ಹಬ್ಬದ ಸುಲಿಗೆ | ಖಾಸಗಿ ಬಸ್ ದರ ಏರಿಕೆಗೆ ಕಡಿವಾಣ: ಆರ್‌ಟಿಒ ಕಾರ್ಯಾಚರಣೆ
ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಟಿಕೆಟ್ ದರ ಎರಡು ಮೂರು ಪಟ್ಟು ಹೆಚ್ಚಿಸಿ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿರುವ ಖಾಸಗಿ ಟ್ರಾವೆಲ್ ಏಜೆನ್ಸಿಗಳು ಮತ್ತು ಬಸ್ ಮಾಲೀಕರ ವಿರುದ್ಧ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸಲು ಸಾರಿಗೆ ಇಲಾಖೆ ಮುಂದಾಗಿದೆ.
ಹಬ್ಬದ ಹಿನ್ನೆಲೆಯಲ್ಲಿ ತಮ್ಮ ತಮ್ಮ ಊರಿಗೆ ಪ್ರಯಾಣಿಸುವ ಪ್ರಯಾಣಿಕರು ಬಸ್ ಮತ್ತು ರೈಲು ಟಿಕೆಟ್ ಗಾಗಿ ಪರದಾಡುವುದು ಸಾಮಾನ್ಯ. ಜನಸಾಮಾನ್ಯರ ಈ ಅನಿವಾರ್ಯತೆಯನ್ನೇ ದಂದೆಯನ್ನಾಗಿ ಮಾಡಿಕೊಂಡಿರುವ ಖಾಸಗಿ ಬಸ್ ಮತ್ತು ಟ್ರಾವೆಲ್ ಏಜೆನ್ಸಿಗಳು ನಿಗದಿತ ದರಕ್ಕಿಂತ ಎರಡು ಮೂರು ಪಟ್ಟು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಎಂದಿನಂತೆ ಈ ಬಾರಿಯೂ ವ್ಯಾಪಕ ದೂರುಗಳು ಬಂದಿವೆ. ಆ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಎಲ್ಲಾ ಆರ್ಟಿಒಗಳಿಗೆ ಸೂಚನೆ ನೀಡಿದ್ದು, ಶುಕ್ರವಾರ ಮತ್ತು ಶನಿವಾರ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸಿ ಪ್ರಯಾಣಿಕರ ಸುಲಿಗೆ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದೆ.
ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮತ್ತು ಇಲಾಖೆ ಆಯುಕ್ತ ಎ.ಎಂ.ಯೋಗೀಶ್ ಸೂಚನೆ ಮೇರೆಗೆ ಸಾರಿಗೆ ಇಲಾಖೆ ಅಪರ ಆಯುಕ್ತ ಮಲ್ಲಿಕಾರ್ಜುನ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ದಿಢೀರ್ ಭೇಟಿ ನೀಡಿ ತಪಾಸಣೆ ಮಾಡುತ್ತಿದ್ದು, ಹೆಚ್ಚು ಟಿಕೆಟ್ ದರ ವಸೂಲಿ ಮಾಡಿದ ಖಾಸಗಿ ಬಸ್ ನಿರ್ವಾಹಕರನ್ನು ಬ್ಲಾಕ್ ಲಿಸ್ಟ್ ಗೆ ಹಾಕುವುದು ಮತ್ತು ಪರ್ಮಿಟ್ ರದ್ದು ಮಾಡಲು ಸೂಚನೆ ನೀಡಲಾಗುತ್ತಿದೆ.
ಪ್ರಮುಖವಾಗಿ ಬೆಂಗಳೂರಿನಲ್ಲಿ ಈ ಸುಲಿಗೆಗೆ ಕಡಿವಾಣ ಹಾಕಲು ನಗರದ ಆನಂದರಾವ್ ಸರ್ಕಲ್, ಗೊರಗುಂಟೆಪಾಳ್ಯ, ಕೆ.ಆರ್.ಪುರಂ, ಕೆಂಗೇರಿ, ಹೆಬ್ಬಾಳ, ಮಡಿವಾಳ, ಹೊಸೂರು ರಸ್ತೆ, ಮೆಜೆಸ್ಟಿಕ್ ಸೇರಿದಂತೆ ಪ್ರಮುಖ ಖಾಸಗಿ ಬಸ್ ನಿಲ್ದಾಣಗಳಲ್ಲಿ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಲಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿಯೂ ದಿಢೀರ್ ತಪಾಸಣೆ ಕಾರ್ಯಾಚರಣೆ ನಡೆಸಲು ಆರ್ಟಿಓ ಗಳಿಗೆ ಸೂಚಿಸಲಾಗಿದೆ. ಅಲ್ಲದೆ, ವಿಶೇಷ ತಂಡ ರಚಿಸಿ ರಾತ್ರಿಪೂರ್ತಿ ಖಾಸಗಿ ಬಸ್ಗಳ ತಪಾಸಣೆ ನಡೆಸಲು ಕೂಡ ಇಲಾಖೆ ಸೂಚಿಸಿದೆ.
ಕೆಎಸ್ಆರ್ಟಿಎಸ್ ವಿಶೇಷ ಹೆಚ್ಚುವರಿ ಬಸ್
ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ವಿವಿಧ ಊರುಗಳಿಗೆ ಕೆಎಸ್ಆರ್ಟಿಸಿ ವಿಶೇಷ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಗೋಕರ್ಣ, ಶಿರಸಿ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಕಾರವಾರ, ಹಾಸನ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ರಾಯಚೂರು, ಬೀದರ್, ಯಾದಗಿರಿ, ಹೈದ್ರಾಬಾದ್, ತಿರುಪತಿ, ವಿಜಯವಾಡ, ಕಲಬುರಗಿ ಭಾಗಗಳಿಗೆ ಹೆಚ್ಚುವರಿ ಬಸ್ ಬಿಡಲಾಗಿದೆ.
ಜೊತೆಗೆ ಕೆಎಸ್ಆರ್ಟಿಸಿ ಬಸ್ ಕೊರತೆ ಹಿನ್ನಲೆಯಲ್ಲಿ ಹೊರ ಜಿಲ್ಲೆಯಲ್ಲೂ ಬಿಎಂಟಿಸಿ ಬಸ್ಗಳು ಕಾರ್ಯಾಚರಣೆ ಮಾಡಲಿವೆ. ಹಬ್ಬಕ್ಕೆ ಹೆಚ್ಚುವರಿ 200 ಬಿಎಂಟಿಸಿ ಬಸ್ಗಳನ್ನ ಬಳಸಿಕೊಳ್ಳಲು ಕೆಎಸ್ಆರ್ಟಿಸಿ ನಿರ್ಧರಿಸಿದೆ.