ಎಚ್‌ಡಿಕೆ v/s ಡಿಕೆಶಿ| ಸೇಡಿನ ರಾಜಕೀಯದ ಕೆಸರೆರೆಚಾಟ; ಮರೆತ ಹುದ್ದೆಯ ಘನತೆ

ಇಬ್ಬರೂ ನಾಯಕರು ಸಾರ್ವಜನಿಕ ವೇದಿಕೆಗಳಲ್ಲಿ ಮಾಡುತ್ತಿರುವ ಭಾಷಣಗಳು, ಆಡುತ್ತಿರುವ ಮಾತುಗಳು, ಇಬ್ಬರೂ ನಾಯಕರ ಸೇಡಿನ ರಾಜಕೀಯಕ್ಕೆ ಪುರಾವೆಗಳಷ್ಟೇ.;

Update: 2024-08-05 02:30 GMT

ಒಬ್ಬರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಇನ್ನೊಬ್ಬರು ಅನೇಕ ಬಾರಿ ಮಂತ್ರಿಗಳಾಗಿ, ಈಗ ಉಪಮುಖ್ಯಮಂತ್ರಿಯಾಗಿರುವವರು. ಒಬ್ಬರು ಪ್ರಾದೇಶಿಕ ಪಕ್ಷವೊಂದರ ರಾಜ್ಯಾಧ್ಯಕ್ಷರು, ಇನ್ನೊಬ್ಬರು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರು.

ಹಳೇ ಮೈಸೂರು ಪ್ರಾಂತ್ಯದ ಒಕ್ಕಲಿಗ ನಾಯಕತ್ವಕ್ಕೆ ಪ್ರಬಲ ಪೈಪೋಟಿ ನೀಡುತ್ತಿರುವ ಉಭಯ ನಾಯಕರು- ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ (ಎಚ್‌ಡಿಕೆ) ಮತ್ತು ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್‌ (ಡಿಕೆಶಿ).

ಮುಡಾ, ವಾಲ್ಮೀಕಿ ನಿಗಮ ಹಗರಣಗಳು ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿ ಎನ್‌ಡಿಎ ಮಿತ್ರ ಪಕ್ಷಗಳಾದ ಜೆಡಿಎಸ್‌ ಮತ್ತು ಬಿಜೆಪಿ ಹಮ್ಮಿಕೊಂಡಿರುವ ರಾಜ್ಯದ ಕಾಂಗ್ರೆಸ್‌ ಸರ್ಕಾರದ ವಿರುದ್ಧದ ಪಾದಯಾತ್ರೆ ಮತ್ತು ಅದರ ವಿರುದ್ಧ ಕಾಂಗ್ರೆಸ್‌ನ ಜನಾಂದೋಲನ ಕಾರ್ಯಕ್ರಮಗಳಲ್ಲಿ ಇಬ್ಬರೂ ನಾಯಕರು ಸಾರ್ವಜನಿಕ ವೇದಿಕೆಗಳಲ್ಲಿ ಮಾಡುತ್ತಿರುವ ಭಾಷಣಗಳು, ಆಡುತ್ತಿರುವ ಮಾತುಗಳು, ಇಬ್ಬರೂ ನಾಯಕರ ಸೇಡಿನ ರಾಜಕೀಯಕ್ಕೆ ಪುರಾವೆಗಳಷ್ಟೇ. ಆದರೆ, ಇಬ್ಬರ ಘನತೆಗೂ ಮಸಿ ಬಳಿಯುವಂತಿರುವ ಏಕವಚನದ, ಕೆಳದರ್ಜೆಯ ಭಾಷೆಯ ಬಳಕೆ ಜನರಿಗೆ ʼಪುಕ್ಕಟೆ ಮನೋರಂಜನೆʼ ಒದಗಿಸಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಇಬ್ಬರೂ ನಾಯಕರು ತಮ್ಮ ಭಾಷಣಗಳಲ್ಲಿ ಪರಸ್ಪರ ಆಸ್ತಿ, ರಾಜಕೀಯ ಮತ್ತಿತರ ವಿಷಯಗಳ ಬಗ್ಗೆ ಕೆಸರು ಎರಚಿಕೊಂಡಿದ್ದು ಹೇಗೆ ಎಂಬ ಬಗ್ಗೆ ಈ ಆಯ್ದ ಭಾಗಗಳಲ್ಲಿ ಕಾಣಬಹುದು. ಇವು ಇಬ್ಬರ ಪ್ರಶ್ನೋತ್ತರವಲ್ಲ. ಬದಲಿಗೆ ಆರೋಪಗಳಿಗೆ ಪ್ರತಿ ಆರೋಪ ಹಾಗೂ ಪರಸ್ಪರ ಕೆಸೆರೆರಚಾಟವಷ್ಟೇ!

-------------------------

ಡಿಕೆಶಿ: ಕುಮಾರಸ್ವಾಮಿ, ನಾನು ಕೃಷಿ ಜತೆಗೆ ಉದ್ಯಮವನ್ನು ನಡೆಸುತ್ತಿದ್ದೇನೆ. ನೀನು ಮತ್ತು ನಿಮ್ಮ ಕುಟುಂಬದವರು ಯಾವ ಈರುಳ್ಳಿ, ಆಲೂಗಡ್ಡೆ ಬೆಳೆದು ಸಾವಿರಾರು ಕೋಟಿ ಸಂಪಾದಿಸಿದ್ದೀರಿ? ನೀನು ಹಿಟ್ ಅಂಡ್ ರನ್, ಬ್ಲಾಕ್ ಮೇಲರ್. ನಾನು ನಿನ್ನ ಡಿನೋಟಿಫಿಕೇಶನ್ ಪ್ರಕರಣ ಇನ್ನು ಚರ್ಚೆ ಮಾಡಿಲ್ಲ. ನಿನ್ನ ಗಣಿ ಕೇಸ್ ಇನ್ನು ಚರ್ಚೆ ಮಾಡಿಲ್ಲ. ನಿನ್ನ ಕುಟುಂಬದವರ ಆಸ್ತಿ ಇನ್ನು ಬಿಡುಗಡೆ ಮಾಡಿಲ್ಲ. ಪಟ್ಟಿ ಬಿಡುಗಡೆ ಮಾಡುತ್ತೇನೆ.

ಎಚ್‌ಡಿಕೆ: ನಾನು ನಿಮ್ಮದನ್ನು ಬಿಚ್ಚಲು ಹೋದರೆ ಪುಟಗಟ್ಟಲೆ ಇದೆ . ಆ ಹೆಣ್ಣುಮಗಳನ್ನು ಕಿಡ್ನಾಪ್ ಮಾಡಿ ಬೆದರಿಸಿ ಅವರಪ್ಪನಿಂದ ಸದಾಶಿವನಗರದಲ್ಲಿ ನಿವೇಶನ ಬರೆಸಿಕೊಂಡಿದ್ದೀರಿ. ಆ ಹೆಣ್ಣುಮಗಳನ್ನು ಕಿಡ್ನ್ಯಾಪ್ ಮಾಡಿ ಬೆದರಿಕೆ ಹಾಕಿದ್ದು ನೀವೇ ಅಲ್ಲವೇ. ಅದೇನೋ ಬಿಚ್ತೀನಿ ಅಂದ್ಯಲ್ಲಪ್ಪ, ಬಿಚ್ಚು ನೋಡೋಣ, ನಂದು ವಿಜಯೆಂದ್ರದ್ದು. ಆಮೇಲೆ ನಿನ್ನದನ್ನು ಹೇಗೆ ಬಿಚ್ಚುತೀನಿ ಎಂದು ನೋಡುವಿಯಂತೆ. ಏನಿದೆ ನಿಮ್ಮ ಬಳಿ ಬಿಚ್ಚಿ, ನಾನಿರೋದು ಬೀದಿಯಲ್ಲಿ, ನೀನಿರೋದು ಗಾಜಿನ ಮನೆಯಲ್ಲಿ .

ಡಿಕೆಶಿ: ಕುಮಾರಣ್ಣ ನೀನು ನನ್ನ ಆಸ್ತಿ ಬಗ್ಗೆ ಚರ್ಚೆ ಮಾಡುವ ಬದಲು ಮೊದಲಿನಿಂದಲೂ ಚರ್ಚೆ ಮಾಡು. ನಿನ್ನ ಸಹೋದರ ಬಾಲಕೃಷ್ಣ ಗೌಡ ಅವರ ಕುಟುಂಬ ಅವರ ತಂದೆ ಹಾಗೂ ಮೈಸೂರು, ಶ್ರೀರಂಗಪಟ್ಟಣದ ಅವರ ಸಂಬಂಧಿಗಳು ಬೇನಾಮಿಗಳು ಎಷ್ಟೆಷ್ಟು ಜಮೀನು ಹೊಂದಿದ್ದಾರೆ ಎಂದು ನೀವು ರಾಮನಗರದಲ್ಲಿ ಉತ್ತರ ನೀಡಬೇಕು. ಒಬ್ಬ ಸರ್ಕಾರಿ ನೌಕರ ಎಷ್ಟು ಸಾವಿರ ಕೋಟಿಗೆ ಇದ್ದಾನೆ, ಯಾವ ಈರುಳ್ಳಿ, ಆಲುಗಡ್ಡೆಯಲ್ಲಿ ಅದು ಸಂಪಾದನೆ ಆಯ್ತು? ಎಂದು ಲೆಕ್ಕ ಕೊಡಬೇಕು.

ಎಚ್‌ಡಿಕೆ: ಬಿಡದಿಯ ಕೇತಿಗಾನಹಳ್ಳಿ ಗ್ರಾಮದಲ್ಲಿರುವ ತಮ್ಮ ಜಮೀನಿದೆ. ನಾನು ಚಲನಚಿತ್ರ ಡಿಸ್ಟ್ರಿಬ್ಯೂಟರ್ ಆಗಿದ್ದಾಗ ಚೈನಾ ಸಾಬ್ರು ಅಂತ ಇಬ್ಬರು ಇದ್ದರು. ನೀನು ದೇವೆಗೌಡರ ಮಗ, ಬೇಸಾಯ ಮಾಡಬೇಕು. ನೀನು ರೈತನಾಗಿ ಬಾಳಿ ಬದುಕಬೇಕು ಎಂದು ಹೇಳಿ ಕರೆದುಕೊಂಡು ಹೋಗಿ ಈ ಜಾಮೀನು ತೋರಿಸಿದರು. ಆ ಜಾಗ ನೋಡಿ ನಾನು. ನೀವು ನೋಡಿದ್ರೆ ಕಲ್ಲು ಹೊಡೆಯುವ ಜಾಗ ತೋರಿಸ್ತಿದ್ದೀರಲ್ಲ ಅಂದೆ. ಆಮೇಲೆ ಕಷ್ಟಪಟ್ಟು ಒಳ್ಳೆಯ ತೋಟ ಮಾಡಿದ್ದೇನೆ. ಯಾರು ಬೇಕಾದರೂ ಬಂದು ನೋಡಬಹುದು. ನನಗೆ ಆ ಜಾಮೀನು ಮಾರಿದ ಯಾರನ್ನು ನಾನು ಕೊಟ್ಟವರನ್ನು ಯಾರನ್ನು ಮರೆತಿಲ್ಲ, ಡಿ.ಕೆ.ಶಿವಕುಮಾರ್ ಅವರೇ.. ನಿಮ್ಮ ಹಾಗೆ ಕಂಡ ಕಂಡ ಕಂಡ ಕಂಡಿದ್ದೆಲ್ಲವನ್ನೂ ಲೂಟಿ ಹೊಡೆದಿಲ್ಲ. ನಾನು ವಂಚನೆ ಮಾಡಿ ಭೂಮಿ ಖರೀದಿಸಿದ್ದಿದ್ರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ .

ಡಿಕೆಶಿ: ನೀವು ರೈತನ ಮಗ ಎಂದು ಹೇಳುತ್ತೀರಿ. ನಮ್ಮ ಹಳ್ಳಿ ಕಡೆ ಒಂದು ಮಾತು ಹೇಳುತ್ತಾರೆ. ‘ಹುಟ್ಟಿದವೆಲ್ಲಾ ಬಸವ ಆಗುವುದಿಲ್ಲ’ ಎಂದು. ಅಂದರೆ ಹಳ್ಳಿಗಳಲ್ಲಿ ಹುಟ್ಟುವ ಎಲ್ಲಾ ಕರುಗಳು ಬಸವ ಆಗಲು ಸಾಧ್ಯವಿಲ್ಲ. ಅದೇ ರೀತಿ ಎಲ್ಲರೂ ರೈತರು ರೈತರ ಮಕ್ಕಳಾಗಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ರೈತರ ರಕ್ಷಣೆಗೆ ಅನೇಕ ಕಾರ್ಯಕ್ರಮಗಳನ್ನು ನೀಡಿದೆ. ಉಳುವವನಿಗೆ ಭೂಮಿ ಕೊಟ್ಟಿದ್ದೇವೆ. ಬಗರ್ ಹುಕುಂ ಸಾಗುವಳಿ ಜಮೀನು ನೀಡಿದ್ದೇವೆ. ಅರಣ್ಯ ಕಾಯ್ದೆಯಲ್ಲಿ ರೈತರಿಗೆ ಜಮೀನು ನೀಡಿದ್ದೇವೆ. ಕುಮಾರಸ್ವಾಮಿ ಅವರೇ, ನೀವು ಒಂದು ಸಭೆ ಮಾಡಿ ಒಬ್ಬ ರೈತನಿಗೆ ಬಗರ್ ಹುಕುಂ ಜಮೀನು ನೀಡಿಲ್ಲ.

ಎಚ್‌ಡಿಕೆ : ಕೆಂಪೇಗೌಡರ ವಂಶಸ್ಥರಂತೆ ಇವರು. ಕೆಂಪೇಗೌಡರ ಹೆಸರು ಹೇಳಲು ಅವರಿಗೆ ನಾಚಿಕೆ ಆಗಬೇಕು. ಕನಕಪುರದಲ್ಲಿ ಅವರ ತಂದೆ ಚಿನ್ನ ಅಳೆಯುತ್ತಿದ್ದರಂತೆ. ಅವರು ಚಿನ್ನ ಅಳೆಯುತ್ತಿದ್ದರೋ ಅಥವಾ ಹುರುಳಿ ಕಾಳು ಅಳೆಯುತ್ತಿದ್ದರೋ ಗೊತ್ತಿಲ್ಲ. ಕನಕಪುರದವರು ಅನೇಕರು ಇಲ್ಲಿದ್ದಾರೆ, ಅವರೇಕೆ ಅಳೆಯುತ್ತಿಲ್ಲ. ಎಲ್ಲಾ ಲೂಟಿ ಹೊಡೆದಾಗಿದೆ. ಪೇಟೆ ಬೀದಿಯಲ್ಲಿ ಅಂಗಡಿ ಇಟ್ಟವರು, ಫುಟ್ ಪಾತಲ್ಲಿ ಅಂಗಡಿ ಇಟ್ಟವರೆಲ್ಲಾ ಇಲ್ಲಿ ಇದ್ದಾರೆ. ಅವರಿಗೆಲ್ಲ ಚಿನ್ನ ಅಳೆಯೋರ ಕಥೆ ಗೊತ್ತಿದೆ .

ಡಿಕೆಶಿ: ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ನಾನು ಉದ್ದಿಮೆದಾರ ಎಂದು ಹೇಳಿಕೊಂಡಿದ್ದೇನೆ. ನೀನು ಆ ರೀತಿ ಹೇಳಿಲ್ಲ. ನಾನು ಪಂಚೆಯುಟ್ಟು ಹೊಲ ಉಳುಮೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದೀಯ. ಮಣ್ಣಿನ ಮಗ ಎಂದು ಹೇಳಿದ್ದೀಯ. ನಿಮ್ಮ ತಂದೆ ಮಣ್ಣಿನ ಮಗನಾಗಿರಬಹುದು. ಆದರೆ ನೀವಲ್ಲ”

ಎಚ್‌ಡಿಕೆ: ದಲಿತರಿಗೆ ಸೇರಬೇಕಾದ 68 ಎಕರೆ ಜಮೀನು ಡಿಸಿಎಂ ಲಪಟಾಯಿಸಿದ್ದಾರೆ. ದಲಿತರಿಗೆ ಸಿಗಬೇಕಾದ ನಿವೇಶನಗಳನ್ನು ಡಿಕೆ ಶಿವಕುಮಾರ್ ಹೊಡೆದುಕೊಂಡಿದ್ದಾರೆ. ಅಸಲಿ ಸೊಸೈಟಿಯನ್ನು ನಕಲಿ ಮಾಡಿ ದಲಿತರ ಭೂಮಿ ಲಪಟಾಯಿಸಿದ್ದಾರೆ. ಇವರ ಬಳಿ ನಾನು ಹೇಳಿಸಿಕೊಳ್ಳುವ ಅಗತ್ಯ ಇಲ್ಲ.

-------------------------

ಡಿಕೆಶಿ: ಜಾತ್ಯಾತೀತ ತತ್ವ ಉಳಿಸಲು ನಾನು, ಪರಮೇಶ್ವರ್, ಸಿದ್ದರಾಮಯ್ಯ ಅವರು ನಿನ್ನನ್ನು ಮುಖ್ಯಮಂತ್ರಿ ಮಾಡಿದಾಗ, ಯಡಿಯೂರಪ್ಪನವರು ನಿನ್ನ ಬಗ್ಗೆ ಎಚ್ಚರಿಕೆ ನೀಡಿದರು. 'ಡಿ.ಕೆ. ಶಿವಕುಮಾರ್, ಈ ಅಪ್ಪ ಮಕ್ಕಳ ಬಗ್ಗೆ ಹುಷಾರಾಗಿರಿ ಎಂದು ಹೇಳಿದ್ದರು'. ನೀನು ರಾಜ್ಯಪಾಲರ ಮೂಲಕ ಅವರನ್ನು ಜೈಲಿಗೆ ಕಳುಹಿಸಿದೆ. ಈಗ ಅವರನ್ನೇ ತಬ್ಬಾಡುತ್ತಿದ್ದೀಯಾ?” ಎಂದು ಲೇವಡಿ ಮಾಡಿದರು.

ಎಚ್‌ಡಿಕೆ: ನನಗೆ ಮತ್ತೆ ಅಧಿಕಾರಕ್ಕೆ ಬರುವ ಆಸೆ ಇಲ್ಲ. ಈಗಾಗಲೇ ನಾನು ಎರಡು ಸಲ ಸಿಎಂ ಆಗಿದ್ದೇನೆ. ಆದರೆ ರಾಜ್ಯಕ್ಕೆ ಒಳ್ಳೇಯದಾಗಬೇಕು. ನಾನು ಅಧಿಕಾರ ಕೇಳಿ ನಿಮ್ಮ ಬಳಿ ಬಂದಿರಲಿಲ್ಲ. ನೀವೇ ಗೋಗರೆದು ಸಿಎಂ ಮಾಡಿದಿರಿ ಶಿವಕುಮಾರ್. ನೀವು ಮರೆತು ಹೋಗಿದ್ದೀರಿ, ಒಮ್ಮೆ ನೆನಪುವಾಡಿಕೊಳ್ಳಿ .

-------------------------

ಡಿಕೆಶಿ: ಕುಮಾರಣ್ಣ ನೀನು ಬಿಜೆಪಿಗೂ ಬ್ಲಾಕ್ ಮೇಲೆ ಮಾಡಲು ಶುರು ಮಾಡಿದ್ದೀಯ. ನೀವಿಬ್ಬರೂ ಚೆನ್ನಾಗಿರಿ. ಒಂದಾಗಿರಿ. ನಿಮ್ಮ ಪಕ್ಷ ಬಿಜೆಪಿ ಜತೆ ವಿಲೀನವಾದರೂ ಮಾಡಿಕೊಳ್ಳಿ. ನಮಗೂ ಒಳ್ಳೆಯದು. ನಮ್ಮ ಪಕ್ಷ ಅಧಿಕಾರಕ್ಕೆ ಬರದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಈಗಾಗಲೇ ಹೇಳಿದ್ದೀರ. ಆ ಕೆಲಸವನ್ನು ಶುಭಮುಹೂರ್ತ, ಶುಭ ಗಳಿಗೆಯಲ್ಲಿ ಮಾಡಿದರೆ ಎಲ್ಲರಿಗೂ ಉತ್ತಮ

ಎಚ್‌ಡಿಕೆ: ನಾನು ಬಿಜೆಪಿ ಜತೆ ಎರಡನೇ ಬಾರಿ ಹೊಂದಾಣಿಕೆ ಮಾಡಿಕೊಂಡಿದ್ದೇನೆ. ಇದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಈ ನಾಡಿನ ಆರೂವರೆ ಕೋಟಿ ಜನ ನನ್ನ ಆಸ್ತಿ. ನನ್ನ ತಂದೆ 40 ವರ್ಷಗಳ ಸುಧೀರ್ಘ ರಾಜಕಾರಣ ಮಾಡಿದ್ದಾರೆ. ಅವರು ಒಂದೂವರೆ ವರ್ಷ ಮುಖ್ಯಮಂತ್ರಿ, 14 ತಿಂಗಳು ಪ್ರಧಾನಿಯಷ್ಟೇ ಆಗಿದ್ದರು. ದೇವರಾಜ ಅರಸು ಅವರು ಸಿಎಂ ಆಗಿದ್ದಾಗ ಸದಾಶಿವನಗರದಲ್ಲಿ ಒಂದು ನಿವೇಶನ ಕೊಟ್ಟರು. ನನಗೆ ಬೇಡವೇ ಬೇಡ ಎಂದರೂ ಅರಸು ಅವರು ಕೇಳಲಿಲ್ಲ. ಆಗ ನನ್ನ ತಂದೆಯವರ ಬಳಿ ಹಣ ಇರಲಿಲ್ಲ. ಕೊನೆಗೆ ಅವರ ಬಳಿ ಒಂದು ಫಿಯಟ್ ಕಾರು ಇತ್ತು. ನಿವೇಶನಕ್ಕಾಗಿ ಅವರು ಆ ಕಾರನ್ನು ಮಾಡಿದರು. ಆ ನಿವೇಶನವನ್ನು ಅವರು ಎಲ್ಲಾ ಮಕ್ಕಳಿಗೆ ಹಂಚಿದ್ದಾರೆ.

-------------------------

ಡಿಕೆಶಿ: ನನ್ನ ಅಧ್ಯಕ್ಷತೆಯಲ್ಲಿ ನನ್ನ ಪಕ್ಷಕ್ಕೆ 136 ಸೀಟು ಬಂದಿದೆ. ನಿನ್ನ ಅಧ್ಯಕ್ಷತೆಯಲ್ಲಿ ನಿನ್ನ ಪಕ್ಷಕ್ಕೆ 19 ಸೀಟು ಬಂದಿದೆ. ಈಗ ನಿನ್ನ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಸೇರಿದ್ದೀಯ. ಕುಮಾರಸ್ವಾಮಿ ನೀನು ಕೇವಲ ಹಿಟ್ ಅಂಡ್ ರನ್. ನೀನು ಬ್ಲಾಕ್ ಮೇಲ್ ಕುಮಾರಸ್ವಾಮಿ. ಎಲ್ಲರನ್ನು ಹೆದರಿಸಿದಂತೆ ಬಿಜೆಪಿಯವರನ್ನು ಹೆದರಿಸಲು ಹೋದೆ. ಪಾದಯಾತ್ರೆ ವಿಚಾರವಾಗಿ ಜಿ.ಟಿ ದೇವೆಗೌಡರ ಕೈಯಲ್ಲಿ ಒಂದು ಹೇಳಿಕೆ ಕೊಡಿಸಿದೆ. ನಿನ್ನ ಮಗನ ಕೈಯಲ್ಲಿ ಒಂದು ಹೇಳಿಕೆ ಕೊಡಿಸಿದೆ. ನೀನು ಒಂದು ಹೇಳಿಕೆ ನೀಡಿದೆ. ಈ ನಾಟಕ ಏಕೆ?. ಪಾದಯಾತ್ರೆಗೆ ಬರಲ್ಲ ಎಂದು ಹೇಳಿದವನು, ಈಗ ಯಾಕೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದೀಯಾ? ಕೇವಲ ನಿನ್ನ ಅಧಿಕಾರಕ್ಕೋಸ್ಕರ. ನಿನ್ನ ಪಕ್ಷವನ್ನು ಮುಳುಗಿಸಲು ಹೊರಟಿದ್ದೀಯಾ.

ಎಚ್‌ಡಿಕೆ: ಈ ಪಾದಯಾತ್ರೆ ಅಸೂಯೆಯಿಂದ ಹಮ್ಮಿಕೊಂಡಿದ್ದಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಅಂಗಡಿ ಬಾಗಿಲು ತೆರೆದು ಕೂತಿದೆ. ಗ್ಯಾರಂಟಿಗಳಿಂದ ಬದಲಾವಣೆಗಳನ್ನು ತಂದಿದ್ದೇವೆ ಅನ್ಕೊಂಡಿದ್ದೇವೆ. ಗ್ಯಾರಂಟಿಗಳಿಂದ ರಾಜ್ಯವನ್ನು ದರಿದ್ರದತ್ತ ತಗೊಂಡು ಹೋಗಿದ್ದಾರೆ. ಮಂತ್ರಿಗಳಲ್ಲಿ ಭ್ರಷ್ಟಾಚಾರ ನಡೆಸಲು ಪೈಪೋಟಿ ನಡೀತಿದೆ .

ಡಿಕೆಶಿ: ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ನಾವು ಅಧಿಕಾರದಲ್ಲಿ ಇದ್ದ ಕಾರಣಕ್ಕೆ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಬಡವರಿಗೆ ಅನುಕೂಲ ಮಾಡುವ ಇಂತಹ ಒಂದು ಯೋಜನೆಯನ್ನು ಯಡಿಯೂರಪ್ಪ, ಸಿ.ಟಿ.ರವಿ, ವಿಜಯೇಂದ್ರ, ಕುಮಾರಸ್ವಾಮಿ ನಿಮ್ಮಿಂದ ನೀಡಲು ಸಾಧ್ಯವಾಗಲಿಲ್ಲ.

-------------------------

ಡಿಕೆಶಿ: ಕುಮಾರಸ್ವಾಮಿ ಅವರ ಅಕ್ರಮಗಳ ಬಗ್ಗೆ ಬಿಜೆಪಿಯವರು ಮಾಧ್ಯಮಗಳಲ್ಲಿ ಪ್ರಕಟಿಸಿದ್ದ ಜಾಹೀರಾತಿನ ಬಗ್ಗೆ ಪಾದಯಾತ್ರೆ ಮಾಡುತ್ತಿರುವವರು ಉತ್ತರ ಕೊಡಬೇಕು. ಬಿಜೆಪಿಯ ಶಾಸಕರಾದ ಯತ್ನಾಳ್ ಅವರು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರ ಪ್ರಶ್ನೆಗಳಿಗೆ ಉತ್ತರ ನೀಡಿ ಎಂದು ನಾವೆಲ್ಲರೂ ಆಗ್ರಹಿಸುತ್ತಿದ್ದೇವೆ.

ಎಚ್‌ಡಿಕೆ: ಪ್ರತಿಯೊಂದಕ್ಕೂ ಲೆಕ್ಕ ಕೊಡುತ್ತೇವೆ. ನಿಮ್ಮ ಲೆಕ್ಕ ಚುಕ್ತಾ ಮಾಡುತ್ತೇವೆ. ಅಶ್ವಮೇಧಕ್ಕೆ ಚಾಲನೆ ಕೊಟ್ಟಿದ್ದೇವೆ. ನಿಮ್ಮನ್ನು ಮುಗಿಸುವ ಕಾಲ ಹತ್ತಿರ ಬಂದಿದೆ .

-------------------------

ಎಚ್‌ಡಿಕೆ: ಅಜ್ಜಯ್ಯನ ಬಗ್ಗೆ ಈ ಡಿ.ಕೆ.ಶಿವಕುಮಾರ್ ಗೆ ಭಕ್ತಿ ಗೌರವ ಇದ್ದರೆ ಪ್ರಮಾಣ ಮಾಡಲಿ. ಅಜ್ಜಯ್ಯನ ಬಗ್ಗೆ ನನಗೆ ಗೌರವ, ಭಕ್ತಿ ಎರಡೂ ಇದೆ. ನಾನು ಪ್ರಾಮಾಣಿಕವಾಗಿ ಬೆಳೆದು ಬಂದಿದೇನೆ ಎಂದು ಅವರ ಮೇಲೆ ಪ್ರಮಾಣ ಮಾಡಿ. ನಾನೂ ಪ್ರಮಾಣ ಮಾಡುತ್ತೇನೆ. ಈ ಡಿಕೆಶಿಗೆ ಅಜ್ಜಯ್ಯನ ಶಾಪವೂ ಆರಂಭವಾಗಿದೆ. ಎಷ್ಟು ಮನೆಗಳನ್ನು ಒಡೆದು ನೀವು ಬೆಳೆಡಿದ್ದೀರಿ ಎಂದು ನನಗೆ ಗೊತ್ತಿದೆ. ನಾನು ಏನೂ ಮಾಡಿಯೇ ಇಲ್ಲ, ಸ್ವಚ್ಚವಾಗಿದ್ದೇನೆ ಎಂದು ಅಜ್ಜಯನ ಮುಂದೆ ನಿಂತು ಪ್ರಮಾಣ ಮಾಡಲಿ ಎಂದು ಹೇಳಿದರು ಕುಮಾರಸ್ವಾಮಿ ಅವರು.

ಡಿಕೆಶಿ: ಇಂತಹ ವಿಚಾರವನ್ನು ಹಾದಿಬೀದಿಯಲ್ಲಿ ಚರ್ಚೆ ಮಾಡುವುದಲ್ಲ. ಮುಖ್ಯವಾದ ವೇದಿಕೆಗಳಲ್ಲಿ ಚರ್ಚೆ ಮಾಡಬೇಕು. ಈ ವಿಚಾರವಾಗಿ ನಾವು ಮಾಡುವ ಚರ್ಚೆ ದಾಖಲೆಯಾಗಿ ಉಳಿಯಬೇಕು. ಅದಕ್ಕಾಗಿಯೇ ಸದನದಲ್ಲಿ ಚರ್ಚೆ ಮಾಡಲು ಆಹ್ವಾನ ನೀಡುತ್ತಿದ್ದೇನೆ. ಎರಡು ಬಾರಿ ಆಹ್ವಾನ ನೀಡಿದೆ. ಅವರು ಬರಲಿಲ್ಲ. ಈಗ ಅವರ ಸಹೋದರ ಹಾಗೂ ಅವರ ಪಕ್ಷದ ಶಾಸಕರು ಸದನದಲ್ಲಿ ಇದ್ದಾರೆ. ಅವರ ಬಳಿ ದಾಖಲೆಗಳನ್ನು ಕೊಟ್ಟು ಕಳಿಸಿ ಚರ್ಚೆ ಮಾಡಿಸಲಿ. ಇದ್ದೆಲ್ಲವೂ ಮುಂದಿನ ಪೀಳಿಗೆಗಳಿಗೂ ತಿಳಿಯಲಿ. ಸಾರ್ವಜನಿಕವಾಗಿ ಚರ್ಚೆ ಮಾಡಬೇಕೆಂದರೆ ಯಾವುದಾದರೂ ಸುದ್ದಿ ವಾಹಿನಿಯಲ್ಲಿ ಕೂತು ಚರ್ಚೆ ಮಾಡಬೇಕು. ಅವರ ಜತೆ ಚರ್ಚೆ ಮಾಡಲು ನಾನು ಸಿದ್ಧನಾಗಿದ್ದೇನೆ.

-------------------------

ಡಿಕೆಶಿ: ನೀನು ಅಧಿಕಾರದಲ್ಲಿದ್ದಾಗ ನಿನ್ನ ಜನರಿಗೆ ಒಂದು ಮನೆ, ನಿವೇಶನ ನೀಡಲಿಲ್ಲ. ನಿಮ್ಮ ಕಾರ್ಯಕರ್ತರಿಗೆ ಅಧಿಕಾರ ನೀಡಲಿಲ್ಲ. ನೀನು ನಿನ್ನ ಕುಟುಂಬ ಮಾತ್ರ ಅಧಿಕಾರ ಅನುಭವಿಸಿದ್ದೇ ಆಯ್ತು. ಯಡಿಯೂರಪ್ಪನವರು ಸದನದಲ್ಲಿ ನಿನ್ನ ಬಗ್ಗೆ ಮಾಡಿರುವ ಭಾಷಣದ ಬಗ್ಗೆ ನೀನು ಉತ್ತರ ನೀಡು ಸಾಕು.

ಎಚ್‌ಡಿಕೆ: ನಾನು ಯಾರಿಗೂ ದ್ರೋಹ ಮಾಡಲಿಲ್ಲ. ಮಾಡುವುದೂ ಇಲ್ಲ. ಜನರ ಆಶೀರ್ವಾದವೇ ನನ್ನ ಬಲ, ಅದೇ ನನ್ನ ಬೆಳೆಸಿದೆ. ನಾನು ಯಡಿಯೂರಪ್ಪ ಅವರಿಗೂ ದ್ರೋಹ ಮಾಡಲಿಲ್ಲ. ಆ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದ ಅಧಿಕಾರ ಹಂಚಿಕೆ ಆಗಲಿಲ್ಲ. ನಾನು ಯಡಿಯೂರಪ್ಪ ಅವರಿಗೆ ಯಾವತ್ತೂ ದ್ರೋಹ ಮಾಡಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಕಾಂಗ್ರೆಸ್ ನಿದ್ದೆಗೆಡಿಸಿದೆ. ಅದಕೆ ಶಿವಕುಮಾರ್ ನಮ್ಮ ಮೈತ್ರಿ ಬಗ್ಗೆ ಹೊಟ್ಟೆ ಉರಿ ಅನುಭವಿಸುತ್ತಿದ್ದಾರೆ.

-------------------------

Tags:    

Similar News