ಸಿನಿಮಾ ಸೆಟ್‌ಗಾಗಿ ಮರ ಕಡಿದ ಆರೋಪ; ಯಶ್ ಅಭಿನಯದ 'ಟಾಕ್ಸಿಕ್' ಚಿತ್ರ ತಂಡದ ಮೇಲೆ ಎಫ್‌ಐಆರ್‌

ನ್ಯಾಯಾಲಯದ ಆದೇಶದಂತೆ ಚಿತ್ರ ನಿರ್ಮಿಸುತ್ತಿರುವ ಕೆವಿಎನ್ ಮಾನ್‌ಸ್ಟರ್‌ ಮೈಂಡ್ ಕ್ರಿಯೇಷನ್ಸ್, ಕೆನರಾ ಬ್ಯಾಂಕ್‌ ಜನರಲ್ ಮ್ಯಾನೇಜರ್ ಮತ್ತು ಎಚ್‌ಎಂಟಿ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.

Update: 2024-11-12 14:14 GMT
ಟಾಕ್ಸಿಕ್‌ ಸಿನಿಮಾದ ಪೋಸ್ಟರ್‌

ಸಿನಿಮಾ ಚಿತ್ರೀಕರಣದ ಸೆಟ್ ಹಾಕಲೆಂದು ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಶ್‌ ಅಭಿನಯದ ಟಾಕ್ಸಿಕ್‌ ಸಿನಿಮಾ ತಂಡದ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಚಿತ್ರದ ನಿರ್ಮಾಣ ಸಂಸ್ಥೆ ಹಾಗೂ ಇತರ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಎಂಟನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನಿರ್ದೇಶನದಂತೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ನ್ಯಾಯಾಲಯದ ಆದೇಶದಂತೆ ಚಿತ್ರ ನಿರ್ಮಿಸುತ್ತಿರುವ ಕೆವಿಎನ್ ಮಾನ್‌ಸ್ಟರ್‌ ಮೈಂಡ್ ಕ್ರಿಯೇಷನ್ಸ್, ಕೆನರಾ ಬ್ಯಾಂಕ್‌ ಜನರಲ್ ಮ್ಯಾನೇಜರ್ ಮತ್ತು ಎಚ್‌ಎಂಟಿ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ತನಿಖೆ ನಡೆಯುತ್ತಿದ್ದು, ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲಾಗುವುದು ಮತ್ತು ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

"ಮರಗಳನ್ನು ಕಡಿದು ತಪ್ಪೆಸಗಿರುವುದು ಸ್ಪಷ್ಟವಾಗಿದೆ. ವಿಚಾರಣೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ಹೇಳಿದ್ದಾರೆ. ಸಚಿವರು, ಮರಗಳನ್ನು ಕಡಿದಿರುವುದಕ್ಕೆ ಪುರಾವೆಗಳಿವೆ. ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಸಚಿವರು ಭೇಟಿ ನೀಡಿದಾಗ ಪತ್ತೆ

ಅಕ್ಟೋಬರ್ 29ರಂದು ಸಚಿವ ಈಶ್ವರ್ ಖಂಡ್ರೆ ಅವರು ಚಿತ್ರದ ಚಿತ್ರೀಕರಣ‌ದ ಸೆಟ್ ಪರಿಶೀಲನೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ. ಅರಣ್ಯ ಭೂಮಿಯಲ್ಲಿ ಮರಗಳನ್ನು ಕಡಿಯಲು ಅನುಮತಿ ನೀಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಹೇಳಿಕೆಯಲ್ಲಿ, ಬೆಂಗಳೂರಿನ ಪೀಣ್ಯ ಪ್ಲಾಂಟೇಶನ್ 1 ಮತ್ತು ಪ್ಲಾಂಟೇಶನ್ 2ರಲ್ಲಿ ಒಟ್ಟು 599 ಎಕರೆ ಮೀಸಲು ಅರಣ್ಯವನ್ನು ಗೆಜೆಟ್ ಮಾಡಲಾಗಿದೆ. ಅದನ್ನು 1960ರ ದಶಕದಲ್ಲಿ ಡಿ-ನೋಟಿಫಿಕೇಷನ್ ಇಲ್ಲದೆ ಎಚ್ಎಂಟಿ (ಹಿಂದೂಸ್ತಾನ್ ಮೆಷಿನ್ ಟೂಲ್ಸ್) ಗೆ ಅಕ್ರಮವಾಗಿ ಹಸ್ತಾಂತರಿಸಲಾಗಿದೆ.

" ಅರಣ್ಯವನ್ನು ಡಿನೋಟಿಫೈ ಮಾಡದ ಹೊರತು ಅದು ಅರಣ್ಯವಾಗಿರುತ್ತದೆ" ಎಂದು ಸುಪ್ರೀಂ ಕೋರ್ಟ್ ಹೇಳಿದ್ದನ್ನು ಅಲ್ಲಿ ಉಲ್ಲೇಖಿಸಲಾಗಿದೆ. ಡಿನೋಟಿಫಿಕೇಷನ್ ಇಲ್ಲದೆ ಎಚ್‌ಎಂಟಿ ವಶದಲ್ಲಿರುವ ಭೂಮಿ ಅರಣ್ಯದ ಒಂದು ಭಾಗ ಎಂದು ಸಚಿವರು ಹೇಳಿದ್ದಾರೆ.

ಎಚ್ಎಂಟಿ ತನ್ನ ಸ್ವಾಧೀನದಲ್ಲಿರುವ ಅರಣ್ಯ ಭೂಮಿಯನ್ನು ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡಿದೆ. ಅರಣ್ಯೇತರ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ. ಈ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿದಿರುವುದು ಉಪಗ್ರಹಗಳಿಂದ ತೆಗೆದ ಚಿತ್ರ ಗೋಚರಿಸುತ್ತದೆ" ಎಂದು ಖಂಡ್ರೆ ಹೇಳಿದ್ದಾರೆ. 

Tags:    

Similar News