ಶಾಸಕ ಸುಬ್ಬಾರೆಡ್ಡಿ ಮನೆ ಮೇಲೆ ಇ.ಡಿ. ದಾಳಿ: ವಿದೇಶದಲ್ಲಿ ಆಸ್ತಿ ಹೊಂದಿರುವ ಆರೋಪ
ಶಾಸಕ ಸುಬ್ಬಾರೆಡ್ಡಿ ಮನೆ, ಕಚೇರಿ ಮಾತ್ರವಲ್ಲದೆ, ಅವರ ವ್ಯವಹಾರ ಪಾಲುದಾರರ ಮನೆ ಮತ್ತು ಕಚೇರಿಗಳ ಮೇಲೂ ಇ.ಡಿ ದಾಳಿ ನಡೆಸಿದ್ದು ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.;
ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ
ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಬೆಂಗಳೂರಿನ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಗುರುವಾರ(ಜು.10) ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಈ ದಾಳಿ ನಡೆದಿದ್ದು, ಅಕ್ರಮ ವಿದೇಶಿ ಆಸ್ತಿ ಮತ್ತು ಹಣಕಾಸು ವ್ಯವಹಾರಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
ಬೆಂಗಳೂರಿನಲ್ಲಿ ಒಟ್ಟು ಐದು ಕಡೆಗಳಲ್ಲಿ ಇ.ಡಿ. ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಸುಬ್ಬಾರೆಡ್ಡಿ ಅವರ ಮನೆ, ಕಚೇರಿ ಮಾತ್ರವಲ್ಲದೆ, ಅವರ ವ್ಯವಹಾರ ಪಾಲುದಾರರ ಮನೆ ಮತ್ತು ಕಚೇರಿಗಳ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಏನು ಆರೋಪ?
ಶಾಸಕ ಸುಬ್ಬಾರೆಡ್ಡಿ ಅವರು ಮಲೇಶಿಯಾ, ಹಾಂಕಾಂಗ್, ಮತ್ತು ಜರ್ಮನಿಯಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ ಎಂಬ ಆರೋಪವಿದೆ. ಅಲ್ಲದೆ, ವಿದೇಶಿ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿರುವ ಬಗ್ಗೆಯೂ ಇ.ಡಿ. ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ವಿದೇಶದಲ್ಲಿ ವಾಹನಗಳ ಖರೀದಿ, ಹಣ ಹೂಡಿಕೆ ಸೇರಿದಂತೆ ವಿವಿಧ ಅಕ್ರಮ ಹಣಕಾಸು ವ್ಯವಹಾರಗಳ ಆರೋಪಗಳ ಅಡಿಯಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ ಸ್ಥಳಗಳಲ್ಲಿ ಕೂಲಂಕಷವಾಗಿ ಪರಿಶೀಲನೆ ಮುಂದುವರಿಸಿದ್ದಾರೆ.