ಮುಖ್ಯಮಂತ್ರಿ ಬದಲಾವಣೆ ಹೇಳಿಕೆ ನೀಡಿದರೆ ನೋಟಿಸ್: ಕಾಂಗ್ರೆಸ್ ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆ

ಪಕ್ಷದಲ್ಲಿ ಒಗ್ಗಟ್ಟನ್ನು ಕಾಪಾಡಲು ಮತ್ತು ಅನಗತ್ಯ ವಿವಾದಗಳಿಗೆ ಕಡಿವಾಣ ಹಾಕಲು ಈ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಸ್ಪಷ್ಟಪಡಿಸಿದ್ದಾರೆ.;

Update: 2025-07-01 13:17 GMT

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳ ನಡುವೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಶಾಸಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. "ತಮ್ಮನ್ನು ಮುಂದಿನ ಮುಖ್ಯಮಂತ್ರಿ ಎಂದು ಯಾರಾದರೂ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ, ಅವರಿಗೆ ನೋಟಿಸ್ ಜಾರಿ ಮಾಡಲಾಗುವುದು" ಎಂದು ಅವರು ಖಡಾಖಂಡಿತವಾಗಿ ತಿಳಿಸಿದ್ದಾರೆ.

ಪಕ್ಷದಲ್ಲಿ ಒಗ್ಗಟ್ಟನ್ನು ಕಾಪಾಡಲು ಮತ್ತು ಅನಗತ್ಯ ವಿವಾದಗಳಿಗೆ ಕಡಿವಾಣ ಹಾಕಲು ಈ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮಗಳ ಮೂಲಕ, "ನಮ್ಮ ನಾಯಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. ಈ ಅವಧಿಯಲ್ಲೇ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಬೇಕು. ಅದಕ್ಕೆ ಪಕ್ಷದಲ್ಲಿರುವ ಶಾಸಕರ ಬೆಂಬಲವೂ ಇದೆ. ಈ ಕುರಿತು, ಹೈಕಮಾಂಡ್ ತೀರ್ಮಾನ ಕೈಗೊಳ್ಳಬೇಕಷ್ಟೆ" ಎಂದು ಹೇಳಿದ್ದ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರಿಗೆ ನೋಟಿಸ್ ಜಾರಿ ಮಾಡುವುದಾಗಿ ಶಿವಕುಮಾರ್ ಘೋಷಿಸಿದ್ದಾರೆ. ಈ ಎಚ್ಚರಿಕೆಯನ್ನು ಬಿ.ಆರ್. ಪಾಟೀಲ್ ಮತ್ತು ಬಾಲಕೃಷ್ಣ ಸೇರಿದಂತೆ ಎಲ್ಲ ಶಾಸಕರಿಗೂ ಅನ್ವಯಿಸುತ್ತದೆ ಎಂದು ಅವರು ಹೇಳಿದ್ದಾರೆ. ಮಂಗಳವಾರ ಸಂಜೆ ಅಥವಾ ಬುಧವಾರದೊಳಗೆ (ನಾಳೆಯೊಳಗೆ) ನೋಟಿಸ್ ಜಾರಿ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಎಐಸಿಸಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಅವರು ಶಾಸಕರೊಂದಿಗೆ ನಡೆಸುತ್ತಿರುವ ಮುಖಾಮುಖಿ ಸಭೆಗಳ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, "ಯಾವುದೇ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆಯಿಲ್ಲ. ಇದು ಕೇವಲ ಪಕ್ಷದ ಸಂಘಟನೆಗೆ ಸಂಬಂಧಿಸಿದ ಚರ್ಚೆ ಮಾತ್ರ," ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಬಲಪಡಿಸುವ ತಮ್ಮ ಬದ್ಧತೆಯನ್ನು ಸಹ ಅವರು ಪುನರುಚ್ಚರಿಸಿದ್ದಾರೆ. 

Tags:    

Similar News