ಕಾವೇರಿ 5 ನೇ ಹಂತ | ಬೆಂಗಳೂರಿನ ಮನೆಗಳಿಗೆ ನಾಳೆಯಿಂದಲೇ ಕಾವೇರಿ ನೀರು -ಸಿಎಂ ಸಿದ್ದರಾಮಯ್ಯ
ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ಜಲ ಮಂಡಳಿಯಿಂದ ಜಾರಿಗೊ ಳಿಸಲಾದ ಕಾವೇರಿ 5ನೇ ಹಂತದ ಯೋಜನೆಗೆ ಬುಧವಾರ ಲೋಕಾರ್ಪಣೆಗೊ ಳ್ಳುತ್ತಿದೆ. ಆಮೂಲಕ ಮೊದಲ ಹಂತದಲ್ಲಿ 110 ಹಳ್ಳಿಗಳ 50 ಸಾವಿರ ನೀರಿನ ಸಂಪರ್ಕಕ್ಕೆ ಬುಧವಾರದಿಂದಲೇ ಕಾವೇರಿ ನೀರು ಪೂರೈಕೆ ಆರಂಭವಾಗಲಿದೆ.;
ಬೆಂಗಳೂರಿನ ಪ್ರತಿ ಮನೆಗೂ ಕಾವೇರಿ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ನಾಳೆ (ಅ.16) ಉದ್ಘಾಟಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ಜಲ ಮಂಡಳಿಯಿಂದ ಜಾರಿಗೊಳಿಸಿರುವ ಕಾವೇರಿ 5ನೇ ಹಂತದ ಯೋಜನೆಯನ್ನು ಬುಧವಾರ ಲೋಕಾರ್ಪಣೆ ಮಾಡಲಾಗುವುದು. ಆ ಮೂಲಕ ಮೊದಲ ಹಂತದಲ್ಲಿ 110 ಹಳ್ಳಿಗಳ 50 ಸಾವಿರ ನೀರಿನ ಸಂಪರ್ಕಗಳಿಗೆ ಕಾವೇರಿ ನೀರು ಪೂರೈಕೆ ಆರಂಭವಾಗಲಿದೆ ಎಂದು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿ ನೀರು ಸರಬರಾಜಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಲಿದ್ದಾರೆ.
2024-25ನೇ ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ 5ನೇ ಹಂತದ ಯೋಜನೆಯಡಿ ಡಿಸೆಂಬರ್ 2024ರೊಳಗೆ ಭೂಗತ ಕಾಲುವೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದರು. ಯೋಜನೆಯ ಭಾಗವಾಗಿ 228 ಕಿಮೀ ಭೂಗತ ಪೈಪ್‌ಲೈನ್ ಹಾಕಲಾಗುವುದು. 100 ಎಂಎಲ್‌ಡಿ ಕೊಳಚೆ ನೀರನ್ನು ಸಂಸ್ಕರಿಸುವ ಸಾಮರ್ಥ್ಯದ 13 ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ನಿರ್ಮಿಸಲಾಗುವುದು ಎಂದು ಅವರು ಹೇಳಿದ್ದರು.
'ಮನೆ ಮನೆಗೂ ಕಾವೇರಿ ನೀರು-ಇದು ಸಮೃದ್ಧ
ಆಮೆಗತಿಯಲ್ಲಿ ಸಾಗುತ್ತಿದ್ದ ಕಾವೇರಿ 5ನೇ ಹಂತದ ಕಾಮಗಾರಿಗೆ ಜಲಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ವೇಗ ನೀಡಲಾಯಿತು. ಎತ್ತಿನಹೊಳೆ ಯೋಜನೆಯ ಮೊದಲನೇ ಹಂತ ಲೋಕಾರ್ಪಣೆ ನಂತರ ಇದೀಗ ಬೆಂಗಳೂರಿನ ನೀರಿನ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
'ಮನೆ ಮನೆಗೂ ಕಾವೇರಿ ನೀರು-ಇದು ಸಮೃದ್ದ ಬೆಂಗಳೂರು' ಘೋಷವಾಕ್ಯದ ಅಡಿಯಲ್ಲಿ ಜಲ ಮಂಡಳಿ ಕಾರ್ಯನಿರ್ವಹಿಸಿದೆ. ಯೋಜನೆ ಅಡಿಯಲ್ಲಿ ಅತ್ಯಾಧುನಿಕ ಹಾಗೂ ಬೃಹತ್ ನೀರಿನ ಸಂಸ್ಕರಣಾ ಘಟಕ ನಿರ್ಮಿಸಲಾಗಿದೆ. ನೆಟ್ಟಕಲ್ ಸಮತೋಲನಾ ಆಣೆಕಟ್ಟಿನಿಂದ ನೀರನ್ನು ಎತ್ತಿ ಟಿ.ಕೆ.ಹಳ್ಳಿ, ಹಾರೋಹಳ್ಳಿ, ತಾತಗುಣಿ ಪಂಪಿಂಗ್ ಸ್ಟೇಷನ್‌ಗಳ ಮೂಲಕ 4 ಲಕ್ಷ ನೀರಿನ ಸಂಪರ್ಕಗಳಿಗೆ ಕಾವೇರಿ ನೀರು ಪೂರೈಸಲಾಗುವುದು. ಈ ಯೋಜನೆಯಿಂದ 50 ಲಕ್ಷ ಜನರಿಗೆ ಅನುಕೂಲವಾಗಲಿದೆ. ಅಲ್ಲದೆ, ಈ ಯೋಜನೆಯಡಿಯಲ್ಲಿ ಹೆಚ್ಚುವರಿಯಾಗಿ 775 ಎಂ ಎಲ್‌ಡಿ ನೀರನ್ನು ಸರಬರಾಜು ಮಾಡಲಾಗುತ್ತದೆ ಎಂದು ಸಿಎಂ ತಿಳಿಸಿದರು.
4,336 ಕೋಟಿ ರೂ ವೆಚ್ಚ
ಈ ಯೋಜನೆ ಕಾಮಗಾರಿಯಲ್ಲಿ ಜಪಾನ್ ಯಂತ್ರೋಪಕರಣ ಹಾಗೂ ಫ್ರೆಂಚ್ ತಂತ್ರಜ್ಞಾನಗಳನ್ನು ಬಳಸಲಾಗಿದೆ. ಆ ಮೂಲಕ ಪ್ರತಿ ಹಂತದಲ್ಲೂ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. 2.4 ಕೋಟಿ ಮಾನವ ಗಂಟೆಗಳ ಶ್ರಮ ಯೋಜನೆ ಹಿಂದಿದೆ. 1.45 ಲಕ್ಷ ಮೆಟ್ರಿಕ್ ಟನ್ ಸ್ಟೀಲ್ ಪ್ಲೇಟ್ ಗಳನ್ನು ಬಳಸಲಾಗಿದೆ. ಯೋಜನೆಗಾಗಿ 4,336 ಕೋಟಿ ರೂ. ವ್ಯಯಿಸಲಾಗಿದ್ದು, ಜೈಕಾದಿಂದ ಸಾಲ ಸೌಲಭ್ಯ ಪಡೆಯಲಾಗಿದೆ. ಮುಂದಿನ 10 ವರ್ಷಗಳಲ್ಲಿ ಜೈಕಾದಿಂದ ಪಡೆಯಲಾದ ಸಾಲವನ್ನು ಜಲಮಂಡಳಿ ತೀರಿಸಲಿದೆ.
ಅಕ್ರಮ ನೀರಿನ ಸಂಪರ್ಕಕ್ಕೆ ತಡೆ
ಕಾವೇರಿ 5ನೇ ಹಂತ ಸೇರಿದಂತೆ ಉಳಿದ ಹಂತಗಳಲ್ಲಿನ ಅಕ್ರಮ ನೀರಿನ ಸಂಪರ್ಕ ತಡೆಗೆ ಕಾವೇರಿ ನೀರು ಸಂಪರ್ಕದ ನೋಂದಣಿಗೆ ಜಲಮಂಡಳಿ ಪ್ರತಿ ಮನೆಗೂ ತೆರಳಲು ಉದ್ದೇಶಿಸಿದೆ. ಈ ವೇಳೆ ಸಾರ್ವಜನಿಕರು ಅಗತ್ಯ ಮಾಹಿತಿ ನೀಡಿ ನೀರಿನ ಸಂಪರ್ಕ ಪಡೆಯಬೇಕು. ಜತೆಗೆ ನೀರಿನ ಸಂಪರ್ಕಕ್ಕಾಗಿ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ಈ ಪ್ರಕ್ರಿಯೆಯಿಂದ ಅಕ್ರಮ ನೀರಿನ ಸಂಪರ್ಕಕ್ಕೆ ತಡೆಯೊಡ್ಡುವುದು ಜಲಮಂಡಳಿ ಉದ್ದೇಶವಾಗಿದೆ. ಬೆಂಗಳೂರಿನ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.
ನೀರು ಪಡೆಯುವ ಹಳ್ಳಿಗಳ ವಿವರ
ಯಶವಂತಪುರ ವಿಧಾನಸಭಾ ಕ್ಷೇತ್ರದ 13 ಹಳ್ಳಿಗಳಲ್ಲಿ 48 ಸಾವಿರ ಸಂಪರ್ಕ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ 6 ಹಳ್ಳಿಗಳಲ್ಲಿ 37,500, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ 26 ಹಳ್ಳಿಗಳಲ್ಲಿ 73,500, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ 6 ಹಳ್ಳಿಗಳಲ್ಲಿ 96,750, ಮಹದೇವಪುರ ಕ್ಷೇತ್ರದ 33 ಹಳ್ಳಿಗಳಲ್ಲಿ 93,100 ನೀರಿನ ಸಂಪರ್ಕಗಳಿಗೆ ನೀರು ಪೂರೈಸಲಾಗುತ್ತದೆ. ರಾಜರಾಜೇಶ್ವರಿನಗರ, ಬೊಮ್ಮನಹಳ್ಳಿ, ಕೆಆರ್‌ಪುರ ವಿಧಾನಸಭಾ ಕ್ಷೇತ್ರಗಳ ಹಳ್ಳಿಗಳಿಗೂ ನೀರಿನ ಸಂಪರ್ಕ ಸಿಗಲಿದ್ದು, ಪ್ರತಿ ಮನೆಗೂ ಕಾವೇರಿ ನೀರು ಸರಬರಾಜು ಮಾಡುವ ಉದ್ದೇಶ ಹೊಂದಲಾಗಿದೆ.