ಧರ್ಮಸ್ಥಳ ಪ್ರಕರಣ| ಎನ್‌ಐಎ ತನಿಖೆಗೆ ಕೊಡಲ್ಲ- ಜಿ. ಪರಮೇಶ್ವರ್‌ ಸ್ಪಷ್ಟನೆ

ಧರ್ಮಸ್ಥಳ ಪ್ರಕರಣವನ್ನು ಬೇರೆ ದಿಕ್ಕಿಗೆ ಕೊಂಡೊಯ್ಯುವ ಪ್ರಯತ್ನ ನಡೆದಿದೆ. ಎಸ್ಐಟಿ ತನಿಖೆ ಮುಗಿಯುವ ಮೊದಲು ಯಾವುದೇ ಸಂಸ್ಥೆಗೆ ಪ್ರಕರಣ ನೀಡುವುದಿಲ್ಲ. ಬಿಜೆಪಿಯವರ ಉದ್ದೇಶ ಏನು ಎಂಬುದು ನಮಗೆ ಸ್ಪಷ್ಟವಾಗಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ತಿಳಿಸಿದರು.;

Update: 2025-09-02 11:38 GMT

ಗೃಹ ಸಚಿವ ಡಾ.ಜಿ. ಪರಮೇಶ್ವರ್‌

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಆರೋಪದ ಕುರಿತು ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕ್ಕೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪ್ರಕರಣದ ಕುರಿತಂತೆ ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ. ಈ ಹಂತದಲ್ಲಿ ಪ್ರಕರಣವನ್ನು ಎನ್ಐಎಗೆ ನೀಡುವ ಯೋಚನೆ ಮಾಡಿಲ್ಲ. ಅವರು ತನಿಖೆ ಮಾಡಲೇಬೇಕು ಎಂದಾದರೆ ಅವರದ್ದೇ ಆಯಾಮದಲ್ಲಿ ಮಾಡಲಿ, ನಮ್ಮ ಅಭ್ಯಂತರವಿಲ್ಲ," ಎಂದು ಹೇಳಿದರು.

ತನಿಖೆಗೆ ಅಡ್ಡಿಪಡಿಸುವ ಪ್ರಯತ್ನ: ಆರೋಪ

"ಧರ್ಮಸ್ಥಳ ಪ್ರಕರಣವನ್ನು ಬೇರೆ ದಿಕ್ಕಿಗೆ ಕೊಂಡೊಯ್ಯುವ ಪ್ರಯತ್ನ ನಡೆದಿದೆ. ಎಸ್ಐಟಿ ತನಿಖೆ ಮುಗಿಯುವ ಮೊದಲು ಯಾವುದೇ ಸಂಸ್ಥೆಗೆ ಪ್ರಕರಣ ನೀಡುವುದಿಲ್ಲ. ಬಿಜೆಪಿಯವರ ಉದ್ದೇಶ ಏನು ಎಂಬುದು ನಮಗೆ ಸ್ಪಷ್ಟವಾಗಿಲ್ಲ. ತನಿಖೆಗೆ ಅಡ್ಡಿ ಮಾಡುವ ಪ್ರಯತ್ನವಿರಬಹುದು" ಎಂದು ಪರಮೇಶ್ವರ್‌ ಆರೋಪಿಸಿದರು.

ತನಿಖಾ ವರದಿ ಬಂದಿಲ್ಲ

"ಹಿರಿಯ ಐಪಿಎಸ್‌ ಅಧಿಕಾರಿ ಪ್ರಣಬ್ ಮೊಹಂತಿ ಕೇವಲ ಧರ್ಮಸ್ಥಳದ ವಿಷಯಕ್ಕಷ್ಟೇ ಅಲ್ಲ, ಬೇರೆ ವಿಚಾರಗಳ ಬಗ್ಗೆಯೂ ಚರ್ಚೆ ಹಾಗೂ ಮಾಹಿತಿ ನೀಡಲು ಬರುತ್ತಾರೆ. ಬೇರೆಯವರು ಏನು ಮಾತನಾಡಿದ್ದಾರೆ ಎಂಬುದಕ್ಕೆ ನಾನು ಉತ್ತರ ಹೇಳಲಾರೆ. ಎಸ್ಐಟಿ ತನಿಖೆ ನಡೆಯುತ್ತಿದೆ, ಅಲ್ಲಿಂದ ವರದಿ ಬರಬೇಕಿದೆ," ಎಂದು ತಿಳಿಸಿದರು.

ಹಣಕಾಸು ವಿಚಾರಕ್ಕೆ ಇ.ಡಿ ಬರಬಹುದು

ಇ.ಡಿಯ (ED) ಅಧಿಕಾರಿಗಳು ಯಾವ ಉದ್ದೇಶಕ್ಕಾಗಿ ಧರ್ಮಸ್ಥಳಕ್ಕೆ ಬರುತ್ತಾರೆ ಎಂಬುದು ನಮಗೆ ತಿಳಿದಿಲ್ಲ. ಹಣಕಾಸು ವಿಚಾರ ಇದ್ದರೆ ಅವರು ಬರಬಹುದು. ನಮ್ಮ ತನಿಖೆ ಪ್ರತ್ಯೇಕವಾಗಿ ಸಾಗುತ್ತಿದೆ," ಎಂದು ಹೇಳಿದರು.

ಬಿಜೆಪಿಯಿಂದ ದ್ವಂದ್ವ ನೀತಿ

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬಿಜೆಪಿ ಹೋರಾಟದ ಕುರಿತು  ಬಿಜೆಪಿಯವರು ದ್ವಂದ್ವ ನೀತಿ ಅನುಸರಿಸಿ, ಕೌರವರಿಗೂ ಭಾವ ಹಾಗೂ ಪಾಂಡವರಿಗೂ ಭಾವ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಕುಣಿಗಲ್‌ ಶಾಸಕ ಡಾ.ರಂಗನಾಥ್‌ ಆರೋಪಿಸಿದ್ದಾರೆ.

"ಬಿಜೆಪಿಯವರು ಮಗುವನ್ನೂ ಚಿವುಟಿ, ತೊಟ್ಟಿಲನ್ನೂ ತೂಗುತ್ತಾರೆ. ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿಯ ಈ ದ್ವಿಮುಖ ನೀತಿ ಸ್ಪಷ್ಟವಾಗಿದೆ. ಧರ್ಮಸ್ಥಳದ ಮಂಜುನಾಥ ಸ್ವಾಮಿ ಪ್ರತಿಯೊಬ್ಬರ ಮನೆಯಲ್ಲಿದ್ದಾನೆ. ಈಗ ಉಂಟಾಗಿರುವ ಗೊಂದಲ ನಿವಾರಣೆಯಾಗಬೇಕು, ಅದಕ್ಕಾಗಿ ತನಿಖೆ ಮಾಡಬೇಕು ಎಂದು ನಾವು ಹೇಳುತ್ತಿದ್ದೇವೆ" ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದಂತೆ, ಈ ಪ್ರಕರಣದಲ್ಲಿ ಷಡ್ಯಂತ್ರ ನಡೆದಿರುವುದು ನಿಜ. ಬಿಜೆಪಿಯವರು ರಾಜ್ಯದ ಸಂಸ್ಕೃತಿಯನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ. ನಾನು ಮೈಸೂರಿನಲ್ಲಿ ಓದಿದವನು. ಚಾಮುಂಡಿ ಮೇಲೆ ಎಲ್ಲರೂ ಭಕ್ತಿ ಇಟ್ಟಿದ್ದೇವೆ. ಎಲ್ಲಾ ಧರ್ಮದವರು ವಿಜಯದಶಮಿ ಹಬ್ಬವನ್ನು ಆಚರಿಸುತ್ತಾರೆ. ಆದರೆ, ಬಿಜೆಪಿಯವರು ಮಾತ್ರ ಹಗೆಯನ್ನು ಮೂಡಿಸುತ್ತಿದ್ದಾರೆ. ಅವರಿಗೆ ಮುಂದೆ ಚಾಮುಂಡಿ ದೇವಿಯ ಶಾಪ ತಟ್ಟಲಿದೆ. ಅವರು ಎಲ್ಲರನ್ನೂ ಕೆಣಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಪ್ರಧಾನಿ ಮೋದಿ ಅವರು ಮಸೀದಿಯನ್ನು ಉದ್ಘಾಟನೆ ಮಾಡಲಿಲ್ಲವೇ? ಆದರೆ ಬಿಜೆಪಿಯವರು ಜನರ ಭಾವನೆಗಳನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ. ಹೀಗೆ ದೇವಿಯ ಶಾಪಕ್ಕೆ ಅವರು ಗುರಿಯಾಗಲಿದ್ದಾರೆ" ಎಂದು ಎಚ್ಚರಿಕೆ ನೀಡಿದರು.

Tags:    

Similar News