ಶಿಕ್ಷಕಿಗೆ ಅತ್ಯಾಚಾರದ ಬೆದರಿಕೆ ಹಾಕಿದ ಆರೋಪ | 12 ಮಂದಿ ದರ್ಶನ್ ಅಭಿಮಾನಿಗಳ ವಿರುದ್ಧ ಎಫ್ಐಆರ್
ದರ್ಶನ್ ಅಭಿಮಾನಿಗಳು ಅತ್ಯಾಚಾರ ಬೆದರಿಕೆ ಹಾಕಿದ್ದು, ಪತ್ನಿಯ ಭದ್ರತೆ ಮತ್ತು ಖಾಸಗಿತನಕ್ಕೆ ಧಕ್ಕೆ ಉಂಟಾಗಿದೆ. ಹಾಗಾಗಿ ರಕ್ಷಣೆ ಒದಗಿಸಬೇಕು ಎಂದು ಅಜಿತ್ ಆನಂದ್ ಹೆಗಡೆ ಮನವಿ ಮಾಡಿದ್ದಾರೆ.
ಶಿಕ್ಷಕಿಗೆ ಅತ್ಯಾಚಾರದ ಬೆದರಿಕೆಯೊಡ್ಡಿದ ಆರೋಪದ ಮೇಲೆ ನಟ ದರ್ಶನ್ ಅಭಿಮಾನಿಗಳ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಜಿತ್ ಆನಂದ್ ಹೆಗಡೆ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲೆಯಾಗಿದೆ. ಸೆಪ್ಟೆಂಬರ್ 24ರಂದು ಸರ್ಕಾರಿ ಶಿಕ್ಷಕಿಯಾಗಿರುವ ಅಜಿತ್ ಅವರ ಪತ್ನಿಯನ್ನು ಗುರಿಯಾಗಿಸಿಕೊಂಡು ‘ಖದರ್ ಕನ್ನಡಿಗ’ ಎಂಬ ಫೇಸ್‌ಬುಕ್ ಪುಟದಲ್ಲಿ ಅಶ್ಲೀಲ ಸಂದೇಶ ಹಾಕಲಾಗಿತ್ತು. ಪೋಷಕರ ಅನುಮತಿ ಇಲ್ಲದೇ ಮಕ್ಕಳ ಫೋಟೋಗಳನ್ನು ಬಳಸಿಕೊಂಡಿದ್ದರು. ಗುರುತು ಮರೆ ಮಾಚದೇ ಕಿಡಿಗೇಡಿಗಳು ಪೋಸ್ಟ್ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶಿಕ್ಷಕಿಯು ಗಣತಿ ಕಾರ್ಯದಲ್ಲಿ ಭಾಗಿಯಾಗಿರುವುದರಿಂದ ಕರ್ತವ್ಯ ನಿರ್ವಹಿಸಲು ಭಯದ ವಾತಾವರಣ ಸೃಷ್ಟಿಯಾಗಿದೆ.
ದರ್ಶನ್ ಅಭಿಮಾನಿಗಳು ಅತ್ಯಾಚಾರ ಬೆದರಿಕೆ ಹಾಕಿದ್ದು, ಪತ್ನಿಯ ಭದ್ರತೆ ಮತ್ತು ಖಾಸಗಿತನಕ್ಕೆ ಧಕ್ಕೆ ಉಂಟಾಗಿದೆ. ಹಾಗಾಗಿ ರಕ್ಷಣೆ ಒದಗಿಸಬೇಕು ಎಂದು ಅಜಿತ್ ಆನಂದ್ ಹೆಗಡೆ ಮನವಿ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಖದರ್ ಕನ್ನಡಿಗ ಫೇಸ್‌ಬುಕ್ ಪುಟ ಹಾಗೂ 12 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದಕ್ಕೂ ಮೊದಲು ನಟಿ ರಮ್ಯಾ ಮತ್ತು ಸೋನು ಶೆಟ್ಟಿ ವಿರುದ್ಧವೂ ಅಶ್ಲೀಲ ಸಂದೇಶಗಳನ್ನು ಹಾಕಿದ ಆರೋಪದ ಮೇಲೆ ದರ್ಶನ್ ಅಭಿಮಾನಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ದರ್ಶನ್ ಅಭಿಮಾನಿಗಳು ಇಂತಹ ಅಸಭ್ಯ ವರ್ತನೆ ಹಾಗೂ ನಿಂದನೆಗಳಲ್ಲಿ ಭಾಗಿಯಾದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರು. ಇದರ ಹೊರತಾಗಿಯೂ ಮತ್ತೆ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ನಿಂದಿಸುತ್ತಿರುವ ಪ್ರಕರಣಗಳು ಮುಂದುವರಿದಿವೆ.
ಈ ಹಿಂದೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯ ಸಿಗಬೇಕು ಎಂದು ಹೇಳಿದ್ದ ನಟಿ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಹಾಕಿ ಬೆದರಿಕೆ ಹಾಕಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಈ ಕುರಿತು ನಟಿ ರಮ್ಯಾ ನೀಡಿದ ದೂರಿನ ಮೇರೆಗೆ ಪೊಲೀಸರು 12 ಮಂದಿ ದರ್ಶನ್ ಅಭಿಮಾನಿಗಳನ್ನು ಬಂಧಿಸಿದ್ದರು. ಘಟನೆ ಕುರಿತಂತೆ ಪ್ರತಿಕ್ರಿಯಿಸಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು, ದರ್ಶನ್ ಅಭಿಮಾನಿಗಳ ವರ್ತನೆ ಮಿತಿ ಮೀರಿದೆ. ಮಹಿಳೆಯರ ವಿರುದ್ಧ ಅಸಭ್ಯ ಸಂದೇಶ ಕಳುಹಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಯೋಗ ಸಿದ್ಧವಾಗಿದೆ ಎಂದು ಎಚ್ಚರಿಸಿದ್ದರು. ದರ್ಶನ್ ಅಭಿಮಾನಿಗಳು ಅಶ್ಲೀಲ ಸಂದೇಶ, ಬೆದರಿಕೆ ಹಾಕಿರುವುದು ಸಾಬೀತಾದರೆ 7 ವರ್ಷ ಸಜೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿತ್ತು.