ಧರ್ಮಸ್ಥಳ ಪ್ರಕರಣ: ಸತ್ಯಕ್ಕಾಗಿ ಸ್ಯಾಂಡಲ್‌ವುಡ್ ನಟರ ದನಿ, ಸರ್ಕಾರದ ಮೇಲೆ ಹೆಚ್ಚಿದ ಒತ್ತಡ
ಈ ಪ್ರಕರಣದ ಕುರಿತು ಸಾರ್ವಜನಿಕ ವಲಯದಲ್ಲಿ ಹೆಚ್ಚುತ್ತಿರುವ ಆಕ್ರೋಶಕ್ಕೆ ಚಿತ್ರರಂಗದ ಪ್ರಮುಖರು ದನಿ ಸೇರಿಸಿದ್ದು, ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.;
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಅಸಹಜ ಸಾವುಗಳು ಮತ್ತು ಮಹಿಳೆಯರ ನಾಪತ್ತೆ ಪ್ರಕರಣವು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಈ ಹೋರಾಟಕ್ಕೆ ಸ್ಯಾಂಡಲ್‌ವುಡ್‌ನ ಪ್ರಮುಖ ತಾರೆಯರು ಕೂಡ ದನಿಗೂಡಿಸಿದ್ದಾರೆ. ನಟಿಯರಾದ ರಮ್ಯಾ, ನಟರಾದ ಪ್ರಕಾಶ್ ರಾಜ್ ಮತ್ತು ರಾಕೇಶ್ ಅಡಿಗ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಕರಣದ ಬಗ್ಗೆ ನ್ಯಾಯಯುತ ಮತ್ತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದು, ಸರ್ಕಾರದ ಮೇಲೆ ತೀವ್ರ ಒತ್ತಡವನ್ನು ಸೃಷ್ಟಿಸಿದ್ದಾರೆ.
ಈ ಪ್ರಕರಣದ ಕುರಿತು ಸಾರ್ವಜನಿಕ ವಲಯದಲ್ಲಿ ಹೆಚ್ಚುತ್ತಿರುವ ಆಕ್ರೋಶಕ್ಕೆ ಚಿತ್ರರಂಗದ ಪ್ರಮುಖರು ದನಿ ಸೇರಿಸಿದ್ದು, ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಮಾಜಿ ಸಂಸದೆ ಮತ್ತು ನಟಿ ರಮ್ಯಾ ಅವರು, "ಧರ್ಮಸ್ಥಳದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ಮತ್ತು ಮಹಿಳೆಯರ ನಾಪತ್ತೆ ಘಟನೆಗಳ ಬಗ್ಗೆ ಕೇಳಿ ನನಗೆ ತುಂಬಾ ಆಘಾತವಾಗಿದೆ. ಧರ್ಮಸ್ಥಳವು ಲಕ್ಷಾಂತರ ಮಂದಿಗೆ ಪೂಜ್ಯನೀಯ ಸ್ಥಳ. ಈ ಪ್ರಕರಣದ ಬಗ್ಗೆ ನ್ಯಾಯಯುತ ತನಿಖೆಯಾಗಬೇಕು ಮತ್ತು ನಾವು ಸತ್ಯವನ್ನು ತಿಳಿದುಕೊಳ್ಳಬೇಕು," ಎಂದು 'ಎಕ್ಸ್' (X) ಸಾಮಾಜಿಕ ಮಾಧ್ಯಮದಲ್ಲಿ ಆಗ್ರಹಿಸಿದ್ದಾರೆ.
ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರವಾಗಿ ಮನವಿ ಮಾಡಿದ್ದಾರೆ. "ಪ್ರಕರಣದ ತನಿಖೆಗಾಗಿ ತಕ್ಷಣ ವಿಶೇಷ ತನಿಖಾ ತಂಡ (SIT) ರಚಿಸಿ. ಈ ಹಿಂದೆ ತನಿಖೆಯ ದಾರಿ ತಪ್ಪಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಿ," ಎಂದು ಒತ್ತಾಯಿಸಿದ್ದಾರೆ.
ನಟ ರಾಕೇಶ್ ಅಡಿಗ ಅವರು, "ನಮ್ಮ ಸರ್ಕಾರಕ್ಕೆ ನಾನು ಬೇಡಿಕೊಳ್ಳುತ್ತೇನೆ, ನಿಮ್ಮ ಜನರ ನಿಟ್ಟುಸಿರಿಗೆ ಎದುರಾಗಿ, ಅವರ ಅಳಲನ್ನು ಆಲಿಸಿ. ತನಿಖೆ ನಡೆಸಿ ಸತ್ಯವನ್ನು ಹೊರಹಾಕುವುದು ನಿಮ್ಮ ಪವಿತ್ರ ಕರ್ತವ್ಯ. ಇನ್ನು ವಿಳಂಬ ಮತ್ತು ನೆಪಗಳು ಬೇಡ," ಎಂದು ಸರ್ಕಾರವನ್ನು ತೀವ್ರವಾಗಿ ಆಗ್ರಹಿಸಿದ್ದಾರೆ.
ಸರ್ಕಾರದ ಅಳೆದು-ತೂಗಿದ ಪ್ರತಿಕ್ರಿಯೆ
ಸಾರ್ವಜನಿಕರು ಮತ್ತು ಗಣ್ಯರಿಂದ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರವು ಈ ವಿಷಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಆದರೆ, ತನಿಖೆಯ ಸ್ವರೂಪದ ಬಗ್ಗೆ ಷರತ್ತುಬದ್ಧ ಉತ್ತರಗಳನ್ನು ನೀಡಿದೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು, "ಧರ್ಮಸ್ಥಳದ ಸುತ್ತಮುತ್ತ ಕಳೆದ ದಶಕಗಳಲ್ಲಿ ನಡೆದ 'ಅಸಹಜ ಸಾವು' ಪ್ರಕರಣಗಳ ಬಗ್ಗೆ ಅಗತ್ಯ ಬಿದ್ದರೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. ಈಗಾಗಲೇ ದೂರುದಾರರೊಬ್ಬರ ದೂರಿನ ಅನ್ವಯ ಪ್ರಾಥಮಿಕ ತನಿಖೆ ಆರಂಭವಾಗಿದೆ," ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಸ್‌ಐಟಿ ರಚನೆಯ ತೀರ್ಮಾನವನ್ನು ಪೊಲೀಸ್ ಇಲಾಖೆಗೆ ಬಿಟ್ಟಿದ್ದಾರೆ. "ತನಿಖೆಗೆ ಎಸ್‌ಐಟಿ ರಚಿಸುವಂತೆ ಪೊಲೀಸ್ ಇಲಾಖೆಯವರು ಹೇಳಿದರೆ ಮಾತ್ರ ಮಾಡುತ್ತೇವೆ. ಸರ್ಕಾರದ ಮೇಲೆ ಯಾವುದೇ ಒತ್ತಡವಿಲ್ಲ, ನಾವು ಕಾನೂನು ಪ್ರಕಾರವೇ ನಡೆಯುತ್ತೇವೆ. ಈ ಬಗ್ಗೆ ಯಾರೇ ಒತ್ತಡ ಹಾಕಿದರೂ ಕೇಳುವುದಿಲ್ಲ," ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡರ ಎಸ್‌ಐಟಿ ರಚನೆಯ ಹೇಳಿಕೆ ಕುರಿತು, "ನಾವು ಪರವೂ ಇಲ್ಲ, ವಿರೋಧವೂ ಇಲ್ಲ. ಇಲಾಖೆಯ ವರದಿಯನ್ನೇ ಆಧರಿಸಿ ತೀರ್ಮಾನ ಕೈಗೊಳ್ಳುತ್ತೇವೆ," ಎಂದು ತಿಳಿಸಿದ್ದಾರೆ.