ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ಸದ್ದು: 3 ದಶಕಗಳ ನಿಷೇಧ ತೆರವಿಗೆ ಸರ್ಕಾರದ ಚಿಂತನೆ

ಕಾಲೇಜು ದಿನಗಳಲ್ಲಿಯೇ ನಾಯಕತ್ವದ ಗುಣಗಳನ್ನು ಬೆಳೆಸಲು ಚುನಾವಣೆಗಳು ಮಹತ್ವದ್ದಾಗಿವೆ. ಈ ಕಾರಣಕ್ಕಾಗಿ ಕಾಲೇಜ್‌ ಕ್ಯಾಂಪಸ್‌ನಲ್ಲಿ ಚುನಾವಣೆಗಳು ನಡೆಸಬೇಕು ಎಂಬ ಮಾತುಗಳು ಕೇಳಿಬಂದಿವೆ.;

Update: 2025-08-24 04:28 GMT

ಕಳೆದ ಮೂರು ದಶಕಗಳಿಂದ ತೆರೆಮರೆಗೆ ಜಾರಿದ್ದ ಕಾಲೇಜ್‌ ಕ್ಯಾಂಪಸ್‌ನಲ್ಲಿ ಚುನಾವಣೆ ನಡೆಸುವ ಕುರಿತ ಚರ್ಚೆ ಇದೀಗ ಮುನ್ನೆಲೆಗೆ ಬಂದಿದೆ. ರಾಜಕೀಯಕ್ಕೆ ಇತ್ತೀಚೆಗೆ ಯುವಜನಾಂಗದ ಪ್ರವೇಶ ತೀರಾ ಕಡಿಮೆಯಾಗುತ್ತಿದೆ. ಕಾಲೇಜು ದಿನಗಳಲ್ಲಿಯೇ ನಾಯಕತ್ವದ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಚುನಾವಣೆಗಳು ಮಹತ್ವದ ಪಾತ್ರವಹಿಸಲಿವೆ ಎಂಬ ಕಾರಣಕ್ಕಾಗಿ ಕಾಲೇಜ್‌ ಕ್ಯಾಂಪಸ್‌ನಲ್ಲಿ ಚುನಾವಣೆಗಳು ನಡೆಸಬೇಕು ಎಂಬ ಮಾತುಗಳು ಕೇಳಿಬಂದಿವೆ. 

ರಾಜ್ಯದಲ್ಲಿ 1989-90 ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್‌ ಅವರು ಬೆಂಗಳೂರಿನ ಕಾಲೇಜು ಕ್ಯಾಂಪಸ್‌ಗಳಲ್ಲಿ ಹಿಂಸಾಚಾರ ವರದಿಯಾದ ಬಳಿಕ ಕಾಲೇಜು ಕ್ಯಾಂಪಸ್ ಚುನಾವಣೆಗಳನ್ನು ನಿಷೇಧಿಸಲಾಗಿತ್ತು. ಇದೀಗ ವಿದ್ಯಾರ್ಥಿ ಸಂಘಟನೆ ಮನವಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಲೇಜು ಕ್ಯಾಂಪಸ್‌ಗಳಲ್ಲಿ ಚುನಾವಣೆಗಳನ್ನು ನಡೆಸಲು ಅವಕಾಶ ನೀಡುವಂತೆ ಒತ್ತಾಯಿಸಿ ಪತ್ರ ಬರೆದಿದ್ದರು. ರಾಹುಲ್‌ಗಾಂಧಿ ಪತ್ರದ ಬಳಿಕ ಕಾಂಗ್ರೆಸ್‌ ಸರ್ಕಾರ ಚುನಾವಣೆ ನಡೆಸುವ ಚಿಂತನೆಗೆ ಮುಂದಾಗಿದೆ. 

ಈ ನಡುವೆ, ಸದನದಲ್ಲಿ ಬಿಜೆಪಿ ಶಾಸಕ ಸುರೇಶ್ ಗೌಡ, ಕಾಲೇಜು ಕ್ಯಾಂಪಸ್‌ಗಳಲ್ಲಿ ಸ್ಥಗಿತಗೊಂಡಿದ್ದ ಚುನಾವಣೆಗಳನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಈ ಬಗ್ಗೆ ದಾಖಲೆಯಲ್ಲಿ ಇರಲಿ ಎಂದು ಹೇಳಿದರು. ಈ ಮೂಲಕ ಚುನಾವಣೆ ನಡೆಸುವ ಕಾಂಗ್ರೆಸ್‌ಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. ರಾಹುಲ್ ಗಾಂಧಿ ಸೂಚನೆ ಮೇರೆಗೆ ಕಾಲೇಜುಗಳಲ್ಲಿ ಒಂದು ವೇಳೆ ಸರ್ಕಾರ ಏನಾದರೂ ಚುನಾವಣೆಗೆ ಅವಕಾಶ ನೀಡಿದರೆ ಕಾಲೇಜಿನಲ್ಲಿ ಚುನಾವಣಾ ರಾಜಕೀಯಕ್ಕೆ ಪ್ರವೇಶ ಸಿಕ್ಕಂತಾಗಲಿದೆ. 

ವಿದ್ಯಾರ್ಥಿ ಸಂಘಗಳು ಸೇರಿದಂತೆ ವಿವಿಧ ಸಂಘಟನೆಗಳು ಕಾಲೇಜು ಚುನಾವಣೆಗಳನ್ನು ನಡೆಸಬೇಕೆಂಬ ಬೇಡಿಕೆ ಇಟ್ಟಿದ್ದು, ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಚುನಾಯಿತ ವಿದ್ಯಾರ್ಥಿ ಸಂಘಟನೆ ಇರಬೇಕು ಎಂಬುದಾಗಿ ಮನವಿ ಮಾಡಿವೆ. ಚುನಾವಣೆ ನಡೆಯುವುದರಿಂದ ಅನುಕೂಲ ಮತ್ತು ಅನಾನುಕೂಲ ಎರಡೂ ಇರುವುದರಿಂದ ಈ ಬಗ್ಗೆ ಗಂಭೀರವಾಗಿ ಚರ್ಚೆಗಳು ನಡೆಯಬೇಕು. ನಂತರ ಚುನಾವಣೆ ನಡೆಸುವ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ. 

ರಾಜ್ಯದಲ್ಲಿ 1989-90 ರ ಅವಧಿಯಲ್ಲಿ ಚುನಾವಣೆಗೆ ನಿಷೇಧ: 

ರಾಜ್ಯದ ಹಲವು ಕಾಲೇಜುಗಳಲ್ಲಿ ಚುನಾವಣೆಯು ವಿಧಾನಸಭೆಗಳಿಗೆ ನಡೆಯುವಂತೆ ತೀವ್ರ ಪೈಪೋಟಿಯ ಚುನಾವಣೆಗಳಾಗಿದ್ದವು. ಅದರಲ್ಲಿಯೂ ಬೆಂಗಳೂರು ಕಾಲೇಜುಗಳಲ್ಲಿ ನಡೆಯುತ್ತಿದ್ದ ಚುನಾವಣೆಗಳು ರಾಜ್ಯದ ಇತರೆ ಕಾಲೇಜುಗಳಿಗಿಂತ ಒಂದು ಕೈ ಮೇಲಾಗಿತ್ತು. ಪ್ರತಿಷ್ಠೆ ಕಣವಾಗಿದ್ದ ಚುನಾವಣೆ ಸಮಯದಲ್ಲಿ ಹಿಂಸಾಚಾರ ಕೃತ್ಯಗಳು ನಡೆಯುತ್ತಿದ್ದವು. 1980 ರ ದಶಕದ ಉತ್ತರಾರ್ಧದಲ್ಲಿ ವಿದ್ಯಾರ್ಥಿ ಸಂಘದ ಕೆಲವು ಸದಸ್ಯರು  ಪ್ರಾಂಶುಪಾಲರೊಂದಿಗೆ ಜಗಳವಾಡಿದ್ದರು. ಹಿಂಸಾಚಾರ ಪ್ರಕರಣಗಳು ನಡೆದಿದ್ದವು. ಆಗಿನ ಶಿಕ್ಷಣ ಸಚಿವ ಕೆ.ಎಚ್. ​​ರಂಗನಾಥ್ ಅವರಿಗೆ ಆಪ್ತರಾಗಿದ್ದ ಪ್ರಾಂಶುಪಾಲರು ವಿದ್ಯಾರ್ಥಿ ಚುನಾವಣೆಗಳನ್ನು ನಿಷೇಧಿಸುವಂತೆ ಕೋರಿದ್ದರು. ಆ ಸಮಯದಲ್ಲಿ ವೀರೇಂದ್ರ ಪಾಟೀಲ್‌ ಮುಖ್ಯಮಂತ್ರಿಯಾಗಿದ್ದರು. ಅವರಿಗೆ ರಂಗನಾಥ್‌ ಅವರು ಈ ವಿಷಯದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿ ಚುನಾವಣೆಗಳನ್ನು ನಿಷೇಧ ಹೇರುವಂತೆ ಮನವಿ ಮಾಡಿದ್ದರು. ಚುನಾವಣೆಯಿಂದ ಶಿಕ್ಷಣ ಸಂಸ್ಥೆಗಳಲ್ಲಿ ಗಲಭೆಗಳು ನಡೆಯುವುದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಚುನಾವಣೆಗಳನ್ನು ರದ್ದು ಮಾಡುವ ತೀರ್ಮಾನ ಕೈಗೊಳ್ಳಲಾಯಿತು. ಕಾಲೇಜಿನಲ್ಲಿ ನಡೆದ ಹಿಂಸಾತ್ಮಕ ಘಟನೆಯು ವಿದ್ಯಾರ್ಥಿ ಚುನಾವಣೆಗಳ ಮೇಲಿನ ನಿಷೇಧಕ್ಕೆ ಕಾರಣವಾಯಿತು. ಅದು ಇಂದಿಗೂ ಜಾರಿಯಲ್ಲಿದೆ.

ವಿದ್ಯಾರ್ಥಿ ಸಂಘಟನೆ ಮೂಲಕ ರಾಜಕಾರಣಕ್ಕೆ ಬಂದವರು: 

ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಹಲವು ಮಂದಿ ರಾಜಕಾರಣಕ್ಕೆ ಬಂದಿದ್ದಾರೆ. ಎನ್‌ಎಸ್‌ಯುಐನಲ್ಲಿ ತೊಡಗಿಸಿಕೊಂಡು ಹೋರಾಟದಲ್ಲಿ ತೊಡಗಿ ರಾಜಕಾರಣದಲ್ಲಿ ಉನ್ನತ ಹುದ್ದೆಗಳನ್ನು ಹೇರಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿಧಾನಪರಿಷತ್‌ ಸದಸ್ಯರಾದ ಬಿ.ಕೆ.ಹರಿಪ್ರಸಾದ್‌, ಪುಟ್ಟಣ್ಣ, ಸಲೀಂ ಅಹ್ಮದ್‌, ನಾಯಕರಾದ ಎಚ್‌.ಎಂ.ರೇವಣ್ಣ, ತೇಜಸ್ವಿನಿ, ಚೌಡರೆಡ್ಡಿ, ಅಪ್ಪಾಜಿಗೌಡ, ಅನಂತಕುಮಾರ್‌, ರವಿಕುಮಾರ್‌ ಸೇರಿದಂತೆ ಹಲವು ಮಂದಿ ವಿದ್ಯಾರ್ಥಿ ಸಂಘಟನೆಗಳಲ್ಲಿ ತೊಡಗಿಸಿಕೊಂಡು ರಾಜಕಾರಣಕ್ಕೆ ಪ್ರವೇಶಿಸಿದ ನಾಯಕರಾಗಿದ್ದಾರೆ. 

ಕುಟುಂಬ ರಾಜಕಾರಣಕ್ಕೆ ಕಡಿವಾಣ ಸಾಧ್ಯ? 

ಇತ್ತೀಚೆಗೆ ರಾಜಕಾರಣದಲ್ಲಿ ಕುಟುಂಬ ರಾಜಕಾರಣ ಹೆಚ್ಚಾಗುತ್ತಿದೆ. ತಂದೆ, ಮಗ, ಮೊಮ್ಮಕ್ಕಳು ರಾಜಕಾರಣದಲ್ಲಿ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ನಾಯಕತ್ವ ಗುಣಗಳನ್ನು ಹೊಂದಿರುವ ಯುವಜನಾಂಗವು ರಾಜಕಾರಣಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಲು ಕಾಲೇಜು ಕ್ಯಾಂಪಸ್‌ನಲ್ಲಿ ಚುನಾವಣೆ ನಡೆಸುವ ಅವಶ್ಯಕತೆ ಇದೆ. ಚುನಾವಣೆಗಳನ್ನು ನಡೆಸುವುದರಿಂದ ನಾಯಕತ್ವ ಹೊಂದಿರುವ ಯುವಜನಾಂಗವು ರಾಜಕೀಯಕ್ಕೆ ಪ್ರವೇಶಿಸಬೇಕು ಎಂದು ಪಕ್ಷವೊಂದರ ನಾಯಕರೊಬ್ಬರು ತಿಳಿಸಿದ್ದಾರೆ. 

ಮನವಿ ಮಾಡಿದರೂ ರಂಗನಾಥ್‌ ಸುತಾರಾಂ ಒಪ್ಪಲಿಲ್ಲ: 

ದ ಫೆಡರಲ್‌ ಕರ್ನಾಟಕ ಜತೆಗೆ ಮಾತನಾಡಿದ ವಿಧಾನಪರಿಷತ್‌ ಮುಖ್ಯ ಸಚೇತಕ ಸಲೀಂ ಅಹ್ಮದ್‌, ಆರ್‌.ಸಿ.ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಕೆಲವು ಸದಸ್ಯರು ಪ್ರಾಂಶುಪಾಲರೊಂದಿಗೆ ಗಲಾಟೆ ಮಾಡಿಕೊಂಡಿದ್ದರು. ಈ ಕಾರಣಕ್ಕಾಗಿ ಆಗಿನ ಶಿಕ್ಷಣ ಸಚಿವ ಕೆ.ಎಚ್. ​​ರಂಗನಾಥ್ ಅವರಿಗೆ ಆಪ್ತರಾಗಿದ್ದ ಪ್ರಾಂಶುಪಾಲರು ವಿದ್ಯಾರ್ಥಿ ಚುನಾವಣೆಗಳನ್ನು ನಿಷೇಧಿಸುವಂತೆ ಕೇಳಿದರು. ವಿದ್ಯಾರ್ಥಿ ಚುನಾವಣೆಗಳು ಹಿಂಸಾಚಾರವನ್ನು ಹುಟ್ಟುಹಾಕುತ್ತವೆ ಎಂಬ ಚಿತ್ರವನ್ನು ರಂಗನಾಥ್ ಅವರಿಗೆ ನೀಡಲಾಯಿತು. ಚುನಾವಣೆ ನಿಷೇಧ ಮಾಡಬಾರದು ಎಂಬುದಾಗಿ ಸಾಕಾಷ್ಟು ಒತ್ತಾಯ ಮಾಡಿದ್ದರೂ ರಂಗನಾಥ್‌ ಅವರು ಒಪ್ಪಲೇ ಇಲ್ಲ ಎಂದರು. 

ಚುನಾವಣೆ ನಿಷೇಧಗೊಂಡಾಗ ಎನ್‌ಎಸ್‌ಯುಐ ಅಧ್ಯಕ್ಷನಾಗಿದ್ದೆ. ಹಲವು ಹೋರಾಟಗಳನ್ನು ನಡೆಸಲಾಗುತ್ತಿತ್ತು. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರು ವಿದ್ಯಾರ್ಥಿ ಸಂಘಟನೆ ಹೆಚ್ಚು ಪ್ರಾಬಲ್ಯವನ್ನು ಹೊಂದಿತ್ತು. ಅಲ್ಲದೇ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತದಾನದ ವಯಸ್ಸನ್ನು 18 ಕ್ಕೆ ಇಳಿಸಿದ ನಂತರ ಎನ್‌ಎಸ್‌ಯುಐ ಮಹತ್ವ ಪಡೆದುಕೊಂಡಿತು. ಕರ್ನಾಟಕದಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ಪುನರಾರಂಭಿಸುವಂತೆ ರಾಜೀವ್ ಗಾಂಧಿಯವರನ್ನು ವಿನಂತಿಸಿದ್ದೆ.  ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರನ್ನು ಸಂಪರ್ಕಿಸಲು ಹೇಳಿದ್ದರು. ಫರ್ನಾಂಡಿಸ್ ರಂಗನಾಥ್ ಅವರನ್ನು ಕೇಳಿದರು. ಆದರೆ ಅವರು ಹಿಂದೆ ಸರಿಯಲಿಲ್ಲ ಎಂದು ನೆನಪಿಸಿಕೊಂಡರು.

ಕಾಂಗ್ರೆಸ್ ತನ್ನ ಪ್ರತಿರೂಪಗಳಂತೆ ಯುವ ನಾಯಕರನ್ನು ರೂಪಿಸಲು ವಿದ್ಯಾರ್ಥಿ ಚಳವಳಿಗಳನ್ನು ಅವಲಂಬಿಸಿತ್ತು. ಇದು ಭವಿಷ್ಯದ ನಾಯಕರ ಹುಟ್ಟಿಗೆ ಕಾರಣವಾಗುತ್ತಿತ್ತು. ಇದೇ ಕಾರಣಕ್ಕಾಗಿ ಕಾಲೇಜುಗಳಲ್ಲಿ ಚುನಾವಣೆ ನಡೆಸಲು ಮನವಿ ಮಾಡಲಾಗಿದೆ ಎಂದರು. 

ಮುಂದಿನ ವರ್ಷ ಚುನಾವಣೆ ಸಾಧ್ಯತೆ: 

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪಕ್ಷದ ವರಿಷ್ಠ ರಾಹುಲ್‌ ಗಾಂಧಿಯ ಸೂಚನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಚುನಾವಣೆ ನಡೆಸುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದ್ದಾರೆ. ಉನ್ನತ ಶಿಕ್ಷಣ ಸಚಿವರ ಜತೆ ಔಪಚಾರಿಕವಾಗಿ ಮಾತುಕತೆ ನಡೆಸಲಾಗಿದೆ. ಶಿಕ್ಷಣ ಸಂಸ್ಥೆಗಳ ಮುಖಸ್ಥರೊಂದಿಗೆ ಚರ್ಚೆ ನಡೆಸಿ ಬಿಗಿ ಭದ್ರತೆಯಲ್ಲಿ ಚುನಾವಣೆ ನಡೆಸಬೇಕಾಗಿದೆ. ಈ ಹಿಂದೆ ಇದ್ದ ವಾತಾವರಣ ಈಗ ಇಲ್ಲ. ಕಾಲೇಜುಗಳ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿ, ಕಾನೂನುಗಳನ್ನು ಜಾರಿಗೊಳಿಸಿ ಚುನಾವಣೆ ನಡೆಸುವ ನಡೆಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. 

ಅಭಿಪ್ರಾಯಗಳು: 

ದ ಫೆಡರಲ್‌ ಕರ್ನಾಟಕದ ಜತೆ ಮಾತನಾಡಿದ ಮಾಜಿ ಸಚಿವ ಮತ್ತು ಜೆಡಿಎಸ್‌ ನಾಯಕ ಬಂಡೆಪ್ಪ ಕಾಶೆಂಪೂರ, ಕಾಲೇಜುಗಳಲ್ಲಿ ಚುನಾವಣೆ ನಡೆಸುವುದು ಸ್ವಾಗತಾರ್ಹ. ಯುವಪೀಳಿಗೆಗೆ ರಾಜಕೀಯ ಅನುಭವ ಸಿಕ್ಕಂತಾಗುತ್ತದೆ. ದೇಶದಲ್ಲಿ ಬಹುತೇಕ ಪೋಷಕರಿಗೆ ತಮ್ಮ ಮಕ್ಕಳು ರಾಜಕೀಯಕ್ಕೆ ಬರಬೇಕು ಎಂಬ ಇಚ್ಛೆ ತೋರುವುದಿಲ್ಲ. ಕೇವಲ ಐಎಎಸ್‌, ಐಪಿಎಸ್‌, ಎಂಜಿನಿಯರ್‌, ಡಾಕ್ಟರ್‌ ಮಾಡಬೇಕು ಎಂಬ ಉದ್ದೇಶ ಹೊಂದಿರುತ್ತಾರೆ. ಜನಪ್ರತಿನಿಧಿಗಳು ರೂಪಿಸುವ ಕಾನೂನುಗಳನ್ನು ಅಧಿಕಾರಿಗಳನ್ನು ಅನುಷ್ಠಾನಗೊಳಿಸುತ್ತಾರೆ. ಇದರ ಜತೆಗೆ ಕಾನೂನು ರೂಪಿಸುವ ಜನಪ್ರತಿನಿಧಿಗಳು ಆಗಬೇಕು ಎಂಬ ಭಾವನೆ ಮೂಡಬೇಕು ಎಂದು ಹೇಳಿದರು. 

ಜೆಡಿಎಸ್‌ ಶಾಸಕ ಶರಣಗೌಡ ಕಂದಕೂರು ಮಾತನಾಡಿ, ಕಾಲೇಜುಗಳಲ್ಲಿ ಚುನಾವಣೆ ನಡೆಸುವುದರಿಂದ ಸಕಾರಾತ್ಮಕ ಪರಿಣಾಮ ಬೀರಿದರೆ ಸಮಸ್ಯೆ ಇಲ್ಲ. ಆದರೆ, ಯುವಜನಾಂಗದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಾರದು. ಚುನಾವಣೆ ಹೆಸರಲ್ಲಿ ಕಾಲೇಜುಗಳಲ್ಲಿ ಗಲಭೆ ನಡೆದರೆ ಕಷ್ಟ. ಇತ್ತೀಚೆಗಗಿನ ಯುವಜನಾಂಗಕ್ಕೆ ತಾಳ್ಮೆ ತುಂಬಾ ಕಡಿಮೆ ಇದೆ. ಚುನಾವಣೆಗಳು ಅವರ ಭವಿಷ್ಯಕ್ಕೆ ಮಾರಕವಾಗಬಾರದು. ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಸಕಾರಾತ್ಮಕವಾದರೆ ಒಳ್ಳೆಯದು. ಜಾತಿ ವ್ಯವಸ್ಥೆ ಕಾಲೇಜು ಕ್ಯಾಂಪಸ್‌ಗೆ ಹೋಗಬಾರದು ಎಂದು ತಿಳಿಸಿದರು. 

ಬಿಜೆಪಿ ಶಾಸಕ ಧೀರಜ್‌ ಮುನಿರಾಜ್‌ ಮಾತನಾಡಿ, ಚುನಾವಣೆ ನಡೆಸುವುದರಿಂದ ನಾಯಕತ್ವ ಬೆಳೆಯುತ್ತದೆ. ಇದರಿಂದ ಅನುಕೂಲ ಮತ್ತು ಅನಾನುಕೂಲ ಎರಡೂ ಇದೆ. ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಸರ್ಕಾರ ಮುಂದಿನ ಹೆಜ್ಜೆ ಇಡಬೇಕು. ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಾರದು. ಇವತ್ತಿನ ಕಾಲಘಟಕ್ಕೆ ತಕ್ಕಂತೆ ಬಿಗಿ ಕಾನೂನು ಬರಬೇಕು. ಯಾವುದೇ ಗಲಭೆಗಳು ಇಲ್ಲದೇ ಶಾಂತಿಯುತವಾಗಿ ಹೇಗೆ ನಡೆಸಬೇಕು ಎಂಬುದರ ಬಗ್ಗೆ ಸ್ಪಷ್ಟನೆ ಇರಬೇಕು ಎಂದರು. 


Tags:    

Similar News