ಸೊಂಟದಲ್ಲಿ ಗನ್‌ ಇಟ್ಟುಕೊಂಡು ಸಿಎಂಗೆ ಸನ್ಮಾನ: ನಾಲ್ವರು ಪೊಲೀಸರು ಸಸ್ಪೆಂಡ್

ರಿಯಾಜ್ ಅಹಮ್ಮದ್ ಎಂಬಾತ ಸೊಂಟದಲ್ಲಿ ರಿವಾಲ್ವರ್ ಇಟ್ಟುಕೊಂಡು ತೆರೆದ ವಾಹನ ಏರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದ್ದರು.;

Update: 2024-04-22 13:13 GMT
ಸೊಂಟದಲ್ಲಿ ಗನ್‌ ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದ ರಿಯಾಜ್ ಅಹಮ್ಮದ್
Click the Play button to listen to article

ಬೆಂಗಳೂರು: ಸೊಂಟದಲ್ಲಿ ರಿವಾಲ್ವರ್ ಇಟ್ಟುಕೊಂಡೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೂವಿನ ಹಾರ ಹಾಕಿ ಸನ್ಮಾನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಸೇರಿ ನಾಲ್ವರು ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಸಿದ್ದಾಪುರ ಠಾಣೆಯ ಪಿಎಸ್‌ಐ ಮೆಹಬೂಬ್ ಹುಡ್ಡ, ಹೆಡ್ ಕಾನ್‌ಸ್ಟೆಬಲ್‌ ಮಂಜು ನಾಯಕ್, ಕಾನ್‌ಸ್ಟೆಬಲ್ ಸಚಿನ್ ಹಾಗೂ ಎಎಸ್‌ಐಯೊಬ್ಬರನ್ನು ಅಮಾನತು ಮಾಡಲಾಗಿದೆ.

ಏನಿದು ಘಟನೆ

ಏ. 8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರ ಮತಯಾಚಿಸಲು ಸಿದ್ದಾಪುರ ಠಾಣೆ ವ್ಯಾಪ್ತಿಯ ಭೈರಸಂದ್ರದಲ್ಲಿ ರೋಡ್ ಶೋ ನಡೆಸಿದ್ದರು. ಈ ವೇಳೆ ರಿಯಾಜ್ ಅಹಮ್ಮದ್ ಎಂಬಾತ ಸೊಂಟದಲ್ಲಿ ರಿವಾಲ್ವರ್ ಇಟ್ಟುಕೊಂಡು ತೆರೆದ ವಾಹನ ಏರಿ ಸನ್ಮಾನಿಸಿದ್ದರು. ಇದು ವೈರಲ್‌ ಆಗಿತ್ತು.

ಭದ್ರತಾ ಲೋಪ ಉಂಟಾಗಿದ್ದ ಬಗ್ಗೆ ತನಿಖೆ ನಡೆಸುವಂತೆ ಕಮಿಷನರ್ ಆದೇಶ ಹೊರಡಿಸಿದ್ದರು. ಪ್ರಾಥಮಿಕ ತನಿಖೆ ನಡೆಸಿದ್ದ ದಕ್ಷಿಣ ವಿಭಾಗದ ಡಿಸಿಪಿ ಹಾಗೂ ಹೆಚ್ಚುವರಿ ಪೊಲೀಸ್ ಕಮಿಷನರ್ ಅವರು ಇತ್ತೀಚೆಗೆ ವರದಿ ಸಲ್ಲಿಸಿದ್ದರು.

ವರದಿ ಪರಿಶೀಲಿಸಿದ್ದ ಕಮಿಷನರ್ ಬಿ. ದಯಾನಂದ್, ಸಿದ್ದಾಪುರ ಠಾಣೆಯ ಪಿಎಸ್‌ಐ ಮೆಹಬೂಬ್ ಹುಡ್ಡ, ಹೆಡ್ ಕಾನ್‌ಸ್ಟೆಬಲ್‌ ಮಂಜು ನಾಯಕ್, ಕಾನ್‌ಸ್ಟೆಬಲ್ ಸಚಿನ್ ಹಾಗೂ ಎಎಸ್‌ಐಯೊಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದ ತೆರೆದ ವಾಹನದ ಸುತ್ತಲೂ ಪಿಎಸ್‌ಐ ಮೆಹಬೂಬ್ ಹಾಗೂ ಇತರರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಮುಖ್ಯಮಂತ್ರಿ ಅವರ ಬಳಿ ಹೋಗುವವರನ್ನು ತಪಾಸಣೆ ನಡೆಸುವ ಜವಾಬ್ದಾರಿಯೂ ಇವರದ್ದಾಗಿತ್ತು. ರಿಯಾಜ್ ಅಹಮ್ಮದ್ ಸೊಂಟದಲ್ಲಿ ರಿವಾಲ್ವ‌ರ್ ಇಟ್ಟುಕೊಂಡು ಮುಖ್ಯಮಂತ್ರಿ ಬಳಿ ಹೋಗುವಾಗ ಯಾರೊಬ್ಬರೂ ತಡೆದಿರಲಿಲ್ಲವೆಂಬುದು ತನಿಖೆಯಿಂದ ಗೊತ್ತಾಗಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ರಿಯಾಜ್‌ ಗನ್‌ ಮುಟ್ಟುಗೋಲು

ಎಲೆಕ್ಷನ್ ಸಮಯದಲ್ಲಿ ಗನ್ ಸರೆಂಡರ್‌ ಮಾಡಿರದ ರಿಯಾಜ್‌, ತಮಗೆ ಜೀವಭಯವಿದೆ ಎಂದು ಅರ್ಜಿ ನೀಡಿ ಅನುಮತಿಯನ್ನು ಪಡೆದುಕೊಂಡಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಅವರ ಬಳಿ ಹೋಗುವಾಗ ಗನ್ ತೆಗೆದುಕೊಂಡು ಹೋಗಬಾರದಿತ್ತು. Z ಸೆಕ್ಯುರಿಟಿ ಭದ್ರತೆ ಸಿಎಂಗೆ ಇದೆ. ಹೀಗಾಗಿ ಸಿಎಂ ಬಳಿ ಬರುವವರನ್ನು ತಪಾಸಣೆ ನಡೆಸಿ ಹತ್ತಿರ ಬಿಡಬೇಕಿತ್ತು. ಗನ್ ಅನ್ನು ರಿಯಾಜ್‌ ಸಾರ್ವಜನಿಕವಾಗಿ ಪ್ರದರ್ಶನ ಮಾಡಿದ್ದಾರೆ. ಹೀಗಾಗಿ ರಿಯಾಜ್ ಗನ್ ಮುಟ್ಟುಗೋಲು ಹಾಕಿಕೊಳ್ಳುವಂತೆ ದಕ್ಷಿಣ ವಿಭಾಗ ಡಿಸಿಪಿಗೆ ಸೂಚನೆ ನೀಡಿದ್ದರು.

2019ರಲ್ಲಿ ರಿಯಾಜ್‌ ಮೇಲೆ ಹಲ್ಲೆ 

2019ರಲ್ಲಿ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತನ ಮೇಲೆ ಎಸ್‌ಡಿಪಿಐ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಹೀಗಾಗಿ ಜೀವ ಬೆದರಿಕೆ ಇದೆ ಎಂಬ ಕಾರಣ ನೀಡಿ, ಗನ್ ಇಟ್ಟುಕೊಳ್ಳಲು ಲೈಸೆನ್ಸ್‌ಗೆ ಅರ್ಜಿ ಹಾಕಿದ್ದ.‌ ದಕ್ಷಿಣ ವಿಭಾಗ ಡಿಸಿಪಿ ಅರ್ಜಿ ಪರಿಶೀಲಿಸಿ ಗನ್ ಇಟ್ಟುಕೊಳ್ಳಲು ಅನುಮತಿ ನೀಡಿದ್ದರು. ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದ ಸೈಯದ್ ರಿಯಾಜ್‌ ಮೇಲೆ ಅಟ್ಯಾಕ್ ನಡೆದಿತ್ತು. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೀಗಾಗಿ ರಿಯಾಜ್‌ ಗನ್‌ ಪಡೆದುಕೊಂಡಿದ್ದ.

Tags:    

Similar News