ರಾಜ್ಯದ 10 ಜಿಲ್ಲೆಗಳಲ್ಲಿ ಭ್ರಷ್ಟರ ಮೇಲೆ ಲೋಕಾಯುಕ್ತ ದಾಳಿ; ತೀವ್ರ ಶೋಧ
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಪ್ರಾದೇಶಿಕ ಸಾರಿಗೆ ಇಲಾಖೆಯ ಸೂಪರಿಂಟೆಂಡೆಂಟ್ ಕುಮಾರಸ್ವಾಮಿ, ಮಂಡ್ಯ ನಗರ ಪಾಲಿಕೆ ಸಿಎಒ ಪುಟ್ಟಸ್ವಾಮಿ, ಬೀದರ್ ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ಪ್ರೇಮ್ ಸಿಂಗ್ ಮನೆ ಮೇಲೆ ದಾಳಿ ಮಾಡಲಾಗಿದೆ.
ಕರ್ನಾಟಕ ಲೋಕಾಯುಕ್ತ ಕಚೇರಿ
ಭ್ರಷ್ಟರ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿರುವ ಲೋಕಾಯುಕ್ತ ಪೊಲೀಸರು ಮಂಗಳವಾರ ರಾಜ್ಯದ 10 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ, ಪರಿಶೀಲನೆ ಆರಂಭಿಸಿದ್ದಾರೆ. ಅಧಿಕಾರಿಗಳು, ನಿವೃತ್ತರ ಮನೆ ಹಾಗೂ ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಪ್ರಾದೇಶಿಕ ಸಾರಿಗೆ ಇಲಾಖೆಯ ಸೂಪರಿಂಟೆಂಡೆಂಟ್ ಕುಮಾರಸ್ವಾಮಿ, ಮಂಡ್ಯ ನಗರ ಪಾಲಿಕೆ ಸಿಎಒ ಪುಟ್ಟಸ್ವಾಮಿ, ಬೀದರ್ ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ಪ್ರೇಮ್ ಸಿಂಗ್, ಮೈಸೂರಿನ ಹೂಟಗಳ್ಳಿಯಲ್ಲಿ ಪಾಲಿಕೆ ಕಂದಾಯ ನಿರೀಕ್ಷಕ ರಾಮಸ್ವಾಮಿ ಸಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಸುಭಾಶ್ ಚಂದ್ರ ಮನೆ ಮೇಲೆ ದಾಳಿ ಮಾಡಲಾಗಿದೆ.
ಹುಲಿಗೋಳದ ಪ್ರಾಥಮಿಕ ಪಶು ಕ್ಲಿನಿಕ್ ಹಿರಿಯ ಪರೀಕ್ಷಕ ಸತೀಶ್, ಶಿವಮೊಗ್ಗದ ಸಿಮ್ಸ್ ಮೆಡಿಕಲ್ ಕಾಲೇಜಿನ ಎಫ್ ಡಿಎ ಲಕ್ಷ್ಮೀಪತಿ ಸಿ.ಎನ್., ದಾವಣಗೆರೆ ಎಪಿಎಂಸಿ ಸಹ ನಿರ್ದೇಶಕ ಪ್ರಭು ಜೆ, ಮಡಿಕೇರಿ (ಮೈಸೂರು ವಲಯ) ಲೋಕೋಪಯೋಗಿ ಇಲಾಖೆಯ ಸಹಾಯಕ ಅಧೀಕ್ಷಕ ಎಂಜಿನಿಯರ್ ಗಿರೀಶ್ ಡಿ.ಎಂ, ಹಾವೇರಿ ಯೋಜನಾ ನಿರ್ದೇಶಕ ಕಚೇರಿಯ ಇಇ ಶೇಕಪ್ಪ ಅವರ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ,ಕಡತ ಪರಿಶೀಲನೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಲೊಕಾಯುಕ್ತ ಪೊಲೀಸರು ರಾಜ್ಯದ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 12 ಮಂದಿ ಸರ್ಕಾರಿ ಅಧಿಕಾರಿಗಳಿಗೆ ಸೇರಿದ 48 ಕಡೆಗಳಲ್ಲಿ ಶೋಧ ನಡೆಸಿ, ಅಂದಾಜು 38.10 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದರು.
ಈ ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಪ್ರಕರಣಗಳನ್ನು ದಾಖಲಾಗಿಲಿಸಲಾಗಿತ್ತು. ಬೆಂಗಳೂರು ನಗರದಲ್ಲಿ 2 ಪ್ರಕರಣ, ಗ್ರಾಮಾಂತರದಲ್ಲಿ 1, ಚಿತ್ರದುರ್ಗದಲ್ಲಿ 1, ದಾವಣಗೆರೆಯಲ್ಲಿ 2, ಹಾವೇರಿಯಲ್ಲಿ 2, ಬೀದರ್, ಉಡುಪಿ, ಬಾಗಲಕೋಟೆ ಹಾಗೂ ಹಾಸನದಲ್ಲಿ ತಲಾ ಒಂದು ಪ್ರಕರಣ ದಾಖಲಿಸಲಾಗಿತ್ತು.