ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ ; ತುಟ್ಟಿಭತ್ಯೆ ಶೇ 2 ರಷ್ಟು ಹೆಚ್ಚಳ ಮಾಡಿ ಆದೇಶ
ಸರ್ಕಾರಿ ನೌಕರರ ಹುದ್ದೆಗೆ ಅನುಗುಣವಾಗಿ ವೇತನ ಶ್ರೇಣಿಯಲ್ಲಿ ಬದಲಾವಣೆಗಳು ಆಗಲಿವೆ. 2024ರ ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ವೇತನ) ನಿಯಮಗಳ ಪ್ರಕಾರ ತುಟ್ಟಿ ಭತ್ಯೆ ಪರಿಷ್ಕರಿಸಲಾಗಿದೆ.
ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ದೀಪಾವಳಿಯ ಕೊಡುಗೆ ನೀಡಿದೆ. ಸರ್ಕಾರಿ ನೌಕರರಿಗೆ 2025 ಜು.1ರಿಂದ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆ ಹೆಚ್ಚಿಸಲಾಗಿದೆ. ಪ್ರಸ್ತುತ ಮೂಲ ವೇತನವನ್ನು ಶೇ.12.25 ರಿಂದ ಶೇ.14.25 ರವರೆಗೆ ಪರಿಷ್ಕರಿಸಿ ತುಟ್ಟಿಭತ್ಯೆ ಹೆಚ್ಚಿಸಿ ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ. ಉಮಾ ಆದೇಶಿಸಿದ್ದಾರೆ.
ಸರ್ಕಾರಿ ನೌಕರರ ಹುದ್ದೆಗೆ ಅನುಗುಣವಾಗಿ ವೇತನ ಶ್ರೇಣಿಯಲ್ಲಿ ಬದಲಾವಣೆಗಳು ಆಗಲಿವೆ. 2024ರ ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ವೇತನ) ನಿಯಮಗಳ ಪ್ರಕಾರ ತುಟ್ಟಿ ಭತ್ಯೆ ಪರಿಷ್ಕರಿಸಲಾಗಿದೆ.
ಯಾರಿಗೆಲ್ಲಾ ಸಿಗಲಿದೆ ತುಟ್ಟಿಭತ್ಯೆ ಲಾಭ?
ಸರ್ಕಾರದಿಂದ ನೇರವಾಗಿ ನಿವೃತ್ತಿ ವೇತನ ಪಡೆಯುತ್ತಿರುವವರು, ಸಂಚಿತ ನಿಧಿಯಿಂದ ನಿವೃತ್ತಿ ವೇತನ ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ, ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತ ನೌಕರರಿಗೂ ತುಟ್ಟಿಭತ್ಯೆಯ ಲಾಭ ಸಿಗಲಿದೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾ ಪಂಚಾಯತ್‌ಗಳ ಪೂರ್ಣಾವಧಿ ನೌಕರರು, ವೇತನ ಶ್ರೇಣಿಗಳಲ್ಲಿ ಪೂರ್ಣಾವಧಿ ವರ್ಕ್‌ಚಾರ್ಜ್ ನೌಕರರು ಹಾಗೂ ಸರ್ಕಾರದಿಂದ ಸಹಾಯಧನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯಗಳಲ್ಲಿ ದುಡಿಯುತ್ತಿರುವ ಪೂರ್ಣಾವಧಿ ನೌಕರರಿಗೂ ಇದರ ಲಾಭ ಸಿಗಲಿದೆ.
ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಗಳಲ್ಲಿ ಸಂಬಳ ಪಡೆಯುತ್ತಿರುವ ನೌಕರರು ಮತ್ತು ಎನ್ಜೆಪಿಸಿ ವೇತನ ಶ್ರೇಣಿಗಳ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಅದೇಶ ಹೊರಡಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ತುಟ್ಟಿಭತ್ಯೆ ಕಾರಣದಿಂದ ಸಂದಾಯವಾಗಬೇಕಿರುವ 50 ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ರೂಪಾಯಿಗೆ ಹೊಂದಿಸಬೇಕು. ಐವತ್ತು ಪೈಸೆಗಿಂತ ಕಡಿಮೆ ಇರುವ ಭಿನ್ನಾಂಶಗಳನ್ನು ಪರಿಗಣಿಸಬಾರದು ಎಂದು ಹೇಳಿದೆ. ತುಟ್ಟಿಭತ್ಯೆ ಬಾಕಿ ಮೊತ್ತವನ್ನು 2025ರ ಅಕ್ಟೋಬರ್ ತಿಂಗಳ ವೇತನ ಪಾವತಿಗೂ ಮೊದಲು ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.