ʼಅಧಿಕಾರಕ್ಕೆ ಯಾರು ಶಾಶ್ವತರಲ್ಲ, ಚಕ್ರ ತಿರುಗುತ್ತಲೇ ಇರುತ್ತದೆʼ; ಡಿ.ಕೆ. ಶಿವಕುಮಾರ್‌ಗೆ ಸತೀಶ್ ಜಾರಕಿಹೊಳಿ ಮಾರ್ಮಿಕ ಸಂದೇಶ
ಈ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಬಣ ರಾಜಕೀಯದ ಛಾಯೆ ಆಗಾಗ ಕಾಣುತ್ತಲೇ ಇದೆ. ಈಗ ರಾಮನಗರ ಜಿಲ್ಲೆಯ ಮರುನಾಮಕರಣ ಸಂಬಂಧ ತಮ್ಮ ಅಸಮಾಧಾನವನ್ನು ಮೇಲಿನ ಮಾತುಗಳನ್ನು ಹೇಳುವ ಮೂಲಕ ವ್ಯಕ್ತಪಡಿಸಿದ್ದಾರೆ.;
ರಾಮನಗರವನ್ನು ಬೆಂಗಳೂರು ದಕ್ಷಿಣಜಿಲ್ಲೆ ಎಂದು ನಾಮಕರಣ ಮಾಡುವ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಯತ್ನ ನಡೆಸಿ ಯಶಸ್ವಿಯಾದರೂ, ಅವರ ರಾಜಕೀಯ ವಿರೋಧಿ ಸಚಿವ ಸತೀಶ್ ಜಾರಕಿಹೊಳಿ ಅವರು, "ಅಧಿಕಾರಕ್ಕೆ ಯಾರೂ ಶಾಶ್ವತರಲ್ಲ," ಎನ್ನುವ ಮೂಲಕ ಮಾರ್ಮಿಕ ಹೇಳಿಕೆ ನೀಡಿದ್ದಾರೆ.
ಪತ್ರಕರ್ತರ ಜತೆ ಮಾತನಾಡಿದ ಅವರು, "ಅಧಿಕಾರಕ್ಕೆ ಯಾರು ಶಾಶ್ವತರಲ್ಲ. ಚಕ್ರ ತಿರುಗುತ್ತಲೇ ಇರುತ್ತದೆ," ಎನ್ನುವ ಮೂಲಕ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. "ಸಮಯ ಸರಿಯಾಗಿಲ್ಲದಿದ್ದರೆ ಏನು ಮಾಡಲಾಗದು. ನೀರು ಇದ್ದಾಗ ಅಷ್ಟೇ ಜಿಗಿಯಬಹುದು," ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ್ ಜಾರಕಿಹೊಳಿ ಸಂದೇಶ ರವಾನೆ ಮಾಡಿದ್ದಾರೆ
"ಉತ್ತರ ಪ್ರದೇಶದಲ್ಲೂ ಅನೇಕ ಊರುಗಳ ಹೆಸರು ಬದಲಾವಣೆ ಮಾಡಲಾಗಿದೆ. ನಮ್ಮ ರಾಜ್ಯದಲ್ಲೂ ಹೊಸಪೇಟೆ, ವಿಜಯನಗರ ನಾಮಕರಣ ಮಾಡಲಾಗಿದೆ. ಅದೇ ರೀತಿ ಏನೋ ಉದ್ದೇಶ ಇಟ್ಟುಕೊಂಡು ಡಿಸಿಎಂ ಡಿಕೆ ಶಿವಕುಮಾರ್ ಈ ರೀತಿ ಮಾಡಿರಬಹುದು. ಆದರೆ ಅಧಿಕಾರಕ್ಕೆ ಯಾರೂ ಶಾಶ್ವತರಲ್ಲ, ಚಕ್ರ ತಿರುಗುತ್ತಲೇ ಇರುತ್ತದೆ," ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಬಣ ರಾಜಕೀಯದ ಛಾಯೆ ಆಗಾಗ ಕಾಣುತ್ತಲೇ ಇದೆ. ಈಗ ರಾಮನಗರ ಜಿಲ್ಲೆಯ ಮರುನಾಮಕರಣ ಸಂಬಂಧ ತಮ್ಮ ಅಸಮಾಧಾನವನ್ನು ಮೇಲಿನ ಮಾತುಗಳನ್ನು ಹೇಳುವ ಮೂಲಕ ವ್ಯಕ್ತಪಡಿಸಿದ್ದಾರೆ.
ಜತೆಗೆ, ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಕಡುವೈರಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆ ಹೆಸರು ಬದಲಾವಣೆ ಸಂಬಂಧ ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ರಾಜ್ಯ ಸರ್ಕಾರದಿಂದ ರಾಮನಗರ ಹೆಸರು ಬದಲಾವಣೆ ಪ್ರಸ್ತಾಪವನ್ನೂ ಕೇಂದ್ರ ನಿರಾಕರಿಸುವ ವಿಷಯದಲ್ಲಿ ಕುಮಾರಸ್ವಾಮಿ ಪಾತ್ರವಿತ್ತು ಎನ್ನಲಾಗಿದೆ. ಆದರೆ, ಎಚ್.ಡಿ. ಕುಮಾರಸ್ವಾಮಿ ಮತ್ತು ಸತೀಶ್ ಜಾರಕಿಹೊಳಿ ಈ ಹಿಂದೆ ಭೇಟಿಯಾಗುವ ಮೂಲಕ ಡಿಕೆಶಿ ಅವರಿಗೆ ಪರೋಕ್ಷ ಸಂದೇಶ ನೀಡಿದ್ದರು. ಜತೆಗೆ, ಸಿದ್ದರಾಮಯ್ಯ ಅವರ ಸಿಎಂ ಹುದ್ದೆ ಪಲ್ಲಟವಾದಲ್ಲಿ ತಾವೂ ಅಭ್ಯರ್ಥಿ ಎನ್ನುವ ಮೂಲಕ ಸತೀಶ್ ಜಾರಕಿಹೊಳಿ ಅವರು ಡಿ.ಕೆ. ಶಿವಕುಮಾರ್ ʼಸಿಎಂ ಹುದ್ದೆ ಆಸೆ"ಗೆ ತಡೆಯಾಗಿ ಪರಿಣಮಿಸಿದ್ದಾರೆ.
ಈಗ ರಾಮನಗರ ಹೆಸರು ಬದಲಾವಣೆ ವಿಚಾರದಲ್ಲಿ ಅವರು ನೀಡಿದ ಹೇಳಿಕೆಗಳು ಮತ್ತೆ ಸತೀಶ್ ಜಾರಕಿಹೊಳಿ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಶೀತಲ ಸಮರದ ಬಗ್ಗೆ ಚರ್ಚೆ ನಡೆಯುವಂತೆ ಮಾಡಿದೆ.
ಡಿಕೆಶಿ vs ಜಾರಕಿಹೊಳಿ ಶೀತಲ ಸಮರ ಹಿನ್ನೆಲೆ
ಬೆಳಗಾವಿ ಜಿಲ್ಲೆಗೇ ಸೀಮಿತವಾಗಿದ್ದ ಒಂದು ಸಂಗತಿ, ʼಸಾಹುಕಾರ್ʼ ಜಾರಕಿಹೊಳಿ ಮತ್ತು ʼಕನಕಪುರ ಬಂಡೆʼ ಡಿಕೆ ಶಿವಕುಮಾರ್ ನಡುವಿನ ರಾಜಕೀಯ ಜಿದ್ಧಾಜಿದ್ದಿಯ ಕಾರಣಕ್ಕೆ ರಾಜ್ಯ ರಾಜಕಾರಣದ ಮೇಲೂ ಕರಿನೆರಳು ಚಾಚಿದೆ.
ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಸಚಿವೆ ಹೆಬ್ಬಾಳ್ಕರ್ ಗೆ ಅಪಮಾನಕರ ಬೈಗುಳ ಬಳಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸಿ ಟಿ ರವಿ ಅವರನ್ನು ಪೊಲೀಸರು ರಾತ್ರಿ ಇಡೀ ಜಿಲ್ಲೆಯಾದ್ಯಂತ ಸುತ್ತಾಡಿಸಿದ ಘಟನೆ ಕುರಿತು ಪ್ರತಿಕ್ರಿಯಿಸಿದ್ದ ಸತೀಶ್ ಜಾರಕಿಹೊಳಿ, ಪೊಲೀಸರ ನಡೆಯನ್ನು ಬಹಿರಂಗವಾಗಿ ಟೀಕಿಸುವ ಮೂಲಕ ಪ್ರಕರಣದ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಕ್ಷದ ʼಚುಕ್ಕಾಣಿ ಹಿಡಿದವರುʼ ಹುಕುಂ ಚಲಾಯಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಅದಾದ ಬೆನ್ನಲ್ಲೇ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ನೆನಪಿನ ಹಿನ್ನೆಲೆಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಕಾರ್ಯಕಾರಿಣಿ ಮತ್ತು ʼಗಾಂಧಿ ಭಾರತʼ ಕಾರ್ಯಕ್ರಮದ ವಿಷಯದಲ್ಲಿ ಕೂಡ ಕೆಪಿಸಿಸಿ ಅಧ್ಯಕ್ಷರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಚಿವೆ ಹೆಬ್ಬಾಳ್ಕರ್ ಮೂಲಕ ಎಲ್ಲವನ್ನೂ ನಿಯಂತ್ರಣಕ್ಕೆ ಪಡೆದುಕೊಂಡರು. ಆ ಕಾರ್ಯಕ್ರಮದಲ್ಲಿ ತಮ್ಮನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲಾಯಿತು ಎಂಬ ಅಸಮಾಧಾನವನ್ನು ಕೂಡ ಸತೀಶ್ ಜಾರಕಿಹೊಳಿ ಹೊರಹಾಕಿದ್ದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪಟ್ಟು
ಈ ಎಲ್ಲಾ ಸರಣಿ ಸಂಘರ್ಷಗಳ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ವಿಷಯದಲ್ಲಿ ಸತೀಶ್ ಜಾರಕಿಹೊಳಿ ಸಿಡಿದೆದ್ದಿದ್ದಾರೆ. ಪಕ್ಷದ ನಿಯಮದಂತೆ ಒಬ್ಬರಿಗೆ ಒಂದೇ ಹುದ್ದೆ ಎಂಬುದನ್ನು ಪಾಲಿಸಬೇಕು. ಡಿಸಿಎಂ ಹುದ್ದೆಯನ್ನೂ ಹೊಂದಿರುವ ಕೆಪಿಸಿಸಿ ಅಧ್ಯಕ್ಷರು ಪಕ್ಷದ ಅಧ್ಯಕ್ಷ ಸ್ಥಾನವನ್ನು ಈಗಲಾದರೂ ಬಿಟ್ಟುಕೊಡಬೇಕು. ಹೆಚ್ಚು ಮತ ತರುವಂತಹ ಸಾಮರ್ಥ್ಯ ಇರುವ ನಾಯಕರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂದು ಸತೀಶ್ ಪ್ರತಿಪಾದಿಸುತ್ತಿದ್ದಾರೆ.
ಜಾರಕಿಹೊಳಿ ಅವರ ಈ ಪಟ್ಟಿನ ಹಿಂದೆ ಬೆಳಗಾವಿಯ ರಾಜಕಾರಣದಲ್ಲಿ ಕೆಪಿಸಿಸಿ ಅಧ್ಯಕ್ಷರು ಸಾಧಿಸುತ್ತಿರುವ ಹಿಡಿತವೇ ಪ್ರಬಲವಾಗಿ ಕೆಲಸ ಮಾಡಿದೆ ಎನ್ನಲಾಗಿದೆ.
ಆದರೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಒತ್ತಡ ಪಕ್ಷದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹೆಚ್ಚು ದಿನ ಆ ಕೂಗನ್ನು ಹತ್ತಿಕ್ಕಲಾಗದು ಎಂಬ ವಾತಾವರಣವಂತೂ ನಿರ್ಮಾಣವಾಗಿದೆ. ಆ ದೃಷ್ಟಿಯಲ್ಲಿ ಸತೀಶ್ ಜಾರಕಿಹೊಳಿಯ ದನಿಗೂ ಗೆಲುವು ಸಿಗುವ ದಿನ ದೂರವಿಲ್ಲ ಎನ್ನಲಾಗುತ್ತಿದೆ.