FARMERS SUICIDE | ಮಾಜಿ ಸಿಎಂ ಬೊಮ್ಮಾಯಿ ಕ್ಷೇತ್ರದಲ್ಲೇ ಅತಿಹೆಚ್ಚು ರೈತ ಆತ್ಮಹತ್ಯೆ!
2023ರ ಏಪ್ರಿಲ್ ನಿಂದ 2024ರ ಜನವರಿಯೊಳಗೆ ಅಂದರೆ ಕೇವಲ ಹತ್ತು ತಿಂಗಳಲ್ಲಿ ಕರ್ನಾಟಕದಲ್ಲಿ 692 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ 548 ರೈತರು ದುರ್ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 1,240 ರೈತರು ಸಾವಿಗೆ ಕೊರಳೊಡ್ಡಿದ್ದಾರೆ.;
ಇತ್ತೀಚೆಗೆ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದ್ದು, 2023ರ ಏಪ್ರಿಲ್ ನಿಂದ 2024ರ ಜನವರಿಯೊಳಗೆ; ಅಂದರೆ ಕೇವಲ ಹತ್ತು ತಿಂಗಳಲ್ಲಿ 692 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರೈತರ ಆತ್ಮಹತ್ಯೆಯ ಜೊತೆಜೊತೆಗೆ ಆಕಸ್ಮಿಕ ಸಾವುಗಳ ಸಂಖ್ಯೆಯೂ ಹೆಚ್ಚಾಗಿವೆ.. ಈ ಹತ್ತು ತಿಂಗಳಲ್ಲಿ 548 ರೈತರು ದುರ್ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 1,240 ರೈತರು ಸಾವಿಗೀಡಾಗಿದ್ದಾರೆ. ದಿನಕ್ಕೆ ಸರಾಸರಿ ನಾಲ್ಕಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.
ರಾಜ್ಯದಲ್ಲಿ ನಿರಂತರವಾಗಿ ಬರ ಪರಿಸ್ಥಿತಿ ಎದುರಾಗಿರುವುದೇ ಈ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಕಾರಣ ಎನ್ನುವುದು ಸ್ಪಷ್ಟವಾಗಿ ಸೂಚಿಸುತ್ತದೆ. ಹಾವೇರಿ, ಬೆಳಗಾವಿ ಮತ್ತು ಚಿಕ್ಕಮಗಳೂರಿನಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ ಎಂದು ಕಂದಾಯ ಇಲಾಖೆ ನೀಡಿರುವ ಅಂಕಿಅಂಶಗಳು ತಿಳಿಸುತ್ತವೆ.
ರೈತರ ಆತ್ಮಹತ್ಯೆಗಳಿಗೆ ಮೂಲ ಕಾರಣ ಕೃಷಿ ಸಾಲ ಮತ್ತು ಬರಗಾಲ ಎನ್ನುವುದು ತೆರೆದಿಟ್ಟ ಸತ್ಯ.. ಹಾಗಾಗಿ ಕರ್ನಾಟಕ ಸರ್ಕಾರವು ಈಗಾಗಲೇ 236 ತಾಲೂಕುಗಳ ಪೈಕಿ 223 ತಾಲೂಕುಗಳು ತೀವ್ರ ಬರಪೀಡಿತ ಮತ್ತು 27 ತಾಲೂಕುಗಳು ಬರಪೀಡಿತ ಎಂದು ವರ್ಗೀಕರಿಸಿದೆ.
2024ರ ಜ.31ರ ಅಂಕಿಅಂಶಗಳ ಪ್ರಕಾರ ರಾಜ್ಯದ 22.59 ಲಕ್ಷ ರೈತರು ಸಹಕಾರಿ ಸಂಸ್ಥೆಗಳಿಂದ 17,534 ಕೋಟಿ ರೂ.ಗಳ ಮಧ್ಯಮಾವಧಿ ಮತ್ತು ಅಲ್ಪಾವಧಿ ಸಾಲ ಪಡೆದಿದ್ದಾರೆ. ಇನ್ನೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ (ಡಿಸೆಂಬರ್ 31, 2023 ರವರೆಗೆ) 8.5 ಲಕ್ಷ ರೈತರು ರೂ. 17,424 ಕೋಟಿ ರೂ. ಸಾಲ ಪಡೆದಿದ್ದಾರೆ. 238 ರೈತರು ಮಾತ್ರ ಸಹಕಾರಿ ಸಂಸ್ಥೆಗಳಲ್ಲಿ ತಮ್ಮ ಸಾಲವನ್ನು (ರೂ. 3.07 ಕೋಟಿ) ಮರುಪಾವತಿ ಮಾಡಿದ್ದಾರೆ ಎಂದು ಡೇಟಾ ಹೊರಬಿದ್ದಿದೆ..
ಸಹಕಾರಿ ಸಂಸ್ಥೆಗಳಿಂದ ಪಡೆದ ಸಾಲವನ್ನು ಮರುಪಾವತಿಸುವ ವಿಚಾರದಲ್ಲಿ ರೈತರು ಹೆಚ್ಚಿನ ಒತ್ತಡದಲ್ಲಿದ್ದಾರೆ, ಆದರೆ ಹೆಚ್ಚಿನ ರೈತರು ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದಿದ್ದಾರೆ, ಅಲ್ಲಿ ಅವರಿಗೆ ಮತ್ತಷ್ಟು ತೊಂದರೆಗಳು ಎದುರಾಗುತ್ತಿರುವುದರಿಂದ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ.
ರೈತ ಕುಟುಂಬಗಳಿಗೆ ಪರಿಹಾರ
ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳು ಸರ್ಕಾರದಿಂದ ಪರಿಹಾರ ಪಡೆಯಬೇಕೆಂದರೆ ಆ ರೈತ ಬ್ಯಾಂಕ್ ಸಾಲವನ್ನು ಹೊಂದಿರಬೇಕು ಮತ್ತು ಸಾವು ಆತ್ಮಹತ್ಯೆಯಾಗಿರಬೇಕು ಎಂಬುದು ಮುಖ್ಯ ಮಾನದಂಡವಾಗಿದೆ.
ಐದು ಲಕ್ಷ ರೂ. ಪರಿಹಾರ
ಸಾಲಬಾಧೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಆತನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಹಾಗೂ ಮರಣ ಹೊಂದಿದವರ ಸಂಗಾತಿಗೆ ಮಾಸಿಕ 2000 ರೂಪಾಯಿ ಪಿಂಚಣಿ ನೀಡಲಾಗುತ್ತದೆ. ಹಾವು ಕಡಿತ ಮತ್ತು ಇತರ ಅಪಘಾತಗಳಿಂದ ಸಾವನ್ನಪ್ಪುವ ರೈತರಿಗೆ 2 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುತ್ತದೆ.
ಉತ್ತರ ಕರ್ನಾಟಕ ಭಾಗದಲ್ಲಿ ಅತಿಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ ಎಂದು ಸರ್ಕಾರವೇ ನೀಡಿದ ಅಂಕಿಅಂಶಗಳು ಹೇಳುತ್ತವೆ. ಗಮನಾರ್ಹ ವಿಚಾರವೆಂದರೆ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ತವರು ಕ್ಷೇತ್ರದಲ್ಲೇ ಅತಿಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.
ಯಾವ ಜಿಲ್ಲೆಯಲ್ಲಿ ಎಷ್ಟು ರೈತರು ಆತ್ಮಹತ್ಯೆ
ಹಾವೇರಿ (86), ಬೆಳಗಾವಿ (75), ಚಿಕ್ಕಮಗಳೂರು (64), ಶಿವಮೊಗ್ಗ (32), ಮೈಸೂರು (30), ಧಾರವಾಡ (29), ವಿಜಯಪುರ(25), ವಿಜಯನಗರ (18), ಹಾಸನ (17), ಯಾದಗಿರಿ (16), ಕಲಬುರಗಿ (16), ಮಂಡ್ಯ (14), ಬೀದರ್ (12), ತುಮಕೂರು (12), ಬಾಗಲಕೋಟೆ (11).
ಅದೇ ರೀತಿ ದುರ್ಘಟನೆಯ ಸಾವುಗಳಲ್ಲಿ ತುಮಕೂರು 62, ಬೆಳಗಾವಿ 35 ಮತ್ತು ಮೈಸೂರು 33 ಪ್ರಕರಣಗಳು ದಾಖಲಾಗಿವೆ.
ತಜ್ಙರು ಏನಂತಾರೆ?
ರೈತರ ಆತ್ಮಹತ್ಯೆಗೆ ಮುಖ್ಯವಾದ ಕಾರಣಗಳೇನು ಎನ್ನುವ ವಿಚಾರವಾಗಿ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ರೈತ ಮುಖಂಡ ಕೆ ಟಿ ಗಂಗಾಧರ್ ಅವರು, ʼʼಭಾರತ ದೇಶದಲ್ಲಿ ಈವರೆಗಿನ ಸರ್ಕಾರಗಳು ಕೃಷಿ ಪದ್ದತಿಯನ್ನು ಉದ್ಯಮ ಎಂದು ಪರಿಗಣಿಸಲೇ ಇಲ್ಲ. ಆಹಾರ ಉತ್ಪಾದನೆ ಮಾಡುವ ವಲಯ ಇಡೀ ದೇಶಕ್ಕೆ ಆಹಾರ ಭದ್ರತೆ ಒದಗಿಸುತ್ತಿದೆ. ರೈತ ಉತ್ಪಾದನೆ ಮಾಡುವಂತಹ ಯಾವುದೇ ಪದಾರ್ಥವಾಗಲಿ ಅವುಗಳಿಗೆ ವೈಜ್ಞಾನಿಕ ಬೆಲೆ ಕೊಡಬೇಕಿತ್ತು. ಆಗ ಆ ರೈತನಿಗೆ ಸಾಲ ತೀರಿಸುವ ಸಾಮರ್ಥ್ಯ ಬರುತ್ತದೆ ಈ ಬಗ್ಗೆ ಸರ್ಕಾರಗಳು, ಅರ್ಥಶಾಸ್ತ್ರಜ್ಞರು ಯೋಚನೆ ಮಾಡಲೇ ಇಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
"2013ರಲ್ಲಿ ಆಹಾರ ಭದ್ರತಾ ಕಾಯ್ದೆ ತರಲಾಯಿತು, ಆದರೆ ಆ ಆಹಾರ ಉತ್ಪಾದನೆ ಮಾಡುವ ರೈತನಿಗೆ ಸಹಾಯ ಆಗುವಂತಹ ಕಾಯ್ದೆ ಮಾಡಲಿಲ್ಲ ಇದು ವಿಪರ್ಯಾಸವೇ ಸರಿ. ಎಂಎಸ್ಪಿ (ಕನಿಷ್ಟ ಬೆಂಬಲ ಬೆಲೆ)ಗಿಂತ ಕಡಿಮೆ ಬೆಲೆ ಖರೀದಿ ಮಾಡದಂತೆ ಕಾನೂನು ಮಾಡಿ, ಒಂದು ವೇಳೆ ಕಡಿಮೆ ಬೆಲೆಗೆ ಖರೀದಿ ಮಾಡಿದರೆ, ಅಂತವರ ವಿರುದ್ಧ ಕಠಿಣ ಕ್ರಮ ತಗೆದುಕೊಳ್ಳುವ ಕಾನೂನು ತನ್ನಿ ಎಂದು ನಾವು ಕೇಳುತ್ತಿದ್ದೇವೆ. ಆದರೆ ನಮ್ಮ ಕೇಂದ್ರ ಸರ್ಕಾರ ರೈತರನ್ನೇ ತುಂಬಾ ಕೀಳಾಗಿ ನಡೆಸಿಕೊಳ್ಳುತ್ತಿದೆ" ಎಂದು ಹೇಳಿದರು.
2014ರಲ್ಲಿ ಇದೇ ಮೋದಿ ಅವರು ಚುನಾವಣಾ ಪ್ರಣಾಳಿಕೆಯಲ್ಲಿ ಎಂಎಸ್ ಸ್ವಾಮಿನಾಥನ್ ವರದಿ ಜಾರಿ ಮಾಡುತ್ತೇವೆ ಎಂದು ಹೇಳಿಕೊಂಡಿದ್ದರು. ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡೋಕೆ ಆಗಲ್ಲ ಎಂದು ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಹಾಕಿದ್ದಾರೆ. ಇದು ಪ್ರಭುತ್ವ ಮಾಡುವ ಕೆಲಸವಾ? ಹೀಗಿದ್ದಾಗ ಪ್ರಭುತ್ವದ ಮೇಲೆ ರೈತರಿಗೆ ಯಾವ ಭರವಸೆ ನಂಬಿಕೆ ಉಳಿಯಲು ಸಾಧ್ಯ? ಎಂದು ಗಂಗಾಧರ್ ಅವರು ಪ್ರಶ್ನೆ ಮಾಡಿದರು.
ಕಳೆದ 10 ವರ್ಷಗಳಿಂದ ರೈತರಿಗೆ ಸೊಸೈಟಿ ಹಾಗೂ ಬ್ಯಾಂಕುಗಳಲ್ಲಿ ಸಾಲ ಸಿಗುತ್ತಿಲ್ಲ ಹಾಗಾಗಿ ಖಾಸಗಿ ಬಂಡವಾಳದಾರರ ಬಳಿ ಸಾಲು ತಗೆದುಕೊಳ್ಳುತ್ತಿದ್ದಾರೆ. ಆ ಖಾಸಗಿ ಬಂಡವಾಳದಾರರ ಸಾಲ ತೀರಿಸಲಾಗದೇ ಮರ್ಯಾದೆಗೆ ಹೆದರಿ ಇಂದಿನ ಯುವ ರೈತರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ ಎಂದು ಗಂಗಾಧರ್ ಅವರು ಹೇಳಿದರು.
ರೈತರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಡಾ. ಪ್ರಕಾಶ್ ಕಮ್ಮರಡಿ ಅವರು, ರೈತರ ಆತ್ಮಹತ್ಯೆ ಪ್ರಕರಣಗಳು ಹೊಸದಲ್ಲ, ದೇಶ ಜಾಗತಿಕರಣಕ್ಕೆ ತೆರೆದುಕೊಂಡ ಬಳಿಕ ಅನಿಶ್ಚತತೆ ಹೆಚ್ಚಾಯಿತು. ಆ ಬಳಿಕವೂ ದೇಶದಲ್ಲಿ ರೈತರ ಅನಕೂಲಕ್ಕಾಗಿ ಬೆಂಬಲ ಬೆಲೆ, ಎಪಿಎಂಸಿ ಎಲ್ಲವೂ ಇತ್ತು. ಆದರೆ ಇತ್ತಿಚೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಖಾಸಗೀಕರಣದ ಹೆಸರಿನಲ್ಲಿ ಬೆಂಬಲ ಬೆಲೆಯನ್ನು ತೊಡೆದುಹಾಕಲು ಮುಂದಾಯಿತು. ಇದರಿಂದ ರೈತರಲ್ಲಿ ಆತಂಕ ಹೆಚ್ಚಾಯಿತು, ಬದುಕುವ ಭರವಸೆಯೇ ಹೊರಟುಹೋಯಿತು. ಹಾಗಾಗಿ ಈ ರೈತರ ಆತ್ಮಹತ್ಯೆಗಳಿಗೆ ಇದು ಕೂಡ ಕಾರಣವಾಗುತ್ತದೆ.
ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ ಪ್ರಕಾರ 50% ರೈತರು ಋಣದಲ್ಲಿದ್ದಾರೆ. ಕರ್ನಾಟಕದಲ್ಲಿ ಆ ಪ್ರಮಾಣ ಹೆಚ್ಚಾಗಿದೆ. ಋಣ ಎಂದರೆ ತೀರಿಸಲಾಗದ ಸಾಲ, ಈ ನಡುವೆ ರಾಜ್ಯದಲ್ಲಿ ಬರಗಾಲ ಇದೆ, ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ ಹಾಗಾಗಿ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು.
ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ರಾಜಕಾರಣಿಗಳು ಹೇಳುತ್ತಾರೆ. ಆ ಮಾತುಗಳು ರೈತರಲ್ಲಿ ಯಾವುದೇ ಭರವಸೆ ಮೂಡಿಸುವುದಿಲ್ಲ, ಬದಲಾಗಿ ಎಂಎಸ್ ಸ್ವಾಮಿನಾಥನ್ ವರದಿ ಜಾರಿ ಮಾಡುತ್ತೇವೆ ಎಂದು ಹೇಳಿದರೆ ಮಾತ್ರ ರೈತರಿಗೆ ಭರವಸೆ ಬರುತ್ತದೆ ಆ ನಿಟ್ಟಿನಲ್ಲಿ ಸರ್ಕಾರಗಳು ಕೆಲಸ ಮಾಡಬೇಕಿದೆ ಎಂದು ಹೇಳಿದರು.