ಸಾಫ್ಟ್‌ವೇರ್ ಉದ್ಯೋಗಿ ಮೇಲೆ ಲೈಂಗಿಕ ಕಿರುಕುಳ, ಪೊಲೀಸರ ವಿರುದ್ಧ ವಿಳಂಬದ ಆರೋಪ
ಮಹಿಳೆ ಹತ್ತಿರದಲ್ಲಿದ್ದ ಬೀದಿ ನಾಯಿಗಳಿಗೆ ತಾವು ತಂದಿದ್ದ ಆಹಾರವನ್ನು ನೀಡಲು ಹೋಗಿದ್ದಾರೆ. ಈ ವೇಳೆ, ಇದ್ದಕ್ಕಿದ್ದಂತೆ ಅಪರಿಚಿತ ವ್ಯಕ್ತಿಯೊಬ್ಬರು ಹತ್ತಿರ ಬಂದು ಅನುಚಿತವಾಗಿ ಸ್ಪರ್ಶಿಸಲು ಪ್ರಾರಂಭಿಸಿದ್ದಾರೆ.
ಸಾಂದರ್ಭಿಕ ಚಿತ್ರ
ನಗರದ ಕಾಡುಬೀಸನಹಳ್ಳಿ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್ ಸಮೀಪ 34 ವರ್ಷದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರಿಗೆ ಅಪರಿಚಿತ ಯುವಕನಿಂದ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕೊನೆಗೂ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೂರು ದಾಖಲಿಸುವಲ್ಲಿ ಪೊಲೀಸರು ಎರಡು ದಿನ ವಿಳಂಬ ಮಾಡಿದ್ದಾರೆಂಬ ಆರೋಪವೂ ಕೇಳಿ ಬಂದಿದೆ.
ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಮಹಿಳೆ ಕೆಲಸ ಮುಗಿಸಿಕೊಂಡು ಸ್ಕೂಟರ್‌ನಲ್ಲಿ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಕಟ್ಟಡದೊಳಗೆ ಪ್ರವೇಶಿಸುವ ಮುನ್ನ ಹತ್ತಿರದಲ್ಲಿದ್ದ ಬೀದಿ ನಾಯಿಗಳಿಗೆ ತಾವು ತಂದಿದ್ದ ಆಹಾರವನ್ನು ನೀಡಲು ತೆರಳಿದ್ದ ವೇಳೆ, ಅಪರಿಚಿತ ವ್ಯಕ್ತಿಯೊಬ್ಬರು ಹಠಾತ್ತನೆ ಹತ್ತಿರ ಬಂದು ಅನುಚಿತವಾಗಿ ಸ್ಪರ್ಶಿಸಲು ಆರಂಭಿಸಿದ್ದಾನೆ. ಆಘಾತಗೊಂಡ ಮಹಿಳೆ ಕೈಯಲ್ಲಿದ್ದ ಖಾಲಿ ಬಕೆಟ್‌ನಿಂದ ಆರೋಪಿಗೆ ಹೊಡೆದು, ಜೋರಾಗಿ ಕಿರುಚಿಕೊಂಡಿದ್ದಾರೆ. ಇದೇ ವೇಳೆಯಲ್ಲಿ ಬೈಕ್‌ನಲ್ಲಿ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದಿರುವುದನ್ನು ಕಂಡ ಆರೋಪಿ ಓಡಿ ಹೋಗಲು ಯತ್ನಿಸಿದ್ದಾನೆ.
ಆದರೆ ಬೈಕ್ ಸವಾರ ಅಲ್ಲಿಂದ ತೆರಳಿದ ಕೆಲವೇ ಕ್ಷಣಗಳಲ್ಲಿ ಆರೋಪಿ ಮತ್ತೆ ಮಹಿಳೆಯ ಬಳಿ ಧಾವಿಸಿ, ಆಕೆಯ ಕೈ ಹಿಡಿದು ಬಟ್ಟೆಗಳನ್ನು ಎಳೆಯಲು ಪ್ರಯತ್ನಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ತಾನು ನಿರಂತರವಾಗಿ ಕಿರುಚಿದ ಪರಿಣಾಮ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಅಲ್ಲಿಗೆ ಓಡಿಬಂದಿದ್ದರೂ, ಆರೋಪಿ ಗೇಟ್ ಹಾರಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಬಳಿಕ ಮಹಿಳೆ ಮನೆಗೆ ತೆರಳಿ ಕುಟುಂಬದವರೊಂದಿಗೆ ಚರ್ಚಿಸಿದ್ದು, ಅವರ ಸಹೋದರ ಆರೋಪಿಯನ್ನು ಹುಡುಕಲು ಹೊರಟ ಸಂದರ್ಭದಲ್ಲಿ ಗಸ್ತಿನಲ್ಲಿದ್ದ ಹೋಯ್ಸಳಾ ವಾಹನವನ್ನು ಕಂಡು ವಿಷಯ ತಿಳಿಸಿದ ಮೇಲೆ ಪೊಲೀಸರು ಸಹ ಪ್ರದೇಶದಲ್ಲಿ ಹುಡುಕಾಟ ಆರಂಭಿಸಿದರೂ, ಯಾವುದೇ ಸುಳಿವು ಸಿಗದ ಕಾರಣ ಠಾಣೆಗೆ ಬಂದು ದೂರು ದಾಖಲಿಸಿಕೊಳ್ಳಲು ಹೇಳಿದ್ದಾರೆಂದು ತಿಳಿದು ಬಂದಿದೆ.
ಕೇಸ್ ದಾಖಲಿಸಲು ಶ್ರಮ
ಮುಂದಿನ ದಿನ ಸಂತ್ರಸ್ತೆ ಬೆಳ್ಳಂದೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಪ್ರಯತ್ನಿಸಿದರೂ, ದಿನವಿಡೀ ಕಾಯಿಸಿ ದೂರು ಸ್ವೀಕರಿಸದೆ, ಸ್ಥಳ ಮಹಜರ್ ಹಾಗೂ ಸಿಸಿಟಿವಿ ಪರಿಶೀಲನೆ ಮಾಡುವುದಾಗಿ ಹೇಳಿ ಕೈಜೋಡಿಸಿಲ್ಲವೆಂಬ ಆರೋಪ ಹೊರಿಸಲಾಗಿದೆ. ಎರಡು ದಿನಗಳ ನಂತರ ಈ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುತ್ತದೆ ಎಂದು ತಿಳಿದು, ಅಲ್ಲಿ ದೂರು ದಾಖಲಿಸಿಕೊಳ್ಳುವಂತೆ ಪೊಲೀಸರೇ ಸೂಚಿಸಿದ್ದಂತೆ ಮಹಿಳೆ ವಿವರಿಸಿದ್ದಾರೆ.
ಆರೋಪಿ ಎತ್ತರದ ಯುವಕನಾಗಿದ್ದು, ಈ ಮೊದಲು ನಮ್ಮ ಪ್ರದೇಶದಲ್ಲಿ ಅವನನ್ನು ನೋಡಿರಲಿಲ್ಲ ಎಂದು ಸಂತ್ರಸ್ತೆ ಹೇಳಿದ್ದಾರೆ. ಈ ಘಟನೆ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಯ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಸಿಸಿಟಿವಿ ಚಿತ್ರಣ ಅಷ್ಟಾಗಿ ಸ್ಪಷ್ಟವಾಗಿಲ್ಲದಿದ್ದರೂ, ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿ ತನಿಖೆ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.