‘ಗದ್ದುಗೆ ಗುದ್ದಾಟ’: ಹೈಕಮಾಂಡ್‌ನಿಂದ ಡ್ಯಾಮೇಜ್ ಕಂಟ್ರೋಲ್; ಸಿಎಂ, ಡಿಕೆಶಿಗೆ ದೆಹಲಿ ಕರೆ?
ಮಲ್ಲಿಕಾರ್ಜುನ ಖರ್ಗೆ ಅವರ ವರದಿ ಕೈಸೇರುತ್ತಿದ್ದಂತೆಯೇ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಬ್ಬರನ್ನೂ ದೆಹಲಿಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಮುಸುಕಿನ ಗುದ್ದಾಟದಂತಿದ್ದ ನಾಯಕತ್ವ ಬದಲಾವಣೆಯ ಚರ್ಚೆ ಇದೀಗ ಬೀದಿರಂಪವಾಗುವ ಹಂತಕ್ಕೆ ತಲುಪಿದ್ದು, ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್ ಕೊನೆಗೂ ಎಚ್ಚೆತ್ತುಕೊಂಡಿದೆ. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೂ ಮುನ್ನವೇ ಈ ನಾಯಕತ್ವದ ತಿಕ್ಕಾಟಕ್ಕೆ ಬ್ರೇಕ್ ಹಾಕಿ, ಡ್ಯಾಮೇಜ್ ಕಂಟ್ರೋಲ್ ಮಾಡಲು ಕಾಂಗ್ರೆಸ್ ವರಿಷ್ಠರು ಮುಂದಾಗಿದ್ದಾರೆ.
ಕಳೆದ ಐದಾರು ದಿನಗಳಿಂದ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕೀಯದ ಪ್ರಸ್ತುತ ವಿದ್ಯಮಾನಗಳನ್ನು ಹತ್ತಿರದಿಂದ ಗಮನಿಸಿದ್ದಾರೆ. ಇದೀಗ ಅವರು ಮಂಗಳವಾರ ದೆಹಲಿಗೆ ಮರಳುತ್ತಿದ್ದು, ರಾಜ್ಯ ನಾಯಕತ್ವದ ಗೊಂದಲದ ಕುರಿತು ರಾಹುಲ್ ಗಾಂಧಿ ಅವರಿಗೆ ಸಮಗ್ರ ವರದಿಯನ್ನು ಸಲ್ಲಿಸಲಿದ್ದಾರೆ. ಉಭಯ ನಾಯಕರ ಬಣಗಳ ಚಟುವಟಿಕೆಗಳು, ಶಾಸಕರ ಅಭಿಪ್ರಾಯಗಳು ಮತ್ತು ಸದ್ಯದ ರಾಜಕೀಯ ಪರಿಸ್ಥಿತಿಯ ನೈಜ ಚಿತ್ರಣವನ್ನು ಈ ವರದಿ ಒಳಗೊಂಡಿರಲಿದೆ ಎಂದು ಮೂಲಗಳು ತಿಳಿಸಿವೆ.
ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಂಧಾನ ಸೂತ್ರ?
ಮಲ್ಲಿಕಾರ್ಜುನ ಖರ್ಗೆ ಅವರ ವರದಿ ಕೈಸೇರುತ್ತಿದ್ದಂತೆಯೇ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಬ್ಬರನ್ನೂ ದೆಹಲಿಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ. ಬೆಳಗಾವಿ ಅಧಿವೇಶನದಲ್ಲಿ ವಿರೋಧ ಪಕ್ಷಗಳು ನಾಯಕತ್ವ ಗೊಂದಲವನ್ನೇ ಮುಂದಿಟ್ಟುಕೊಂಡು ಸರ್ಕಾರವನ್ನು ಮುಜುಗರಕ್ಕೀಡುಮಾಡುವ ಸಾಧ್ಯತೆಯಿರುವುದರಿಂದ, ಅದಕ್ಕೂ ಮೊದಲೇ ಇಬ್ಬರೂ ನಾಯಕರನ್ನು ಒಟ್ಟಿಗೆ ಕೂರಿಸಿಕೊಂಡು ಸಮಸ್ಯೆ ಇತ್ಯರ್ಥಪಡಿಸಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ. ಈ ಭೇಟಿಯ ವೇಳೆ ನಾಯಕತ್ವ ಬದಲಾವಣೆ ವಿಚಾರದಲ್ಲಿ ಸ್ಪಷ್ಟತೆ ನೀಡುವ ಮೂಲಕ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಯಲಿದೆ.
ಖರ್ಗೆ ಅವರು ಸಲ್ಲಿಸಲಿರುವ ವರದಿಯಲ್ಲಿ ಮುಖ್ಯವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಬೇಡಿಕೆಗಳ ವಸ್ತುಸ್ಥಿತಿಯನ್ನು ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಸಿಎಂ ಪಟ್ಟಕ್ಕಾಗಿ ಪಟ್ಟು ಹಿಡಿದಿರುವ ಡಿ.ಕೆ. ಶಿವಕುಮಾರ್ ಅವರ ಪರವಾಗಿ ಎಷ್ಟು ಶಾಸಕರ ಬೆಂಬಲವಿದೆ ಎಂಬ ಲೆಕ್ಕಾಚಾರವೂ ವರದಿಯಲ್ಲಿದೆ. ಮತ್ತೊಂದೆಡೆ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ಯಕ್ಕೆ ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ಧರಿಲ್ಲದ ಮನಸ್ಥಿತಿಯಲ್ಲಿದ್ದಾರೆ. ಒಂದು ವೇಳೆ ರಾಹುಲ್ ಗಾಂಧಿ ಅವರೇ ಖುದ್ದು ಮನವೊಲಿಸಿದರೂ, ಸಿದ್ದರಾಮಯ್ಯ ಅವರು ತಕ್ಷಣವೇ ಸ್ಥಾನ ತ್ಯಜಿಸುವುದು ಕಷ್ಟಸಾಧ್ಯ ಎಂಬ ಅಂಶವನ್ನೂ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ.
ಬಹಿರಂಗ ಹೇಳಿಕೆಗಳಿಗೆ ಬೀಳಲಿದೆಯೇ ಕಡಿವಾಣ?
ಇತ್ತೀಚಿನ ದಿನಗಳಲ್ಲಿ ಎರಡೂ ಬಣದ ನಾಯಕರು ಮತ್ತು ಶಾಸಕರು ನೀಡುತ್ತಿರುವ ಬಹಿರಂಗ ಹೇಳಿಕೆಗಳು ಪಕ್ಷದ ಶಿಸ್ತನ್ನು ಮೀರುತ್ತಿದ್ದು, ಇದು ಸರ್ಕಾರದ ವರ್ಚಸ್ಸನ್ನು ಮಂಕಾಗಿಸುತ್ತಿದೆ ಎಂಬ ಆತಂಕ ಹೈಕಮಾಂಡ್‌ಗೆ ಎದುರಾಗಿದೆ. ಈ ಬೆಳವಣಿಗೆಗಳಿಗೆ ಈಗಲೇ ಕಡಿವಾಣ ಹಾಕದಿದ್ದರೆ ಮುಂಬರುವ ದಿನಗಳಲ್ಲಿ ಪಕ್ಷದ ಮೇಲೆ ಭಾರೀ ದುಷ್ಪರಿಣಾಮ ಬೀರಲಿದೆ ಎಂಬ ಎಚ್ಚರಿಕೆಯನ್ನು ಹೈಕಮಾಂಡ್ ರವಾನಿಸಿದೆ. ಹೀಗಾಗಿ, ದೆಹಲಿ ಸಭೆಯಲ್ಲಿ ಉಭಯ ನಾಯಕರಿಗೂ ಖಡಕ್ ಸೂಚನೆ ನೀಡುವ ಮೂಲಕ ಪಕ್ಷದ ಆಂತರಿಕ ಶಿಸ್ತು ಕಾಪಾಡಲು ರಾಹುಲ್ ಗಾಂಧಿ ಮುಂದಾಗಲಿದ್ದಾರೆ.