Ground Report | ತೀವ್ರ ಬಿಸಿಲಿಗೆ ರಾಜ್ಯ ತತ್ತರ; ಜನ ಜೀವನಕ್ಕೆ ಬಿಸಿಲಾಘಾತ
ಶ್ರಮಿಕ ವರ್ಗದವರು ಬದುಕು ಸಾಗಿಸಲು ನೆತ್ತಿ ಸುಡುವ ಬಿಸಿಲಲ್ಲಿ ಪರಿತಪಿಸಬೇಕಾಗಿದೆ. ಬಿಸಿಲಿನಿಂದ ರಕ್ಷಣೆ ಪಡೆಯಲು ಕೊಡೆ ಹಿಡಿದರೂ ಹೂವು, ಹಣ್ಣು, ಸೊಪ್ಪು, ತರಕಾರಿಗಳನ್ನು ಬಾಡದಂತೆ ಕಾಪಾಡಿಕೊಳ್ಳಲು ಸಾಹಸ ಪಡಬೇಕಾಗಿದೆ.;
ಬಿಸಿಲಿನಲ್ಲಿ ಕೊಡೆ ಹಿಡಿದುಕೊಂಡು ಹಣ್ಣು ಮಾರಾಟ ಮಾಡುವ ದೃಶ್ಯ ಕಂಡುಬಂತು.
ರಾಜ್ಯದಲ್ಲಿ ಬಿಸಿಲಿನ ಝಳ ನಿಗಿನಿಗಿ ಕೆಂಡದಂತಾಗಿದೆ. ಜನಸಾಮಾನ್ಯರು ಬಿಸಿಲ ಆಘಾತದಿಂದ ಬಸವಳಿದಿದ್ದಾರೆ. ಬೆಂಗಳೂರಿನಲ್ಲಿ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇದ್ದರೂ ವಾಹನಗಳ ಹೊಗೆ, ಕಾಂಕ್ರಿಟ್ ನೆಲದ ಕಾವು ಜನರನ್ನು ಹೈರಾಣಾಗಿಸಿದೆ. ಏಪ್ರಿಲ್, ಮೇ ತಿಂಗಳಲ್ಲಿ ಬಿಸಿಲಿನ ಪ್ರಮಾಣ ತೀವ್ರತರದ ಪರಿಣಾಮ ಬೀರಲಿದ್ದು, ಉಷ್ಣಾಘಾತದ ಕುರಿತು ಮುನ್ನಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ʼದ ಫೆಡರಲ್ ಕರ್ನಾಟಕʼ ಬೆಂಗಳೂರಿನ ವಿವಿಧೆಡೆ ಭೇಟಿ ನೀಡಿ ಕೂಲಿಕಾರ್ಮಿಕರು, ವ್ಯಾಪಾರಿಗಳು, ಡೆಲಿವರಿ ಬಾಯ್ಸ್ ಸೇರಿದಂತೆ ಶ್ರಮಿಕ ವರ್ಗ ಹಲವರನ್ನು ಭೇಟಿ ಮಾಡಿ, ಬಿಸಿಲಿನಿಂದ ಎದುರಿಸುತ್ತಿರುವ ಪರಿಣಾಮಗಳ ಕುರಿತು ಕಟ್ಟಿಕೊಟ್ಟ ಪ್ರತ್ಯಕ್ಷ ವರದಿ ಇಲ್ಲಿದೆ.
ಬಿಸಿಲಿಗೆ ಬಾಡಿದ ವ್ಯಾಪಾರ
ಬೆಂಗಳೂರಿ ಕೃಷಿ ಮಾರುಕಟ್ಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವ್ಯಾಪಾರ, ವಹಿವಾಟು ನಡೆಸುತ್ತಿರುವ ಶ್ರಮಿಕ ವರ್ಗದವರಿಗೆ ಕೆಂಡದಂತಹ ಬಿಸಿಲು ಅವರ ಬದುಕನ್ನೇ ಸುಡುತ್ತಿದೆ. ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಸೊಪ್ಪು, ತರಕಾರಿ ಮಾರಾಟಗಾರರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸೊಪ್ಪು ತರಕಾರಿಗಳು ಬಾಡದಂತೆ ಆಗಾಗ್ಗೆ ನೀರು ಚುಮುಕಿಸಿದರೂ ಅವುಗಳ ತಾಜಾತನ ಉಳಿಯುತ್ತಿಲ್ಲ. ಸಂಜೆಯ ವೇಳೆಗೆ ಬಾಡಿ ಹೋಗುವುದರಿಂದ ನಷ್ಟವಾದರೂ ಕೂಡ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಅನಿವಾರ್ಯತೆ ವ್ಯಾಪಾರಿಗಳ ಮುಂದಿದೆ.
"ಬಿಸಿಲಿನಲ್ಲಿ ತರಕಾರಿ, ಹೂವು, ಸೊಪ್ಪು ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಬಿಸಿಲಿಗೆ ತಾಜಾತನ ಕಾಪಾಡಿಕೊಳ್ಳಲು ಆಗುವುದಿಲ್ಲ. ತರಕಾರಿ, ಸೊಪ್ಪು ಖರೀದಿಗೆ ಬರುವ ಗ್ರಾಹಕರು ತಾಜಾತನ ಇಲ್ಲದಿದ್ದರೆ ಖರೀದಿ ಮಾಡುವುದೇ ಇಲ್ಲ. ಖರೀದಿಯಾಗದೇ ಉಳಿದ ಸೊಪ್ಪನ್ನು ಕಸಕ್ಕೆ ಇಲ್ಲವೇ ಹಸುಗಳಿಗೆ ಹಾಕಬೇಕಾದ ಪರಿಸ್ಥಿತಿ ಇದೆ" ಎಂದು ಸೊಪ್ಪು ಮಾರಾಟಗಾರ ಕುಳ್ಳ ರಫೀಕ್ ಅವರು ʻದ ಫೆಡರಲ್ ಕರ್ನಾಟಕʼದ ತಮ್ಮ ನೋವು ತೋಡಿಕೊಂಡರು.
ಹೂವು ವ್ಯಾಪಾರಿ ಗೌರಮ್ಮ ಮಾತನಾಡಿ, ಮನೆಯಲ್ಲಿ ಕುಳಿತರೆ ಆಗುವುದಿಲ್ಲ. ಸಾವಿರಾರು ರೂಪಾಯಿ ಖರ್ಚು ಮಾಡಿ ಹೂವು ತಂದು ವ್ಯಾಪಾರ ಮಾಡುತ್ತಿದ್ದೇನೆ. ಆದರೆ, ಹೂವುಗಳು ಬಿಸಿಲಿಗೆ ಬಾಡುತ್ತಿವೆ. ಹೂವನ್ನು ಒದ್ದೆ ಮಾಡಿದ ಗೋಣಿಚೀಲದಲ್ಲಿ ಇಡುತ್ತಿದ್ದೇವೆ. ಆದರೂ ಹೂವನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಆಗುತ್ತಿಲ್ಲ ಎಂದು ʻದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಕ್ಷೀಣಿಸುತ್ತಿದೆ ಆರೋಗ್ಯ
ತೀವ್ರ ಬಿಸಿಲಿನಿಂದಾಗಿ ಆರೋಗ್ಯ ಸಮಸ್ಯೆಗಳು ಕೂಡ ಹೆಚ್ಚುತ್ತಿವೆ. ಕಳೆದ ಕೆಲ ದಿನಗಳಿಂದ ಉಷ್ಣಾಘಾತ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿರುವ ಜನರು ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ. ಎಳೆಯ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರಿಗೆ ಬಿಸಿಲಿನ ಝಳ ತೀವ್ರವಾಗಿ ಬಾಧಿಸಲಿದೆ. ನಿರ್ಜಲೀಕರಣ, ತಲೆ ಸುತ್ತುವಿಕೆ, ಆಯಾಸದಂತಹ ಕಾಯಿಲೆಗಳು ಸಾಮಾನ್ಯವಾಗಿವೆ.
"ಒಂದರಿಂದ ಐದು ವರ್ಷದೊಳಗಿನ ಮಕ್ಕಳಲ್ಲಿ ನಿರ್ಜಲೀಕರಣ ಸಮಸ್ಯೆ ಹೆಚ್ಚುತ್ತಿದೆ. ಗರ್ಭಿಣಿಯರು ಹಾಗೂ ವೃದ್ಧರನ್ನೂ ಇನ್ನಿಲ್ಲದಂತೆ ಬಾಧಿಸುತ್ತಿದೆ. ಸಾಧ್ಯವಾದಷ್ಟು ದ್ರವ ಆಹಾರ ಸೇವಿಸಿ ದೇಹವನ್ನು ತಂಪಾಗಿಟ್ಟುಕೊಳ್ಳಬೇಕು. ಗರ್ಣಿಣಿಯರಿಗೆ ಬಿಸಿಲಾಘಾತ ಹೆಚ್ಚು ಅಪಾಯ ತಂದೊಡ್ಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಅವರು ಕೂಡ ಎಚ್ಚರ ವಹಿಸಬೇಕು" ಎಂದು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಖಾಸಗಿ ಆಸ್ಪತ್ರೆ ಡಾ.ಶರತ್ ಅವರು ದ ಫೆಡರಲ್ ಕರ್ನಾಟಕ್ಕೆ ತಿಳಿಸಿದರು.
ಬಿಸಿಲಲ್ಲೂ ಡೆಲಿವರಿ ಬಾಯ್ಸ್ ಗಸ್ತು
ಬಿಸಿಲಿನಿಂದ ಜನ ಹೊರಬರಲು ಪ್ರಯಾಣ ಪಡುವಂತಾಗಿದೆ. ಬಿಸಲಿನಿಂದ ರಕ್ಷಿಸಿಕೊಳ್ಳಲು ಉಳ್ಳವರು ಫ್ಯಾನ್, ಕೂಲರ್, ಎಸಿಗಳ ಮೊರೆ ಹೋಗಿದ್ದು, ಮನೆಗಳಲ್ಲೇ ಉಳಿಯುವಂತಾಗಿದೆ. ಇಂತಹವರು ಆಹಾರ, ಔಷಧ ಹಾಗೂ ಇನ್ನಿತರೆ ವಸ್ತುಗಳನ್ನು ಆನ್‌ಲೈನ್‌ನಲ್ಲೇ ತರಿಸಿಕೊಳ್ಳುತ್ತಿದ್ದಾರೆ. ಆದರೆ, ವಸ್ತುಗಳನ್ನು ಮನೆ ಬಾಗಿಲಿಗೆ ತಂದುಕೊಡುವ ಡೆಲಿವರಿ ಬಾಯ್ಸ್ ಮಾತ್ರ ಬಿಸಿಲಿನಲ್ಲೇ ನಗರದ ವಿವಿಧೆಡೆ ಗಸ್ತು ತಿರುಗುವಂತಾಗಿದೆ.
ಹೊಟ್ಟೆಪಾಡಿಗಾಗಿ ದುಡಿಯುವ ಡೆಲಿವರಿ ಬಾಯ್ಗಳು ಬಿಸಿಲಿಗೆ ಕಂಗೆಟ್ಟಿದ್ದು, ದಿನಪೂರ್ತಿ ಬಿಸಿಲಿನಲ್ಲಿ ಬೈಕ್ ಓಡಿಸುತ್ತಾ ಹೈರಾಣಾಗುತ್ತಿದ್ದಾರೆ. ಬಿಸಿಲಿನಲ್ಲಿ ಹೆಚ್ಚು ಸುತ್ತುವುದರಿಂದ ನಿರ್ಜಲೀಕರಣ ಸಮಸ್ಯೆಗೂ ತುತ್ತಾಗುತ್ತಿದ್ದಾರೆ.
ತೀವ್ರ ತಾಪಮಾನ, ದೇಹದ ಶಕ್ತಿ ಕುಂದಿದರೂ ಅವರು ಆರ್ಡರ್ ಪೂರ್ಣಗೊಳಿಸುತ್ತಲೇ ಇರುತ್ತಾರೆ. ಏಕೆಂದರೆ ಒಂದೇ ಒಂದು ಆರ್ಡರ್ ತಪ್ಪಿಸಿದರೂ ಅವರಿಗೆ ಲಭಿಸುವ ಇನ್ಸೆಂಟಿವ್ ಮತ್ತು ಸಂಬಳ ಕಡಿಮೆಯಾಗಲಿದೆ ಎಂಬ ಆತಂಕ ಅವರನ್ನು ಬಿಸಿಲಿನಲ್ಲೂ ದಣಿಯುವಂತೆ ಮಾಡಿದೆ.
ನೌಕರರಿಗೂ ತಟ್ಟಿದ ಬಿಸಿಲು ತಾಪ
ಕೆಲಸಕ್ಕೆಂದು ಕಚೇರಿಗಳಿಗೆ ತೆರಳುವ ಉದ್ಯೋಗಿಗಳೂ ಕೂಡ ಬಿಸಿಲಿನ ಪರಿಣಾಮ ಎದುರಿಸುತ್ತಿದ್ದಾರೆ. ಬೆಳಿಗ್ಗೆ 9 ಗಂಟೆ ಹೊತ್ತಿಗೆ ಬಿಸಿಲಿನ ಝಳ ಹೆಚ್ಚಿರುತ್ತದೆ. ಸಂಚಾರ ದಟ್ಟಣೆಯೂ ಸಮಸ್ಯೆ ತಂದೊಡ್ಡಿದೆ. ಕಾರು, ಬೈಕ್ ಅಥವಾ ಬಸ್ಗಳಲ್ಲಿ ಪ್ರಯಾಣಿಸಿದರೂ ಅಧಿಕ ತಾಪಮಾನದಿಂದಾಗಿ ಆಯಾಸ ಉಂಟಾಗುತ್ತಿದೆ. ಇದು ಕಚೇರಿ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಬೆಂಗಳೂರಿನ ಐಟಿ ಉದ್ಯೋಗಿ ಶ್ರೀಹರಿ ʻದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಒಟ್ಟಿನಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲು ಸುಡಲಾರಂಭಿಸಿದೆ. ಬಿಸಿಲಾಘಾತ ಹೆಚ್ಚುವ ಕುರಿತು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆಯು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೆ ಬೆಂಗಳೂರು ಸೇರಿ ಭಾರತದ ವಿವಿಧ ನಗರಗಳಲ್ಲಿ ಉಷ್ಣಾಘಾತ ಸಂಬಂಧಿ ಸಾವುಗಳ ಸಂಖ್ಯೆ ಈ ವರ್ಷ ಹೆಚ್ಚಲಿದೆ ಎಂದು ಬ್ರಿಟನ್ ವಿಶ್ವವಿದ್ಯಾಲಯಗಳ ಸಂಶೋಧಕರ ತಂಡ ಎಚ್ಚರಿಸಿರುವುದು ಆತಂಕ ಮೂಡಿಸಿದೆ.