ತುಂಗಭದ್ರಾ ಡ್ಯಾಂ ಹೂಳು ತೆರವು ಅಸಾಧ್ಯ: ನವಲಿ ಅಣೆಕಟ್ಟು ಅಥವಾ ನೀರು ಪಂಪಿಂಗ್‌ಗೆ ಚಿಂತನೆ: ಡಿಸಿಎಂ

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮೇ 20ರಂದು ಹಮ್ಮಿಕೊಂಡಿರುವ 'ಸಾಧನಾ ಸಮಾವೇಶ'ದ ಪೂರ್ವ ಸಿದ್ಧತೆಯನ್ನು ಪರಿಶೀಲಿಸಿದ ನಂತರ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.;

Update: 2025-05-16 11:48 GMT

ತುಂಗಭದ್ರಾ ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಯುವುದು ಕಾರ್ಯಸಾಧ್ಯವಲ್ಲದ ಕಾರಣ ನವಲಿ ಬಳಿ ಸಮಾನಾಂತರ ಅಣೆಕಟ್ಟು ನಿರ್ಮಾಣ ಅಥವಾ ಬಸವಸಾಗರ ಜಲಾಶಯದಿಂದ ನಮ್ಮ ಪಾಲಿನ 27 ರಿಂದ 30 ಟಿಎಂಸಿ ನೀರನ್ನು ಪಂಪ್ ಮಾಡಿ ಮೇಲ್ಭಾಗದ ಕೆರೆಗಳನ್ನು ತುಂಬಿಸುವ ಸಾಧ್ಯತೆಗಳ ಕುರಿತು ರಾಜ್ಯದ ತಾಂತ್ರಿಕ ಸಮಿತಿ ವರದಿ ನೀಡಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮೇ 20ರಂದು ಹಮ್ಮಿಕೊಂಡಿರುವ 'ಸಾಧನಾ ಸಮಾವೇಶ'ದ ಪೂರ್ವ ಸಿದ್ಧತೆಯನ್ನು ಪರಿಶೀಲಿಸಿದ ನಂತರ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.

ತಾಂತ್ರಿಕ ಸಮಿತಿಯ ಪ್ರಸ್ತಾವನೆಯನ್ನು ತುಂಗಭದ್ರಾ ನಿಗಮದ ಮುಂದಿಟ್ಟಿರುವುದಾಗಿ ತಿಳಿಸಿದ ಡಿಸಿಎಂ, ಈ ಬಗ್ಗೆ ಚರ್ಚಿಸಲು ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಬಳಿ ಸಮಯ ಕೇಳಿದ್ದೇನೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಇನ್ನೂ ಸಮಯ ನೀಡಿಲ್ಲ. ಈ ಭಾಗದ ಜನರಿಗಾಗಿ ನವಲಿ ಅಣೆಕಟ್ಟು ನಿರ್ಮಾಣ ಮಾಡುವುದಾಗಿ ನಾವು ಬಜೆಟ್‌ನಲ್ಲಿ ಪ್ರಸ್ತಾವನೆ ಮಾಡಿದ್ದೆವು ಎಂದು ನೆನಪಿಸಿದರು.

ಏಕಮುಖಿ ನಿರ್ಧಾರ ಅಸಾಧ್ಯ

ತುಂಗಭದ್ರಾ ಅಣೆಕಟ್ಟಿನ ಗೇಟ್‌ಗಳ ಬದಲಾವಣೆ ಕುರಿತು ಕೇಳಿದಾಗ, ಎಲ್ಲಾ ಗೇಟ್‌ಗಳನ್ನು ಬದಲಾಯಿಸುವ ಬಗ್ಗೆ ತೀರ್ಮಾನ ಮಾಡಲಾಗಿದೆ. ಏನು ತೀರ್ಮಾನ ಮಾಡಲಾಗಿದೆ ಎಂದು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ. ಯಾವುದೇ ಕೆಲಸ ಮಾಡಲು ತಾಂತ್ರಿಕ ಸಮಿತಿಯ ವರದಿ ಅಗತ್ಯ. ಏಕಾಏಕಿ ಮಾಡಲು ಸಾಧ್ಯವಿಲ್ಲ. ಈ ನಿರ್ಧಾರವನ್ನು ತುಂಗಭದ್ರಾ ಬೋರ್ಡ್‌ನಿಂದಲೇ ತೆಗೆದುಕೊಳ್ಳಬೇಕು, ನಾವು ಒಬ್ಬರೇ ಮಾಡಲು ಆಗುವುದಿಲ್ಲ. ಮೂರು ರಾಜ್ಯಗಳು ಸೇರಿ ಇದನ್ನು ಮಾಡಬೇಕು. ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಚರ್ಚೆ ನಡೆಸಲಾಗುವುದು, ತೆಲಂಗಾಣದವರಿಗೂ ತಿಳಿಸಿದ್ದು ಅವರೂ ಸಹ ಚರ್ಚಿಸುತ್ತಿದ್ದಾರೆ ಎಂದು ವಿವರಿಸಿದರು.

ಕಳಸಾ ಬಂಡೂರಿ ವಿಚಾರದಲ್ಲಿ ನಮ್ಮ ಪರವಾಗಿ ವರದಿ ಬಂದಿರುವ ಬಗ್ಗೆ ಕೇಳಿದಾಗ, ಕಳೆದ ವಾರ ನಾನೇ ಖುದ್ದಾಗಿ ನಾಲ್ಕು ಕೇಂದ್ರ ಸಚಿವರನ್ನು ಭೇಟಿಯಾಗಿದ್ದೆ. ಕೇಂದ್ರ ಅರಣ್ಯ ಸಚಿವರು ನಮ್ಮ ಅಧಿಕಾರಿಗಳನ್ನು ಅಲ್ಲಿಯೇ ಇರಿಸಿಕೊಂಡು ಪ್ರತ್ಯೇಕ ಸಭೆ ನಡೆಸುವುದಾಗಿ ತಿಳಿಸಿದ್ದರು ಎಂದು ಹೇಳಿದರು.

ಒಂದು ಲಕ್ಷ ಪಟ್ಟಾ ಖಾತೆ ಹಂಚಿಕೆ ಮತ್ತು ಸಾಧನಾ ಸಮಾವೇಶ

ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬಿರುವ ಹಿನ್ನೆಲೆಯಲ್ಲಿ, ಕಂದಾಯ ಭೂಮಿಯಲ್ಲಿ ವಾಸಿಸುತ್ತಿರುವ ಲಂಬಾಣಿ, ಗೊಲ್ಲ ಸಮುದಾಯ ಸೇರಿದಂತೆ ಇತರ ಸಮುದಾಯಗಳ ಒಂದು ಲಕ್ಷ ಜನರಿಗೆ ಪಟ್ಟಾ ಖಾತೆಗಳನ್ನು ಹಂಚಿಕೆ ಮಾಡಲಾಗುವುದು. ಪಟ್ಟಾ ಸ್ವೀಕರಿಸುವ 50 ಸಾವಿರ ಜನರನ್ನು ಹತ್ತಿರದ ಮೂರು ಜಿಲ್ಲೆಗಳಿಂದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಡಿಸಿಎಂ ತಿಳಿಸಿದರು.

ನಾಗೇಂದ್ರ ಸಮರ್ಥರಿದ್ದಾರೆ

ನಾಗೇಂದ್ರ ಅವರು ಮತ್ತೆ ಸಚಿವರಾಗುತ್ತಾರೆಯೇ ಎಂದು ಕೇಳಿದಾಗ, "ಅವರು ಸಂಪೂರ್ಣವಾಗಿ ಸಮರ್ಥರಿದ್ದಾರೆ" ಎಂದು ಉತ್ತರಿಸಿದರು. ಸ್ಥಳೀಯ ಮಟ್ಟದ ಪಕ್ಷದ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ಮೂಡಿರುವ ಬಗ್ಗೆ ಕೇಳಿದಾಗ, ಯಾವುದೇ ಭಿನ್ನಾಭಿಪ್ರಾಯವಿಲ್ಲ, ಇಲ್ಲಿ ವ್ಯಕ್ತಿ ಪೂಜೆಯಿಲ್ಲ, ಪಕ್ಷದ ಪೂಜೆ ಮಾತ್ರ. ಜಿಲ್ಲೆಯಲ್ಲಿ ಯಾವ ಬಣವೂ ಇಲ್ಲ, ನಮ್ಮದು ಕಾಂಗ್ರೆಸ್ ಒಂದೇ ಬಣ ಎಂದು ನುಡಿದರು.

ಕೆಎಂಎಫ್ ಅಧ್ಯಕ್ಷರಾದ ಭೀಮಾನಾಯ್ಕ್ ಅವರು ಮಾದಿಗ ಸಮುದಾಯಕ್ಕೆ ಅಪಮಾನ ಮಾಡಿ ಮಾತನಾಡಿದ್ದಾರೆ ಎಂದು ಕೇಳಿದಾಗ, ಈ ಬಗ್ಗೆ ವಿಚಾರಿಸುತ್ತೇನೆ ಎಂದು ಉತ್ತರಿಸಿದರು. ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ಸರಿಯಾದ ಉಸ್ತುವಾರಿ ಸಚಿವರು ಇಲ್ಲದಿರುವ ಬಗ್ಗೆ ಗಮನಕ್ಕೆ ತಂದಿರಲಿಲ್ಲ, ಈಗ ವಿಚಾರಿಸುವೆ ಎಂದು ಹೇಳಿದರು.

Tags:    

Similar News