ಅಗ್ನಿ ಸುರಕ್ಷತಾ ನಿಯಮ ಉಲ್ಲಂಘನೆ: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವಿದ್ಯುತ್ ಸಂಪರ್ಕ ಕಡಿತ

ಈ ವಿದ್ಯುತ್ ಕಡಿತ ನೋಟಿಸ್​​ ಪ್ರಶ್ನಿಸಿ ಕೆಎಸ್‌ಸಿಎ ಹೈಕೋರ್ಟ್ ಮೊರೆ ಹೋಯಿತು. ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, ಬೆಸ್ಕಾಂನ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.;

Update: 2025-07-02 04:20 GMT

ಬೆಂಗಳೂರಿನ ಐತಿಹಾಸಿಕ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ವಿದ್ಯುತ್ ಸಂಪರ್ಕವನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಕಡಿತಗೊಳಿಸಿದೆ. ಕ್ರೀಡಾಂಗಣವು ಅಗತ್ಯ ಅಗ್ನಿ ಸುರಕ್ಷತಾ ಮಾನದಂಡಗಳನ್ನು ಅನುಸರಿಸದ ಕಾರಣ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಮಹಾನಿರ್ದೇಶಕರು ಕಳೆದ ತಿಂಗಳು ಬೆಸ್ಕಾಂಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಬೆಸ್ಕಾಂ, ಜೂನ್ 12 ರಂದು ಕ್ರೀಡಾಂಗಣದ ನಿರ್ವಹಣೆ ಹೊತ್ತಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ಗೆ (ಕೆಎಸ್‌ಸಿಎ) ನೋಟಿಸ್ ಜಾರಿಗೊಳಿಸಿ, ಮೂರು ದಿನಗಳಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿತು.

ಗಡುವು ಮುಗಿದರೂ ಪ್ರತಿಕ್ರಿಯೆ ಬಾರದ ಕಾರಣ, ಜೂನ್ 15 ರಂದು ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿತು. ಆದರೆ, ಕೆಎಸ್‌ಸಿಎ 15 ದಿನಗಳ ಕಾಲಾವಕಾಶ ಕೋರಿತು. ಇದನ್ನು ಪರಿಗಣಿಸಿದ ಬೆಸ್ಕಾಂ, ಜೂನ್ 20 ರಂದು ಮತ್ತೊಂದು ನೋಟಿಸ್ ಜಾರಿಗೊಳಿಸಿ, ಏಳು ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಿತು. ಜೂನ್ 27 ರಂದು ಈ ಗಡುವು ಮುಗಿದರೂ ಕೆಎಸ್‌ಸಿಎ ಕಡೆಯಿಂದ ಯಾವುದೇ ಸ್ಪಷ್ಟ ಕ್ರಮ ಕೈಗೊಂಡ ಬಗ್ಗೆ ಮಾಹಿತಿ ಬಾರದ ಕಾರಣ, ಜೂನ್ 30 ರಂದು ಕ್ರೀಡಾಂಗಣದ ವಿದ್ಯುತ್ ಅನ್ನು ಶಾಶ್ವತವಾಗಿ ಕಡಿತಗೊಳಿಸಲಾಯಿತು.

ಹೈಕೋರ್ಟ್‌ನಿಂದ ಬೆಸ್ಕಾಂಗೆ ತೀವ್ರ ತರಾಟೆ

ಈ ವಿದ್ಯುತ್ ಕಡಿತ ಆದೇಶವನ್ನು ಪ್ರಶ್ನಿಸಿ ಕೆಎಸ್‌ಸಿಎ ಹೈಕೋರ್ಟ್ ಮೊರೆ ಹೋಯಿತು. ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, ಬೆಸ್ಕಾಂನ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. "ಅಗ್ನಿ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳು ಇಲ್ಲ ಎಂದು ತಿಳಿದಿದ್ದರೂ ವಿದ್ಯುತ್ ಸಂಪರ್ಕ ನೀಡಿದ್ದು ಹೇಗೆ? ಸರ್ಕಾರದ ಅನುಮತಿ ಇಲ್ಲದೆ ನೀವೇ ವಿದ್ಯುತ್ ಸಂಪರ್ಕ ಕಲ್ಪಿಸಿದರೆ ನ್ಯಾಯಾಲಯ ಸಹಿಸುವುದಿಲ್ಲ," ಎಂದು ಕಟುವಾಗಿ ಎಚ್ಚರಿಸಿತು. "ಈ ತಪ್ಪಿಗೆ ಬೆಸ್ಕಾಂ ಅನ್ನೇ ಸಂಪೂರ್ಣವಾಗಿ ಹೊಣೆ ಮಾಡಲಾಗುವುದು," ಎಂದು ನ್ಯಾಯಾಲಯ ಖಡಾಖಂಡಿತವಾಗಿ ಹೇಳಿತು.

ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಮತ್ತು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಮಹಾನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 15 ಕ್ಕೆ ಮುಂದೂಡಲಾಗಿದೆ.  

Tags:    

Similar News