ಮುಂಡಗಾರು ಲತಾ ಸೇರಿ ಮಾಜಿ ನಕ್ಸಲರಿಗೆ ಮೂರು ಪ್ರಕರಣಗಳಿಂದ ಮುಕ್ತಿ ನೀಡಿದ ಎನ್‌ಐಎ ವಿಶೇಷ ನ್ಯಾಯಾಲಯ
ಕಾನೂನುಬಾಹಿರ ಚಟುವಟಿಕೆಗೆ ಪ್ರೇರಣೆ ನೀಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಮತ್ತು ಸಾಕ್ಷಿ ಒದಗಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟು ಪ್ರಕರಣವನ್ನು ಖುಲಾಸೆಗೊಳಿಸಿದೆ.;
ಇತ್ತೀಚೆಗೆ ಕರ್ನಾಟಕ ಪೊಲೀಸರ ಮುಂದೆ ಶರಣಾಗಿದ್ದ ಮಾಜಿ ನಕ್ಸಲರಾದ ಮುಂಡಗಾರು ಲತಾ, ರವೀಂದ್ರ ಅಲಿಯಾಸ್ ಕೋಟೆಹೊಂಡ ರವಿ, ಸಾವಿತ್ರಿ ಅಲಿಯಾಸ್ ಉಷಾ, ಮತ್ತು ವನಜಾಕ್ಷಿ ಅಲಿಯಾಸ್ ಜ್ಯೋತಿ ಅಲಿಯಾಸ್ ಕಲ್ಪನಾ ಅವರನ್ನು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯವು ಗುರುವಾರ ಮೂರು ಪ್ರಕರಣಗಳಿಂದ ಖುಲಾಸೆಗೊಳಿಸಿದೆ. ಅವರ ಮೇಲಿರುವ ಆರೋಪಗಳಿಗೆ ತನಿಖಾಧಿಕಾರಿಗಳು ಸಾಕ್ಷ್ಯ ಒದಗಿಸಲು ವಿಫಲವಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಮುಂಡಗಾರು ಲತಾ ಅವರನ್ನು ಮೂರು, ರವೀಂದ್ರ ಅವರನ್ನು ಎರಡು ಮತ್ತು ಸಾವಿತ್ರಿ ಮತ್ತು ಜ್ಯೋತಿ ಅವರ ತಲಾ ಒಂದೊಂದು ಪ್ರಕರಣಗಳಲ್ಲಿ ಸಾಕ್ಷ್ಯ ಒದಗಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಎನ್‌ಐಎ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.
ಚಿಕ್ಕಮಗಳೂರಿನ ಶೃಂಗೇರಿ ಠಾಣೆಯಲ್ಲಿ ಈ ಮಾಜಿ ನಕ್ಸಲರ ವಿರುದ್ಧ ಪ್ರತ್ಯೇಕವಾಗಿ ಮೂರು ಪ್ರಕರಣಗಳು ದಾಖಲಾಗಿದ್ದವು. ಅವುಗಳೆಂದರೆ, ಥಣಿಕೋಡು ಅರಣ್ಯ ಚೆಕ್‌ಪೋಸ್ಟ್ ಧ್ವಂಸ ಕೃತ್ಯ (2005ರ ನವೆಂಬರ್ 4), ಲೇವಾದೇವಿದಾರ ಗಂಗಾಧರ್ ಶೆಟ್ಟಿ ಅಲಿಯಾಸ್ ಕಿರಣ್ ಶೆಟ್ಟಿ ಬೈಕ್‌ಗೆ ಬೆಂಕಿ ಹಚ್ಚಿದ ಕೃತ್ಯ (2008ರ ಮೇ 22), ಮತ್ತು ಬುಕ್ಕಡಿಬೈಲುವಿನಲ್ಲಿ ಸಾರ್ವಜನಿಕ ಸಭೆ ನಡೆಸಿದ ಆರೋಪ (2009ರ ಮಾರ್ಚ್ 5). ಈ ಪ್ರಕರಣಗಳಲ್ಲಿ ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್‌ಗಳಲ್ಲದೆ. ಭಯೋತ್ಪಾದನಾ ಚಟುವಟಿಕೆಗಳಿಗೆ ಅನ್ವಯಿಸಲಾಗುವ ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯಿದೆಯ (UAPA) ಸೆಕ್ಷನ್‌ಗಳನ್ನೂ ಅನ್ವಯಿಸಲಾಗಿತ್ತು.
ಎನ್‌ಐಎ ವಿಶೇಷ ನ್ಯಾಯಾಧೀಶರಾದ ಸಿ.ಎಂ. ಗಂಗಾಧರ್ ಅವರು ಆದೇಶದಲ್ಲಿ. "ಆರೋಪಿಗಳು ಅಪರಾಧ ಎಸಗುವ ಉದ್ದೇಶದಿಂದ ಕಾನೂನುಬಾಹಿರವಾಗಿ ಗುಂಪುಗೂಡಿ ಸಭೆ ನಡೆಸಿ. ಸಾರ್ವಜನಿಕರಿಗೆ ಗಂಭೀರ ಹಾನಿಯ ಬೆದರಿಕೆ ಹಾಕಿದ್ದಾರೆ ಎಂಬುವುದಕ್ಕೆಮತ್ತು ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂದು ಹೇಳುವುದಕ್ಕೆ ಹಾಗೂ ಭಯೋತ್ಪಾದನಾ ಚಟುವಟಿಕೆಗೆ ಕುಮ್ಮಕ್ಕು ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗೆ ಪ್ರೇರಣೆ ನೀಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಸಾಕ್ಷಿ ಒದಗಿಸಲು ವಿಫಲವಾಗಿದೆ" ಎಂದು ಹೇಳಿದ್ದಾರೆ.
ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದ್ದು, ಆರೋಪಿಗಳ ತಪ್ಪನ್ನು ಸಾಬೀತುಪಡಿಸಿಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ. ಜನವರಿ 9ರಂದು ಈ ಆರು ಮಾಜಿ ನಕ್ಸಲರು ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಶರಣಾಗಿದ್ದರು.