ಪಾಕ್ ಪರ ಘೋಷಣೆ ಪ್ರಕರಣದ ಎಫ್‌ಎಸ್‌ಎಲ್ ವರದಿ ಬಂದಿಲ್ಲ: ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಹಾಗೂ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.;
ಮಂಗಳೂರು: ವಿಧಾನಸೌಧದಲ್ಲಿ ಕಾಂಗ್ರೆಸ್ ರಾಜ್ಯಸಭಾ ನಾಯಕ ನಾಸಿರ್ ಹುಸೇನ್ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ಎಫ್‌ಎಸ್‌ಎಲ್ ವರದಿ ಹೇಳಿದೆ ಎಂಬ ಮಾಧ್ಯಮ ವರದಿಗಳನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನಿರಾಕರಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಈ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಕ್ರಮ ವಹಿಸಿದೆ. ನಾವು ಜವಾಬ್ದಾರಿ ಸ್ಥಾನದಲ್ಲಿ ಇರುವವರು. ಬಿಜೆಪಿಯವರು ಆರೋಪ ಮಾಡುತ್ತಲೇ ಇರುತ್ತಾರೆ” ಎಂದು ಕಿಡಿ ಕಾರಿದರು.
ವಿಪಕ್ಷ ನಾಯಕ ಆರ್ ಅಶೋಕ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಆರೋಪಗಳನ್ನು ಮಾಡೋದು ಬಿಜೆಪಿ ನಾಯಕರಿಗೆ ಅಭ್ಯಾಸವಾಗಿದೆ, ಎಫ್ ಎಸ್ ಎಲ್ ವರದಿ ಬಂದ ಬಳಿಕ ಎಲ್ಲವೂ ಸ್ಪಷ್ಟವಾಗುತ್ತದೆ, ಪಾಕ್ ಪರ ಕೂಗಿದ್ದರೆ ಅವರ ಪರ ಯಾರೂ ನಿಲ್ಲಲ್ಲ, ಈಗಾಗಲೇ ಹಲವಾರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
"ಈಗಲೇ ಎಲ್ಲವನ್ನೂ ಹೇಳುವುದಕ್ಕೆ ಆಗುವುದಿಲ್ಲ. ಸಿಂಧಗಿಯಲ್ಲಿ ಮುಸ್ಲಿಮರ ಮೇಲೆ ಆರೋಪ ಹೊರಿಸಲು ಶ್ರೀರಾಮಸೇನೆಯವರು ಪಾಕ್ ಧ್ವಜ ಹಾರಿಸಿದ್ದರು. ಸತ್ಯಾಂಶ ಬಯಲಾಗುವವರೆಗೆ ಏನೂ ಹೇಳದೆ ಇರುವುದು ಉತ್ತಮ. ಒಂದು ವೇಳೆ ಎಫ್‍ಎಸ್‍ಎಲ್ ವರದಿಯಲ್ಲಿ ಬೇರೆಯ ರೀತಿ ಮಾಹಿತಿ ಬಂದರೆ ಅದನ್ನು ಅವರು ಇಷ್ಟೇ ತೀವ್ರವಾಗಿ ಪ್ರಚಾರ ಮಾಡುವುದಿಲ್ಲ" ಎಂದು ಅವರು ಹೇಳಿದರು.
ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ ಸರ್ಕಾರದ ವೈಫಲ್ಯವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಷಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹಸಚಿವರು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ. ಬಿಜೆಪಿಯವರು ಎಲ್ಲಾ ವಿಷಯದಲ್ಲೂ ರಾಜಕೀಯ ಮಾಡುತ್ತಾರೆ. ಪುಲ್ವಾಮದಲ್ಲಿ ಬಾಂಬ್‍ಸ್ಪೋಟ ಆಗಿ 40 ಯೋಧರು ಹುತಾತ್ಮರಾಗಿದ್ದರು. ಬಿಗಿ ಭದ್ರತೆಯ ಪ್ರದೇಶದಲ್ಲಿ 150 ಕೆಜಿ ಆರ್‌ಡಿಎಕ್ಸ್ ಹೇಗೆ ತೆಗೆದುಕೊಂಡು ಹೋಗಲಾಗಿತ್ತು ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಭದ್ರತೆಯಲ್ಲಿ ಲೋಪವಾಗಿತ್ತು ಎಂದು ಆಗಿನ ಲೆಫ್ಟಿನಂಟ್ ಜನರಲ್ ಸತ್ಯಪಾಲ್ ಮಲ್ಲಿಕ್ ಹೇಳಿಕೆ ನೀಡಿದ್ದರು. ಅದಕ್ಕೂ ಕೇಂದ್ರ ಸರ್ಕಾರದ ಬಳಿ ಸ್ಪಷ್ಟ ಉತ್ತರ ಇಲ್ಲ. ಮಾಧ್ಯಮಗಳು ಕೂಡಾ ನಮ್ಮ ಪರವಾಗಿಲ್ಲ. ಪ್ರಧಾನಿ ಮೋದಿಯವರನ್ನು ಟೀಕೆ ಮಾಡುವ ಯಾವುದೇ ಮಾಧ್ಯಮಗಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.