CCB Raid| ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 6.8 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ
ಸಿಸಿಬಿ ಪೊಲೀಸರು ವಿದೇಶಿ ಪ್ರಜೆ, ಸಿವಿಲ್ ಎಂಜಿನಿಯರ್ ಸೇರಿ 10 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 6 ಕೋಟಿ 80 ರೂ. ಲಕ್ಷ ಮೌಲ್ಯದ ನಿಷೇಧಿತ ಡ್ರಗ್ಸ್ ಜಪ್ತಿ ಮಾಡಲಾಗಿದೆ.;
ಬೆಂಗಳೂರು ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಪೊಲೀಸರು ಮಾದಕ ವಸ್ತುಗಳ ಜಾಲದ ವಿರುದ್ಧ ಭಾರೀ ಕಾರ್ಯಾಚರಣೆ ನಡೆಸಿದ್ದು, ವಿದೇಶಿ ಪ್ರಜೆ ಹಾಗೂ ಸಿವಿಲ್ ಎಂಜಿನಿಯರ್ ಸೇರಿ 10 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 6.80 ಕೋಟಿ ರೂ ಮೌಲ್ಯದ ನಿಷೇಧಿತ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಡ್ರಗ್ಸ್ ಪೆಡ್ಲರ್
ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದ ಡಿ-ಮಾರ್ಟ್ ಹಿಂಭಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯು ಸಿಸಿಬಿಯ ಬಲೆಗೆ ಬಿದ್ದಿದ್ದಾನೆ. ಬಂಧಿತನಿಂದ 3 ಕೆ.ಜಿ 554 ಗ್ರಾಂ ಹೈಡ್ರೋಫೋನಿಕ್ ಗಾಂಜಾ, 26,06,500 ರೂ ನಗದು ಹಾಗೂ ಮೊಬೈಲ್‌ಗಳನ್ನು ಸೇರಿಸಿ 4.52 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಕೇರಳ ಮೂಲದ ಸಿವಿಲ್ ಎಂಜಿನಿಯರ್ ಆಗಿದ್ದು, ಬೊಮ್ಮಸಂದ್ರದ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ವಾಸವಾಗಿದ್ದು, ಕೇರಳದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ, ಐಟಿ ಉದ್ಯೋಗಿಗಳು ಹೆಚ್ಚಿನ ಪ್ರಮಾಣದಲ್ಲಿರುವ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದ. ಡಬಲ್ ಲೇಯರ್ ಪ್ಯಾಕಿಂಗ್ ಮೂಲಕ ಅನುಮಾನ ಬಾರದಂತೆ ಡ್ರಗ್ ಮಾರಾಟದಲ್ಲಿ ತೊಡಗಿದ್ದ. ಒಂದೊಂದು ಗ್ರಾಂ ಗಾಂಜಾವನ್ನು 12,000ರೂಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ವಿದೇಶಿ ಪ್ರಜೆ ಸೆರೆ
ಬೇಗೂರು ಪ್ರದೇಶದಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆತನಿಂದ 1 ಕೆ.ಜಿ ಎಂಡಿಎಂಎ ಕ್ರಿಸ್ಟಲ್, ಮೊಬೈಲ್ ಫೋನ್, ದ್ವಿಚಕ್ರ ವಾಹನ ಸೇರಿ 2 ಕೋಟಿ ರೂ ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.
ಈತ 2012ನೇ ಸಾಲಿನಲ್ಲಿ ಬಿಜಿನೆಸ್ ವೀಸಾ ಮೇಲೆ ಭಾರತಕ್ಕೆ ಬಂದಿದ್ದು, ಮೋಜಿನ ಜೀವನ ನಡೆಸುವ ಸಲುವಾಗಿ ಮತ್ತು ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಗಳಿಸುವ ದುರುದ್ದೇಶದಿಂದ ಬೆಂಗಳೂರಿನಲ್ಲಿ ನೆಲೆಸಿದ್ದ. ಪರಿಚಯಸ್ಥರೊಬ್ಬರಿಂದ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಕ್ರಿಸ್ಟಲ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಅವುಗಳನ್ನು ಒಂದು ಗ್ರಾಂ ಗೆ 20 ಸಾವಿರಕ್ಕಿಂತ ಹೆಚ್ಚಿನ ಬೆಲೆಗೆ ಕಾಲೇಜು ವಿದ್ಯಾರ್ಥಿಗಳು, ಐಟಿ/ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದ. ನಕಲಿ ದಾಖಲೆ ಸೃಷ್ಠಿಸಿಕೊಂಡು ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವುದು ಕೂಡ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಎಫ್‌ಆರ್ ಆರ್.ಓ ಕಚೇರಿಗೆ ಪತ್ರ ವ್ಯವಹಾರ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಅಟ್ಟೂರು ಲೇಔಟ್‌ನಲ್ಲಿ 8ಮಂದಿ ಪೆಡ್ಲರ್‌ಗಳ ಬಂಧನ
ಯಲಹಂಕ ಉಪನಗರದ ಅಟ್ಟೂರು ಲೇಔಟ್‌ನ ಲಾಡ್ಜ್‌ವೊಂದರಲ್ಲಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ 8 ಮಂದಿ ಕೇರಳ ಮೂಲದ ಡ್ರಗ್ ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 110 ಗ್ರಾಂ ಎಂಡಿಎಂಎ ಕ್ರಿಸ್ಟಲ್, 10 ಮೊಬೈಲ್‌ಗಳು, 1 ಟ್ಯಾಬ್, ತೂಕದ ಯಂತ್ರ, 2 ಕಾರುಗಳು ಸೇರಿ 27 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆದಾಯದ ಗಳಿಸುವ ಉದ್ದೇಶ
ಬಂಧಿತರು ಮೋಜಿನ ಜೀವನ ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ MDMA ಕ್ರಿಸ್ಟಲ್‌ಗಳನ್ನು ವಿದೇಶಿ ಡ್ರಗ್ ಪೆಡ್ಲರ್‌ಗಳಿಂದ ಖರೀದಿಸಿ, ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳಿಗೆ 15,000 ರಿಂದ 20,000 ರೂಗಳವರಗೆ ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.