Price Hike | ಹಾಲಾಯ್ತು... ಈಗ ಕುಡಿಯುವ ನೀರಿಗೂ ದರ ಏರಿಕೆ, ಚಹಾ ಕಾಫಿಗೂ ಬೆಲೆಯೇರಿಕೆ
ಮೆಟ್ರೋ, ಬಸ್, ವಿದ್ಯುತ್, ಹಾಲು, ಡೀಸೆಲ್ ದರ ಹೆಚ್ಚಳದ ನಂತರ ಇದೀಗ ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ದರ ಪ್ರತಿ ಲೀಟರ್ ನೀರಿಗೆ 1ರಿಂದ 3 ಪೈಸೆಯಷ್ಟು ಹೆಚ್ಚಳವಾಗಲಿದೆ.;
ಮೆಟ್ರೋ, ಬಸ್, ವಿದ್ಯುತ್, ಹಾಲು, ಡೀಸೆಲ್ ದರ ಹೆಚ್ಚಳದ ನಂತರ ಇದೀಗ ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ದರ ಪ್ರತಿ ಲೀಟರ್ ನೀರಿಗೆ 1ರಿಂದ 3 ಪೈಸೆಯಷ್ಟು ಹೆಚ್ಚಳವಾಗಲಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೀರಿನ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಮಂಡಳಿಯ ಅಧಿಕಾರಿಗಳು ಸಿದ್ದತೆಗಳನ್ನು ನಡೆಸುತ್ತಿದ್ದು, ದರ ಹೆಚ್ಚಳ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಡಿಸಿಎಂ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಬಿಡಬ್ಲ್ಯೂಎಸ್‌ಎಸ್‌ಬಿ ನೀರಿನ ದರವನ್ನು ಲೀಟರ್‌ಗೆ ಒಂದು ಪೈಸೆ ಹೆಚ್ಚಿಸುವುದು ಅನಿವಾರ್ಯವಾಗಿದ್ದು, ಜನರ ಮೇಲೆ ಹೊರೆಯಾಗದಂತೆ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಬಿಡಬ್ಲ್ಯೂಎಸ್‌ಎಸ್‌ಬಿ ತೀವ್ರ ಒತ್ತಡದಲ್ಲಿದೆ. ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಈ ಹೆಚ್ಚಳ ಅತ್ಯಗತ್ಯವಾಗಿದೆ. ಜಲಮಂಡಳಿಗೆ ವಾರ್ಷಿಕ 1 ಸಾವಿರ ಕೋಟಿ ರೂ. ನಷ್ಟವುಂಟಾಗುತ್ತಿದೆ. ಹಾಗೆಯೇ, ಮುಂದಿನ ಹಂತದ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾದರೆ ದರ ಏರಿಕೆ ಅನಿವಾರ್ಯವಾಗಿದೆ.
ಅಲ್ಲದೆ, ಜನರೂ ನೀರಿನ ಪ್ರಾಮುಖ್ಯತೆ ಅರಿಯಬೇಕು. ಕಳೆದ 13 ವರ್ಷಗಳಲ್ಲಿ ಯಾವುದೇ ಹೆಚ್ಚಳವಾಗದ ಕಾರಣ ಸುಂಕವನ್ನು ಲೀಟರ್ ಗೆ 7 ಪೈಸೆ ಹೆಚ್ಚಿಸಲು ಮಂಡಳಿ ಬಯಸಿತ್ತು. ಆದರೆ, ಕೇವಲ ಒಂದು ಪೈಸೆ ದರ ಹೆಚ್ಚಿಸುವಂತೆ ಅಧಿಕಾರಿಗಳ ಮನವೊಲಿಸಲಾಗಿದೆ ಎಂದರು.
ಕಾಫಿ, ಟೀ ಬೆಲೆಯೇರಿಕೆ
ಹಾಲಿನ ದರ ಏರಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನ ಅನೇಕ ಹೋಟೆಲ್‌ಗಳು ಮತ್ತು ದರ್ಶಿನಿಗಳಲ್ಲಿ ಕಾಫಿ ಮತ್ತು ಚಹಾ ದರ ಏರಿಕೆಯಾಗಿದೆ.
ಕಾಫಿ, ಟೀ ಬೆಲೆ 3 ರಿಂದ 5 ರೂಪಾಯಿವರೆಗೆ ದರ ಹೆಚ್ಚಳವಾಗಿದೆ. ಆದರೆ, ಕಾಫಿ ಮತ್ತು ಚಹಾ ದರ ಏರಿಕೆ ವಿಚಾರವಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಈವರೆಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ 4 ರೂಪಾಯಿ ಹೆಚ್ಚಳವಾಗಿರುವುದರಿಂದ ಅನಿವಾರ್ಯವಾಗಿ ಕಾಫಿ ಮತ್ತು ಚಹಾದ ದರ ಹೆಚ್ಚಳ ಮಾಡಬೇಕಾಗಿದೆ. ಅದೇ ರೀತಿ ಇತರ ಹಾಲಿನ ಉತ್ಪನ್ನಗಳ ದರ ಕೂಡ ಏರಿಕೆ ಮಾಡಬೇಕಾಗುತ್ತದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ ಕೆಲವು ದಿನಗಳ ಹಿಂದೆ ಹೇಳಿಕೆ ನೀಡಿದ್ದರು.
ಹಾಲಿನ ಉತ್ಪನ್ನಗಳ ಬೆಲೆಯೂ ಏರಿಕೆ!
ಕಾಫಿ, ಚಹಾ ಮಾತ್ರವಲ್ಲದೆ ಹಾಲಿನಿಂದ ತಯಾರಿಸುವ ಇತರ ಉತ್ಪನ್ನಗಳ ಬೆಲೆಯೂ ಏರಿಕೆಯಾಗಲಿದೆ. ಹಾಲಿನ ಉತ್ಪನ್ನಗಳಾದ ಫೇಡಾ, ಪನ್ನೀರ್ ಇತ್ಯಾದಿಗಳ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಹಾಲಿನ ದರ ಹೆಚ್ಚಳದಿಂದ ಇತರ ಉತ್ಪನ್ನಗಳ ತಯಾರಿಕಾ ವೆಚ್ಚವೂ ಹೆಚ್ಚಾಗುತ್ತಿದೆ. ಹೀಗಾಗಿ ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಿಸುತ್ತೇವೆ ಎಂದು ಬೆಂಗಳೂರಿನ ಹೋಟೆಲ್ ಮಾಲೀಕರೊಬ್ಬರು ತಿಳಿಸಿದ್ದಾರೆ.
ಕಾಫಿ ಪುಡಿ ದರವೂ ಏರಿಕೆ
ಕಾಫಿ ಪುಡಿಯ ದರ ಕೂಡ ಕೆಲವು ವಾರಗಳ ಹಿಂದೆ ಹೆಚ್ಚಾಗಿತ್ತು. ಇದು ಕೂಡ ಕಾಫಿ ದರ ಏರಿಕೆಗೆ ಕಾರಣವಾಗಿದೆ. ಫೆಬ್ರವರಿ ಕೊನೆಯ ವಾರದ ವೇಳೆಗೆ ಹುರಿದ ಕಾಫಿ ಪುಡಿಯ ಬೆಲೆ ಪ್ರತಿ ಕೆಜಿಗೆ 100 ರೂ.ಗಳಷ್ಟು ಹೆಚ್ಚಾಗಿತ್ತು. ಇದು ಮತ್ತೆ ಕೆಜಿಗೆ 100 ರೂ.ಗಳಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಇತ್ತೀಚೆಗೆ ಇಂಡಿಯನ್ ಕಾಫಿ ರೋಸ್ಟರ್ಸ್ ಅಸೋಸಿಯೇಷನ್ ಮತ್ತು ಕಾಫಿ ಮಂಡಳಿ ಅಧಿಕಾರಿಗಳು ತಿಳಿಸಿದ್ದರು.
ಕಾಫಿ ಪುಡಿ ದರ ಹೆಚ್ಚಳವಾದ ಕಾರಣ ಮಾರಾಟಗಾರರು ಒಂದು ಕಪ್ ಕಾಫಿಯ ಬೆಲೆಯನ್ನು ಸುಮಾರು 5 ರೂ.ಗಳಷ್ಟು ಹೆಚ್ಚಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಚಿಕೋರಿ ಮಿಶ್ರಣವು ಗುಣಮಟ್ಟ ಮತ್ತು ಸುವಾಸನೆಯ ಮೇಲೆ ಪರಿಣಾಮ ಬೀರುವುದರಿಂದ ನಾವು ಅದರ ಪ್ರಮಾಣ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಇಂಡಿಯನ್ ಕಾಫಿ ರೋಸ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷರು ಕೆಲವು ದಿನಗಳ ಹಿಂದೆ ತಿಳಿಸಿದ್ದರು. ಅದೀಗ ನಿಜವಾಗಿದೆ.