ED raids Siddhartha Educational Institutions owned by Dr. G. Parameshwar, documents checked
x

ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆ.

ED Raid | ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಇ.ಡಿ.ದಾಳಿ; ರನ್ಯಾ ರಾವ್‌ ಪ್ರಕರಣಕ್ಕಿದೆಯೇ ನಂಟು?

ತುಮಕೂರಿನ ಸಿದ್ಧಾರ್ಥ ಎಂಜಿನಿಯರಿಂಗ್‌ ಕಾಲೇಜು, ಹೆಗ್ಗೆರೆ ಸಮೀಪದ ಸಿದ್ಧಾರ್ಥ ಮೆಡಿಕಲ್‌ ಕಾಲೇಜು ಹಾಗೂ ಟಿ.ಬೇಗೂರಿನ ಮೆಡಿಕಲ್‌ ಕಾಲೇಜಿನ ಮೇಲೆ ಬುಧವಾರ (ಮೇ21) ಬೆಳಿಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ದಾಳಿ ನಡೆಸಿ, ದಾಖಲೆ ಪತ್ರಗಳನ್ನು ಪರಿಶೀಲಿಸುತ್ತಿದೆ.


ಗೃಹಸಚಿವ ಡಾ.ಜಿ.ಪರಮೇಶ್ವರ್‌ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪತ್ರ ಪರಿಶೀಲಿಸುತ್ತಿದ್ದಾರೆ.

ತುಮಕೂರಿನ ಮರಳೂರು ದಿಣ್ಣೆಯಲ್ಲಿರುವ ಸಿದ್ಧಾರ್ಥ ಎಂಜಿನಿಯರಿಂಗ್‌ ಕಾಲೇಜು, ಹೆಗ್ಗೆರೆ ಸಮೀಪದ ಸಿದ್ಧಾರ್ಥ ಮೆಡಿಕಲ್‌ ಕಾಲೇಜು, ಕ್ಯಾತ್ಸಂದ್ರದ ಜಾಸ್‌ ಟೋಲ್‌ ಸಮೀಪದ ಎಂಜಿನಿಯರಿಂಗ್‌ ಕಾಲೇಜು ಹಾಗೂ ನೆಲಮಂಗಲದ ಟಿ.ಬೇಗೂರಿನಲ್ಲಿರುವ ವೈದ್ಯಕೀಯ ಕಾಲೇಜಿನ ಮೇಲೆ ಬುಧವಾರ (ಮೇ21) ಬೆಳಿಗ್ಗೆ 8 ಗಂಟೆಗೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಕ್ಯಾತ್ಸಂದ್ರದ ಜಾಸ್‌ ಟೋಲ್‌ ಬಳಿ ಇರುವ ಎಂಜಿನಿಯರಿಂಗ್‌ ಕಾಲೇಜು ಈ ಹಿಂದೆ ಮಾಜಿ ಶಾಸಕ ರಫೀಕ್‌ ಅಹಮದ್‌ ಅವರ ಒಡೆತನದಲ್ಲಿತ್ತು. ಇತ್ತೀಚೆಗೆ ಆ ಕಾಲೇಜನ್ನು ಸಿದ್ದಾರ್ಥ ಶಿಕ್ಷಣ ಸಂಸ್ಥೆ ಖರೀದಿಸಿತ್ತು.

ಕಾಲೇಜಿನ ಹಣಕಾಸು ವ್ಯವಹಾರಗಳು ಹಾಗೂ ದಾಖಲಾತಿಯಲ್ಲಿ ವ್ಯತ್ಯಾಸಗಳು ಸೇರಿದಂತೆ ಹಲವು ದೂರುಗಳ ಕುರಿತು ಪರಿಶೀಲನೆ ನಡೆಸುತ್ತಿದೆ.

ರನ್ಯಾ ರಾವ್‌ ಪ್ರಕರಣ ಸಂಬಂಧವೂ ಶೋಧ?

ದುಬೈನಿಂದ ಚಿನ್ನ ಅಕ್ರಮ ಕಳ್ಳಸಾಗಾಣಿಗೆ ಮಾಡಿ ಸಿಕ್ಕಿಬಿದ್ದಿರುವ ನಟಿ ರನ್ಯಾರಾವ್‌ ಪ್ರಕರಣ ಸಂಬಂಧವೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ರನ್ಯಾರಾವ್‌ ಪ್ರತಿ ಬಾರಿ ಚಿನ್ನ ಕಳ್ಳಸಾಗಾಣಿಕೆ ವೇಳೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಾವುದೇ ತಪಾಸಣೆಗೆ ಒಳಗಾಗದೇ ಹೊರಬರುತ್ತಿದ್ದರು. ರನ್ಯಾ ರಾವ್‌ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸುವ ಮುನ್ನ ರಾಜ್ಯ ಸರ್ಕಾರದ ಪ್ರಭಾವಿ ಸಚಿವರೊಬ್ಬರು ಕರೆ ಮಾಡಿರುವ ಕುರಿತು ಇಡಿ ತನಿಖೆ ವೇಳೆ ಕಂಡು ಬಂದಿತ್ತು. ಈ ಪ್ರಕರಣದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೆಸರು ತಳುಕು ಹಾಕಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

2019 ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದರು. ಆಗ ಡಾ.ಜಿ. ಪರಮೇಶ್ವರ್‌ ಆಪ್ತ ಸಹಾಯಕ ರಮೇಶ್‌ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಬಳಿಕ ಐಟಿ ಅಧಿಕಾರಿಗಳು ದಾಳಿ ನಿಲ್ಲಿಸಿ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದ್ದರು. ಈ ಪ್ರಕರಣ ಸಂಬಂಧವೂ ತನಿಖೆಯ ಭಾಗವಾಗಿ ಶೋಧ ನಡೆಸುತ್ತಿದೆ ಎನ್ನಲಾಗಿದೆ.

ಡೀಮ್ಡ್‌ ವಿಶ್ವವಿದ್ಯಾಲಯವಾಗಿರುವ ಸಿದ್ದಾರ್ಥ ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಹಂಚಿಕೆ, ಪ್ರವೇಶ ಶುಲ್ಕ ಕುರಿತು ಹಲವು ದೂರುಗಳ ಕುರಿತಾಗಿಯೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Read More
Next Story