ಕುಡಿತದ ಚಟಕ್ಕೆ ಬೇಸತ್ತು ಮಗನನ್ನೇ ಸುಟ್ಟು ಕೊಂದ ಕುಟುಂಬ
ಈ ಘಟನೆ ಸೆಪ್ಟೆಂಬರ್ 5 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅನಿಲ್ ಕುಡಿತದ ದಾಸನಾಗಿದ್ದ. ಆನ್‌ಲೈನ್ ಬೆಟ್ಟಿಂಗ್, ಕುಡಿತ, ಮೋಜು ಮಸ್ತಿಗಾಗಿ 20 ಲಕ್ಷ ರೂ ಸಾಲ ಮಾಡಿಕೊಂಡಿದ್ದ.;
ನಿರಂತರ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಮಗನ ತ್ರಾಸ ಸಹಿಸಲಾಗದೆ, ಸ್ವಂತ ಕುಟುಂಬದವರೇ ಆತನನ್ನು ಬೆಂಕಿ ಹಚ್ಚಿ ಕೊಂದ ಘೋರ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬಿದರಿ ಗ್ರಾಮದಲ್ಲಿ ನಡೆದಿದೆ. 32 ವರ್ಷದ ಅನಿಲ್ ಪರಪ್ಪ ಕಾನಟ್ಟಿ ಮೃತ ದುರ್ದೈವಿಯಾಗಿದ್ದು, ಈ ಸಂಬಂಧ ಆತನ ತಂದೆ ಪರಪ್ಪ ಕಾನಟ್ಟಿ, ತಾಯಿ ಶಾಂತಾ ಕಾನಟ್ಟಿ ಹಾಗೂ ಸಹೋದರ ಬಸವರಾಜ ಕಾನಟ್ಟಿ ಅವರನ್ನು ಸಾವಳಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 5 ರಂದು ನಡೆದ ಈ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಮೃತ ಅನಿಲ್ ಕುಡಿತ ಮತ್ತು ಆನ್‌ಲೈನ್ ಬೆಟ್ಟಿಂಗ್ ದಾಸನಾಗಿದ್ದ. ಈ ಚಟಗಳಿಗಾಗಿ ಸುಮಾರು 20 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಕುಟುಂಬಸ್ಥರು ಆ ಸಾಲವನ್ನು ತೀರಿಸಿದ್ದರೂ, ಅನಿಲ್ ಮತ್ತೆ ಐದು ಲಕ್ಷ ರೂಪಾಯಿ ಹಣಕ್ಕಾಗಿ ಪೀಡಿಸುತ್ತಿದ್ದ. ಅಲ್ಲದೆ, ತನಗೆ ಬರಬೇಕಾದ ಆಸ್ತಿಯ ಪಾಲು ನೀಡುವಂತೆ ನಿತ್ಯವೂ ಮನೆಯಲ್ಲಿ ಜಗಳವಾಡುತ್ತಿದ್ದ.
ಘಟನೆ ನಡೆದ ದಿನವೂ ಅನಿಲ್ ಕುಡಿದು ಬಂದು ಮನೆಯಲ್ಲಿ ಗಲಾಟೆ ಆರಂಭಿಸಿದ್ದ. ರಜೆ ಮೇಲೆ ಊರಿಗೆ ಬಂದಿದ್ದ ಸೈನಿಕನಾದ ತನ್ನ ಸಹೋದರ ಬಸವರಾಜನೊಂದಿಗೂ ಜಗಳ ತೆಗೆದಿದ್ದಾನೆ. "ಆಸ್ತಿ ಕೊಡದಿದ್ದರೆ ನಿಮ್ಮನ್ನೆಲ್ಲಾ ಕೊಲ್ಲುತ್ತೇನೆ" ಎಂದು ಬೆದರಿಸಿ, ತಂದೆ-ತಾಯಿ ಹಾಗೂ ಸಹೋದರನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಪರಿಸ್ಥಿತಿ ಕೈಮೀರಿದ್ದರಿಂದ, ಆತನ ಕೈ-ಕಾಲುಗಳನ್ನು ಹಗ್ಗದಿಂದ ಕಟ್ಟಿ, ಡೀಸೆಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.