Mysore MUDA Case | ಮುಡಾದ 631 ನಿವೇಶನಗಳ ವಿವರ ಕೇಳಿದ ಇಡಿ; ಬಗೆದಷ್ಟು ಅಕ್ರಮದ ವಾಸನೆ
ಮುಡಾ ಕಚೇರಿ ಮೇಲಿನ ದಾಳಿಯ ವೇಳೆ ದೊರೆತಿರುವ ದಾಖಲೆಗಳ ಆಧಾರದ ಮೇಲೆ 631 ನಿವೇಶನಗಳ ಮಾಹಿತಿ ನೀಡುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಜಾರಿ ನಿರ್ದೇಶನಾಲಯ ಜ.16 ರಂದು ಪತ್ರ ಬರೆದಿದೆ.;
ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದಲ್ಲಿ 300 ಕೋಟಿ ರೂ. ಮೌಲ್ಯದ 142 ಸ್ಥಿರಾಸ್ತಿಯನ್ನು ಇಡಿ(ಜಾರಿ ನಿರ್ದೇಶನಾಲಯ) ಮುಟ್ಟುಗೋಲು ಹಾಕಿಕೊಂಡ ಬೆನ್ನಲ್ಲೇ ತನ್ನ ತನಿಖೆಯನ್ನು ಮತ್ತಷ್ಟು ಬಿಗಿಗೊಳಿಸಿದೆ.
ಮುಡಾ ಕಚೇರಿ ಮೇಲಿನ ದಾಳಿಯ ವೇಳೆ ದೊರೆತಿರುವ ದಾಖಲೆಗಳ ಆಧಾರದ ಮೇಲೆ 631 ನಿವೇಶನಗಳ ಮಾಹಿತಿ ನೀಡುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಜಾರಿ ನಿರ್ದೇಶನಾಲಯ ಜ.16 ರಂದು ಪತ್ರ ಬರೆದಿದೆ. ನಿವೇಶನಗಳ ಸಂಖ್ಯೆ, ಪ್ರದೇಶ, ಹಂಚಿಕೆಗೆ ಸಂಬಂಧಿಸಿದ ವಿವರವಾದ ಮಾಹಿತಿ ನೀಡುವಂತೆ ಪತ್ರದಲ್ಲಿ ಕೋರಲಾಗಿದೆ. ಶುಕ್ರವಾರವಷ್ಟೇ ಮುಡಾ ಹಂಚಿಕೆ ಮಾಡಿದ್ದ ಅಂದಾಜು 300 ಕೋಟಿ ರೂ. ಮೌಲ್ಯದ 142 ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಂಡಿತ್ತು.
ಮೈಸೂರು ಲೋಕಾಯುಕ್ತ ಪೊಲೀಸರು ದಾಖಲಿಸಿಕೊಂಡಿದ್ದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿ ಹಲವು ರಿಯಲ್ ಎಸ್ಟೇಟ್ ಉದ್ಯಮಿಗಳು, ಏಜೆಂಟರು ಹಾಗೂ ಬೇನಾಮಿಗಳ ಹೆಸರಿನಲ್ಲಿದ್ದ ನಿವೇಶನ, ಜಮೀನುಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿತ್ತು.
ಸಿಎಂ ಸಿದ್ದರಾಮಯ್ಯ ಆಪ್ತರಾದ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಜಯರಾಮ್, ರಾಕೇಶ್ ಪಾಪಣ್ಣ, ಮಂಜುನಾಥ್ ಹಾಗೂ ತೇಜಸ್ ಅವರಿಗೆ ಸೇರಿದ್ದ ನಿವೇಶನಗಳನ್ನು ಜಪ್ತಿ ಮಾಡಿಕೊಂಡಿತ್ತು.
ಮುಡಾದ ಮಾಜಿ ಆಯುಕ್ತ ನಟೇಶ್, ದಿನೇಶ್ ಅವರ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಂಡಿತ್ತಲ್ಲದೇ ಸಿದ್ದರಾಮಯ್ಯ ಅವರಿಗೆ ಅನುಕೂಲಕರವಾದ ರೀತಿಯಲ್ಲಿ ನಿವೇಶನ ಹಂಚಿಕೆ ಮಾಡಿದ್ದಾರೆ ಎಂಬುದನ್ನು ದೃಢಪಡಿಸಿತ್ತು.
ಸಿಎಂ ವಿರುದ್ಧ ಬಿಗಿ ತನಿಖೆ
ಮುಡಾದಿಂದ ಪಡೆದುಕೊಂಡಿದ್ದ 14 ನಿವೇಶಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಈಗಾಗಲೇ ಹಿಂದಿರುಗಿಸಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ಇರುವ ಎಲ್ಲ ಕಾನೂನು ಸಾಧ್ಯತೆಗಳನ್ನು ಬಳಸಿಕೊಳ್ಳಲು ಇಡಿ ಮುಂದಾಗಿದೆ. ಹೀಗಾಗಿಯೇ ಜ. 18 ರಂದು ಬಿಡುಗಡೆ ಮಾಡಿರುವ ಮಾಧ್ಯಮ ಹೇಳಿಕೆಯಲ್ಲಿ ತನಿಖೆಯ ಮುಂದುವರಿದ ಭಾಗವಾಗಿ ಅಕ್ರಮವಾಗಿ ಪರಭಾರೆಯಾಗಿದ್ದ ಎಲ್ಲ 142 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಎಲ್ಲ ನಿವೇಶನಗಳು ಬೇನಾಮಿ ಅಥವಾ ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಎಜೆಂಟರ ಹೆಸರಿನಲ್ಲಿ ನೋಂದಣಿ ಆಗಿವೆ. ಈ ಎಲ್ಲ ನಿವೇಶನಗಳ ಪರಭಾರೆ ಹಿಂದೆ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಉಲ್ಲೇಖಿಸಿದೆ. ಆ ಮೂಲಕ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಕುಣಿಕೆಯನ್ನು ಬಿಗಿಗೊಳಿಸುವ ಸ್ಪಷ್ಟ ಸೂಚನೆಯನ್ನು ಇಡಿ ನೀಡಿದೆ.
ಇಡಿಯ ಈ ಕ್ರಮ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನಾತ್ಮಕವಾಗಿ ಇರುವ ಎಲ್ಲ ಸಾಧ್ಯತೆಗಳನ್ನು ಬಳಸಿಕೊಳ್ಳುವ ಪ್ರಯತ್ನದ ಮುಂದುವರಿದ ಭಾಗ ಎಂದೇ ವಿಶ್ಲೇಷಿಸಲಾಗುತ್ತಿದೆ.