ಧರ್ಮಸ್ಥಳ ಪ್ರಕರಣ |ಎಸ್‌ಐಟಿ ತನಿಖೆಯಿಂದ ಸತ್ಯಾಂಶ ಬಯಲು; ದಿನೇಶ್ ಗುಂಡೂರಾವ್
ಜಿಎಸ್‌ಟಿ ವಿಚಾರವಾಗಿ ಬಿಜೆಪಿ ಸಹಾಯವಾಣಿ ತೆರೆಯುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಜಿಎಸ್‌ಟಿ ಕುರಿತು ಸಾಕಷ್ಟು ತಿಳುವಳಿಕೆ ಕೊರತೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.;
ಸಚಿವ ದಿನೇಶ್ ಗುಂಡೂರಾವ್.
ಧರ್ಮಸ್ಥಳದಲ್ಲಿನ ಅಪರಾಧ ಪ್ರಕರಣಗಳ ಕುರಿತು ಎಸ್‌ಐಟಿ ತನಿಖೆ ರಾಜಕೀಯ ಪ್ರೇರಿತ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇದು ರಾಜಕೀಯ ಪ್ರೇರಿತ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡರು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳ ಪ್ರಮುಖರು ಈ ಪ್ರಕರಣದಲ್ಲಿ ಹೆಚ್ಚಿನ ಸ್ಪಷ್ಟತೆಗಾಗಿ ಒತ್ತಡ ಹಾಕಿದ್ದಾರೆ. ಪ್ರಕರಣದಲ್ಲಿ ಅನೇಕ ಗೊಂದಲಗಳು ಉಂಟಾಗಿದ್ದು ಸಾಕಷ್ಟು ಹೆಣಗಳನ್ನು ಮುಚ್ಚಿ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರ ಸತ್ಯಾಸತ್ಯತೆ ತಿಳಿಯಲು ಎಸ್‌ಐಟಿ ರಚಿಸಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಹೇಳಿದರು.
ಬಿಜೆಪಿಯವರು ಪ್ರತಿಯೊಂದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ಗೆ ತಿಳಿವಳಿಕೆ ಕೊರತೆ ಇದೆ. ಧಾರ್ಮಿಕ ಸ್ಥಳದ ಬಗ್ಗೆ ಆರೋಪಗಳು ಬಂದಾಗ ಬಗೆಹರಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಜಿಎಸ್‌ಟಿ ವಿಚಾರವಾಗಿ ಬಿಜೆಪಿ ಸಹಾಯವಾಣಿ ತೆರೆಯುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಜಿಎಸ್‌ಟಿ ಕುರಿತು ಗೊತ್ತಿಲ್ಲ. ಜಿಎಸ್‌ಟಿ ವಿಚಾರದಲ್ಲಿ ಸರ್ಕಾರಕ್ಕೆ ಮಧ್ಯಪ್ರವೇಶಿಸುವ ಅಧಿಕಾರವಿಲ್ಲ. ಕೇಂದ್ರ ಸರ್ಕಾರದ ನಿಲುವು ಅರ್ಥವಾಗುತ್ತಿಲ್ಲ. ಆದಾಯ ತೆರಿಗೆ ಸಮಸ್ಯೆಗಳಿಗೆ ಸಹಾಯವಾಣಿಯನ್ನಾದರೂ ಮಾಡಲಿ, ಸಹಾಯವನ್ನಾದರೂ ಮಾಡಲಿ, ನಾವು ಬೇಡ ಎನ್ನುವುದಿಲ್ಲ ಎಂದು ತಿಳಿಸಿದರು.
ಇಡಿ ದುರುಪಯೋಗ ಆರೋಪ
ಇಡಿ, ಐಟಿ ಮತ್ತು ಸಿಬಿಐ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪದೇ ಪದೇ ಮಾತನಾಡುವುದನ್ನು ಟೀಕಿಸಿದ ಅವರು, ನಿಮಗೆ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದರು. ಮುಡಾ ಪ್ರಕರಣದಲ್ಲಿ ಇಡಿಗೆ ಸುಪ್ರೀಂಕೋರ್ಟ್ ಛಾಟಿ ಬೀಸಿರುವುದು ಕೇಂದ್ರ ಸರ್ಕಾರಕ್ಕೆ ದೊಡ್ಡ ಮುಖಭಂಗ ಆದಂತಾಗಿದೆ. ಐಟಿಯನ್ನು ತಮ್ಮ ಪಕ್ಷದ ಸಂಸ್ಥೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಪಿಎಂ ಅಭ್ಯರ್ಥಿಗೆ ಖರ್ಗೆ ಅರ್ಹ ನಾಯಕ
ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಎಂಬ ಬಸವರಾಜ ರಾಯರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʻಪಿಎಂ ಅಭ್ಯರ್ಥಿಗೆ ಮಲ್ಲಿಕಾರ್ಜುನ ಖರ್ಗೆ ಅರ್ಹ ನಾಯಕʼ ಎಂದು ಹೇಳಿದರು.
ಗೋಬಿ ಮಂಚೂರಿ ಸೇರಿದಂತೆ ಕೆಲವು ಆಹಾರದಲ್ಲಿ ಬಣ್ಣ ಬೆರೆಸುವಿಕೆ ಮುಂದುವರಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸ್ಪಷ್ಟವಾದ ಕಾನೂನನ್ನು ಜಾರಿಗೆ ತರಲಾಗಿದೆ. ಇದಕ್ಕೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ ಎಂದು ತಿಳಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಚಂದ್ರಶೇಖರ ಜುಟ್ಟಲ್, ಸದಾನಂದ ಡಂಗನವರ, ಪಾರಸಮಲ್ ಜೈನ್, ಆರ್. ಎಚ್. ಕೋನರಡ್ಡಿ, ಪಂಚಾಯತ್ ಯೋಜನೆ ಅನುಷ್ಠಾನ ಸಮಿತಿ ಹುಬ್ಬಳ್ಳಿ ತಾಲೂಕು ಅಧ್ಯಕ್ಷ ಶಿವಾನಂದ ಬೊಮ್ಮಣ್ಣನವರ ಮುಂತಾದವರು ಉಪಸ್ಥಿತರಿದ್ದರು.