ಬೆಂಗಳೂರು ಕ್ರೈಂ | ಒಂದೇ ಕುಟುಂಬದ ನಾಲ್ವರ ಸಾವು
ಒಂದೇ ಕುಟುಂಬದ ನಾಲ್ವರು ಸಾವು ಕಂಡಿರುವ ಘಟನೆ ಬೆಂಗಳೂರಿನ ಯಲಹಂಕದ ಯಡಿಯೂರಪ್ಪ ನಗರದಲ್ಲಿ ನಡೆದಿದೆ.;
ಒಂದೇ ಕುಟುಂಬದ ನಾಲ್ವರು ಸಾವುಕಂಡಿರುವ ಘಟನೆ ಬೆಂಗಳೂರಿನ ಯಲಹಂಕದ ಯಡಿಯೂರಪ್ಪ ನಗರದಲ್ಲಿ ನಡೆದಿದೆ. ದಂಪತಿ ಮತ್ತು ಇಬ್ಬರು ಮಕ್ಕಳು ಸಾವು ಕಂಡಿದ್ದಾರೆ.
ಅವಿನಾಶ್ (33), ಆತನ ಪತ್ನಿ ಮಮತಾ (30), ಮಕ್ಕಳಾದ ಅಧಿರಾ (05), ಅಣ್ಣಯ್ಯ (03) ಮೃತ ದುರ್ದೈವಿಗಳು. ಸ್ಥಳಕ್ಕೆ ರಾಜಾನುಕುಂಟೆ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ದಂಪತಿ ಕಲಬುರಗಿ ಮೂಲದವರು ಎನ್ನಲಾಗಿದೆ.
ಅವಿನಾಶ್ ನಗರದಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದು, ಕುಟುಂಬ ಕಳೆದ ಐದು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಅವಿನಾಶ್ ಅವರ ಸಹೋದರ ಉದಯ್ ಸಹ ಅವರೊಂದಿಗೆ ವಾಸಿಸುತ್ತಿದ್ದರು ಮತ್ತು ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಹಬ್ಬಕ್ಕೆಂದು ಸ್ವಗ್ರಾಮಕ್ಕೆ ತೆರಳಿದ್ದ ಅವರು ಸೋಮವಾರ ಬೆಳಿಗ್ಗೆ ವಾಪಸ್ಸಾದಾಗ ಮನೆಯ ಒಳಗೆ ಎಲ್ಲರೂ ಮೃತಪಟ್ಟಿರುವುದು ಕಂಡು ಬಂದಿದೆ.
ಐದು ವರ್ಷಗಳಿಂದ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅವಿನಾಶ್, 5 ವರ್ಷದ ಹಿಂದೆ ಕಲಬುರಗಿಯಿಂದ ಬೆಂಗಳೂರಿಗೆ ಕುಟುಂಬ ಸಮೇತ ಬಂದಿದ್ದರು. ಗಂಡನ ಆರ್ಥಿಕ ಸಂಕಷ್ಟದಿಂದ ಪತ್ನಿ ಮಮತಾ ಆತ್ಮಹತ್ಯೆಗೆ ನಿರ್ಧರಿಸಿರುವ ಶಂಕೆ ಇದೆ. ಮೊದಲಿಗೆ ಇಬ್ಬರು ಮಕ್ಕಳ ಕತ್ತು ಹಿಸುಕಿ ಕೊಂದಿದ್ದು, ನಂತರ ತಾನು ಹಗ್ಗ ಕಟ್ಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಗಂಡನಿಗೆ ಕರೆ ಮಾಡಿ ಮಮತಾ ಮಾತನಾಡಿದ್ದಾರೆ.
ಇನ್ನು ಸಂಜೆ ಪತಿ ಅವಿನಾಶ್, ಪತ್ನಿಗೆ ಹಲವು ಭಾರಿ ಕರೆ ಮಾಡಿದ್ದಾರೆ. ಆದರೆ ಫೋನ್ ರಿಸೀವ್ ಮಾಡಿಲ್ಲ. ಹೀಗಾಗಿ ಮೇಲಿನ ಮನೆಯವರಿಗೆ ಕರೆ ಮಾಡಿ ಪತ್ನಿಗೆ ಫೋನ್ ನೀಡುವಂತೆ ಪತಿ ಅವಿನಾಶ್ ಹೇಳಿದ್ದಾರೆ. ಈ ವೇಳೆ ಮೇಲಿನ ಮನೆಯವರು ಹಲವು ಭಾರೀ ಬಾಗಿಲು ಬಡಿದರೂ ಬಾಗಿಲು ತೆಗೆದಿಲ್ಲ. ಹೀಗಾಗಿ ರಾತ್ರಿ 9 ಗಂಟೆ ಸುಮಾರಿಗೆ ಅವಿನಾಶ್ ಮನೆಗೆ ವಾಪಸ್ ಬಂದಿದ್ದಾರೆ. ಮತ್ತೊಂದು ಕೀ ಇಂದು ಮನೆ ಬೀಗ ತೆಗೆದು ಒಳ ಹೋದಾಗ ಮಕ್ಕಳನ್ನು ಸಾಯಿಸಿ ಪತ್ನಿ ಆತ್ಮಹತ್ಯೆಗೆ ಶರಣಾಗಿರುವುದು ಪತ್ತೆಯಾಗಿದೆ. ಪತ್ನಿ ಮಕ್ಕಳ ಕೊಲೆ ಕಂಡು ಅವಿನಾಶ್ ಬೆಚ್ಚಿಬಿದ್ದಿದ್ದಾರೆ. ನಂತರ ಪತ್ನಿ ಮೃತದೇಹ ತೆಗೆದು ಅದೇ ಹಗ್ಗಕ್ಕೆ ಅವಿನಾಶ್ ಕೂಡ ನೇಣುಬಿಗಿದುಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸದ್ಯ ನಾಲ್ವರ ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಯಲಿದೆ. ಸಾವಿನ ಕಾರಣವನ್ನು ತಿಳಿಯಲು ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ (ಸಂಚಾರ), ಸಿ.ಕೆ. ಬಾಬಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆಯಲ್ಲಿ ಯಾವುದೇ ವೈಷಮ್ಯ ಅಥವಾ ಯಾವುದೇ ಸಮಸ್ಯೆ ಇರಲಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ.