Bangalore Crime | ಹೊಸ ವರ್ಷ ಆಚರಣೆಗೆ ತಂದಿದ್ದ ₹2.25 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ, ಆರೋಪಿ ಬಂಧನ

ಆರೋಪಿಯಿಂದ 3 ಕೆ.ಜಿ. 55 ಗ್ರಾಂ. ಹೈಡ್ರೋ ಗಾಂಜಾ, 16 ಕೆ.ಜಿ. ಗಾಂಜಾ, 40 ಎಲ್‌ಎಸ್‌ಡಿ ಸ್ಟ್ರಿಪ್ಸ್, 130 ಗ್ರಾಂ. ಚರಸ್, 2.23 ಗ್ರಾಂ. ಎಂಡಿಎಂಎ ಕ್ರಿಸ್ಟಲ್, ಮೂರು ತೂಕದ ಯಂತ್ರಗಳು, ಎರಡು ಮೊಬೈಲ್ ಫೋನ್ ಹಾಗೂ ₹1.30 ಲಕ್ಷ ನಗದು ಜಪ್ತಿ ಮಾಡಿಕೊಳ್ಳಲಾಗಿದೆ.;

Update: 2025-01-01 07:40 GMT
ಬಂಧಿತ ಆರೋಪಿ ರಕ್ಷಿತ್‌

ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಹೊಸ ವರ್ಷ 2025ಕ್ಕೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಕೇಕ್ ಕತ್ತರಿಸಿ, ಪರಸ್ಪರ ಶುಭಾಶಯ ಕೋರಿದ್ದಾರೆ. ಆದರೆ ಈ ಸಂಭ್ರಮಾಚರಣೆಗೆಂದು ತಂದಿಟ್ಟಿದ್ದ ಹೈಡ್ರೋ ಗಾಂಜಾವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಬೆಂಗಳೂರಿನ ಚೊಕ್ಕನಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮಾದಕ ವಸ್ತುಗಳನ್ನು ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಡ್ರಗ್ಸ್ ಪೆಡ್ಡರ್ ಯಲಹಂಕದ ರಕ್ಷಿತ್ (31) ನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ತವನೀಶ್ ಅಲಿಯಾಸ್ ಈಶಾ ತಲೆಮರೆಸಿಕೊಂಡಿದ್ದು, ಶೋಧಕಾರ್ಯ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಕೇಕ್ ಪ್ಯಾಕ್, ಕಿಟ್ ಕ್ಯಾಟ್ ಪ್ಯಾಕ್​ಗಳಲ್ಲಿ ಹೈಡ್ರೋ ಗಾಂಜಾಗಳು ಸರಬರಾಜು ಆಗುತ್ತಿದ್ದು, ಈ ಹೈಡ್ರೋ ಗಾಂಜಾ ಬೆಂಗಳೂರಿನಲ್ಲಿ ನಡೆಯುವ ಪಾರ್ಟಿಗೆ ಸೇರಬೇಕಿತ್ತು. ಆದರೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. 

“ಆರೋಪಿಯಿಂದ 3 ಕೆ.ಜಿ. 55 ಗ್ರಾಂ. ಹೈಡ್ರೋ ಗಾಂಜಾ, 16 ಕೆ.ಜಿ. ಗಾಂಜಾ, 40 ಎಲ್‌ಎಸ್‌ಡಿ ಸ್ಟ್ರಿಪ್ಸ್, 130 ಗ್ರಾಂ. ಚರಸ್, 2.23 ಗ್ರಾಂ. ಎಂಡಿಎಂಎ ಕ್ರಿಸ್ಟಲ್, ಮೂರು ತೂಕದ ಯಂತ್ರಗಳು, ಎರಡು ಮೊಬೈಲ್ ಫೋನ್ ಹಾಗೂ ₹1.30 ಲಕ್ಷ ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಇವುಗಳ ಮೌಲ್ಯ ₹2.50 ಕೋಟಿ ಎಂದು ಅಂದಾಜಿಸಲಾಗಿದೆ" ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಥೈಲ್ಯಾಂಡ್​ನಿಂದ ತರಿಸಿದ್ದ ಹೈಡ್ರೋ ಗಾಂಜಾ

ಪಾರ್ಟಿಗಳಲ್ಲಿ ಡ್ರಗ್ಸ್‌ ಮಾರಾಟ ಮಾಡಲು ಥೈಲ್ಯಾಂಡ್​ನಿಂದ ಈ ಡ್ರಗ್ಸ್‌ಗಳನ್ನು ತರಿಸಲಾಗಿತ್ತು. ದಾವಣಗೆರೆ ಮೂಲದ ರಕ್ಷಿತ್ ರಮೇಶ್ ಎಂಬಾತನನ್ನು ವಶಕ್ಕೆ ಪಡೆದ ಸಿಸಿಬಿ ಅಧಿಕಾರಿಗಳು, ಆತನ ಸಂಪಿಗೆಹಳ್ಳಿಯ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆತ ಬೆಂಗಳೂರಿನ ಪಾರ್ಟಿಗಳಿಗೆ ಪೂರೈಕೆ ಮಾಡಲು ತರಿಸಿದ್ದ ಬರೋಬ್ಬರಿ ಹದಿನಾರು ಕೆಜಿ ಗಾಂಜಾ ಸೊಪ್ಪು ಮತ್ತು ಥೈಲ್ಯಾಂಡ್​​ನಿಂದ ತರಿಸಿದ್ದ ಸುಮಾರು ಮೂರು ಕೆಜಿ ಹೈಡ್ರೋ ಗಾಂಜಾ ದೊರೆತಿದೆ. ಎಂಡಿಎಂಎ, ಎಲ್​ಎಸ್​ಡಿ ಮತ್ತು ಚರಸ್ ಎಲ್ಲ ಸೇರಿ ಸುಮಾರು 2.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

40 ಲಕ್ಷ ರೂ. ಮೌಲ್ಯದ ಗಾಂಜಾ ಮತ್ತು ಎಂಡಿಎಂಎ ವಶಕ್ಕೆ

ನಗರದ ಯಲಹಂಕ ನ್ಯೂಟೌನ್, ಗೋವಿಂದ ರಾಜನಗರ, ಕಾಮಾಕ್ಷಿ ಪಾಳ್ಯ, ಬಾಗಲೂರು, ಕೊಡಿಗೆಹಳ್ಳಿ, ಅಮೃತಹಳ್ಳಿ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಏಳು ಜನರನ್ನು ಬಂಧಿಸಿ ಸುಮಾರು 40 ಲಕ್ಷ ರೂ. ಮೌಲ್ಯದ ಗಾಂಜಾ ಮತ್ತು ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. 2024ರ ಕೊನೆಯ ದಿನ ಸಹ ಸಿಸಿಬಿಯ ನಾರ್ಕೊಟಿಕ್ಸ್ ವಿಭಾಗ ನಗರ ಪಾರ್ಟಿಗಳ ಮೇಲೆ ಕಣ್ಣಿಟ್ಟಿತ್ತು.

ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮೂರು ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದ್ದಾರೆ. 

Tags:    

Similar News