ಗಾಳಿ ಆಂಜನೇಯ ದೇವಾಲಯ ಮುಜರಾಯಿ ಇಲಾಖೆ ಸುಪರ್ದಿಯಲ್ಲೇ ಮುಂದುವರಿಯಲಿ : ಹೈಕೋರ್ಟ್
ಗಾಳಿ ಆಂಜನೇಯ ದೇವಾಲಯದಲ್ಲಿ ಹಣ ದುರುಪಯೋಗದ ಆರೋಪವಿದೆ. ಹೀಗಾಗಿ ಸರ್ಕಾರದ ಕ್ರಮ ಮೇಲ್ನೋಟಕ್ಕೆ ತಪ್ಪು ಎನ್ನಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.;
ಮುಜರಾಯಿ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ
ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಐತಿಹಾಸಿಕ ಗಾಳಿ ಆಂಜನೇಯ ದೇವಾಲಯ ಮುಜರಾಯಿ ಇಲಾಖೆಯ ಸುಪರ್ದಿಯಲ್ಲೇ ಮುಂದುವರಿಯಲಿದೆ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ದೇವಾಲಯದಲ್ಲಿ ನಡೆದ ಹಣಕಾಸಿನ ಅವ್ಯವಹಾರಗಳು ವಿಡಿಯೋ ಸಾಕ್ಷ್ಯಗಳ ಮೂಲಕ ದೃಢಪಟ್ಟ ಹಿನ್ನೆಲೆಯಲ್ಲಿ, ಸರ್ಕಾರ ದೇವಾಲಯವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿತ್ತು. ಈ ಕ್ರಮವನ್ನು ಪ್ರಶ್ನಿಸಿ ದೇವಾಲಯದ ಟ್ರಸ್ಟ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಪೀಠವು ಮಂಗಳವಾರ ಈ ಅರ್ಜಿಯ ವಿಚಾರಣೆ ನಡೆಸಿ, ವಾದ-ಪ್ರತಿವಾದಗಳನ್ನು ಆಲಿಸಿತ್ತು. ಬುಧವಾರ ತೀರ್ಪು ಪ್ರಕಟಿಸಿದ ನ್ಯಾಯಾಲಯ, ಮುಜರಾಯಿ ಇಲಾಖೆ ಸುಪರ್ದಿಯಲ್ಲೇ ಗಾಳಿ ಆಂಜನೇಯ ದೇವಾಲಯ ಇರುವಂತೆ ಸೂಚನೆ ನೀಡಿದೆ. "ಸರ್ಕಾರದ ಕ್ರಮಕ್ಕೆ ತಡೆ ನೀಡಲು ಸಾಧ್ಯವಿಲ್ಲ. ದೇವಾಲಯದಲ್ಲಿ ಹಣ ದುರುಪಯೋಗದ ಆರೋಪಗಳಿರುವುದರಿಂದ, ಸರ್ಕಾರದ ಕ್ರಮ ಮೇಲ್ನೋಟಕ್ಕೆ ತಪ್ಪು ಎನ್ನಲು ಸಾಧ್ಯವಿಲ್ಲ" ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪಿ. ಪ್ರಸನ್ನಕುಮಾರ್, ದೇವಾಲಯವನ್ನು ಮುಜರಾಯಿ ಇಲಾಖೆ ತರಾತುರಿಯಲ್ಲಿ ಮತ್ತು ರಜಾ ದಿನವಾದ ಎರಡನೇ ಶನಿವಾರದಂದು ಆದೇಶ ಹೊರಡಿಸಿ ಸುಪರ್ದಿಗೆ ಪಡೆದುಕೊಂಡಿದೆ ಎಂದು ಆಕ್ಷೇಪಿಸಿದರು. ಆದೇಶ ಹೊರಡಿಸುವ ಮುನ್ನ ಅರ್ಜಿದಾರರ ಅಹವಾಲುಗಳನ್ನು ಆಲಿಸಿಲ್ಲ ಎಂದೂ ಅವರು ವಾದಿಸಿದರು. ದೇವಾಲಯದ ಬಗ್ಗೆ ಸರ್ಕಾರ ಮಾಡಿರುವ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಹಾಗಾಗಿ, ಅರ್ಜಿ ಇತ್ಯರ್ಥವಾಗುವವರೆಗೆ ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.
ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎನ್. ದೇವದಾಸ್, ದೇವಾಲಯದ ಟ್ರಸ್ಟ್‌ನಲ್ಲಿ ಹಣ ದುರುಪಯೋಗವಾಗಿರುವ ಬಗ್ಗೆ ದೂರುಗಳಿದ್ದವು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ದೇವಾಲಯದ ಸಿಬ್ಬಂದಿಯೇ ಹುಂಡಿ ಹಣ ಕಳ್ಳತನ ಮಾಡಿದ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ದೇವಾಲಯದ ಆಡಳಿತ ಮಂಡಳಿ ವಿರುದ್ಧ ಕೇಳಿಬಂದ ಆರೋಪಗಳ ಕುರಿತು ಉನ್ನತ ಮಟ್ಟದ ಅಧಿಕಾರಿಗಳಿಂದ ವಿಚಾರಣಾ ವರದಿ ಪಡೆಯಲಾಗಿತ್ತು. ಆ ವರದಿಯಲ್ಲಿ ದೇವಾಲಯದಲ್ಲಿ ಹಣಕಾಸು ದುರುಪಯೋಗ ನಡೆದಿರುವುದು ದೃಢಪಟ್ಟಿದೆ. ಆದ್ದರಿಂದ ಈ ಆದೇಶಕ್ಕೆ ತಡೆಯಾಜ್ಞೆ ನೀಡಬಾರದು ಎಂದು ಅವರು ಕೋರಿದರು. ವಾದದ ವೇಳೆ, ಮಾಧ್ಯಮಗಳಲ್ಲಿ ಪ್ರಸಾರವಾದ ಹುಂಡಿ ಹಣ ಕಳ್ಳತನದ ದೃಶ್ಯಗಳನ್ನೂ ಅವರು ನ್ಯಾಯಮೂರ್ತಿಗಳಿಗೆ ಮೊಬೈಲ್‌ನಲ್ಲಿ ತೋರಿಸಿದರು.