ಕತ್ತೆ ಹಾಲಿನ ವ್ಯವಹಾರ | 'ಜೆನ್ನಿ ಮಿಲ್ಕ್' ಕಂಪನಿ ವಿರುದ್ಧ ಸಾಲುಸಾಲು ದೂರು
ರೈತರಿಗೆ ಕತ್ತೆ ನೀಡಿ ಅವರಿಂದ ಹಾಲು ಖರೀದಿಸುವ ವ್ಯವಹಾರ ನಡೆಸುತ್ತಿದ್ದ 'ಜೆನ್ನಿ ಮಿಲ್ಕ್' ಕಂಪನಿ ವಿರುದ್ಧ ವಿಜಯನಗರ ಜಿಲ್ಲೆಯ ಹೊಸಪೇಟೆ ಠಾಣೆಯಲ್ಲಿ ಸಾಲು ಸಾಲು ವಂಚನೆ ದೂರು ದಾಖಲಾಗಿವೆ.;
ರೈತರಿಗೆ ಕತ್ತೆ ನೀಡಿ ಅವರಿಂದ ಹಾಲು ಖರೀದಿಸುವ ವ್ಯವಹಾರ ನಡೆಸುತ್ತಿದ್ದ 'ಜೆನ್ನಿ ಮಿಲ್ಕ್' ಕಂಪನಿ ವಿರುದ್ಧ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರ ಠಾಣೆಯಲ್ಲಿ ಹಲವು ರೈತರು ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಹೊಸಪೇಟೆ ಮತ್ತು ಸುತ್ತಮುತ್ತಲ ಪ್ರದೇಶದ 60ಕ್ಕೂ ಅಧಿಕ ಮಂದಿ ರೈತರು ಕಂಪನಿಯಿಂದ ಮೋಸಹೋಗಿರುವುದಾಗಿ ದೂರು ನೀಡಿದ್ದಾರೆ. ಅಲ್ಲದೆ, ಹೊಸಪೇಟೆಯಷ್ಟೇ ಅಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳ ಹಲವಾರು ಮಂದಿ ರೈತರು ಕೂಡ ಒಬ್ಬೊಬ್ಬರಾಗಿ ಬಂದು ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಾರೆ. ಮುಖ್ಯ ಆರೋಪಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನೂತಲಪತಿ ಮುರಳಿ ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
'ರಾಜ್ಯದ ವಿವಿಧೆಡೆ 100ರಿಂದ 120 ಮಂದಿ ಮೋಸ ಹೋಗಿರುವ ಶಂಕೆ ಇದೆ. ಒಟ್ಟಾರೆ 300 ಮಂದಿ ಈ ವ್ಯವಹಾರದಲ್ಲಿ ಹಣ ತೊಡಗಿಸಿರುವ ಮಾಹಿತಿ ಇದೆ. ಇನ್ಸ್‌ಪೆಕ್ಟರ್ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಆರೋಪಿಗಳ ಪತ್ತೆಗಾಗಿ ಮೂರು ತಂಡ ರಚಿಸಲಾಗಿದೆ. ಮುರಳಿ ಅವರು ವಿದೇಶಕ್ಕೆ ಹೋಗಿದ್ದಾರೆ ಎಂಬ ವದಂತಿ ಇದ್ದರೂ ಅದರ ಸತ್ಯಾಸತ್ಯತೆ ತಿಳಿಯಬೇಕಿದೆ. ವಿಮಾನನಿಲ್ದಾಣಗಳೂ ಸೇರಿದಂತೆ ಎಲ್ಲೆಡೆ ಮುರಳಿ, ಮ್ಯಾನೇಜರ್ ಶಂಕರ್ ರೆಡ್ಡಿ ಮತ್ತು ಇತರ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ' ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮೋಸ ಹೋಗಿರುವ ಕುರಿತು ಇನ್ನಷ್ಟು ಜನರು ದೂರು ನೀಡಲು ಬರುತ್ತಿದ್ದಾರೆ. ಹೆಚ್ಚಿನ ತನಿಖೆ ಅಗತ್ಯವಿರುವುದರಿಂದ ಮತ್ತೊಂದು ವಿಶೇಷ ತಂಡ ರಚಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಕಂಪನಿಯ ಎಂ.ಡಿ ನೂತಲಪತಿ ಮುರಳಿ ಅವರು ತಮ್ಮ ಗ್ರಾಹಕರಿಗೆ ಮೂರು ಪುಟಗಳ ಪತ್ರವನ್ನು ವಾಟ್ಸ್‌ಆ್ಯಪ್ ಮೂಲಕ ರವಾನಿಸಿದ್ದು, ತಾವು ಗ್ರಾಹಕರಿಗೆ ಮೋಸ ಮಾಡಿಲ್ಲ, ನಿರಂತರ ಹಣ ಸಂದಾಯ ಮಾಡಲಾಗುತ್ತಿತ್ತು. ಸೆ.17ರಂದು ಹೊಸಪೇಟೆಯಲ್ಲಿನ ಕಚೇರಿ ಮುಚ್ಚಿದ್ದರಿಂದಲೇ ಇದೀಗ ಗ್ರಾಹಕರಿಂದ ದೂರ ಹೋಗುವಂತಾಗಿದೆ ಎಂದು ಹೇಳಿಕೊಂಡಿದ್ದಾರೆ.
'ನಾನು ನನ್ನ ಗ್ರಾಹಕರಿಗೆ ಈಗಾಗಲೇ 4 ಕೋಟಿ ರೂ. ಕೊಟ್ಟಿದ್ದೇನೆ. ಕಚೇರಿ ತೆರೆಯುವುದು, ಮೂಲಸೌಲಭ್ಯಕ್ಕಾಗಿ ಸಾಕಷ್ಟು ಖರ್ಚು ಮಾಡಿದ್ದೇನೆ. ನನ್ನ ಕಂಪನಿಯ ಮ್ಯಾನೇಜರ್ ಶಂಕರ್ ರೆಡ್ಡಿ ನನಗೆ ಮೋಸ ಮಾಡಿದ್ದಾರೆ. ಹಾಲಿನಲ್ಲಿ ನೀರು ಬೆರೆಸಿ ತಂದು ಕೊಟ್ಟಿದ್ದರೂ ಅದನ್ನು ಸರಿಯಾಗಿ ಗಮನಿಸದೆ ಹಾಲು ತಿರಸ್ಕೃತಗೊಳ್ಳುವಂತೆ ಮಾಡಿದ್ದಾರೆ. ಅದರಿಂದ ನನಗೆ ಭಾರಿ ನಷ್ಟವಾಗಿದೆ. ಹೊಸಪೇಟೆಯ ಇಬ್ಬರು ನನ್ನಿಂದ ಹಣ ಪಡೆದಿದ್ದಾರೆ, ಮೂವರು ಸರ್ಕಾರಿ ಅಧಿಕಾರಿಗಳೂ ಹಣ ಪಡೆದಿದ್ದಾರೆ. ನಾನು ಮತ್ತು ನನ್ನ ಕುಟುಂಬದ ಎಲ್ಲಾ ಬಂಡವಾಳವನ್ನೂ ಇದೇ ಕಂಪನಿಯಲ್ಲಿ ತೊಡಗಿಸಿದ್ದೆವು. ನಮಗೆ ಬಹಳ ನಷ್ಟವಾಗಿದೆ. ನಾವೀಗ ದುಬೈಗೆ ಹೋಗ್ತಿದ್ದೇವೆ' ಎಂದು ಪತ್ರದಲ್ಲಿ ನಮೂದಿಸಿದ್ದಾರೆ ಎನ್ನಲಾಗಿದೆ.
ಪ್ರಕರಣವೇನು?
ಸುಮಾರು ಆರು ತಿಂಗಳಿಂದ ಕಾರ್ಯಾಚರಿಸುತ್ತಿದ್ದ ಕಂಪನಿಯ ವ್ಯವಹಾರದ ಬಗ್ಗೆ ಸಂಶಯ ವ್ಯಕ್ತಪಡಿಸಿ ಕೆಲವು ದಿನಗಳ ಹಿಂದೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿತ್ತು. ಅದರ ಬಳಿಕವೂ ಕಂಪನಿಯ ವ್ಯವಹಾರ ಮುಂದುವರಿದೇ ಇತ್ತು. ಕಂಪನಿಯ ಬಗ್ಗೆ ಸಂಶಯ ಬಲವಾದ ಕಾರಣ ಸೆ.17ರಂದು ಜಿಲ್ಲಾ ಯೋಜನಾ ಕೋಶದ ಯೋಜನಾ ನಿರ್ದೇಶಕ ಮನೋಹರ್ ಮತ್ತು ನಗರಸಭೆ ಅಧಿಕಾರಿಗಳು ಕಚೇರಿಗೆ ತೆರಳಿ ವ್ಯಾಪಾರ ಪರವಾನಗಿ ಇಲ್ಲದೆ ಕಚೇರಿ ಆರಂಭಿಸಿದ್ದನ್ನು ಪತ್ತೆಹಚ್ಚಿದ್ದರು ಹಾಗೂ ಅದೇ ಕಾರಣಕ್ಕೆ ಕಚೇರಿ ಮುಚ್ಚಿಸಿದ್ದರು.
ಆದರೆ ಇಷ್ಟರಲ್ಲಾಗಲೇ ಸುಮಾರು 300 ರಷ್ಟು ಮಂದಿ ಕತ್ತೆಗಾಗಿ ಸುಮಾರು ₹10 ಕೋಟಿ ಮೊತ್ತವನ್ನು ಕಂಪನಿಗೆ ಪಾವತಿಸಿದ್ದರು. ಈ ಪೈಕಿ ಸುಮಾರು 200 ಮಂದಿಗೆ ಕತ್ತೆ ಲಭಿಸಿದ್ದು, 100ಕ್ಕೂ ಅಧಿಕ ಮಂದಿಗೆ ಕತ್ತೆ ಸಿಗುವುದು ಬಾಕಿ ಇದೆ. ಕೆಲವರಿಗೆ ಹಾಲು ಮಾರಾಟ ಮಾಡಿ ₹ 50 ಸಾವಿರಕ್ಕೂ ಅಧಿಕ ಹಣ ಸಿಕ್ಕಿದೆ.