ದೀಪಾವಳಿ ಸಡಗರದ ನಡುವೆ ಪಟಾಕಿ ಅವಘಡ, ಮಕ್ಕಳೂ ಸೇರಿದಂತೆ 14 ಮಂದಿಗೆ ಗಾಯ
ನಗರದ ವಿವಿಧೆಡೆ ನಡೆದ ಘಟನೆಗಳಲ್ಲಿ ಗಾಯಾಳುಗಳನ್ನು ಮಿಂಟೋ ಮತ್ತು ನಾರಾಯಣ ನೇತ್ರಾಲಯಕ್ಕೆ ದಾಖಲಿಸಲಾಗಿದೆ. ನಾರಾಯಣ ನೇತ್ರಾಲಯದಲ್ಲಿ, ಪಟಾಕಿ ಕಿಡಿ ಸಿಡಿದು 3 ವರ್ಷದ ಬಾಲಕನೊಬ್ಬನ ಕಣ್ಣಿಗೆ ಸಣ್ಣ ಪ್ರಮಾಣದ ಗಾಯವಾಗಿದೆ.
ಸಾಂದರ್ಭಿಕ ಚಿತ್ರ
ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದ ನಡುವೆಯೇ ರಾಜಧಾನಿಯಲ್ಲಿ ಹಲವು ಪಟಾಕಿ ಅವಘಡಗಳು ಸಂಭವಿಸಿದ್ದು, ಐವರು ಮಕ್ಕಳು ಸೇರಿದಂತೆ ಒಟ್ಟು 14 ಜನರು ಗಾಯಗೊಂಡಿದ್ದಾರೆ. ಆತಂಕಕಾರಿ ವಿಷಯವೆಂದರೆ, ಗಾಯಗೊಂಡವರಲ್ಲಿ ಪಟಾಕಿ ಸಿಡಿಸುತ್ತಿದ್ದವರಿಗಿಂತ ಹೆಚ್ಚಾಗಿ, ರಸ್ತೆ ಬದಿಯಲ್ಲಿ ನಿಂತಿದ್ದ ಮತ್ತು ನಡೆದುಹೋಗುತ್ತಿದ್ದ ಅಮಾಯಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಮುಗ್ಧರ ಕಣ್ಣಿಗೆ ತಗುಲಿದ ಪಟಾಕಿ ಕಿಡಿ
ನಗರದ ವಿವಿಧೆಡೆ ನಡೆದ ಘಟನೆಗಳಲ್ಲಿ ಗಾಯಾಳುಗಳನ್ನು ಮಿಂಟೋ ಮತ್ತು ನಾರಾಯಣ ನೇತ್ರಾಲಯಕ್ಕೆ ದಾಖಲಿಸಲಾಗಿದೆ. ನಾರಾಯಣ ನೇತ್ರಾಲಯದಲ್ಲಿ, ಪಟಾಕಿ ಕಿಡಿ ಸಿಡಿದು 3 ವರ್ಷದ ಬಾಲಕನೊಬ್ಬನ ಕಣ್ಣಿಗೆ ಸಣ್ಣ ಪ್ರಮಾಣದ ಗಾಯವಾಗಿದೆ. ಮತ್ತೊಂದು ಪ್ರಕರಣದಲ್ಲಿ, ಪಟಾಕಿ ಸಿಡಿದು ಹಾರಿದ ಕಣಗಳು 12 ವರ್ಷದ ಬಾಲಕಿಯ ಕಣ್ಣಿಗೆ ತಗುಲಿದ್ದು, ಕಾರ್ನಿಯಾ ಭಾಗಕ್ಕೆ ಹಾನಿಯಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮಿಂಟೋ ಆಸ್ಪತ್ರೆಯಲ್ಲಿಯೂ ಸಹ ಹಲವರಿಗೆ ಚಿಕಿತ್ಸೆ ನೀಡಲಾಗಿದೆ. ಸೋಮವಾರ ಮಧ್ಯಾಹ್ನ ಬಾಲಕನೊಬ್ಬ 'ಬಿಜ್ಜಿ ಪಟಾಕಿ' ಸಿಡಿಸುವಾಗ ಕಣ್ಣಿಗೆ ತೀವ್ರ ಗಾಯವಾಗಿದೆ. ಉಳಿದಂತೆ, 12 ಮತ್ತು 14 ವರ್ಷದ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ನಾಲ್ವರಿಗೆ ಚಿಕಿತ್ಸೆ ನೀಡಲಾಗಿದ್ದು, ಮೂವರನ್ನು ಚಿಕಿತ್ಸೆಯ ನಂತರ ಮನೆಗೆ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಶೇಖರ್ ಕಣ್ಣಿನ ಆಸ್ಪತ್ರೆಯಲ್ಲಿಯೂ ಐವರಿಗೆ ಚಿಕಿತ್ಸೆ ನೀಡಲಾಗಿದೆ.
ಪೋಷಕರಿಗೆ ವೈದ್ಯರ ಕಿವಿಮಾತು
ಈ ಘಟನೆಗಳ ಹಿನ್ನೆಲೆಯಲ್ಲಿ, ನಾರಾಯಣ ನೇತ್ರಾಲಯದ ನಿರ್ದೇಶಕ ಡಾ. ನರೇನ್ ಶೆಟ್ಟಿ ಅವರು ಸಾರ್ವಜನಿಕರಲ್ಲಿ, ವಿಶೇಷವಾಗಿ ಪೋಷಕರಲ್ಲಿ ಜಾಗೃತಿ ವಹಿಸುವಂತೆ ಮನವಿ ಮಾಡಿದ್ದಾರೆ. "ಪಟಾಕಿ ಸಿಡಿಸುವಾಗ ಮಕ್ಕಳು ಎಚ್ಚರಿಕೆ ಅಗತ್ಯ. ಮಕ್ಕಳು ಪಟಾಕಿ ಸಿಡಿಸುವಾಗ ಪೋಷಕರು ಕಡ್ಡಾಯವಾಗಿ ಹತ್ತಿರದಲ್ಲೇ ಇದ್ದು, ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಬೇಕು," ಎಂದು ಅವರು ಸಲಹೆ ನೀಡಿದ್ದಾರೆ. ಯಾವುದೇ ಅವಘಡ ಸಂಭವಿಸಿದರೆ ತಕ್ಷಣ ಕಣ್ಣನ್ನು ಉಜ್ಜದೆ, ಶುದ್ಧ ನೀರಿನಿಂದ ತೊಳೆದು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಮಿಂಟೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.