ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಆರ್‌ಎಸ್‌ಎಸ್ ಗೀತೆ ಹಾಡಿರುವುದು ತಪ್ಪು: ಬಿ.ಕೆ. ಹರಿಪ್ರಸಾದ್
ಮಹಾತ್ಮ ಗಾಂಧಿಯವರನ್ನು ಹತ್ಯೆಗೈದ ಸಿದ್ಧಾಂತವನ್ನು ಹೊಂದಿರುವ ಸಂಘಟನೆಯ ಪ್ರಾರ್ಥನೆಯನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮಾಡುವುದು ಸರಿಯಲ್ಲ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.;
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಪ್ರಾರ್ಥನಾ ಗೀತೆಯನ್ನು ಹಾಡಿರುವುದು ಕಾಂಗ್ರೆಸ್‌ನಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಎಂಎಲ್‌ಸಿ ಬಿ.ಕೆ. ಹರಿಪ್ರಸಾದ್, "ಡಿಸಿಎಂ ಆಗಿ ಅವರು ಪ್ರಾರ್ಥನೆ ಮಾಡಿದ್ದರೆ ನಮ್ಮದೇನೂ ಅಭ್ಯಂತರವಿಲ್ಲ, ಆದರೆ ಕೆಪಿಸಿಸಿ ಅಧ್ಯಕ್ಷರಾಗಿ ಹಾಗೆ ಮಾಡಿದ್ದರೆ, ಅವರು ಖಂಡಿತ ಕ್ಷಮೆ ಕೇಳಬೇಕು" ಎಂದು ಆಗ್ರಹಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸರ್ಕಾರವೆಂಬುದು ಇಡೀ ರಾಜ್ಯದ ಏಳು ಕೋಟಿ ಜನರದ್ದು, ಅದರಲ್ಲಿ ಆರ್‌ಎಸ್‌ಎಸ್, ಜಮಾಅತ್ ಇಸ್ಲಾಮಿಗಳು ಸೇರಿದಂತೆ ಎಲ್ಲರೂ ಇರುತ್ತಾರೆ. ಹಾಗಾಗಿ ಉಪಮುಖ್ಯಮಂತ್ರಿಯಾಗಿ ಅವರು ಗೀತೆ ಹಾಡಿದ್ದರೆ ಅದನ್ನು ಪ್ರಶ್ನಿಸುವುದಿಲ್ಲ. ಆದರೆ, ಮಹಾತ್ಮ ಗಾಂಧಿಯವರನ್ನು ಹತ್ಯೆಗೈದ ಸಿದ್ಧಾಂತವನ್ನು ಹೊಂದಿರುವ ಸಂಘಟನೆಯ ಪ್ರಾರ್ಥನೆಯನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮಾಡುವುದು ಸರಿಯಲ್ಲ. ಇದು ಕಾಂಗ್ರೆಸ್ ಸಿದ್ಧಾಂತಕ್ಕೆ ವಿರುದ್ಧವಾದುದು" ಎಂದು ಸ್ಪಷ್ಟಪಡಿಸಿದರು.
"ಡಿ.ಕೆ. ಶಿವಕುಮಾರ್ ಅವರಿಗೆ ಹಲವು ಮುಖಗಳಿವೆ. ಅವರು ಕೆಲವೊಮ್ಮೆ ತಮ್ಮನ್ನು ಕೃಷಿಕ, ಉದ್ಯಮಿ, ಶಿಕ್ಷಣ ತಜ್ಞ, ಕ್ವಾರಿ ಮಾಲೀಕ ಎಂದೆಲ್ಲಾ ಹೇಳಿಕೊಳ್ಳುತ್ತಾರೆ. ಈಗ ಯಾರನ್ನು ಮೆಚ್ಚಿಸಲು ಈ ರೀತಿ ಮಾಡಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಆದರೆ, ಕಾಂಗ್ರೆಸ್ ಅಧ್ಯಕ್ಷರಾಗಿ ಮಾಡಿರುವ ತಪ್ಪಿಗೆ ಅವರು ಕ್ಷಮೆ ಯಾಚಿಸುವುದು ಸೂಕ್ತ" ಎಂದು ಹರಿಪ್ರಸಾದ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ಹೇಳಿಕೆಯು ರಾಜ್ಯ ಕಾಂಗ್ರೆಸ್‌ನಲ್ಲಿನ ಆಂತರಿಕ ಭಿನ್ನಮತವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ