ಧರ್ಮಸ್ಥಳ ಪ್ರಕರಣ: ಮೂರು ಅಸ್ತಿಪಂಜರ ಪತ್ತೆ; 2003ರಲ್ಲಿ ಕಣ್ಮರೆಯಾದ ವಿದ್ಯಾರ್ಥಿನಿ ಪರ ವಕೀಲರ ಹೇಳಿಕೆ
ಮೊದಲ ದಿನ ಮಾಡಿದ ಅಳತೆಗೇ ಕಟ್ಟುನಿಟ್ಟಾಗಿ ಅಂಟಿಕೊಂಡು, ಕೇವಲ ಅದೇ ಸ್ಥಳದಿಂದ ಅವಶೇಷಗಳನ್ನು ಹೊರತೆಗೆಯುವುದು ಅವೈಜ್ಞಾನಿಕ ಮಾತ್ರವಲ್ಲ, ಅರ್ಥಹೀನವೂ ಆಗುತ್ತದೆ ಎಂದು ವಕೀಲರು ಹೇಳಿದ್ದಾರೆ.;
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ಐಟಿ ಶೋಧ ಕಾರ್ಯದಲ್ಲಿ ಸೋಮವಾರ, ಮತ್ತೆ ಕನಿಷ್ಠ ಮೂರು ಮನುಷ್ಯರ ಅವಶೇಷಗಳು ಪತ್ತೆಯಾಗಿವೆ. ಈ ಬೆಳವಣಿಗೆಯ ಬೆನ್ನಲ್ಲೇ, 2003ರಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ ಕುಮಾರಿ ಅನನ್ಯಾ ಭಟ್ ಅವರ ತಾಯಿಯ ಪರ ವಕೀಲರಾದ ಮಂಜುನಾಥ್ ಎನ್. ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಎಸ್ಐಟಿಯ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.
"ಸೋಮವಾರ 11ನೇ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿರುವ 100 ಅಡಿ ಎತ್ತರದ ಬೆಟ್ಟದ ಮೇಲೆ, ದೂರುದಾರ ಭೀಮ ಅವರು ತೋರಿಸಿದ ಜಾಗದಲ್ಲಿ ಅಗೆದಾಗ ಕನಿಷ್ಠ ಮೂರು ಮನುಷ್ಯರ ಅವಶೇಷಗಳು ಪತ್ತೆಯಾಗಿವೆ. ಅವುಗಳಲ್ಲಿ ಒಂದು ಮಹಿಳೆಯದ್ದೆಂದು ತಿಳಿದುಬಂದಿದ್ದು, ಅದೇ ಸ್ಥಳದಲ್ಲಿ ಸೀರೆಯೂ ಪತ್ತೆಯಾಗಿದೆ. ಬೆಟ್ಟ ಹತ್ತುವಾಗ ಜಾರಿಬಿದ್ದು ತಂಡದ ಕೆಲವು ಸದಸ್ಯರು ಗಾಯಗೊಂಡಿದ್ದಾರೆ ಎಂದೂ ವರದಿಯಾಗಿದೆ.
ದೂರುದಾರನು ಮೊದಲ ದಿನ ಗುರುತಿಸಿದ್ದ 11ನೇ ಸ್ಥಳಕ್ಕೆ ಮಾತ್ರ ಸೀಮಿತಗೊಳ್ಳುವಂತೆ ಹೇಳುವ ಬದಲು, ಆ ಜಾಗದ ಸಮೀಪದ ಇನ್ನೊಂದು ಸ್ಥಳಕ್ಕೆ ಕರೆದೊಯ್ಯಲು ಎಸ್ಐಟಿ ಅವಕಾಶ ನೀಡಿದ್ದರಿಂದಲೇ ನಿನ್ನೆಯ ಶೋಧ ಕಾರ್ಯ ಯಶಸ್ವಿಯಾಗಿದೆ. ಮೊದಲ ದಿನ ಮಾಡಿದ ಅಳತೆಗೇ ಕಟ್ಟುನಿಟ್ಟಾಗಿ ಅಂಟಿಕೊಂಡು, ಕೇವಲ ಅದೇ ಸ್ಥಳದಿಂದ ಅವಶೇಷಗಳನ್ನು ಹೊರತೆಗೆಯುವುದು ಅವೈಜ್ಞಾನಿಕ ಮಾತ್ರವಲ್ಲ, ಅರ್ಥಹೀನವೂ ಆಗುತ್ತದೆ. ತಾನು ಈ ಹಿಂದೆ ಗುರುತಿಸಿದ್ದು ನಿಖರವಾಗಿಲ್ಲವೆಂದು ಅನಿಸಿದಾಗ, ಅದನ್ನು ತಿದ್ದಿಕೊಳ್ಳುವ ಸ್ವಾತಂತ್ರ್ಯವನ್ನು ದೂರುದಾರನಿಗೆ ನೀಡುವುದು ಸರಿಯಾಗಿದೆ ಎಂದು ವಕೀಲರು ಹೇಳಿದ್ದಾರೆ.