ಅರಣ್ಯ ನಾಶವಾಗಿದೆ. ಜಲ ಬಾಂಬ್‌ಗಳಂತೆ ಈ ಅಣೆಕಟ್ಟುಗಳು ನಿಂತಿವೆ. ಸಾವಿರಾರು ಹೆಕ್ಟೇರ್‌ ಕೃಷಿ ಭೂಮಿ ಮುಳುಗಡೆಯಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಈಗ ಮತ್ತೆ ಭೂ ಗರ್ಭದಾಳದಲ್ಲಿ ಸುರಂಗಗಳನ್ನು ನಿರ್ಮಾಣಮಾಡಲಾಗುತ್ತದೆ. ಕೆಳಗಿಂದ ನೀರನ್ನು ಪಂಪ್‌ ಮಾಡಿ ಸಂಗ್ರಹ ಮಾಡಲಾಗುತ್ತದೆ. ಈ ಪಂಪಿಂಗ್‌ ಪ್ರಕ್ರಿಯೆಗೆ ಯಥೇಚ್ಚ ವಿದ್ಯುತ್‌ ಬಳಕೆಯಾಗುತ್ತದೆ ಆದ್ದರಿಂದ ಇದೊಂದು ಕಾರ್ಯ ಸಾಧುವಲ್ಲದ ಯೋಜನೆಯಾಗಿದೆ.


ಈಗ ವಿದ್ಯುತ್‌ ಉತ್ಪಾದನೆಗೆ ಸೌರ ವಿದ್ಯುತ್‌ ಯೋಜನೆ ಸೇರಿದಂತೆ ಪರ್ಯಾಯ ಮಾರ್ಗಗಳಿವೆ. ಹೀಗಿರುವಾಗ ಪರಿಸರಕ್ಕೆ ಧಕ್ಕೆಯುಂಟು ಮಾಡುವ ಯೋಜನೆ ಬೇಡವೇ ಬೇಡ ಎಂಬ ವಾದ ಪರಿಸರವಾದಿಗಳದ್ದಾಗಿದೆ. ಕೃಷಿ, ಕೈಗಾರಿಕೆ, ರಸ್ತೆ ,ರೈಲ್ವೆ ಮಾರ್ಗ, ಪ್ರವಾಸೋದ್ಯಮ ಇತ್ಯಾದಿಗಳಿಂದಾಗಿ ಪಶ್ಚಿಮಘಟ್ಟದ ಪರಿಸರ ಮೇಲೆ ಸಾಕಷ್ಟು ಘಾಸಿಯಾಗಿದೆ ಎಂಬ ಕಾರಣಕ್ಕೆ ಪರಿಸರವಾದಿಗಳು ಈ ಯೋಜನೆಗೆ ವಿರೋಧ ವ್ಯಕ್ತ ಮಾಡುತ್ತಿದ್ದಾರೆ.

ರಾಜಕೀಯ ವಿರೋಧ

ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಭಾರತೀಯ ಜನತಾ ಪಕ್ಷದ ಸರ್ಕಾರವೂ ಈ ಯೋಜನೆಗೆ ಒಪ್ಪಿಗೆ ನೀಡಿ, ಡಿಪಿಆರ್‌ ಸಿದ್ದಮಾಡಿತ್ತು. ಈಗಿನ ಕಾಂಗ್ರೆಸ್‌ ಸರ್ಕಾರ ಯೋಜನೆ ಜಾರಿಗೆ ಉತ್ಸಾಹ ತೋರಿದ್ದು, ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯದ ಒಪ್ಪಿಗೆಯನ್ನೂ ಪಡೆದುಕೊಂಡಿದೆ. ರಾಜ್ಯದ ಬೇಡಿಕೆಗನುಗುಣವಾಗಿ ವಿದ್ಯುತ್‌ ಉತ್ಪಾದನೆ ಮಾಡಲು ಈ ಯೋಜನೆಯನ್ನು ಪರಿಸರಕ್ಕೆ ಹಾನಿಯಾಗದಂತೆ ಜಾರಿ ಮಾಡುತ್ತೇವೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡದಂತಾಗುತ್ತದೆ. ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಜಾರಿ ಮಾಡಿಯೇ ಮಾಡುತ್ತೇವೆ ಎಂದು ಸ್ಥಳೀಯ ಶಾಸಕರಾದ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಯೋಜನೆ ಅನುಷ್ಠಾನ ಮಾಡಿದರೆ ಒಳ್ಳೆಯದು. ಆದರೆ ಪರಿಸರಕ್ಕೆ ಹಾನಿ ಉಂಟು ಮಾಡುವ ಯಾವುದೇ ಕೆಲಸಕ್ಕೆ ನನ್ನ ಸಹಮತ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

ಹಿಂದೆ ತಮ್ಮದೇ ಪಕ್ಷದ ಸರ್ಕಾರದ ಅವಧಿಯಲ್ಲಿ ಹುಟ್ಟಿಕೊಂಡಿದ್ದ ಈ ಜಲವಿದ್ಯುತ್‌ ಯೋಜನೆಯನ್ನು ಈಗ ವಿರೋಧಿಸುವುದಾಗಿ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಜಿಲ್ಲೆಯಲ್ಲಿ ನಡೆಯುತ್ತಿರುವ ಯೋಜನಾ ವಿರೋಧಿ ಹೋರಾಟಕ್ಕೆ ಬಲ ಬಂದಂತಾಗಿದೆ. ಶಿವಮೊಗ್ಗದ ಪರ್ಯಾವರಣ ಪರಿಸರ್‌ ಹೋರಾಟ ಸಂಸ್ಥೆ ಪರಿಸರವಾದಿಗಳು ಹಾಗೂ ಸಾರ್ವಜನಿಕರ ಬೆಂಬಲದೊಂದಿಗೆ ಯೋಜನೆ ವಿರುದ್ಧ ಜನಾಂದೋಲನ ಮಾಡುವುದಾಗಿ ಹೇಳಿದೆ. ಪರಿಸರ ನಾಶಕ್ಕೆ ಕಾರಣವಾಗುವ ಮತ್ತು ಕಾರ್ಯಸಾಧುವಲ್ಲದ ಈ ಯೋಜನೆ ವಿರುದ್ಧ ಎಲ್ಲಾ ಹಂತದ ಹೋರಾಟ ಮಾಡುವುದಾಗಿ ಪರಿಸರವಾದಿ ಪ್ರೊ. ಕುಮಾರಸ್ವಾಮಿ ಹಾಗೂ ಡಾ.ಶ್ರೀಪತಿ ಘೋಷಿಸಿದ್ದಾರೆ.

ಕೃಷಿ ಭೂಮಿ ಬಳಕೆ

ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲವಿದ್ಯುತ್‌ ಯೋಜನೆಗೆ ಶರಾವತಿ ಕೊಳ್ಳದ ಹೆನ್ನಿ ಎಂಬ ಗ್ರಾಮದ ಸುತ್ತಮುತ್ತ ೩೫ ಎಕರೆಗೂ ಹೆಚ್ಚು ಕಂದಾಯ ಭೂಮಿ ಹಾಗೂ ಬಗರ್‌ ಹುಕುಂ ಸಾಗುವಳಿ ಭೂಮಿಯನ್ನು ಬಳಸಿಕೊಳ್ಳಲಾಗುತ್ತದೆ. ಈ ಊರುಗಳಲ್ಲಿ ರೈತರಿಗೆ ಪರಿಹಾರ ಕೊಟ್ಟು ಪುನರ್ವಸತಿ ಕಲ್ಪಿಸಲಾಗುತ್ತದೆ. ಆದರೆ ಈ ಯೋಜನಾ ವ್ಯಾಪ್ತಿಯಲ್ಲಿ ಬರುವ ಬಗರ್‌ಹುಕುಂ ಸಾಗುವಳಿದಾರರಿಗೆ ಸಂಕಷ್ಟ ಎದುರಾಗಿದೆ. ವಾಸಿಸುವ ಮತ್ತು ಉಳುವ ಭೂಮಿಗೆ ಯಾವುದೇ ಹಕ್ಕು ಪತ್ರ ಇಲ್ಲದ ಕಾರಣ ಈ ರೈತರು ದಿಕ್ಕುಗಾಣದಂತಾಗಿದ್ದಾರೆ.

ಬೆಂಗಳೂರಿಗೆ ಕುಡಿವ ನೀರು

ಈ ಯೋಜನೆಯ ಹಿಂದೆ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರನ್ನು ಕೊಂಡೊಯ್ಯುವ ಉದ್ದೇಶವೂ ಇದೆ ಎಂದು ಹೇಳಲಾಗಿದೆ. ಶರಾವತಿ ನದಿಯ ನೀರು ಅತ್ಯಂತ ಶುಭ್ರವಾದುದಾಗಿದೆ. ಕೇವಲ ೧೨೮ ಕಿಲೋಮೀಟರ್‌ ಹರಿಯುವ ನದಿಯು ನಂತರ ಅರಬ್ಬೀ ಸಮುದ್ರವನ್ನು ಸೇರುತ್ತದೆ. ವಿದ್ಯುತ್‌ ಉತ್ಪಾದನೆಯ ಬಳಿಕ ಸಮುದ್ರ ಸೇರುವ ಈ ನದಿಯ ನೀರನ್ನು ಪಂಪ್‌ ಮಾಡಿ ಮೇಲಕ್ಕೆತ್ತಲಾಗುತ್ತದೆ. ಉದ್ದೇಶಿತ ಅಣೆಕಟ್ಟೆಯಿಂದ ೫೦ ಟಿಎಂಸಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಉದ್ದೇಶವೂ ಇದೆ. ಬೇಡಿಕೆ ಇದ್ದಾಗ ಮಾತ್ರ ವಿದ್ಯುತ್‌ ಉತ್ಪಾದನೆ ಮಾಡುವ ಉದ್ದೇಶಿತ ಯೋಜನೆಯಿಂದ ಬೆಂಗಳೂರಿಗೆ ಶರಾವತಿ ನೀರನ್ನು ಹರಿಸು ದೂರಾಲೋಚನೆಯೂ ಇದೆ ಎಂದು ಹೇಳಲಾಗುತ್ತಿದೆ.

Read More
Next Story