ಮನೆ ಬಾಡಿಗೆ, ಲೀಸ್‌ಗೆ ಕೊಡುವುದಾಗಿ ಹೇಳಿ 60 ಕೋಟಿ ರೂ. ವಂಚನೆ
ಕಂಪನಿಯ ಮುಖ್ಯಸ್ಥ ವಿವೇಕ್ ಕೇಶವನ್, ಮನೆ ಮಾಲೀಕರಿಗೆ ಬಾಡಿಗೆ ನೀಡದೆ ಮತ್ತು ಬಾಡಿಗೆದಾರರಿಂದ ಪಡೆದ ಹಣದೊಂದಿಗೆ ಪರಾರಿಯಾಗಿದ್ದು, ಸಂತ್ರಸ್ತರು ಬೀದಿಪಾಲಾಗಿದ್ದಾರೆ.;
ವಿವೇಕ್ ಕೇಶವನ್
ಮನೆ ಬಾಡಿಗೆ ಮತ್ತು ಲೀಸ್ ಹೆಸರಿನಲ್ಲಿ ನೂರಾರು ಕುಟುಂಬಗಳಿಗೆ ಸುಮಾರು 60 ಕೋಟಿ ರೂ. ವಂಚನೆ ಮಾಡಿರುವ ಘಟನೆ 'ಕೆಟಿನಾ ಹೋಮ್ಸ್' ಕಂಪನಿ ವಿರುದ್ಧ ಕೇಳಿಬಂದಿದೆ.
ಕಂಪನಿಯ ಮುಖ್ಯಸ್ಥ ವಿವೇಕ್ ಕೇಶವನ್, ಮನೆ ಮಾಲೀಕರಿಗೆ ಬಾಡಿಗೆ ನೀಡದೆ ಮತ್ತು ಬಾಡಿಗೆದಾರರಿಂದ ಪಡೆದ ಹಣದೊಂದಿಗೆ ಪರಾರಿಯಾಗಿದ್ದು, ಸಂತ್ರಸ್ತರು ಬೀದಿಪಾಲಾಗಿದ್ದಾರೆ.
ವಿವೇಕ್ ಕೇಶವನ್ 'ಕೆಟಿನಾ' ಎಂಬ ಬ್ರೋಕರ್ ಕಂಪನಿಯೊಂದನ್ನು ಸ್ಥಾಪಿಸಿ, ವೆಬ್‌ಸೈಟ್ ಮೂಲಕ ಕಾರ್ಯನಿರ್ವಹಿಸುತ್ತಿದ್ದನು. ಮೊದಲು, ವಿವೇಕ್ ಮತ್ತು ಅವನ ತಂಡ ಬೆಂಗಳೂರಿನ ವಿವಿಧ ಪ್ರದೇಶಗಳಾದ ಮಾರತ್ತಹಳ್ಳಿ, ಬಾಣಸವಾಡಿ, ಅಮೃತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವೆಡೆ ಮನೆ ಮಾಲೀಕರಿಂದ ಮನೆಗಳನ್ನು ಬಾಡಿಗೆಗೆ ಅಥವಾ ಲೀಸ್‌ಗೆ ಪಡೆಯುತ್ತಿದ್ದ. ನಂತರ, ವೆಬ್‌ಸೈಟ್ ಮೂಲಕ ಲೀಸ್‌ಗೆ ಮನೆ ಹುಡುಕುತ್ತಿದ್ದ ಜನರನ್ನು ಆಕರ್ಷಿಸಿ, ಅವರಿಂದ ಲಕ್ಷಾಂತರ ರೂಪಾಯಿಗಳನ್ನು ಮುಂಗಡವಾಗಿ ಪಡೆಯುತ್ತಿದ್ದ.
ಹಣ ಪಡೆದ ಬಳಿಕ ವಿವೇಕ್ ಕೇಶವನ್ ಮತ್ತು ಆತನ ಸಹಚರರು ಮೊದಲ ಒಂದೆರಡು ತಿಂಗಳು ಮನೆ ಮಾಲೀಕರಿಗೆ ಬಾಡಿಗೆಯನ್ನು ಪಾವತಿಸುತ್ತಿದ್ದರು. ಆದರೆ, ಕಳೆದ 6 ತಿಂಗಳಿಂದ ಇವರು ಮನೆ ಮಾಲೀಕರಿಗೆ ಬಾಡಿಗೆ ಕಟ್ಟದೆ, ರಾತ್ರೋರಾತ್ರಿ ತಮ್ಮ ಕಚೇರಿಯನ್ನು ಖಾಲಿ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇದೀಗ ಈತನನ್ನು ನಂಬಿ ಲೀಸ್‌ಗೆ ಹಣ ಕೊಟ್ಟ ಕುಟುಂಬಗಳಿಗೆ ಅಸಲಿ ಮನೆ ಮಾಲೀಕರು ಮನೆ ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಮತ್ತೊಂದೆಡೆ, ತಾವು ಕಷ್ಟಪಟ್ಟು ಸಂಪಾದಿಸಿದ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡ ಕುಟುಂಬಗಳು ಬೀದಿಪಾಲಾಗಿವೆ.