ಧರ್ಮಸ್ಥಳ ಪ್ರಕರಣ: 'ಮಾಸ್ಕ್ ಮ್ಯಾನ್' ಭೀಮ ಮತ್ತೆ 3 ದಿನ ಎಸ್‌ಐಟಿ ಕಸ್ಟಡಿಗೆ; ಹಲವರಿಗೆ ನೋಟಿಸ್ ಜಾರಿ
ಈ ಹಿಂದೆ ನ್ಯಾಯಾಲಯವು ಭೀಮನನ್ನು 10 ದಿನಗಳ ಎಸ್‌ಐಟಿ ಕಸ್ಟಡಿಗೆ ನೀಡಿತ್ತು. ಆ ಅವಧಿ ಬುಧವಾರ (ಸೆಪ್ಟೆಂಬರ್ 3) ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಎಸ್‌ಐಟಿ ಅಧಿಕಾರಿಗಳು ಆತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.;
ಧರ್ಮಸ್ಥಳದಲ್ಲಿ ಸಾಮೂಹಿಕ ಹತ್ಯೆ ನಡೆದಿದೆ ಎಂದು ಆರೋಪಿಸಿ, ತಲೆಬುರುಡೆಯೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದ 'ಮಾಸ್ಕ್ ಮ್ಯಾನ್' ಎಂದೇ ಕರೆಯಲ್ಪಡುವ ಭೀಮನನ್ನು ಬೆಳ್ತಂಗಡಿ ನ್ಯಾಯಾಲಯವು ಮತ್ತೆ ಮೂರು ದಿನಗಳ ಕಾಲ ವಿಶೇಷ ತನಿಖಾ ದಳದ (ಎಸ್‌ಐಟಿ) ವಶಕ್ಕೆ ನೀಡಿದೆ.
ಈ ಹಿಂದೆ ನ್ಯಾಯಾಲಯವು ಭೀಮನನ್ನು 10 ದಿನಗಳ ಎಸ್‌ಐಟಿ ಕಸ್ಟಡಿಗೆ ನೀಡಿತ್ತು. ಆ ಅವಧಿ ಬುಧವಾರ (ಸೆಪ್ಟೆಂಬರ್ 3) ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಎಸ್‌ಐಟಿ ಅಧಿಕಾರಿಗಳು ಆತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಹೆಚ್ಚಿನ ವಿಚಾರಣೆಗಾಗಿ ಆತನನ್ನು ತಮ್ಮ ವಶಕ್ಕೆ ನೀಡಬೇಕೆಂದು ಪೊಲೀಸರು ಮನವಿ ಮಾಡಿದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಸೆಪ್ಟೆಂಬರ್ 6ರವರೆಗೆ ಚಿನ್ನಯ್ಯನನ್ನು ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಮತ್ತು ತನಿಖೆಯ ಪ್ರಗತಿ
ಧರ್ಮಸ್ಥಳದಲ್ಲಿ ಸಾಮೂಹಿಕ ಹತ್ಯೆ ಮಾಡಿ, ನೂರಾರು ಶವಗಳನ್ನು ಹೂಳಲಾಗಿದೆ ಎಂದು ಭೀಮ ಆರೋಪಿಸಿ, ತಲೆಬುರುಡೆಯೊಂದಿಗೆ ಠಾಣೆಗೆ ತೆರಳಿ ದೂರು ದಾಖಲಿಸಿದ್ದು ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿತ್ತು. ಈ ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚಲು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿತ್ತು.
ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಎಸ್‌ಐಟಿ, ಈ ಪ್ರಕರಣದ ಹಿಂದೆ ಇರುವ ಇತರ ವ್ಯಕ್ತಿಗಳನ್ನು ಪತ್ತೆಹಚ್ಚಲು ಬಲೆ ಬೀಸಿದೆ. ಭೀಮ ನೀಡಿದ ಹೇಳಿಕೆಗಳ ಆಧಾರದ ಮೇಲೆ, ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮತ್ತಣ್ಣವರ್, ಉದ್ಯಮಿ ಉದಯಕುಮಾರ್ ಜೈನ್ ಸೇರಿದಂತೆ ಹಲವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ಪ್ರಕರಣದಲ್ಲಿ ವಿದೇಶಿ ಹಣಕಾಸಿನ ನೆರವು ಮತ್ತು ಇತರ ಸಂಚುಕೋರರ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಎಸ್‌ಐಟಿ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಚಿನ್ನಯ್ಯನ ಹೆಚ್ಚಿನ ವಿಚಾರಣೆಯಿಂದ ಈ ಪ್ರಕರಣದ ಹಿಂದಿರುವ ಸಂಪೂರ್ಣ ಜಾಲ ಬಯಲಾಗುವ ನಿರೀಕ್ಷೆಯಿದೆ.