ಬೆಂಗಳೂರಿನಿಂದ ಜಪಾನಿನ ನಗೋಯಾ, ಒಸಾಕಾಗೆ ನೇರ ವಿಮಾನ ಸೇವೆ; ಈ ನಗರಗಳಿಗೆ ಯಾಕಿದೆ ಕರುನಾಡ ನಂಟು?
ತಮಿಳುನಾಡಿನಲ್ಲಿ ಜಪಾನ್ ಮೂಲದ ಕೈಗಾರಿಕೆಗಳು ಹೆಚ್ಚಿವೆ. ಅಲ್ಲಿನಿಂದಲೂ ನೇರ ಪ್ರಯಾಣ ಬೆಳೆಸಲು ಬಹುತೇಕರು ಬೆಂಗಳೂರಿಗೇ ಬರುವುದರಿಂದ ನಗೋಯಾ ಹಾಗೂ ಒಸಾಕಾಗೆ ನೇರ ವಿಮಾನ ಸೇವೆ ಅಗತ್ಯ.;
ವಿಶ್ವದ ಪ್ರಮುಖ 10 ಟೆಕ್ ಹಬ್ ಗಳ ಪಟ್ಟಿಯಲ್ಲಿ ಬೆಂಗಳೂರು ಆರನೇ ಸ್ಥಾನದಲ್ಲಿದೆ. ದೇಶದ ಐಟಿ ರಾಜಧಾನಿಯಾಗಿ ಗುರುತಿಸಿಕೊಂಡಿರುವ ಬೆಂಗಳೂರು ಸ್ಟಾರ್ಟ್ ಅಪ್ ಗಳಲ್ಲಿ ಮುಂಚೂಣಿ ಸ್ಥಾನದಲ್ಲಿದೆ.
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಜಪಾನ್ ದೇಶದ ಹೂಡಿಕೆಯೂ ಪ್ರಮುಖ ಪಾತ್ರ ವಹಿಸಿದೆ.
ಜಪಾನ್ ದೇಶದ ಕೈಗಾರಿಕಾ ನಕ್ಷೆಯಲ್ಲಿ ಕರ್ನಾಟಕ ಅದರಲ್ಲೂ ಬೆಂಗಳೂರು ನೆಚ್ಚಿನ ಹೂಡಿಕೆಯ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ಅಲ್ಲಿನ ಕೈಗಾರಿಕಾ ವಲಯಗಳಾದ ಒಸಾಕಾ ಹಾಗೂ ನಗೋಯಾ ನಗರಗಳು ಬೆಂಗಳೂರಿನೊಂದಿಗೆ ಕೈಗಾರಿಕೆ, ಶಿಕ್ಷಣ ಹಾಗೂ ಸಾಂಸ್ಕೃತಿಕ ವಿನಿಮಯದ ಒಡಂಬಡಿಕೆ ಮಾಡಿಕೊಂಡಿವೆ.
ನಗೋಯಾ, ಒಸಾಕಾಗೆ ನೇರ ವಿಮಾನ
ಭಾರತದಲ್ಲಿ ಕಾರು ತಯಾರಿಕಾ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿರುವ ಟೊಯೊಟೊ ಕಂಪೆನಿಯ ಪ್ರಧಾನ ಕಚೇರಿ ಜಪಾನ್ ನ ನಯೋಗಾದಲ್ಲಿದೆ. ಟೊಯೊಟೊ ಶಾಖೆ ಬೆಂಗಳೂರಿನ ಬಿಡದಿಯಲ್ಲಿದೆ. ಹಾಗಾಗಿ ಬೆಂಗಳೂರು ಹಾಗೂ ನಯೋಗಾ ನಡುವೆ ವ್ಯವಹಾರ ನಂಟು ಹೆಚ್ಚಿದೆ.
ಅದೇ ರೀತಿ ಪ್ಯಾನಸೋನಿಕ್, ಹಿಟಾಚಿ ಕಂಪೆನಿಯ ಪ್ರಧಾನ ಕಚೇರಿಗಳು ಒಸಾಕಾದಲ್ಲಿವೆ. ಈ ಎರಡೂ ನಗರದ ಬಹುಪಾಲು ವ್ಯವಹಾರ ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ವಿಸ್ತರಿಸಿದೆ. ವ್ಯವಹಾರ ಸಂಬಂಧ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿರುವ ಕಾರಣ ನೇರ ವಿಮಾನ ಸೇವೆಗೆ ಬೇಡಿಕೆ ಬಂದಿದೆ. ಆ ಕುರಿತಂತೆ ಸರ್ಕಾರದಲ್ಲಿ ಪ್ರಾಥಮಿಕ ಹಂತದ ಚರ್ಚೆ ಅರಂಭವಾಗಿದೆ.
ಟೊಕಿಯೋ, ಒಸಾಕಾ ಹಾಗೂ ನಗೋಯಾ ನಗರಗಳಿಗೆ ಪ್ರತಿ ತಿಂಗಳು ಬೆಂಗಳೂರಿನಿಂದ ಸಾವಿರಾರು ಸಂಖ್ಯೆಯಲ್ಲಿ ವ್ಯವಹಾರಸ್ಥರು ಪ್ರಯಾಣಿಸುತ್ತಾರೆ. ದೆಹಲಿ ಹೊರತುಪಡಿಸಿದರೆ ಟೊಕಿಯೋಗೆ ನೇರ ವಿಮಾನ ಸೇವೆ ಇರುವುದು ಬೆಂಗಳೂರಿನಿಂದ ಮಾತ್ರ. ಇದಲ್ಲದೇ ರಾಜ್ಯದ ಪ್ರಮುಖ ಹತ್ತು ವಿಶ್ವವಿದ್ಯಾಲಯಗಳೊಂದಿಗೆ ಒಸಾಕಾ ಹಾಗೂ ನಗೋಯಾ ನಗರಗಳು ಶೈಕ್ಷಣಿಕ ಒಡಂಬಡಿಕೆ ಹೊಂದಿವೆ. ಬೆಂಗಳೂರಿನ ಜೊತೆ ಈ ಎರಡೂ ನಗರಗಳು ಸಾಂಸ್ಕೃತಿಕ ಒಡಂಬಡಿಕೆಯನ್ನೂ ಹೊಂದಿವೆ.
ಕರ್ನಾಟಕದಲ್ಲಿ ಜಪಾನ್ ಹಬ್ಬ ವಾರ್ಷಿಕವಾಗಿ ನಡೆಯುತ್ತಿದೆ. ಜಪಾನ್ ಭಾಷೆ ಕಲಿಯುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ.ಹಾಗಾಗಿ ನೇರ ವಿಮಾನ ಅಗತ್ಯವಾಗಿದೆ ಎಂದು ಜಪಾನ್ ಕಾನ್ಸುಲೇಟ್ ಜನರಲ್ ಕಚೇರಿ ಪ್ರತಿಪಾದಿಸಿದೆ. ಇದಲ್ಲದೇ ತಮಿಳುನಾಡಿನಲ್ಲಿ ಜಪಾನ್ ಮೂಲದ ಕೈಗಾರಿಕೆಗಳು ಹೆಚ್ಚಿವೆ. ಅಲ್ಲಿನಿಂದಲೂ ನೇರ ಪ್ರಯಾಣ ಬೆಳೆಸಲು ಬಹುತೇಕರು ಬೆಂಗಳೂರಿಗೇ ಬರುವುದರಿಂದ ನಗೋಯಾ ಹಾಗೂ ಒಸಾಕಾಗೆ ನೇರ ವಿಮಾನ ಸೇವೆ ಒದಗಿಸುವಂತೆ ಕರ್ನಾಟಕ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದೆ. ಆ ಕುರಿತು ಚರ್ಚೆ ಆರಂಭಿಸಲಾಗಿದೆ ಎಂದು ರಾಜ್ಯ ಕೈಗಾರಿಕಾ ಇಲಾಖೆ ಅಧಿಕಾರಿಯೊಬ್ಬರು 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.
ಚರ್ಚೆ ಈಗಷ್ಟೇ ಆರಂಭವಾಗಿರುವುದರಿಂದ ವೇಳಾಪಟ್ಟಿ, ಸಂಪರ್ಕಿಸುವ ನಗರಗಳ ಮಾಹಿತಿ ಅಂತಿಮಗೊಂಡಿಲ್ಲ. ಶೀಘ್ರದಲ್ಲೇ ಈ ಸಂಬಂಧ ವಿಮಾನಯಾನ ಸಂಸ್ಥೆಗಳು, ಡಿಜಿಸಿಎ ಜೊತೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.
ತುಮಕೂರಿನಲ್ಲಿ ಎರಡನೇ ಜಪಾನ್ ಕೈಗಾರಿಕಾ ಪಾರ್ಕ್
ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 5 ಟ್ರಿಲಿಯನ್ ಯೆನ್ ಹೂಡಿಕೆಯ ಗುರಿ ಸಾಧಿಸುವ ಸಲುವಾಗಿ ಜಪಾನ್ ಕರ್ನಾಟಕದಲ್ಲಿ ತನ್ನ ಹೂಡಿಕೆ ಹೆಚ್ಚಿಸಲು ನಿರ್ಧರಿಸಿದೆ.
ಜಪಾನ್ ನ ಮೊದಲ ಕೈಗಾರಿಕಾ ವಲಯ ತಿಪ್ಪೇದಾಸರಹಳ್ಳಿಯಲ್ಲಿದೆ. ಎರಡನೇ ವಲಯವು ತುಮಕೂರಿನ ವಸಂತ ನರಸಾಪುರದಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇನ್ವೆಸ್ಟ್ ಕರ್ನಾಟಕ ವೇದಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುಂಜನ್ ಕೃಷ್ಣ ಅವರೇ ಭಾರತ-ಜಪಾನ್ ವ್ಯವಹಾರ ಶೃಂಗಸಭೆಯಲ್ಲಿ ಘೋಷಿಸಿದ್ದರು. ಮೂರನೇ ವಲಯವನ್ನು ಕೋಲಾರ ಜಿಲ್ಲೆಯ ವೇಮಗಲ್ ಬಳಿ ಸ್ಥಾಪಿಸಲು ಮಾರುಬೇನಿ ಕಾರ್ಪೊರೇಷನ್ ಮುಂದಾಗಿದೆ. ಇಲ್ಲಿ 720 ಎಕರೆ ಪ್ರದೇಶದಲ್ಲಿ ಹೈಟೆಕ್ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಒಲವು ತೋರಿದೆ. ಇಲ್ಲಿ 10,000 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದ್ದು, 40 ಸಾವಿರ ಉದ್ಯೋಗ ಸೃಷ್ಟಿಸಲಿದೆ ಎಂದು ಹೇಳಲಾಗಿದೆ.
ಜಪಾನ್ ಕೈಗಾರಿಕಾ ವಲಯಗಳಲ್ಲಿ ಕ್ಲೀನ್ ಮೊಬಿಲಿಟಿ ನೀತಿಯಡಿ ವಿದ್ಯುತ್ ವಾಹನಗಳು (EV), ಹೈಡ್ರೋಜನ್ ಮತ್ತು ಹೈಬ್ರಿಡ್ ವಾಹನ ತಯಾರಿಕೆ ತಂತ್ರಜ್ಞಾನಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಕೈಗಾರಿಕಾ ಇಲಾಖೆ ಮೂಲಗಳು ತಿಳಿಸಿವೆ.
ಕಳೆದ ಫೆಬ್ರುವರಿ ತಿಂಗಳಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ಜಪಾನಿನ 15 ಪ್ರಮುಖ ಕಂಪನಿಗಳು ಒಪ್ಪಂದಗಳಿಗೆ ಸಹಿ ಹಾಕಿದ್ದು, 7,500 ಕೋಟಿ ರೂ. ಹೂಡಿಕೆ ಭರವಸೆ ನೀಡಿವೆ.
ಜಪಾನ್ ಕಂಪೆನಿಗಳ ನೆಲೆಯಾದ ಕರ್ನಾಟಕ
ಐದು ವರ್ಷಗಳ ಹಿಂದೆ ರಾಜ್ಯದಲ್ಲಿ ಸುಮಾರು 200 ಜಪಾನ್ ಕಂಪನಿಗಳಿದ್ದವು. ಈಗ 537 ಕ್ಕೂ ಹೆಚ್ಚು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಟೊಯೋಟಾ, ಹೋಂಡಾ, ಹಿಟಾಚಿ, ಫುಜಿಟ್ಸು ಸೇರಿದಂತೆ ಹಲವಾರು ಪ್ರಮುಖ ಕಂಪನಿಗಳು ಬೆಂಗಳೂರಿನಲ್ಲಿ ಕಚೇರಿ ಹೊಂದಿವೆ.
ಬೆಂಗಳೂರಿನಲ್ಲಿ ಪ್ರತಿ ತಿಂಗಳು ಅಂದಾಜು 5000 ಕ್ಕೂ ಹೆಚ್ಚು ಜಪಾನಿಯರು ವ್ಯವಹಾರ ಸಲುವಾಗಿ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಹಾಗಾಗಿ ನೇರ ವಿಮಾನ ಸೇವೆಗೆ ಹೆಚ್ಚು ಬೇಡಿಕೆ ಬಂದಿದೆ.
ಚೆನ್ನೈನಲ್ಲಿ ಹೂಡಿಕೆ ಹೆಚ್ಚು
ಜಪಾನ್ ಸಮುದಾಯದ ಅತಿ ದೊಡ್ಡ ಕೈಗಾರಿಕಾ ವಲಯವಾಗಿ ಚೆನ್ನೈ ಸ್ಥಾನ ಗಿಟ್ಟಿಸಿಕೊಂಡಿದೆ.
ಭಾರತದ ಐಟಿ ಸಾಮರ್ಥ್ಯ ಹಾಗೂ ವಿಶಾಲ ಮಾರುಕಟ್ಟೆ ಪ್ರವೇಶದೊಂದಿಗೆ ತನ್ನ ಉತ್ಪಾದನಾ ಜ್ಞಾನ ಹಾಗೂ ತಂತ್ರಜ್ಞಾನ ಸಂಯೋಜಿಸಲು ಜಪಾನ್, ಹೂಡಿಕೆ ಹೆಚ್ಚಿಸಿದೆ. ಮಧ್ಯಪ್ರಾಚ್ಯ ಮತ್ತು ಆಫ್ರಿಕಾಗೆ ತಂತ್ರಜ್ಞಾನ ರಪ್ತು ಮಾಡಲು ಭಾರತವನ್ನು ದ್ವಾರವನ್ನಾಗಿ ಬಳಸಲು ನಿರ್ಧರಿಸಿ, ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಿದೆ.