ಸಾಲದ ಶೂಲಕ್ಕೆ ಕುಟುಂಬ ಬಲಿ: ಪತಿ, ಇಬ್ಬರು ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆಗೆ ಯತ್ನ
ಕೆಲ ಸಮಯದ ಹಿಂದೆ ಶಿವು ಅವರು ಅಪಘಾತವೊಂದರಲ್ಲಿ ಗಾಯಗೊಂಡಿದ್ದರು. ಅವರ ಚಿಕಿತ್ಸೆಗಾಗಿ ದಂಪತಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ, ಸಾಲವನ್ನು ತೀರಿಸಲು ಸಾಧ್ಯವಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು.;
ಸಾಂದರ್ಭಿಕ ಚಿತ್ರ
ಸಾಲದ ಸುಳಿಗೆ ಸಿಲುಕಿ ಇಡೀ ಕುಟುಂಬವೇ ನಾಶವಾದ ಘೋರ ದುರಂತವೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪತಿ ಹಾಗೂ ಇಬ್ಬರು ಮಕ್ಕಳನ್ನು ಕೊಂದ ಮಹಿಳೆಯೊಬ್ಬರು ಬಳಿಕ ತಾವೂ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗೊಣಕನಹಳ್ಳಿ ಗ್ರಾಮದ ನಿವಾಸಿ ಶಿವು (32), ಅವರ ಮಕ್ಕಳಾದ ಚಂದ್ರಕಲಾ (11) ಮತ್ತು ಉದಯ್ ಸೂರ್ಯ (7) ಮೃತಪಟ್ಟ ದುರ್ದೈವಿಗಳು. ಶಿವು ಅವರ ಪತ್ನಿ ಮಂಜುಳಾ ಈ ಕೃತ್ಯ ಎಸಗಿ ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲ ಸಮಯದ ಹಿಂದೆ ಶಿವು ಅವರು ಅಪಘಾತವೊಂದರಲ್ಲಿ ಗಾಯಗೊಂಡಿದ್ದರು. ಅವರ ಚಿಕಿತ್ಸೆಗಾಗಿ ದಂಪತಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ, ಸಾಲವನ್ನು ತೀರಿಸಲು ಸಾಧ್ಯವಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಈ ಹತಾಶೆಯಲ್ಲಿ, ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ತಾವು ಸತ್ತರೆ ಮಕ್ಕಳು ಅನಾಥರಾಗುತ್ತಾರೆ ಎಂಬ ಕಾರಣಕ್ಕೆ ಅವರನ್ನು ಕೂಡ ಕೊಲ್ಲಲು ತೀರ್ಮಾನಿಸಿದ್ದಾರೆ.
ಯೋಜನೆಯಂತೆ, ಮಂಜುಳಾ ಅವರು ತಮ್ಮ ಪತಿ ಶಿವು ಹಾಗೂ ಮಕ್ಕಳಾದ ಚಂದ್ರಕಲಾ ಮತ್ತು ಉದಯ್ ಸೂರ್ಯ ಅವರನ್ನು ವೇಲ್‌ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾರೆ. ನಂತರ, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ, ಹಗ್ಗ ತುಂಡಾದ ಕಾರಣ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಸ್ವಸ್ಥಗೊಂಡ ಅವರನ್ನು ತಕ್ಷಣವೇ ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಹೊಸಕೋಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.