ನಂದಿನಿ ತುಪ್ಪಕ್ಕೆ ಜಾಗತಿಕ ಗರಿ: ಅಮೆರಿಕ, ಆಸ್ಟ್ರೇಲಿಯಾ, ಸೌದಿ ಅರೇಬಿಯಾಕ್ಕೆ ರಫ್ತು ಆರಂಭ
ಈ ಬಗ್ಗೆ ಕಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶ ವಿದೇಶಗಳಲ್ಲಿ ನಂದಿನಿ ಉತ್ಪನ್ನಗಳ ಗುಣಮಟ್ಟಕ್ಕೆ ಬೇಡಿಕೆ ಹೆಚ್ಚಾಗಿದೆ.
ನಂದಿನಿ ತುಪ್ಪ
ಕೆಎಂಎಫ್ ಉತ್ಪನ್ನ 'ನಂದಿನಿ ತುಪ್ಪ' ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಗೂ ಕಾಲಿಟ್ಟಿದೆ. ರಾಜ್ಯದ ಗಡಿ ದಾಟಿ ಜಾಗತಿಕ ಮಟ್ಟದಲ್ಲಿ ತನ್ನ ಛಾಪು ಮೂಡಿಸಲು ಸಜ್ಜಾಗಿರುವ ನಂದಿನಿ, ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಸೌದಿ ಅರೇಬಿಯಾದಂತಹ ಪ್ರಮುಖ ದೇಶಗಳಿಗೆ ತುಪ್ಪ ರಫ್ತು ಮಾಡಲು ಆರಂಭಿಸಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರು, ವಿದೇಶಗಳಲ್ಲಿಯೂ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚುತ್ತಿರುವುದಾಗಿ ತಿಳಿಸಿದರು.
ವಿದೇಶದಲ್ಲಿ ಹೆಚ್ಚಿದ ಬೇಡಿಕೆ
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶ ವಿದೇಶಗಳಲ್ಲಿ ನಂದಿನಿ ಉತ್ಪನ್ನಗಳ ಗುಣಮಟ್ಟಕ್ಕೆ ಬೇಡಿಕೆ ಹೆಚ್ಚಾಗಿದೆ. ಈ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಕೆಎಂಎಫ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ತನ್ನ ಉತ್ಪನ್ನಗಳನ್ನು ಜಾಗತಿಕ ಗ್ರಾಹಕರಿಗೆ ತಲುಪಿಸುತ್ತಿದೆ. ನಂದಿನಿ ತುಪ್ಪದ ರಫ್ತು ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅಮೆರಿಕಾದಲ್ಲಿ ನೆಲೆಸಿರುವ ಮೈಸೂರು ಮೂಲದ ಕುಮಾರ್ ಎಂಬುವವರನ್ನು ಉಲ್ಲೇಖಿಸಿದ ಅವರು, ಈ ಮೂರು ದೇಶಗಳಿಗೆ ನಂದಿನಿ ಉತ್ಪನ್ನಗಳನ್ನು ರಫ್ತು ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಇದು ರಾಜ್ಯದ ಉದ್ಯಮಿಗಳು ಜಾಗತಿಕ ಮಟ್ಟದಲ್ಲಿ ಬೆಳೆಯಲು ಪ್ರೋತ್ಸಾಹ ನೀಡುತ್ತದೆ. ರಫ್ತು ಪ್ರಕ್ರಿಯೆಯಲ್ಲಿ ತೊಡಗಿರುವ ಕೆಎಂಎಫ್ ಹಾಗೂ ಕುಮಾರ್ ಅಭಿನಂದನಾರ್ಹರು ಎಂದರು.
ರೈತರಿಗೆ ಉತ್ತೇಜನ
ನಂದಿನಿ ತುಪ್ಪದ ಜಾಗತಿಕ ವಿಸ್ತರಣೆಯು ರಾಜ್ಯದ ಲಕ್ಷಾಂತರ ಹಾಲು ಉತ್ಪಾದಕ ರೈತರಿಗೆ ನೇರ ಲಾಭ ತಂದುಕೊಡುವ ನಿರೀಕ್ಷೆಯಿದೆ. ರಫ್ತಿನಿಂದಾಗಿ ಉತ್ಪನ್ನಗಳಿಗೆ ಉತ್ತಮ ಬೆಲೆ ಮತ್ತು ಹೆಚ್ಚಿನ ಮಾರುಕಟ್ಟೆ ದೊರೆತು, ಕೆಎಂಎಫ್‌ನ ಆರ್ಥಿಕ ಸ್ಥಿತಿ ಬಲಪಡಿಸಲು ಸಹಾಯಕವಾಗಲಿದೆ.
ಈ ಮೂಲಕ ನಂದಿನಿ ಬ್ರ್ಯಾಂಡ್, ಕೇವಲ ಕರ್ನಾಟಕದ ಹೆಮ್ಮೆಯಾಗಿರದೇ, ಭಾರತದ ಪ್ರಮುಖ ಹಾಲು ಉತ್ಪನ್ನಗಳ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುತ್ತಿದೆ.