ಹಿಂದಿ ಮಾತನಾಡಿದ್ದಕ್ಕೆ ಪಾರ್ಕಿಂಗ್‌ ನಿರಾಕರಣೆ; ದೇಶದಲ್ಲಿ ಇಂಗ್ಲೀಷ್‌ ಕಡ್ಡಾಯ ಭಾಷೆ ಮಾಡಲು ಟೆಕ್ಕಿಯ ಆಗ್ರಹ

ದೇಶದಲ್ಲಿ ಶೀಘ್ರದಲ್ಲೇ ಇಂಗ್ಲಿಷ್ ಸಾಮಾನ್ಯ ಬಳಕೆಯ ಭಾಷೆಯಾಗಲಿದೆ. ಏಕೆಂದರೆ, ಹೆಚ್ಚಿನ ಭಾರತೀಯರು ಈಗಾಗಲೇ ತಮ್ಮ ದೈನಂದಿನ ಜೀವನದಲ್ಲಿ ಇಂಗ್ಲಿಷ್ ಬಳಸುತ್ತಿದ್ದಾರೆ ಎಂದು ಅರ್ಪಿತ್‌ ಭಯಾನಿ ಪ್ರತಿಪಾದಿಸಿದ್ದಾರೆ.;

Update: 2025-05-23 12:46 GMT

ಬೆಂಗಳೂರಿನಲ್ಲಿ ʼಹಿಂದಿ ಮಾತನಾಡಿದ್ದಕ್ಕೆ ಪಾರ್ಕಿಂಗ್‌ ಜಾಗವನ್ನೇ  ನೀಡಲಿಲ್ಲʼ ಎಂಬ ಸಾಫ್ಟ್‌ವೇರ್‌ ಎಂಜಿನಿಯರ್‌ ಹೇಳಿಕೆಯೊಂದು ಭಾಷಾ ವಿವಾದ ಕುರಿತಂತೆ ಹೊಸ ಚರ್ಚೆ ಹುಟ್ಟು ಹಾಕಿದೆ.

ಬೆಂಗಳೂರಿನ ಗೂಗಲ್‌ ಸಂಸ್ಥೆಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಅರ್ಪಿತ್‌ ಭಯಾನಿ ಎಂಬುವರು ತಮಗಾದ ಅನುಭವವನ್ನು ಲಿಂಕ್ಡ್‌ ಇನ್‌ನಲ್ಲಿ ಹಂಚಿಕೊಂಡಿದ್ದಾರೆ.

"ಸ್ವಲ್ಪ ಪಕ್ಕಕ್ಕೆ ಸರಿಯಿರಿ” ಎಂಬ ನನ್ನ ವಿನಂತಿ ಹುಸಿಯಾಯಿತು. ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಪಾರ್ಕಿಂಗ್ ಸ್ಥಳ ನಿರಾಕರಿಸಲಾಯಿತು. ಸಂಸ್ಕೃತಿ ಮತ್ತು ಭಾಷಾ ರಕ್ಷಣೆ ಪ್ರತಿಪಾದಿಸುವವರು ತಮ್ಮ ಮಕ್ಕಳನ್ನು ಪ್ರಾದೇಶಿಕ ಭಾಷಾ ಮಾಧ್ಯಮದ ಶಾಲೆಗಳಿಗೆ ಸೇರಿಸುತ್ತಿದ್ದಾರೆಯೇ ಅಥವಾ ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಸ್ಥಳಾಂತರಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಹೆಚ್ಚುತ್ತಿರುವ ಇಂಗ್ಲಿಷ್ ಬಳಕೆ

ದೇಶದಲ್ಲಿ ಶೀಘ್ರದಲ್ಲೇ ಇಂಗ್ಲಿಷ್ ಸಾಮಾನ್ಯ ಬಳಕೆಯ ಭಾಷೆಯಾಗಲಿದೆ. ಏಕೆಂದರೆ, ಹೆಚ್ಚಿನ ಭಾರತೀಯರು ಈಗಾಗಲೇ ತಮ್ಮ ದೈನಂದಿನ ಜೀವನದಲ್ಲಿ ಇಂಗ್ಲಿಷ್ ಬಳಸುತ್ತಿದ್ದಾರೆ ಎಂದು ಭಯಾನಿ ಪ್ರತಿಪಾದಿಸಿದ್ದಾರೆ.

ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಪ್ಯಾಕೇಜಿಂಗ್‌ ಉತ್ಪನ್ನಗಳಿಂದ ಹಿಡಿದು ರೆಸ್ಟೋರೆಂಟ್ ಮೆನು, ಕೆಲಸದ ಇ ಮೇಲ್‌ಗಳವರೆಗೆ ದೈನಂದಿನ ಜೀವನದಲ್ಲಿ ಇಂಗ್ಲೀಷ್‌ ಪ್ರಾಬಲ್ಯ ಸಾಧಿಸಿದೆ. ಯುವ ಪೀಳಿಗೆ ಈಗಾಗಲೇ ಮಾತೃಭಾಷೆಗಿಂತ ಇಂಗ್ಲೀಷ್‌ನಲ್ಲಿ ಹೆಚ್ಚು ನಿರರ್ಗಳವಾಗಿ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.

ಹೀಗಿರುವಾಗ ಇಂಗ್ಲಿಷ್ ಭಾಷೆಯನ್ನು ಕಡ್ಡಾಯ ಭಾಷೆಯನ್ನಾಗಿ ಏಕೆ ಮಾಡಬಾರದು. ಇದರಿಂದ ಬಹುಭಾಷಾ ಸಂದರ್ಭಗಳಲ್ಲಿ ಘರ್ಷಣೆ ಮತ್ತು ತಪ್ಪು ತಿಳಿವಳಿಕೆಯನ್ನು ಕಡಿಮೆ ಮಾಡಲಿದೆ. ಅಲ್ಲದೇ ಪ್ರಾದೇಶಿಕ ಭಾಷೆಗಳು ಎರಡನೇ ಭಾಷೆಗಳಾಗಿ ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುತ್ತದೆ ಎಂದು ವಿಶ್ಲೇಷಿಸಿದ್ದಾರೆ.

ಎಲ್ಲರಿಗೂ ಒಂದೇ ಭಾಷೆ

ನಾನು ಎಲ್ಲರೂ ಇಂಗ್ಲಿಷ್‌ನಲ್ಲಿ ಮಾತನಾಡಬೇಕೆಂದು ಹೇಳುತ್ತಿಲ್ಲ. ಆದರೆ, ಅದು ಎಲ್ಲರಿಗೂ ಸ್ವಲ್ಪ ಮಟ್ಟಿಗೆ ತಿಳಿದಿರುವ ಒಂದು ಭಾಷೆಯಾಗಿರಬಹುದು. ಯಾರಾದರೂ ಅದರಲ್ಲಿ ಮಾತನಾಡಿದರೆ ಪರವಾಗಿಲ್ಲ.ಇಂಗ್ಲಿಷ್ ಒಂದೇ ಭಾಷೆಯಾದರೆ ರಾಜ್ಯಗಳು ಮತ್ತು ಜನರ ನಡುವೆ ಸಂವಹನ ಸುಲಭವಾಗುತ್ತದೆ ಎಂದು ಹೇಳಿದ್ದಾರೆ.

ಭಾಷೆಯ ಗದ್ದಲವನ್ನು ದೂರವಿಡುವುದರಿಂದ ಜನರು ಮೂಲಸೌಕರ್ಯ, ಉದ್ಯೋಗ, ಶಿಕ್ಷಣ, ಸಂಶೋಧನೆ, ನಾವೀನ್ಯತೆ ಹಾಗೂ ಸ್ವಚ್ಛತೆಯಂತಹ ನೈಜ ಸಾಮಾಜಿಕ ಸಮಸ್ಯೆಗಳ ಮೇಲೆ ಗಮನ ಹರಿಸಬಹುದು ಎಂದು ಪ್ರತಿಪಾದಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಪ್ರತಿಕ್ರಿಯೆ

ಗೂಗಲ್‌ ಸಂಸ್ಥೆಯ ಸಾಫ್ಟ್‌ವೇರ್‌ ಎಂಜಿನಿಯರ್‌ ಅರ್ಪಿತ್‌ ಭಯಾನಿ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಗಳ

ಪಾರ್ಕಿಂಗ್‌ ಜಾಗ ನಿರಾಕರಿಸಿದಾಗ ಆ ವ್ಯಕ್ತಿಯನ್ನು ಇಂಗ್ಲಿಷ್‌ನಲ್ಲಿ ಪಕ್ಕಕ್ಕೆ ಸರಿಯುವಂತೆ ಏಕೆ ಕೇಳಲಿಲ್ಲ? ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಭಯಾನಿ ಅವರು, "ಖಂಡಿತ ನಾನು ಇಂಗ್ಲಿಷ್‌ನಲ್ಲೇ ಕೇಳಿದೆ, ಆದರೆ, ಆತ ನಾನು ಹಿಂದಿಯಲ್ಲಿ ಮಾತನಾಡಿದ ಕ್ಷಣವೇ ಪಾರ್ಕಿಂಗ್‌ ಜಾಗ ನಿರಾಕರಿಸಿಬಿಟ್ಟಿದ್ದ ಎಂದು ಹೇಳಿದ್ದಾರೆ.

"ಈ ಆಮೂಲಾಗ್ರೀಕರಣ ಎಲ್ಲಿ ನಿಲ್ಲುತ್ತದೆ ಎಂದು ನನಗೆ ತಿಳಿದಿಲ್ಲ, ಮೊದಲು ಅದು ಧರ್ಮವನ್ನು ಆಧರಿಸಿತ್ತು, ನಂತರ ಜಾತಿಯನ್ನು ಆಧರಿಸಿತ್ತು, ಈಗ ರಾಜ್ಯ ಮತ್ತು ಭಾಷಾ ವ್ಯತ್ಯಾಸಗಳನ್ನು ಆವರಿಸಿ ಹೊಸ ಸಮಸ್ಯೆ ಸೃಷ್ಟಿಸುತ್ತಿದೆ. ಕತಕ ಬುದ್ದಿಮತ್ತೆಯ ಕ್ರಾಂತಿ ನಡೆಯುತ್ತಿರುವ ಈ ಸಮಯದಲ್ಲಿ ನಮ್ಮ ದೇಶ ಇನ್ನೂ ಪ್ರಾಚೀನ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದೆʼ ಮತ್ತೊಬ್ಬ ಬಳಕೆದಾರ ವಿಷಾದಿಸಿದ್ದಾರೆ.

ಇತ್ತೀಚೆಗಷ್ಟೇ ಆನೇಕಲ್‌ನ ಸೂರ್ಯ ನಗರ ಎಸ್‌ಬಿಐ ಶಾಲೆಯಲ್ಲಿ ಕನ್ನಡ ಮಾತನಾಡಲ್ಲ ಎಂದು ದರ್ಪ ತೋರಿದ್ದ ಬ್ಯಾಂಕ್‌ ವ್ಯವಸ್ಥಾಪಕಿ ವಿರುದ್ಧ ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಕನ್ನಡ ಮಾತನಾಡಲು ನಿರಾಕರಿಸಿದ ವ್ಯವಸ್ಥಾಪಕಿಯನ್ನು ಬೇರೆಡೆ ವರ್ಗಾವಣೆ ಸಹ ಮಾಡಲಾಯಿತು.

Tags:    

Similar News