ED Raid on BBMP | ಬಿಬಿಎಂಪಿ ಮುಖ್ಯ ಕಚೇರಿ, ಅಧಿಕಾರಿಗಳ ಮನೆ ಮೇಲೆ ಇಡಿ ದಾಳಿ
2016-2019ರ ಅವಧಿಯಲ್ಲಿ ಸುಮಾರು 969 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎನ್ನುವ ಪ್ರಕರಣ ದಾಖಲಾಗಿದ್ದು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯ ಮುಖ್ಯ ಎಂಜಿನಿಯರ್, ಎಂಜಿನಿಯರ್‌ಗಳ ಮನೆ ಮತ್ತು ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.;
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ED) ಅಧಿಕಾರಿಗಳು ಮಂಗಳವಾರ ಬಿಬಿಎಂಪಿ ಮುಖ್ಯ ಕಚೇರಿ ಸೇರಿದಂತೆ ಅಧಿಕಾರಿಗಳ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
2016-2019ರ ಅವಧಿಯಲ್ಲಿ ಕೊಳವೆಬಾವಿ ಹಾಗೂ ವೈಟ್‌ಟಾಪಿಂಗ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸುಮಾರು 969 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎನ್ನುವ ಪ್ರಕರಣ ದಾಖಲಾಗಿದ್ದು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯ ಮುಖ್ಯ ಎಂಜಿನಿಯರ್, ಸಹಾಯಕ ಎಂಜಿನಿಯರ್‌ಗಳನ್ನು ಗುರಿಯಾಗಿಸಿ ಬಿಬಿಎಂಪಿ ಮುಖ್ಯ ಕಚೇರಿ ಹಾಗೂ ಅಧಿಕಾರಿಗಳ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಬೆಳಿಗ್ಗೆ 7ರ ವೇಳೆಗೆ ಆರಂಭವಾದ ಶೋಧಕಾರ್ಯ ಸಂಜೆಯವರೆಗೂ ಮುಂದುವರೆದಿದೆ.
ಈ ಹಿಂದೆ ಬಿಬಿಎಂಪಿ ಅಧಿಕಾರಿಗಳನ್ನು ಕರೆದೊಯ್ದು ಸ್ಥಳ ಮಹಜರು ಸಹ ಮಾಡಿಸಲಾಗಿದೆ. ಮಹಜರಿನ ವೇಳೆ ಸಲ್ಲಿಸಿರುವ ದಾಖಲೆಗೂ ಮೌಖಿಕ ಹೇಳಿಕೆಗೂ ಭಾರಿ ವ್ಯತ್ಯಾಸ ಕಂಡುಬಂದಿದ್ದು, ಮೇಲ್ನೋಟಕ್ಕೆ ಕೊಳವೆ ಬಾವಿ ಹಗರಣದಲ್ಲಿ ಅಕ್ರಮ ನಡೆದಿರುವುದು ತಿಳಿದುಬಂದಿರುವ ಹಿನ್ನೆಲೆ ಬಿಬಿಎಂಪಿ ಹಣಕಾಸು ವಿಭಾಗಕ್ಕೆ ಇಡಿ ನೋಟಿಸ್ ಕೂಡ ಜಾರಿ ಮಾಡಿತ್ತು.
2016ರಿಂದ 2019ರ ಅವಧಿಯಲ್ಲಿ ನಡೆದಿದ್ದ ಕೊಳವೆಬಾವಿ ಹಗರಣ ಸಂಬಂಧ 2021ರಲ್ಲಿ ಇಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪಕ್ರರಣ ಸಂಬಂಧ 2022ರಲ್ಲಿ ಬಿಬಿಎಂಪಿಗೆ ಇಡಿ ನೋಟಿಸ್ ನೀಡಿತ್ತು. ಈಗ ಮುಂದುವರಿದ ಭಾಗವಾಗಿ ಇಡಿ ದಾಳಿ ಮಾಡಿ ಪರಿಶೀಲನೆ ನಡೆಸಿದೆ.
ಬಿಬಿಎಂಪಿ ಮುಖ್ಯ ಎಂಜನಿಯರ್ ಬಿ ಎಸ್ ಪ್ರಹ್ಲಾದ್ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿ ದಾಖಲೆಗಳನ್ನು ಕಲೆ ಹಾಕಿದ್ದಾರೆ. ಕೊಳವೆಬಾವಿ ಹಗರಣದ ಜೊತೆಗೆ ವೈಟ್ ಟಾಪಿಂಗ್ ಬಹುಕೋಟಿ ಹಗರಣದ ಕುರಿತೂ ದಾಖಲೆ ಸಂಗ್ರಹ ಮಾಡಿದ್ದಾರೆ ಎನ್ನಲಾಗಿದೆ.
2018-19ರಲ್ಲಿ ಬೆಂಗಳೂರು ನಗರದಲ್ಲಿ ನಡೆದ ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಭಾರೀ ಅಕ್ರಮ ನಡೆದಿರುವ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ ಬೆಂಗಳೂರು ಬಿಜೆಪಿ ಶಾಸಕರ ನಿಯೋಗ 2019ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿತ್ತು.