ಬೆಂಗಳೂರು ನಗರದಲ್ಲಿ ಏ.1ರಿಂದ ಕಸದ ಸೆಸ್ ಹೆಚ್ಚಳ: ಹೊಟೇಲ್, ಅಪಾರ್ಟ್‌ಮೆಂಟ್‌ಗಳಿಗೆ ದರ ದುಬಾರಿ
ಹೋಟೆಲ್‌ಗಳಿಗೆ ಈ ಮೊದಲು ಒಂದು ಕೆಜಿ ಕಸಕ್ಕೆ 5 ರೂಪಾಯಿ ನಿಗದಿ ಮಾಡಲಾಗಿತ್ತು. ಇದೀಗ 12 ರೂಪಾಯಿಗೆ ಏರಿಕೆ ಮಾಡಲಾಗಿದೆ. ರೆಸಿಡೆನ್ಸಿಯಲ್ ಕಟ್ಟಡಗಳಿಗೆ ಕಟ್ಟಡದ ಚದರ ಅಡಿ ಲೆಕ್ಕದಲ್ಲಿ ಸೆಸ್ ದರ ನಿಗದಿಪಡಿಸಲಾಗಿದೆ.;
ಮಂಗಳವಾರದಿಂದ ಬೆಂಗಳೂರಿನಲ್ಲಿ ಕಸದ ಸೆಸ್ ಜಾರಿಯಾಗುತ್ತಿದೆ.
ಬೆಂಗಳೂರು ಈಗಾಗಲೇ ದುಬಾರಿ ನಗರ ಎಂಬ ಕುಖ್ಯಾತಿ ಹೊತ್ತಿದ್ದು, ಇದೀಗ ಹೊಸದಾಗಿ ಜಾರಿಗೆ ಬಂದಿರುವ ಕಸದ ಸೆಸ್ ನಾಗರಿಕರ ಜೇಬುಗಳಿಗೆ ಮತ್ತಷ್ಟು ಕತ್ತರಿ ಹಾಕಲಿದೆ. ಪ್ರತಿ ತಿಂಗಳು ಕಸಸಂಗ್ರಹ ಮತ್ತು ವಿಲೇವಾರಿ ವೆಚ್ಚ ವಸೂಲಿಗೆ ಬಿಬಿಎಂಪಿ ನಿರ್ಧಾರ ಮಾಡಿದೆ. ಮಂಗಳವಾರದಿಂದಲೇ ಬೆಂಗಳೂರಿನಲ್ಲಿ ಕಸದ ಸೆಸ್ ಜಾರಿಯಾಗುತ್ತಿದೆ. ಅಂಗಡಿ, ಹೋಟೆಲ್, ವಸತಿ ಸಮುಚ್ಛಯಗಳಿಗೆ ವಿಭಿನ್ನ ರೀತಿಯ ತೆರಿಗೆ ವಿಧಿಸಲಾಗುತ್ತಿದೆ. ಈ ತೆರಿಗೆಗಳು ಕೇವಲ ಮನೆ ಮಾಲೀಕರಿಗೆ ಹಾಗೂ ಹೋಟೆಲ್ ಮಾಲೀಕರಿಗೆ ಮಾತ್ರವಲ್ಲದೆ ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ ಹಾಗೂ ಹೋಟೆಲ್‌ಗೆ ಬರುವ ಗ್ರಾಹಕರ ಜೇಬಿಗೆ ಕತ್ತರಿ ಹಾಕಲಿದೆ.
ಈ ಹಿಂದೆ ಹೋಟೆಲ್‌ಗಳಿಗೆ ಒಂದು ಕೆ.ಜಿ ಕಸಕ್ಕೆ 5 ರೂಪಾಯಿ ನಿಗದಿ ಮಾಡಲಾಗಿತ್ತು. ಇದೀಗ 12 ರೂಪಾಯಿಗೆ ಏರಿಕೆ ಮಾಡಲಾಗಿದೆ. ರೆಸಿಡೆನ್ಸಿಯಲ್ ಕಟ್ಟಡಗಳಿಗೆ ಕಟ್ಟಡದ ಚದರ ಅಡಿ ಲೆಕ್ಕದಲ್ಲಿ ಸೆಸ್ ದರ ನಿಗದಿಪಡಿಸಲಾಗಿದೆ.
ರೆಸಿಡೆನ್ಸಿಯಲ್ ಕಟ್ಟಡಗಳಿಗೆ ಕಸದ ತೆರಿಗೆ
600 ಚದರ ಅಡಿ ಒಳಗಿನ ಮನೆಗಳಿಗೆ: ತಿಂಗಳಿಗೆ 10 ರೂಪಾಯಿ
600-1000 ಚದರ ಅಡಿ: ತಿಂಗಳಿಗೆ 50 ರೂಪಾಯಿ
1000-2000 ಚದರ ಅಡಿ: ತಿಂಗಳಿಗೆ 100 ರೂಪಾಯಿ
2000-3000 ಚದರ ಅಡಿ: ತಿಂಗಳಿಗೆ 150 ರೂಪಾಯಿ
3000-4000 ಚದರ ಅಡಿ: ತಿಂಗಳಿಗೆ 200 ರೂಪಾಯಿ
4000 ಚದರ ಅಡಿ ಮೇಲ್ಪಟ್ಟ ತಿಂಗಳಿಗೆ 400 ರೂಪಾಯಿ
ಬಾಡಿಗೆದಾರರ ಮೇಲೆ ಪರಿಣಾಮ
ಕಸದ ಮೇಲಿನ ಸೆಸ್ ಬಾಡಿಗೆ ಮನೆಗಳಲ್ಲಿ ವಾಸಿಸುವ ಜನರಿಗೆ ನೇರ ಹೊರೆ ಆಗಲಿದೆ. ಬೆಂಗಳೂರು ನಗರದಲ್ಲಿ ಬಹುತೇಕ ಜನರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈಗಾಗಲೇ ಮನೆ ಬಾಡಿಗೆ, ವಿದ್ಯುತ್, ನೀರಿನ ಬಿಲ್ಲು, ಮತ್ತು ಇತರ ವೆಚ್ಚಗಳು ಹೆಚ್ಚಾಗಿದ್ದರೂ, ಇದೀಗ ಪ್ರತಿ ತಿಂಗಳು ರ 10 ರಿಂದ 400 ರೂಪಾಯಿ ವರೆಗಿನ ಹೆಚ್ಚುವರಿ ಕಸದ ವೆಚ್ಚವನ್ನು ಬಾಡಿಗೆದಾರರಿಗೆ ಸಾಧ್ಯತೆ ಇದೆ. ಅದೇ ರೀತಿ ಬಾಡಿಗೆ ದರವನ್ನು ಏರಿಸುವ ಸಾಧ್ಯತೆ ಕೂಡ ಇದೆ.
ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಗಳ ಮೇಲೆ ಪರಿಣಾಮ
ಬೆಂಗಳೂರು ನಗರದಲ್ಲಿ ಅಪಾರ ಸಂಖ್ಯೆಯಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಈಗಾಗಲೇ ವ್ಯಾಪಾರಕ್ಕೆ ಕಷ್ಟಕರ ಪರಿಸ್ಥಿತಿ ಎದುರಾಗಿರುವ ಉದ್ಯಮಗಳಿಗೆ ಈ ಹೊಸ ತೆರಿಗೆ ಮತ್ತಷ್ಟು ಹೊರೆ ತರಲಿದೆ. ಒಂದು ದಿನಕ್ಕೆ 20 ಕೆ.ಜಿ ಕಸದ ಉತ್ಪಾದನೆ ಮಾಡುವ ಒಂದು ಸಣ್ಣ ಹೋಟೆಲ್ ಈಗಾಗಲೇ 100 ರೂಪಾಯಿ ಪಾವತಿಸುತ್ತಿತ್ತು. ಇದೀಗ ಅದೇ ಕಸದ ನಿರ್ವಹಣೆಗಾಗಿ 240 ರೂಪಾಯಿ ಪಾವತಿಸಬೇಕು ಹೀಗಾಗಿ ಹೋಟೆಲ್ ಮಾಲೀಕರು ಈ ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆ ಇದೆ. ಇದು ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಆಹಾರದ ಬೆಲೆಗಳು ಸ್ವಲ್ಪ ಹೆಚ್ಚಾಗಬಹುದು. ಇದು ಈಗಾಗಲೇ ಬೆಲೆ ಏರಿಕೆಯ ಹೊಡೆತಕ್ಕೆ ತುತ್ತಾಗಿರುವ ಜನರಿಗೆ ಇದು ಮತ್ತಷ್ಟು ಆರ್ಥಿಕ ಹೊರೆ ತರಲಿದೆ.
ಬಿಬಿಎಂಪಿಗೆ ಹೆಚ್ಚುವರಿ ಆದಾಯ ನಿರೀಕ್ಷೆ
ಬಿಬಿಎಂಪಿ ಆಸ್ತಿ ತೆರಿಗೆಯಲ್ಲಿ ಕಸದ ತೆರಿಗೆಯನ್ನು ವಾರ್ಷಿಕವಾಗಿ ವಸೂಲಿ ಮಾಡಲಿದೆ. ಈ ಹೊಸ ನೀತಿಯೊಂದಿಗೆ ಬಿಬಿಎಂಪಿಗೆ ವರ್ಷಕ್ಕೆ ಸುಮಾರು 600 ಕೋಟಿ ರೂಪಾಯಿ ಆದಾಯ ಸಂಗ್ರಹವಾಗುವ ನಿರೀಕ್ಷೆ ಇದೆ.
ಈಗಾಗಲೇ ಬಸ್, ಮೆಟ್ರೋ ಹಾಲು, ಮೊಸರು, ವಿದ್ಯುತ್, ಲಿಫ್ಟ್, ಟ್ರಾನ್ಸ್‌ಫಾರ್ಮರ್ ಜನರೇಟರ್ ಪರಿಶೀಲನೆ ಮತ್ತು ರಿನೀವಲ್ ಶುಲ್ಕ ಏರಿಕೆ ಮಾಡಲಾಗಿದ್ದು, ರಾಜ್ಯ ಸರ್ಕಾರದ ಬೆಲೆ ಏರಿಕೆ ನಿರ್ಧಾರ ಜನರ ಜೇಬು ಸುಡುತ್ತಿದೆ.