
ಗುಮ್ಮನಾಯಕನ ಕೋಟೆ
Cabinet Meeting | ಬಾಗೇಪಲ್ಲಿ 'ಭಾಗ್ಯನಗರ' ; ಮರುನಾಮಕರಣಕ್ಕೆ ಸಂಪುಟ ಅಸ್ತು
ಬಾಗೇಪಲ್ಲಿ ಹೆಸರು ಬದಲಾವಣೆ ದೀರ್ಘಕಾಲದ ಬೇಡಿಕೆಯಾಗಿದ್ದು, ಕನ್ನಡ ಸಂಘಟನೆಗಳು ಹಾಗೂ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಮರು ನಾಮಕರಣ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದರು.
ಬಾಗೇಪಲ್ಲಿ ಹೆಸರನ್ನು 'ಭಾಗ್ಯನಗರ'ವನ್ನಾಗಿ ಕಾಣುವ ದಿವಂಗತ ನಟ ಡಾ.ರಾಜಕುಮಾರ್ ಅವರ ಆಶಯ ಕೊನೆಗೂ ಈಡೇರಿದೆ. ಬಾಗೇಪಲ್ಲಿಗೆ ಭಾಗ್ಯ ನಗರ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ನಂದಿಬೆಟ್ಟದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಆಂಧ್ರದ ಗಡಿಭಾಗವಾಗಿರುವ ಬಾಗೇಪಲ್ಲಿ ತಾಲೂಕಿನ ಹೆಸರು ಬದಲಾವಣೆ ಮಾಡುವಂತೆ ಸ್ಥಳೀಯರು, ಕನ್ನಡ ಸಂಘಟನೆಗಳು ಹಾಗೂ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಕೂಡ ಸರ್ಕಾರವನ್ನು ಒತ್ತಾಯಿಸಿದ್ದರು. ಇದಕ್ಕೂ ಮುನ್ನ 1987 ರಲ್ಲಿ ನಟ ಡಾ. ರಾಜಕುಮಾರ್ ಅವರು ಬಾಗೇಪಲ್ಲಿಯ ಬಾಲಕಿಯರ ಸರ್ಕಾರಿ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ವೇಳೆ "ಬಾಗೇಪಲ್ಲಿ ಭಾಗ್ಯನಗರ"ವಾಗಲಿ, ಎಲ್ಲಾ ಭಾಗ್ಯವೂ ಇಲ್ಲಿ ತುಂಬಲಿ" ಎಂದು ಆಶಿಸಿದ್ದರು. ಅದಾದ ಬಳಿಕ ಭಾಗ್ಯ ನಗರ ಹೆಸರು ಮರು ನಾಮಕರಣಕ್ಕೆ ಕನ್ನಡ ಸಂಘಟನೆಗಳಿಂದ ಒತ್ತಾಯ ಕೇಳಿ ಬಂದಿತ್ತು.
ಬಾಗೇಪಲ್ಲಿ ತಾಲೂಕು ಚಿಕ್ಕಬಳ್ಳಾಪುರ ಜಿಲ್ಲೆಯ ಆಂಧ್ರ ಗಡಿಗೆ ಹೊಂದಿಕೊಂಡಿದೆ. ಇಲ್ಲಿ ತೆಲುಗು ಭಾಷಿಕರ ಸಂಖ್ಯೆ ಹೆಚ್ಚಿದೆ. ಶುಷ್ಕ ವಾತಾವರಣವಿರುವ ಬಾಗೇಪಲ್ಲಿಯಲ್ಲಿ ಯಾವುದೇ ನೀರಾವರಿ ಸೌಲಭ್ಯ ಇಲ್ಲ. ಕಲ್ಲು ಬಂಡೆಯ ಬೆಟ್ಟಗಳಿಂದ ಕೂಡಿರುವ ಬಾಗೇಪಲ್ಲಿಯಲ್ಲಿ ಶತಮಾನಗಳ ಐತಿಹ್ಯ ಹೊಂದಿರುವ ಗುಮ್ಮನಾಯಕನ ಕೋಟೆ ಪ್ರಮುಖ ಪ್ರವಾಸಿ ಸ್ಥಳವಾಗಿದೆ.
ಬಾಗೇಪಲ್ಲಿ ಹೆಸರನ್ನು ಭಾಗ್ಯನಗರ ಎಂದು ಮರೂ ನಾಮಕರಣ ಮಾಡಲು ಸಂಪುಟ ಅನುಮೋದನೆ ನೀಡಿದ್ದು, ಔಪಚಾರಿಕ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ.
ಬಾಗೇಪಲ್ಲಿ ಐತಿಹ್ಯ ಏನು?
ಬೆಂಗಳೂರಿನಿಂದ 100ಕಿ.ಮೀ ದೂರದಲ್ಲಿ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬಾಗೇಪಲ್ಲಿ ತಾಲೂಕು ಕೇಂದ್ರವಿದೆ. ಸುಮಾರು 5 ರಿಂದ 7 ಶತಮಾನಗಳ ಹಿ೦ದೆ ಬಾಗಿನ ಕೊಟ್ಟ ಹಳ್ಳಿಯಾಗಿದ್ದ ಇದು ಕ್ರಮೇಣ ಆಂಧ್ರದ ಪ್ರಭಾವದಿಂದಾಗಿ ಬಾಗೇಪಲ್ಲಿ ಎಂದು ಹೆಸರಾಯಿತು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ.
ಪಾಳೇಗಾರರು ತಮ್ಮ ಮಗಳಿಗೆ ಬಾಗಿನವಾಗಿ ಕೊಟ್ಟ ಈ ಹಳ್ಳಿಯಲ್ಲಿ ಶತಮಾನಗಳಿ೦ದ ಕನ್ನಡ ಬಾಷೆ ಆಡು ಭಾಷೆಯಾಗಿತ್ತು. ಸುಮಾರು 2 ಶತಮಾನಗಳಿ೦ದ ತೆಲುಗು ಭಾಷಿಕರ ವಲಸೆಯ ಕಾರಣ ಕನ್ನಡ ಭಾಷೆಯ ಅಸ್ತಿತ್ವ ನಿಧಾನವಾಗಿ ಕಳೆದುಕೊಳ್ಳುತ್ತಿದೆ. ಈಗಲೂ ತಾಲೂಕಿನಲ್ಲಿ ಗೂಳೂರು, ಚೇಳೂರು, ಮಿಟ್ಟೇಮರಿ, ಬಿಳ್ಳೂರು ಗ್ರಾಮಗಳು ಕನ್ನಡ ಪದ ಹೋಲಿಕೆ ಹೊಂದಿವೆ. ಬಾಗೇಪಲ್ಲಿಯಲ್ಲಿ ಗಡಿದ೦ ಲಕ್ಷ್ಮಿ ವೆ೦ಕಟರಮಣ ಸ್ವಾಮಿ ದೇವಾಲಯವಿದ್ದು, ಇದನ್ನು ಜನಮೇಜನ ರಾಯರು ನಿರ್ಮಿಸಿದರೆ೦ಬ ಪ್ರತೀತಿ ಇದೆ.