Karnataka Bike Taxi Ban| ಬೈಕ್ ಟ್ಯಾಕ್ಸಿ ನಿಷೇಧದ ನಡುವೆಯೂ 'ಪಾರ್ಸೆಲ್' ಹೆಸರಿನಲ್ಲಿ ಸವಾರಿ

ರಾಪಿಡೊ ಸಂಸ್ಥೆ ತನ್ನ ಅಪ್ಲಿಕೇಶನ್‌ನಿಂದ ಬೈಕ್ ಟ್ಯಾಕ್ಸಿ ಆಯ್ಕೆಯನ್ನು ತೆಗೆದುಹಾಕಿದೆ. ಆದರೆ, ಅದರ ಸ್ಥಳದಲ್ಲಿ ʻಬೈಕ್ ಪಾರ್ಸೆಲ್ʼ ಸೇವೆಯನ್ನು ಪ್ರಾರಂಭಿಸಿದೆ.;

Update: 2025-06-16 11:22 GMT

ಬೈಕ್‌ ಟಾಕ್ಸಿ ಸೇವೆ ಬದಲಿಗೆ ಬೈಕ್‌ ಪಾರ್ಸೆಲ್‌ ಸೇವೆ

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ʻಬೈಕ್​ ಟ್ಯಾಕ್ಸಿʼ ಓಡಾಟಕ್ಕೆ ಇಂದಿನಿಂದ (ಜೂನ್​ 16ರಿಂದ) ಸರ್ಕಾರ ನಿಷೇಧ ಹೇರಿದೆ. ಆದರೆ ಕೋರ್ಟ್‌ ಹಾಗೂ ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ರಾಪಿಡೋ, ಉಬರ್‌ಗಳಂತಹ ಆ್ಯಪ್ ಆಧಾರಿತ ಪ್ಲಾಟ್‌ಫಾರ್ಮ್‌ಗಳು ‘ಪಾರ್ಸೆಲ್ ಡೆಲಿವರಿ’ ಹೆಸರಿನಲ್ಲಿ ಸೇವೆ ಮುಂದುವರಿಸಿದ್ದು, ವಾಸ್ತವದಲ್ಲಿ ಪ್ರಯಾಣಿಕರ ಸಾಗಣೆ ನಡೆಯುತ್ತಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ. 

ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ʻದ ಫೆಡರಲ್ ಕರ್ನಾಟಕʼ ರಿಯಾಲಿಟಿ ಚೆಕ್ ನಡೆಸಿತು. ರಾಪಿಡೊ ಸಂಸ್ಥೆ ತನ್ನ ಅಪ್ಲಿಕೇಶನ್‌ನಿಂದ ಬೈಕ್ ಟ್ಯಾಕ್ಸಿ ಆಯ್ಕೆಯನ್ನು ತೆಗೆದುಹಾಕಿದೆ. ಆದರೆ, ಅದರ ಸ್ಥಳದಲ್ಲಿ ʻಬೈಕ್ ಪಾರ್ಸೆಲ್ʼ ಸೇವೆ ಪ್ರಾರಂಭಿಸಿದೆ. ಆ್ಯಪ್‌ ಮೂಲಕ ಪಾರ್ಸೆಲ್ ಬುಕ್ ಮಾಡಿದರೆ, ಬರುವ ಬೈಕ್‌ನಲ್ಲಿ ವ್ಯಕ್ತಿಯೇ ಕುಳಿತು ಪ್ರಯಾಣ ಮಾಡಬಹುದು ಎಂದು ರಿಯಾಲಿಟಿ ಚೆಕ್‌ನಲ್ಲಿ ತಿಳಿದುಬಂದಿದೆ. ಅಪ್ಲಿಕೇಶನ್‌ನಲ್ಲಿ ಬಳಕೆದಾರರಿಗೆ ಸೇವೆ ಸ್ಥಗಿತಗೊಂಡಿರುವ ಸೂಚನೆಯೂ ರಾಪಿಡೋ ನೀಡಿದೆ. 

ಸೂಚನೆಯಲ್ಲಿ ಏನಿದೆ? 

ʻಕರ್ನಾಟಕದಲ್ಲಿ ನಮ್ಮ ಬೈಕ್ ಟ್ಯಾಕ್ಸಿ ಸೇವೆಗಳನ್ನು ಜೂನ್ 16, 2025 ರಿಂದ ಹೈಕೋರ್ಟ್ ಆದೇಶಗಳಿಗೆ ಅನುಸಾರವಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಕಂಪನಿಯು ಬೈಕ್ ಟ್ಯಾಕ್ಸಿಗಳು ದೈನಂದಿನ ಪ್ರಯಾಣಿಕರಿಗೆ ಅತ್ಯಂತ ಪ್ರಯೋಜನಕಾರಿ ಎಂದು ನಮಗೆ ತಿಳಿದಿದೆ. ಆದರೆ ನಾವು ಕಾನೂನನ್ನು ಗೌರವಿಸುತ್ತೇವೆ ಮತ್ತು ನ್ಯಾಯಾಲಯದ ಸೂಚನೆಗಳನ್ನು ಸಂಪೂರ್ಣವಾಗಿ ಪಾಲಿಸುತ್ತೇವೆ. ನಾವು ಸೇವೆ ಸಲ್ಲಿಸುವ ಸಮುದಾಯಗಳಿಗೆ ನಮ್ಮ ಬದ್ಧತೆ ಉಳಿದಿದೆ ಮತ್ತು ಭವಿಷ್ಯದಲ್ಲಿ ಎಲ್ಲರಿಗೂ ಪ್ರವೇಶಿಸಬಹುದಾದ, ಕೈಗೆಟುಕುವ ಮತ್ತು ಅನುಕೂಲಕರ ಪ್ರಯಾಣ ಸೇವೆ ಮತ್ತೆ ಲಭ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ ಎಂಬ ಸೂಚನೆಯನ್ನು ನೀಡಿದೆ.

ಓಲಾ-ಉಬರ್ ಕೂಡಾ ಇದೇ ಹಾದಿಯಲ್ಲಿ?

ಇದೇ ತರಹದ ಮಾದರಿಯಲ್ಲಿ ಓಲಾ ಮತ್ತು ಉಬರ್‌ನಂತಹ ಪ್ಲಾಟ್‌ಫಾರ್ಮ್‌ನಲ್ಲಿ ಬೈಕ್ ಟ್ಯಾಕ್ಸಿ ಆಯ್ಕೆ ಇನ್ನೂ ಲಭ್ಯವಿದೆ. ಆದರೆ ಈ ಎರಡೂ ಅಪ್ಲಿಕೇಶನ್‌ಗಳಲ್ಲಿ ಬೈಕ್ ಟ್ಯಾಕ್ಸಿಗಳನ್ನು ಬುಕ್ ಮಾಡಿದರೆ ಹಿಂದಿನಂತೆ ಸುಲಭವಾಗಿ ದೊರಕುತ್ತಿಲ್ಲ. ಉಬರ್ ಟಾಕ್ಸಿ ಸೇವೆನ್ನು ́ʼಬೈಕ್ ಕೊರಿಯರ್ʼ ಎಂಬ ಹೆಸರಿನಿಂದಿಗೆ ಬದಲಾಯಿಸಿದೆ. ಆದರೆ ಈ ಬಗ್ಗೆ ಎರಡೂ ಕಂಪನಿಗಳು ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ.

ಸಾರ್ವಜನಿಕರ ಸುರಕ್ಷತೆ, ಸರ್ಕಾರದ ಸವಾಲು

ಸರ್ಕಾರದ ನಿಷೇಧದ ನಡುವೆಯೂ ಈ ಕಂಪೆನಿಗಳು ಪರ್ಯಾಯ ಹೆಸರಿನಲ್ಲಿ ಜನರಿಗೆ ಪ್ರಯಾಣ ಸೇವೆಯನ್ನು ಮುಂದುವರಿಸಿರುವುದು ಸಾರ್ವಜನಿಕ ಸುರಕ್ಷತೆ, ಕಾನೂನಿನ ಗೌರವ ಮತ್ತು ಉಲ್ಲಂಘನೆ ನಡೆಸಿದಂತಾಗಿದೆ. 

ಹಿನ್ನೆಲೆ ಏನು?

ಜೂನ್ 15 ರೊಳಗೆ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಸ್ಥಗಿತಗೊಳಿಸಲು ಹೈಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಕ್ರಮಕ್ಕೆ ಮುಂದಾಗಿದೆ. ನಿಯಮ ಉಲ್ಲಂಘಿಸಿ ಬೈಕ್‌ ಟ್ಯಾಕ್ಸಿ ಸೇವೆ ಒದಗಿಸುವ ದ್ವಿಚಕ್ರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಅಲ್ಲದೇ 2 ಸಾವಿರ ರೂ.ರಿಂದ 10 ಸಾವಿರ ರೂ.ಗಳವರೆಗೆ ದಂಡ ಅಥವಾ ಮೂರು ತಿಂಗಳಿಂದ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಲಾಗಿದೆ.

ಸಿ.ಎಂಗೆ ಪತ್ರ ಬರೆದ ಬೈಕ್ ಟ್ಯಾಕ್ಸಿ ಚಾಲಕರು

ಕರ್ನಾಟಕದ ಬೈಕ್ ಟ್ಯಾಕ್ಸಿ ಚಾಲಕರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳ ಮೇಲಿನ ನಿಷೇಧ ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ. ಬೆಂಗಳೂರು ಮತ್ತು ಕರ್ನಾಟಕದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಬೈಕ್ ಟ್ಯಾಕ್ಸಿಗಳನ್ನು ಅವಲಂಬಿಸಿ ಜೀವನ ಕಟ್ಟಿಕೊಂಡಿದ್ದಾರೆ. ಇದರಿಂದ ಅವಲಂಬಿತ ಕುಟುಂಬಗಳ ಸಂಕಷ್ಟಕ್ಕೆ ಒಳಗಾಗಿವೆ ಎಂದು ಪತ್ರ ಬರೆದು ಮನವಿ ಮಾಡಿದ್ದಾರೆ.

ಪ್ರಯಾಣಿಕರಿಗೆ ದೊಡ್ಡ ಹಿನ್ನಡೆ

ಬೆಂಗಳೂರಿನಂತಹ ಸಂಚಾರ ದಟ್ಟಣೆಯ ನಗರದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಕೊಂಚ ಮಟ್ಟಿನ ಪರಿಹಾರ ಒದಗಿಸಿತ್ತು. ಈಗ ಅವುಗಳ ನಿರ್ಬಂಧದಿಂದ ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾಗಿದ್ದು, ದುಬಾರಿ ಶುಲ್ಕ ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ವಿಶೇಷವಾಗಿ ಮಧ್ಯಮ ವರ್ಗ ಮತ್ತು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ. ‌

ಬೈಕ್‌ ಟ್ಯಾಕ್ಸಿ ಸ್ಥಗಿತಕ್ಕೆ ಸರ್ಕಾರ ಸೂಚನೆ ನೀಡಿದೆ. ಆದಾರೂ, ಕೆಲ ಸಂಸ್ಥೆಗಳು ಬೈಕ್‌ ಸೇವೆ ಮುಂದುವರಿಸಿವೆ. ಇವುಗಳಿಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ. ಬೆಂಗಳೂರಿನ ವಿವಿಧೆಡೆ ಕಾರ್ಯಾಚರಣೆ ನಡೆಸಿ ಮೂರು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಬಿಬಿಎಂಪಿ ಎಲ್ಲಾ ವಲಯಗಳಲ್ಲಿ ಕಠಿಣ ಕ್ರಮ ಹಾಗೂ ಮೇಲ್ವಿಚಾರಣೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಹೈಕೋರ್ಟ್‌ ಆದೇಶ ಹಾಗೂ ಸರ್ಕಾರದ ಸೂಚನೆ ಉಲ್ಲಂಘಿಸಿ ಬೈಕ್‌ ಸೇವೆ ನೀಡುವವರಿಗೆ 2 ಸಾವಿರ ರೂ.ಗಳಿಂದ 10 ಸಾವಿರ ದಂಡ ವಿಧಿಸಲಾಗುವುದು. ಅಲ್ಲದೇ ಮೂರು ತಿಂಗಳಿಂದ 1 ವರ್ಷದವರೆಗೆ ಶಿಕ್ಷೆಗೆ ವಿಧಿಸಲಾಗುವುದು ಎಂದು ಹೇಳಿದರು.

ಚಾಲಕರ ಗಳಿಕೆ ಮೇಲೆ ನೇರ ಪರಿಣಾಮ

ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತದಿಂದ ಸಾವಿರಾರು ಗಿಗ್ ಕಾರ್ಮಿಕರು ನಿರುದ್ಯೋಗದ ಅಪಾಯದಲ್ಲಿದ್ದಾರೆ. ಅನೇಕ ಚಾಲಕರು ಸಾಲದ ಮೇಲೆ ಬೈಕ್‌ಗಳನ್ನು ಖರೀದಿಸಿದ್ದರು. ಈಗ ಇಎಂಐ ಪಾವತಿಗೂ ಸಂಕಷ್ಟ ಎದುರಾಗುವ ಭೀತಿ ಇದೆ. ಮುಂದಿನ ಮೂರು ತಿಂಗಳಲ್ಲಿ ಸರ್ಕಾರವು ಬೈಕ್ ಟ್ಯಾಕ್ಸಿಗಳಿಗೆ ಸ್ಪಷ್ಟ ನಿಯಮ ಮತ್ತು ಮಾರ್ಗಸೂಚಿ ರೂಪಿಸಬೇಕಾಗುತ್ತದೆ. ಆಗ ಮಾತ್ರ ಭವಿಷ್ಯದಲ್ಲಿ ಬೈಕ್‌ ಟ್ಯಾಕ್ಸಿ ಸೇವೆಗಳನ್ನು ಮರಳಿ ಪಡೆಯುವ ಸಾಧ್ಯತೆಯಿದೆ.

ದ್ವಿಚಕ್ರ ವಾಹನವನ್ನು ಸಾರಿಗೆ ವಾಹನವಾಗಿ ಬಳಸುವ ಮೂಲಕ ಅಥವಾ ವಾಹನ ನೋಂದಣಿ ಷರತ್ತುಗಳನ್ನು ಉಲ್ಲಂಘಿಸಿರುವ ಬೈಕ್ ಟ್ಯಾಕ್ಸಿಗಳು 10ಸಾವಿರ ರೂ.ವರೆಗೆ ದಂಡ ಪಾವತಿ ಮಾಡಬೇಕಾಗುತ್ತದೆ. ಬೈಕ್ ಟ್ಯಾಕ್ಸಿ ಚಾಲಕರು ವಾಹನ ವಿಮೆ, ಮಾಲಿನ್ಯ ಮತ್ತು ನೋಂದಣಿ ನವೀಕರಣ ಉಲ್ಲಂಘನೆಗಳಿಗೆ ಸಂಬಂಧಿಸಿ ಇತರ ದಂಡಗಳನ್ನು ಕೂಡ ಪಾವತಿಸಬೇಕಾಗುತ್ತದೆ. 

Tags:    

Similar News