ಮಗಳ ಮೇಲೆ ಅತ್ಯಾಚಾರ ಆರೋಪ; ಫ್ರೆಂಚ್ ಕಾನ್ಸುಲೇಟ್ ಕಚೇರಿ ಮಾಜಿ ಸಿಬ್ಬಂದಿ ಖುಲಾಸೆ
'ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಫ್ರೆಂಚ್ ಕಾನ್ಸುಲೇಟ್ ಕಚೇರಿಯ ಮಾಜಿ ಸಿಬ್ಬಂದಿ ಪ್ಯಾಸ್ಕಲ್ ಮಜುರಿಯರ್ ತನ್ನ ಮಕ್ಕಳೊಂದಿಗೆ ದೇಶ ಬಿಟ್ಟು ಹೋಗುವುದನ್ನು ತಡೆಯಲು ಪತ್ನಿ ಸುಜಾ ಸುಳ್ಳು ಆರೋಪ ಹೊರಿಸಿದ್ದರೆಂಬ ವಿಚಾರಣಾ ನ್ಯಾಯಾಲಯದ ಅಭಿಪ್ರಾಯವನ್ನು ನ್ಯಾಯಪೀಠ ಪರಿಗಣಿಸಿದೆ.;
ಕರ್ನಾಟಕ ಹೈಕೋರ್ಟ್
ಮಗಳ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಮಾಜಿ ಫ್ರೆಂಚ್ ರಾಯಭಾರಿ ಕಚೇರಿ ಉದ್ಯೋಗಿ ಫಾಸ್ಕಲ್ ಖುಲಾಸೆ ತೀರ್ಪು ಎತ್ತಿ ಹಿಡಿದ ಹೈಕೋರ್ಟ್
ಬೆಂಗಳೂರಿನಲ್ಲಿ ಸಂಚಲನ ಮೂಡಿಸಿದ್ದ ಮಗಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ, ಫ್ರೆಂಚ್ ರಾಯಭಾರ ಕಚೇರಿಯ ಮಾಜಿ ಉದ್ಯೋಗಿ ಪ್ಯಾಸ್ಕಲ್ ಮಝರಿಯರ್ ಅವರಿಗೆ ಅಂತಿಮವಾಗಿ ಬಿಡುಗಡೆ ಸಿಕ್ಕಿದೆ. ವಿಚಾರಣಾ ನ್ಯಾಯಾಲಯ 2017ರಲ್ಲಿ ನೀಡಿದ್ದ ಖುಲಾಸೆ ತೀರ್ಪನ್ನು ಕರ್ನಾಟಕ ಹೈಕೋರ್ಟ್ 2025ರಲ್ಲಿ ಎತ್ತಿಹಿಡಿದಿದ್ದು, ಈ ಪ್ರಕರಣಕ್ಕೆ ತೆರೆ ಎಳೆದಿದೆ.
ಏನಿದು ಪ್ರಕರಣ?
2012ರಲ್ಲಿ ಪ್ಯಾಸ್ಕಲ್ ಮಝರಿಯರ್ ಅವರ ಪತ್ನಿ ಸುಜಾ ಜೋನ್ಸ್ ಮಝರಿಯರ್ ಅವರು ತಮ್ಮ ಮೂರೂವರೆ ವರ್ಷದ ಮಗಳ ಮೇಲೆ ಪತಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಗುವಿನ ಮೇಲೆ 2010 ಮತ್ತು 2012ರಲ್ಲಿ ಹಲವಾರು ಬಾರಿ ದೌರ್ಜನ್ಯ ನಡೆದಿದೆ ಎಂದು ಸುಜಾ ಹೇಳಿದ್ದರು. ಪೊಲೀಸರು ತನಿಖೆ ನಡೆಸಿ ಪ್ಯಾಸ್ಕಲ್ ವಿರುದ್ಧ ಆರೋಪಪಟ್ಟಿ ಕೂಡ ಸಲ್ಲಿಸಿದ್ದರು.
ನ್ಯಾಯಾಲಯದ ತೀರ್ಪು
ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಮತ್ತು ಸಾಕ್ಷಿಗಳ ಹೇಳಿಕೆಗಳಲ್ಲಿನ ಅಸಂಗತಿಗಳು ವಿಚಾರಣಾ ನ್ಯಾಯಾಲಯದ ಗಮನಕ್ಕೆ ಬಂದವು. 2017ರಲ್ಲಿ ವಿಚಾರಣಾ ನ್ಯಾಯಾಲಯವು ಪ್ಯಾಸ್ಕಲ್ ಮಝರಿಯರ್ ಅವರನ್ನು ಖುಲಾಸೆಗೊಳಿಸಿತು. "ವಿಚ್ಛೇದನ ಪಡೆಯುವ ಸಮಯದಲ್ಲಿ ಮಕ್ಕಳನ್ನು ದೇಶದಿಂದ ಹೊರಗೆ ಕರೆದುಕೊಂಡು ಹೋಗುವುದನ್ನು ತಡೆಯಲು ಪತ್ನಿ ಸುಜಾ ಸುಳ್ಳು ಆರೋಪ ಮಾಡಿದ್ದಾರೆ" ಎಂದು ನ್ಯಾಯಾಲಯ ಅನುಮಾನ ವ್ಯಕ್ತಪಡಿಸಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಸುಜಾ ಜೋನ್ಸ್ ಮಝರಿಯರ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಕೂಡ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು, ಸಾಕ್ಷ್ಯಾಧಾರಗಳ ಕೊರತೆ, ವೈದ್ಯಕೀಯ ಮತ್ತು ಮನೋವೈಜ್ಞಾನಿಕ ವರದಿಗಳಲ್ಲಿನ ವ್ಯತ್ಯಾಸಗಳು ಮತ್ತು ದೂರುದಾರರ ವರ್ತನೆಯಲ್ಲಿನ ಅನುಮಾನಗಳನ್ನು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಸುಜಾ ಅವರು ದೂರು ನೀಡುವ ಮೊದಲು ವಿವಿಧ ಎನ್ಜಿಒಗಳು, ವೈದ್ಯರು ಮತ್ತು ಕಾನೂನು ತಜ್ಞರ ಸಲಹೆ ಪಡೆದಿದ್ದು, ಮಗುವಿನ ಹೇಳಿಕೆಗಳ ಮೇಲೆ ತಾಯಿಯ ಪ್ರಭಾವ ಇರುವ ಸಾಧ್ಯತೆಯನ್ನು ನ್ಯಾಯಾಲಯಗಳು ಪರಿಗಣಿಸಿವೆ.
ಪ್ಯಾಸ್ಕಲ್ ಮಝರಿಯರ್ ಅವರು ತಮ್ಮ ಮೇಲಿನ ಆರೋಪಗಳನ್ನು ದಾಂಪತ್ಯ ಕಲಹದ ಪರಿಣಾಮ ಎಂದು ವಾದಿಸಿದ್ದರು. ಅಂತಿಮವಾಗಿ, ಈ ದೀರ್ಘಕಾಲದ ಕಾನೂನು ಹೋರಾಟವು ಆರೋಪಿಯ ಖುಲಾಸೆಯೊಂದಿಗೆ ಮುಕ್ತಾಯಗೊಂಡಿದೆ.