Working Hour | ಕೆಲಸದ ಅವಧಿ 10 ಗಂಟೆಗೆ ಹೆಚ್ಚಳ? ; ಸಂಘಟನೆಗಳ ಜತೆ ಕಾರ್ಮಿಕ ಇಲಾಖೆ ಚರ್ಚೆ

ಉದ್ದೇಶಿತ ಕಾನೂನು ತಿದ್ದುಪಡಿ ಕುರಿತು ಚರ್ಚಿಸಲು ಕಾರ್ಮಿಕರ ಇಲಾಖೆಯು ಬುಧವಾರ ಕೈಗಾರಿಕಾ ಮತ್ತು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಸಭೆ ಆಯೋಜಿಸಿದೆ.;

Update: 2025-06-18 08:16 GMT

ರಾಜ್ಯದಲ್ಲಿ ಕಾರ್ಮಿಕರ ಕೆಲಸ ಅವಧಿಯನ್ನು 10 ಗಂಟೆಗೆ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಡಿ ಇಟ್ಟಿದೆ. ಪ್ರಸ್ತುತ, ಚಾಲ್ತಿಯಲ್ಲಿರುವ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದು, ಕೆಲಸದ ಅವಧಿಯನ್ನು ಈಗಿರುವ ೮ ಗಂಟೆಯಿಂದ 10ಗಂಟೆಗೆ ಹೆಚ್ಚಿಸಲು ತೀರ್ಮಾನಿಸಿದೆ. ಅಲ್ಲದೇ 10ಕ್ಕಿಂತ ಕಡಿಮೆ ಉದ್ಯೋಗಗಳಿರುವ ಅಂಗಡಿ, ವಾಣಿಜ್ಯ ಸಂಸ್ಥೆಗಳನ್ನು ಕಾರ್ಮಿಕ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡುವ ಸಂಬಂಧವೂ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರಲು ಮುಂದಾಗಿದೆ. 

ದೇಶದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಕೆಲಸದ ಅವಧಿ ಹೆಚ್ಚಳದ ಪ್ರಸ್ತಾಪಕ್ಕೆ ಕಾರ್ಮಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೆಲಸದ ಅವಧಿ ಹೆಚ್ಚಿಸುವ ಕುರಿತು ಪ್ರತಿಪಾದಿಸಿದ್ದ ಉದ್ಯಮಿಗಳ ಪರವಾಗಿ ಸರ್ಕಾರವು ಕಾರ್ಮಿಕ ಕಾನೂನು ತಿದ್ದುಪಡಿಗೆ ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.    

ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚೆ 

ಉದ್ದೇಶಿತ ಕಾನೂನು ತಿದ್ದುಪಡಿ ಕುರಿತು ಚರ್ಚಿಸಲು ಕಾರ್ಮಿಕರ ಇಲಾಖೆಯು ಬುಧವಾರ ಕೈಗಾರಿಕಾ ಮತ್ತು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಸಭೆ ಕರೆದಿದೆ.

ಬೆಂಗಳೂರಿನ ಕಾರ್ಮಿಕ ಇಲಾಖೆಯಲ್ಲಿ ಸಭೆ ನಡೆಯುತ್ತಿದ್ದು, ತಿದ್ದುಪಡಿಗೂ ಮುನ್ನ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಕಾರ್ಮಿಕ ಸಂಘಟನೆಗಳು ಕೆಲಸದ ಅವಧಿ ಹೆಚ್ಚಳಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವುದರಿಂದ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಕಾಯ್ದೆ ಹೇಳುವುದೇನು?

ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ಸೆಕ್ಷನ್ 7ರ ಪ್ರಕಾರ ಕೆಲಸದ ಅವಧಿ ದಿನಕ್ಕೆ ಒಂಬತ್ತು ಗಂಟೆ ಮೀರಬಾರದು. ಗರಿಷ್ಠ ಹೆಚ್ಚುವರಿ ಅವಧಿ 10 ಗಂಟೆ ಮೀರಬಾರದು ಎಂಬುದಿದೆ.

ಸಾಮಾನ್ಯವಾಗಿ ದೇಶಾದ್ಯಂತ ವಾರಕ್ಕೆ 48 ಗಂಟೆಗಳ ಕೆಲಸದ ಅವಧಿ ಜಾರಿಯಲ್ಲಿದೆ 48 ಗಂಟೆಗೂ ಹೆಚ್ಚು ಅವಧಿ ದುಡಿಸಿದರೆ ಅದನ್ನು ಹೆಚ್ಚುವರಿ ಅವಧಿ ಎಂದು ಪರಿಗಣಿಸಲಾಗುತ್ತದೆ.

ಈಗ ರಾಜ್ಯ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೆಲಸದ ಅವಧಿಯನ್ನು ಗರಿಷ್ಠ 10 ಗಂಟೆ ಮತ್ತು ಹೆಚ್ಚುವರಿ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ವಿಸ್ತರಿಸಲು ನಿರ್ಧರಿಸಿದೆ.

ಎಲ್ಲೆಲ್ಲಿ ತಿದ್ದುಪಡಿ ಆಗಿದೆ?

ಕಾರ್ಮಿಕರ ಕಾನೂನುಗಳಿಗೆ ಈಗಾಗಲೇ ಛತ್ತೀಸಗಡ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ತಿದ್ದುಪಡಿ ತಂದಿದ್ದು, ಕಾರ್ಮಿಕರ ಕೆಲಸದ ಅವಧಿಯನ್ನು ದಿನಕ್ಕೆ 10 ಗಂಟೆಗಳಿಗೆ ಹೆಚ್ಚಿಸಲಾಗಿದೆ.

ಹೆಚ್ಚುವರಿ ಅವಧಿಗೆ ಕೆಲಸ ಮಾಡಿಸಿದರೆ ಅದನ್ನ ಪಾವತಿ ರಜಾ ದಿನವನ್ನಾಗಿ ಪರಿಗಣಿಸಬೇಕು ಎಂಬ ನಿಯಮ ರೂಪಿಸಲಾಗಿದೆ. ಮಹಿಳಾ ಕಾರ್ಮಿಕರು ಒಪ್ಪಿದರೆ ಮಾತ್ರ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಸಬಹುದು ಎಂದು ಕಾಯ್ದೆ ಪರಿಷ್ಕರಿಸಲಾಗಿದೆ. ಆದರೆ, ಕಾಯ್ದೆ ತಿದ್ದುಪಡಿಗೆ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ.

ಐಟಿ ಉದ್ಯಮಿಗಳ ಬೇಡಿಕೆ

ಇತ್ತೀಚೆಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಎಲ್ ಅಂಡ್ ಟಿ ಸಂಸ್ಥಾಪಕ ಸುಬ್ರಹ್ಮಣ್ಯ ಅವರು ಕೆಲಸದ ಅವಧಿಯನ್ನು ವಾರಕ್ಕೆ 70 ಗಂಟೆಗೆ ಏರಿಸಬೇಕೆಂದು ಪ್ರತಿಪಾದಿಸಿದ್ದರು.

ಪ್ರಧಾನಿ ಮೋದಿ ಅವರು ದಿನಕ್ಕೆ 16 ಗಂಟೆ ಕೆಲಸ ಮಾಡುತ್ತಾರೆ. ಅವರು ಊಟ, ನಿದ್ರೆ ಕಡೆ ಗಮನ ಕೊಡುವುದಿಲ್ಲ. 70 ವರ್ಷ ದಾಟಿದ ಪ್ರಧಾನಿಗಳೇ ಹೆಚ್ಚು ಸಮಯ ಕೆಲಸ ಮಾಡುವಾಗ ಭಾರತದ ಯುವಕರು ದಿನಕ್ಕೆ 12 ಗಂಟೆಯಾದರೂ ಕೆಲಸ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಈ ಹೇಳಿಕೆಗಳು ಉದ್ಯಮ ವಲಯದಲ್ಲಿ ಪರ ಹಾಗೂ ವಿರೋಧದ ಚರ್ಚೆಗೆ ಕಾರಣವಾಗಿತ್ತು. ನಾರಾಯಣಮೂರ್ತಿ ಹೇಳಿಕೆಗೆ ಉದ್ಯಮಗಳಲ್ಲೇ ಅಪಸ್ವರ ಬಂದಿತ್ತು. ಆದರೆ, ಕಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ವಿದೇಶಗಳಲ್ಲಿ ಹೇಗಿದೆ ಕೆಲಸದ ಅವಧಿ?

ಸೌದಿ ಅರೆಬಿಯಾದಲ್ಲಿ ಕೆಲಸದ ಅವಧಿ ಹೆಚ್ಚಿದೆ. ಇಲ್ಲಿ ವಾರಕ್ಕೆ 53 ಗಂಟೆಗಳ ಕೆಲಸದ ಅವಧಿ ನಿಗದಿಪಡಿಸಲಾಗಿದೆ.

ಜಾಂಬಿಯಾ, ಭೂತಾನ್, ಕಾಂಗೋ, ಕತಾರ್ ದೇಶಗಳಲ್ಲಿ ಕಾರ್ಮಿಕರ ಕೆಲಸದ ಅವಧಿ ಭಾರತಕ್ಕಿಂತ ಅಂದರೆ 48 ಗಂಟೆಗಿಂತಲೂ ಹೆಚ್ಚಾಗಿದೆ.

ಅಮೆರಿಕದಲ್ಲಿ ವಾರಕ್ಕೆ 40 ಗಂಟೆ, ಜರ್ಮನಿಯಲ್ಲಿ 37.5 ಗಂಟೆ, ಆಸ್ಟ್ರೇಲಿಯಾದಲ್ಲಿ 30 ಗಂಟೆ, ಕೆನಡಾ, ಇಂಗ್ಲೆಂಡ್ನಲ್ಲಿ 40 ಗಂಟೆ ಕೆಲಸದ ಅವಧಿ ಇದೆ.

Tags:    

Similar News